Friday, 22nd November 2024

Yoga Role In Fertility: ಸಂತಾನ ಭಾಗ್ಯದಲ್ಲಿ ಯೋಗಾಭ್ಯಾಸದ ಪಾತ್ರ ಮಹತ್ವದ್ದು

Yoga Role In Fertility

-ಡಾ. ಸೌಪರ್ಣಿಕಾ ಎಸ್.ಎನ್, ಮಿಲನ್ ಫರ್ಟಿಲಿಟಿ ಸೆಂಟರ್,

ಪ್ರಸ್ತುತ ನಾವು ವಾಸಿಸುತ್ತಿರುವ ಶರ ವೇಗದ ಜಗತ್ತಿನಲ್ಲಿ ವ್ಯಕ್ತಿಯೊಬ್ಬರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ನಿಯಂತ್ರಣದಲ್ಲಿಡುವುದು ನಿರ್ಣಾಯಕ ಸಂಗತಿ. ಆಧುನಿಕ ಜೀವನಶೈಲಿಯಿಂದಾಗಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಬಂಜೆತನವೂ ಒಂದಾಗಿರುವುದು ಆಘಾತಕಾರಿ. ಇದಕ್ಕೆ ಕಾರಣ ಅತಿ ಹೆಚ್ಚು ಸ್ಕ್ರೀನಿಂಗ್ ಟೈಮ್‌ (ಮೊಬೈಲ್ ಅಥವಾ ಡಿಜಿಟಲ್ ಗ್ಯಾಜೆಟ್‌ಗಳ ಬಳಕೆ), ಪೌಷ್ಟಿಕಾಂಶಗಳ ಕೊರತೆ ಮತ್ತು ವ್ಯಾಯಾಮ ರಹಿತ ಜೀವನ ಶೈಲಿ ಕಾರಣ ಎಂದು ವ್ಯಾಖ್ಯಾನಿಸಲಾಗಿದೆ. ಭಾವನಾತ್ಮಕ ಆರೋಗ್ಯ ಮತ್ತು ಸಂತಾನೋತ್ಪತ್ತಿ ನಡುವೆ ಸಂಬಂಧ ಇರುವುದರಿಂದ ಈ ಸಮಸ್ಯೆಯು ಮಹಿಳೆ ಹಾಗೂ ಪುರುಷರಿಬ್ಬರ ಮೇಲೂ ಪರಿಣಾಮ ಬೀರುತ್ತದೆ. (Yoga Role In Fertility) ತಾಯ್ತನದ ಹಾದಿಯು ಪದೇಪದೇ ಭಾವನಾತ್ಮಕ ಏರಿಳಿತಗಳನ್ನು ಒಳಗೊಂಡಿರುತ್ತದೆ. ವಿಶೇಷವಾಗಿ ಬಂಜೆತನದ ಸವಾಲುಗಳನ್ನು ಎದುರಿಸುವಾಗ ಅದು ಅಧಿಕವಾಗಿರುತ್ತದೆ.

ಪ್ರಾಚೀನ ಜ್ಞಾನ ಸಂಪತ್ತು ಮತ್ತು ಯೋಗ

ಒಂದು ಬಲವಾದ ಪ್ರಶ್ನೆ ಆಗಾಗ್ಗೆ ಉದ್ಭವಿಸುತ್ತಿರುತ್ತದೆ; ಫಲವತ್ತತೆಯ ಸಮಸ್ಯೆಗಳು ಇಂದು ಏಕೆ ಹೆಚ್ಚಾಗುತ್ತಿದೆ.? ಪ್ರಾಚೀನ ಕಾಲದಲ್ಲಿ ಜನರು ಪ್ರಕೃತಿಯೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು ಹಾಗೂ ನಿಯಮಿತ ಯೋಗಾಭ್ಯಾಸ ಮಾಡುತ್ತಿದ್ದರು. ಯೋಗವು ಎಂಡಾರ್ಫಿನ್ ಮಟ್ಟ ಹೆಚ್ಚಿಸುವ ಕಾರಣ ನೈಸರ್ಗಿಕವಾಗಿ ಮಾನಸಿಕ ಸ್ಥಿತಿ ವೃದ್ಧಿಸುತ್ತದೆ. ಇದು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಅನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಗರ್ಭಧಾರಣೆಗೆ ಪೂರಕ ವಾತಾವರಣ ಸೃಷ್ಟಿಯಾಗಲು ಮನಸ್ಸು ಮತ್ತು ದೇಹದ ನಡುವಿನ ಈ ಸಮತೋಲನ ಅತ್ಯಗತ್ಯ. ಹೀಗಾಗಿ ಬಂಜೆತನದ ಭಾವನಾತ್ಮಕ ಮತ್ತು ದೈಹಿಕ ಒತ್ತಡಗಳನ್ನು ಎದುರಿಸುತ್ತಿರುವವರಿಗೆ ಯೋಗವು ಪರಿವರ್ತಕ ಪರಿಹಾರವಾಗಿದೆ. ಇದು ವ್ಯಕ್ತಿ ಅಥವಾ ದಂಪತಿಗೆ ತಮ್ಮ ಸವಾಲುಗಳನ್ನು ಸುಲಭವಾಗಿ ಕಂಡುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಸಮಸ್ಯೆಗಳ ಗುಣಪಡಿಸುವಿಕೆ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವೊಂದನ್ನು ಒದಗಿಸುತ್ತದೆ.

ಈ ಸುದ್ದಿಯನ್ನೂ ಓದಿ | Stroke Risk : ಈ ಬ್ಲಡ್‌ ಗ್ರೂಪ್‌ ನಿಮ್ಮದಾಗಿದ್ದರೆ ಸ್ಟ್ರೋಕ್ ಸಾಧ್ಯತೆ ಹೆಚ್ಚು… ನಿಮ್ಮ ರಕ್ತದ ಗುಂಪು ಯಾವುದು? ತಕ್ಷಣ ಪರೀಕ್ಷಿಸಿ

ಯೋಗಾಭ್ಯಾಸವು ಪುರುಷನಲ್ಲಿ ವೀರ್ಯಾಣು ಅಥವಾ ಮಹಿಳೆಯಲ್ಲಿ ಅಂಡಾಣುವಿನ ಗುಣಮಟ್ಟವನ್ನು ನೇರವಾಗಿ ಹೆಚ್ಚಿಸದೇ ಹೋದರೂ ಫಲವತ್ತತೆಯನ್ನು ಹೆಚ್ಚಿಸಬಹುದಾದ ಜೀವನಶೈಲಿಯ ಪ್ರಮುಖ ಅಂಶವೆಂಬುದು ಸಾಬೀತಾಗಿದೆ. ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮೂಲಕ ಮತ್ತು ಆರೋಗ್ಯಕರ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ, ಬಂಜೆತನದ ಸವಾಲುಗಳನ್ನು ಎದುರಿಸುವವರಿಗೆ ಯೋಗವು ಗಮನಾರ್ಹ ಬೆಂಬಲ ಮತ್ತು ಭರವಸೆ ಒದಗಿಸುತ್ತದೆ.

ಪ್ರಮುಖ ಪ್ರಯೋಜನಗಳು

ಒತ್ತಡ ಕಡಿಮೆ ಮಾಡುವುದು: ಮಹಿಳೆಯರು ಎದುರಿಸುವ ದೀರ್ಘಕಾಲದ ಒತ್ತಡವು ಋತುಚಕ್ರವನ್ನು ಏರುಪೇರು ಮಾಡಬಹುದು, ಅಂಡೋತ್ಪತ್ತಿಯನ್ನು ದುರ್ಬಲಗೊಳಿಸಬಹುದು ಮತ್ತು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ನಂತಹ ಪರಿಸ್ಥಿತಿ ಸೃಷ್ಟಿಸಬಹುದು. ಗರ್ಭಾಶಯವು ಭಾವನಾತ್ಮಕ ಅಂಶಗಳಿಂದ ಪ್ರಭಾವಿತವಾಗುವುದರಿಂದ ಒತ್ತಡದ ಸಮಸ್ಯೆಯಿಂದಾಗಿ ಇಂಪ್ಲಾಂಟೇಷನ್‌ (ಗರ್ಭ ಕಟ್ಟುವಿಕೆ) ವೈಫಲ್ಯಕ್ಕೆ ಕಾರಣವಾಗಬಹುದು. ಪುರುಷರಲ್ಲಿ, ಒತ್ತಡವು ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆ ಮಾಡುತ್ತದೆ ಮತ್ತು ಸಿರೊಟೋನಿನ್ ಹೆಚ್ಚಿಸುತ್ತದೆ. ಇದರಿಂದಾಗಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ.

ರಕ್ತದ ಹರಿವು ಹೆಚ್ಚಳ: ಯೋಗ ಭಂಗಿಗಳು ಮತ್ತು ಚಲನೆಗಳು ಪೆಲ್ವಿಕ್ ಪ್ರದೇಶಕ್ಕೆ ರಕ್ತ ಪರಿಚಲನೆ ಹೆಚ್ಚಿಸುತ್ತವೆ. ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಸ್ಥಿರವಾಗಿ ಪೂರೈಕೆ ಮಾಡುತ್ತದೆ. ಈ ಮೂಲಕ ಸಂತಾನೋತ್ಪತ್ತಿ ಅಂಗಗಳ ಆರೋಗ್ಯಪೂರ್ಣವಾಗಿರುತ್ತದೆ.

ಹಾರ್ಮೋನುಗಳ ಸಮತೋಲನ: ಒತ್ತಡ ಕಡಿಮೆ ಮಾಡುವಲ್ಲಿ ಯೋಗ ಪರಿಣಾಮಕಾರಿ. ಇದು ಹಾರ್ಮೋನುಗಳ ಸಮತೋಲನ ಮತ್ತು ಫಲವತ್ತತೆಗೆ ನೆರವಾಗುತ್ತದೆ. ನಿಯಮಿತವಾಗಿ ಅಭ್ಯಾಸ ಮಾಡುವ ಮೂಲಕ ವ್ಯಕ್ತಿಗಳು ಒತ್ತಡದ ಮಟ್ಟ ಕಡಿಮೆ ಮಾಡಬಹುದು ಮತ್ತು ಹಾರ್ಮೋನುಗಳ ಸ್ಥಿರತೆ ಕಾಪಾಡಿಕೊಳ್ಳಬಹುದು. ಫಲವತ್ತತೆ ಫಲಿತಾಂಶಗಳನ್ನು ಗಣನೀಯವಾಗಿ ಸುಧಾರಿಸಿಕೊಳ್ಳಬಹುದು.

ಮನಸ್ಸು-ದೇಹದ ನಡುವಿನ ಉತ್ತಮ ಸಂಯೋಗ: ಯೋಗವು ಹೆಚ್ಚಿನ ಸ್ವಯಂ-ಅರಿವು ಮತ್ತು ಬುದ್ಧಿವಂತಿಕೆ ಹೆಚ್ಚಿಸುತ್ತದೆ. ವ್ಯಕ್ತಿಯೊಬ್ಬರಿಗೆ ತಮ್ಮ ದೇಹದ ಕಾರ್ಯನಿರ್ವಹಣೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸಂಭಾವ್ಯ ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಉಲ್ಲಾಸ ಮತ್ತು ಭಾವನಾತ್ಮಕ ಯೋಗಕ್ಷೇಮ: ಧ್ಯಾನ ಮತ್ತು ದೀರ್ಘ ಉಸಿರಾಟದ ಪ್ರಕ್ರಿಯೆಯೊಂದಿಗೆ ಉಲ್ಲಾಸ ಮತ್ತು ಭಾವನಾತ್ಮಕ ವಿಶ್ರಾಂತಿಯು ದೊರೆಯುತ್ತದೆ. ಇದು ಫಲವತ್ತತೆ ಸವಾಲುಗಳಿಗೆ ಸಂಬಂಧಿಸಿದ ಒತ್ತಡ ನಿವಾರಿಸಲು ನೆರವಾಗುತ್ತದೆ.

ವೀರ್ಯಾಣು ಉತ್ಪಾದನೆಗೆ ನೆರವು: ಯೋಗವು ದೇಹದಲ್ಲಿ ವೀರ್ಯಾಣು ಉತ್ಪಾದನೆ ಸುಧಾರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಜೀವನಶೈಲಿ ಅಥವಾ ಪ್ರಾಕೃತಿಕ ಅಂಶಗಳಿಂದಾಗಿ ಕಡಿಮೆ ವೀರ್ಯಾಣುಗಳ ಸಂಖ್ಯೆಯಿಂದ ಬಳಲುತ್ತಿರುವ ಪುರುಷರಿಗೆ ಅನುಕೂಲಕರ.

ಸಂತಾನೋತ್ಪತ್ತಿ ಆರೋಗ್ಯ ಹೆಚ್ಚಿಸುವ ಯೋಗ ಭಂಗಿಗಳು

ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಸಂತಾನೋತ್ಪತ್ತಿ ಆರೋಗ್ಯ ಸುಧಾರಿಸಲು ಆರು ಯೋಗ ಭಂಗಿಗಳು ಮತ್ತು ಅವುಗಳ ಪ್ರಯೋಜನಗಳು

ವಿಪರಿತಾ ಕರಣಿ (ಕಾಲುಗಳ ಮೇಲಕ್ಕೆ-ಗೋಡೆಯ ಭಂಗಿ): ಪೆಲ್ವಿಕ್ ಪ್ರದೇಶಕ್ಕೆ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಹಾರ್ಮೋನುಗಳನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ. ಒತ್ತಡ ಮತ್ತು ಆತಂಕ ಕಡಿಮೆ ಮಾಡುತ್ತದೆ.

ಭುಜಂಗಾಸನ (ನಾಗರಹಾವಿನ ಭಂಗಿ): ಸಂತಾನೋತ್ಪತ್ತಿ ಅಂಗಗಳನ್ನು ಉತ್ತೇಜಿಸುತ್ತದೆ. ಕೆಳ ಬೆನ್ನಿನಲ್ಲಿ ನಮ್ಯತೆ ಹೆಚ್ಚಿಸುತ್ತದೆ ಮತ್ತು ಒಟ್ಟಾರೆ ಹಾರ್ಮೋನುಗಳ ಸಮತೋಲನ ಉತ್ತೇಜಿಸುತ್ತದೆ.

ಸೇತುಬಂಧಾಸನ (ಸೇತುವೆ ಭಂಗಿ): ಪೆಲ್ವಿಕ್ ಪ್ರದೇಶಕ್ಕೆ ರಕ್ತಪರಿಚಲನೆ ಹೆಚ್ಚಿಸುತ್ತದೆ. ಕೆಳ ಬೆನ್ನು ಮತ್ತು ಹೊಟ್ಟೆಯನ್ನು ಬಲಪಡಿಸುತ್ತದೆ ಮತ್ತು ಒತ್ತಡ ಮತ್ತು ಆತಂಕವ ನಿವಾರಿಸಲು ಸಹಾಯ ಮಾಡುತ್ತದೆ. ಇದು ವಿಶ್ರಾಂತಿ ಹೆಚ್ಚಿಸುವ ಮೂಲಕ ವೀರ್ಯಾಣು ಉತ್ಪಾದನೆಗೆ ಬೆಂಬಲಿಸುತ್ತದೆ.

ಬದ್ದ ಕೋನಾಸನ (ಬೌಂಡ್ ಆಂಗಲ್ ಭಂಗಿ): ನಿತಂಬ ಮತ್ತು ತೊಡೆ ಸಂಧುಗಳ ನಡುವೆ ನಮ್ಯತೆ ಉಂಟು ಮಾಡುತ್ತದೆ. ಸಂತಾನೋತ್ಪತ್ತಿ ಅಂಗಗಳಿಗೆ ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ಪೆಲ್ವಿಕ್ ಪ್ರದೇಶದಲ್ಲಿ ಒತ್ತಡ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.

ಸರ್ವಾಂಗಾಸನ (ಭುಜದ ಸ್ಟ್ಯಾಂಡ್): ಪೆಲ್ವಿಕ್ ಅಂಗಗಳಿಗೆ ರಕ್ತಪರಿಚಲನೆ ಹೆಚ್ಚಿಸುತ್ತದೆ. ಥೈರಾಯ್ಡ್ ಮತ್ತು ಮೂತ್ರಜನಕಾಂಗದ ಗ್ರಂಥಿಗಳನ್ನು ಸಮತೋಲನದಲ್ಲಿಟ್ಟು ಹಾರ್ಮೋನುಗಳ ಆರೋಗ್ಯ ಬೆಂಬಲಿಸುತ್ತದೆ.

ತ್ರಿಕೋನಾಸನ (ತ್ರಿಕೋನ ಭಂಗಿ): ಪೆಲ್ವಿಕ್ ಪ್ರದೇಶಕ್ಕೆ ರಕ್ತಪರಿಚಲನೆ ಸುಧಾರಿಸುತ್ತದೆ. ದೇಹದ ಕೆಳಭಾಗದ ವಿಸ್ತರಣೆ ಮತ್ತು ಬಲಪಡಿಸುತ್ತದೆ. ಒಟ್ಟಾರೆ ಶಕ್ತಿಯ ಮಟ್ಟ ಬೆಂಬಲಿಸುತ್ತದೆ. ಸಂತಾನೋತ್ಪತ್ತಿ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ.

ಈ ಸುದ್ದಿಯನ್ನೂ ಓದಿ | World Handwashing Day : ಕೈ ತೊಳೆಯುವುದೆಂದರೆ ಅನಾರೋಗ್ಯವನ್ನು ಓಡಿಸಿದಂತೆ!

ಯೋಗಾಭ್ಯಾಸದ ಜತೆಗೆ ನಿಯಮಿತ ನಡಿಗೆ, ಪೌಷ್ಟಿಕ ಆಹಾರ ಸೇವನೆ, ಸಾಕಷ್ಟು ನಿದ್ರೆ ಮತ್ತು ಶಿಸ್ತುಬದ್ಧ ಜೀವನಶೈಲಿಯನ್ನು ಪಾಲಿಸುವುದು ಒಟ್ಟಾರೆ ಯೋಗಕ್ಷೇಮವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾರೆ, ಆರೋಗ್ಯದ ಕಡೆಗೆ ಒತ್ತುನೀಡುವ ಯೋಗದ ಸಮಗ್ರ ಅಭ್ಯಾಸವು ಮಾನಸಿಕ ಶಾಂತಿ, ದೈಹಿಕ ಸಾಮರ್ಥ್ಯ ಮತ್ತು ಆಧ್ಯಾತ್ಮಿಕ ಸಮತೋಲನ ಒದಗಿಸುವ ಸಾಮರಸ್ಯದ ಜೀವನಶೈಲಿಗೆ ಪೂರಕವಾಗಿದ್ದು ಸಂತಾನೋತ್ಪತ್ತಿ ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ ಎಂಬ ಪುರಾತನ ಜ್ಞಾನದ ಕೊಡುಗೆಯಾಗಿದೆ. ಸಮಕಾಲೀನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳುವ ಮೂಲಕ, ವ್ಯಕ್ತಿಗಳು ತಮ್ಮ ಫಲವತ್ತತೆ ಮತ್ತು ಒಟ್ಟಾರೆ ಯೋಗಕ್ಷೇಮ ಸುಧಾರಿಸುವ ಮಾರ್ಗ ಕಂಡುಕೊಳ್ಳಬಹುದು.