Wednesday, 4th December 2024

Cyclone Fengal: ಅಬ್ಬಾ…ವರುಣನ ಅಬ್ಬರಕ್ಕೆ ಕುಸಿದು ಬಿದ್ದ ದೇವಸ್ಥಾನದ ಆವರಣದ ಗೋಡೆ! ವಿಡಿಯೊ ಇದೆ

ತಿರುವಣ್ಣಾಮಲೈ, Cyclone Fengal: ಕಳೆದ ಶನಿವಾರದಿಂದ ಆರಂಭವಾದ ಫೆಂಗಲ್‌ ಚಂಡಮಾರುತ(Fengal Cyclone ) ತಮಿಳುನಾಡು(Tamilnadu) ಪುದುಚೇರಿಯಲ್ಲಿ ಭಾರೀ ಅನಾಹುತ ಸೃಷ್ಠಿಸಿದೆ. ಹತ್ತಾರು ಜನರು ಸಾವಿಗೀಡಾಗಿದ್ದಾರೆ. ಬೆಳೆ ನಾಶ, ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಹಲವು ಮನೆಗಳು ಕುಸಿದಿವೆ. ರಾಷ್ಟ್ರೀಯ ಹೆದ್ದಾರಿ ಕುಸಿತಕ್ಕೆ ವಾಹನ ಸವಾರರಿಗೆ ದಿಕ್ಕೇ ತೋಚದಂತಾಗಿದೆ.

ಫೆಂಗಲ್ ಚಂಡಮಾರುತ(Fengal Cyclone ) ಸೃಷ್ಟಿಸಿರೋ ಅನಾಹುತಕ್ಕೆ ತಮಿಳುನಾಡಿನ ರಾಜಧಾನಿ ಚೆನ್ನೈ ತತ್ತರಿಸಿದ್ದು, ಅಪಾರ್ಟ್​ಮೆಂಟ್​ಗಳು ಜಲಾವೃತವಾಗಿದೆ. ಹಾಗೆ ಜಲಾವೃತವಾದ ಅಪಾರ್ಟ್​ಮೆಂಟ್ ಮುಂದೆ ಇರೋ ಜಾಗದಲ್ಲಿ ನೀರು ನಿಂತು ಹೊರ ಬಾರಲಾರದೇ ಜನ ಸಂಕಷ್ಟ ಅನುಭವಿಸ್ತಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿ ಪುದುಚೆರಿ ಹಾಗೂ ತಮಿಳುನಾಡಿನ ಕರಾವಳಿಗೆ ಅಪ್ಪಳಿಸಿರುವ ‘ಫೆಂಗಲ್‌’ ಚಂಡಮಾರುತದ ಪರಿಣಾಮವಾಗಿ ಚೆನ್ನೈ ನಗರ ಹಾಗೂ ತಮಿಳುನಾಡು ಕರಾವಳಿಯಲ್ಲಿ ಭಾರಿ ಮಳೆಯಾಗಿದೆ. ಪುದುಚೆರಿ ಸಂಪೂರ್ಣ ಜಲಾವೃತವಾಗಿದ್ದು, ಕಳೆದ 30 ವರ್ಷಗಳಲ್ಲೇ ಅತ್ಯಧಿಕ ಮಳೆಗೆ (50 ಸೆ.ಮೀ) ಸಾಕ್ಷಿಯಾಗಿದೆ. ಹಲವು ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಇದೀಗ ನಿರಂತರ ಮಳೆಯಿಂದ ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ದೀಪಂ ಬೆಟ್ಟದ ನಮಚಿವಾಯರ್ ದೇವಾಲಯದ(temple wall) ಆವರಣ ಗೋಡೆ ಕುಸಿತಗೊಂಡಿದ್ದು(collapse), ಆ ದೃಶ್ಯ ಸಿಸಿಟಿವಿಯಲ್ಲಿ(cctv) ದಾಖಲಾಗಿದೆ.

30 ವರ್ಷಗಳಲ್ಲೇ ಅತ್ಯಧಿಕ ಮಳೆ
ಫೆಂಗಲ್‌ ಚಂಡಮಾರುತವು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ದಾಖಲೆಯ ಮಳೆಗೆ ಕಾರಣವಾಗಿದ್ದು, ಕಳೆದ ಶನಿವಾರ ರಾತ್ರಿಯಿಂದ ಚಂಡಮಾರುತ ಈ ಪ್ರದೇಶವನ್ನು ಹಾದುಹೋಗಿದೆ. ಭಾನುವಾರ ಬೆಳಗ್ಗೆ 9 ಗಂಟೆವರೆಗೆ 24 ಗಂಟೆಗಳ ಅವಧಿಯಲ್ಲಿ 46 ಸೆಂಟಿ ಮೀಟರ್‌ ಮಳೆಯಾಗಿದೆ. ಇದು 30 ವರ್ಷಗಳಲ್ಲೇ ಅತ್ಯಧಿಕ ಮಳೆಯಾಗಿದೆ.

ತಮಿಳುನಾಡಿನ ಕೆಲವು ಭಾಗಗಳಲ್ಲಿ 56 ಸೆಂಟಿ ಮಿಟರ್‌ ಮಳೆಯಾಗಿದೆ ಎಂದು ತಮಿಳುನಾಡಿನ ಕಂದಾಯ ಮತ್ತು ವಿಪತ್ತು ನಿರ್ವಹಣೆಯ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್‌ ಲಖಾನಿ ಹೇಳಿದ್ದಾರೆ. ವಿಲುಪ್ಪುರಂನಲ್ಲಿ 49 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಹಲವು ವಿದ್ಯುತ್‌ ಕಂಬಗಳು ಧರೆಗುರುಳಿದ್ದು ವಿದ್ಯುತ್‌ ಸರಬರಾಜು ವ್ಯತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಜನಜೀವನ ಅಸ್ತವ್ಯಸ್ತ

ಭಾರಿ ಮಳೆಯಿಂದ ತಗ್ಗುಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ವಸತಿ ಸಮುಚ್ಚಯಗಳೂ ಜಲಾವೃತಗೊಂಡಿವೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಪರಿಹಾರ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಕಟಾವಿಗೆ ಬಂದಿರುವ ಬೆಳೆಗಳು ನೀರಿನಲ್ಲಿಮುಳುಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರವಾಹದಲ್ಲಿಸಿಲುಕಿರುವ ಜನರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಸ್ವಯಂಸೇವಕರು ಆಹಾರ ಪೊಟ್ಟಣ ಹಾಗೂ ಕುಡಿಯುವ ನೀರಿನ ವಿತರಣೆಯಲ್ಲಿಆಡಳಿತದ ಜತೆಗೆ ಕೈಜೋಡಿಸಿದ್ದಾರೆ.

ಕಡಲತೀರದಲ್ಲಿ ತ್ಯಾಜ್ಯ ರಾಶಿ

ಫೆಂಗಲ್‌ ಚಂಡಮಾರುತದ ಪ್ರಭಾವದಿಂದ ಕಡಲ ಭೋರ್ಗರೆತ ಹೆಚ್ಚಾಗಿದ್ದು, ಪಟ್ಟಿನಪಕ್ಕಂ ಕಡಲತೀರದಲ್ಲಿ ರಾಶಿ ತ್ಯಾಜ್ಯಗಳು ಬಂದು ಬಿದ್ದಿವೆ. ಇದರಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯವೇ ದೊಡ್ಡ ಪ್ರಮಾಣದಲ್ಲಿದೆ.

ಇನ್ನು ಹೀಗೆ ಹತ್ತು ಹಲವು ತೊಂದರೆಯುಂಟು ಮಾಡಿ ಇದೀಗ ಕರ್ನಾಟಕ್ಕೆ ಕರಾವಳಿ ತೀರಕ್ಕೆ ಫೆಂಗಲ್‌ ಚಂಡಮಾರುತ ಅಪ್ಪಳಿಸಿದ್ದು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಕಳೆದ ರಾತ್ರಿಯಿಂದ ಭಾರೀ ಮಳೆಯಾಗಿದೆ. ಮೀನಿಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಈಗಾಗಲೇ ಎಚ್ಚರಿಕೆಯನ್ನು ನೀಡಿದೆ. ರಾಜ್ಯದ ಕೆಲ ಜಿಲ್ಲೆಗಳಿಗೆ ಯಲ್ಲೋ ಆಲರ್ಟ್‌ ಘೋಷಣೆ ಮಾಡಿದ್ದು. ಮಳೆಯ ಅಬ್ಬರ ಹೆಚ್ಚಿರುವ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆಯನ್ನು ನೀಡಲಾಗಿದೆ. ಮಳೆಯ ಅಬ್ಬರಕ್ಕೆ ಕರಾವಳಿ ಜನರು ತತ್ತರಿಸಿದ್ದಾರೆ. ಫೆಂಗಲ್‌ ಚಂಡಮಾರುತದ ಎಫೆಕ್ಟ್‌ ಇನ್ನೂ ಮೂರು ದಿನಗಳ ಇರಲಿದ್ದು, ಜನ ಮುನ್ನಚ್ಚರಿಕೆಯಿಂದ ಇರಬೇಕು ಎಂದು ಈಗಾಗಲೇ ಆಯಾ ಜಿಲ್ಲಾಡಳಿತ ಸೂಚನೆ ನೀಡಿದೆ.

ಈ ಸುದ್ದಿಯನ್ನೂ ಓದಿ : Earthquake: ತೆಲಂಗಾಣದಲ್ಲಿ ಬೆಳ್ಳಂಬೆಳಿಗ್ಗೆ ಕಂಪಿಸಿದ ಭೂಮಿ, 5.3 ತೀವ್ರತೆಯ ಭೂಕಂಪಕ್ಕೆ ಬೆಚ್ಚಿ ಬಿದ್ದ ಜನ