Simple marriage: ಯುವ ಸಮುದಾಯಕ್ಕೆ ಮಾದರಿ; ಸರಳವಾಗಿ ಮದುವೆಯಾಗಿ ಉಳಿದ ಹಣದಲ್ಲಿ ರಸ್ತೆ ನಿರ್ಮಿಸಿದ ಯುವಕ
ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ವರೋರಾ ತಹಸಿಲ್‌ನ ಸುಸಾ ಗ್ರಾಮದ ಶ್ರೀಕಾಂತ್ ಎಕುಡೆ ತಮ್ಮ ಮದುವೆಗೆ ಎಂದು ಕೂಡಿಟ್ಟ ಹಣವನ್ನು ಗ್ರಾಮದ ರೈತರ ಉಪಯೋಗಕ್ಕಾಗಿ ಖರ್ಚು ಮಾಡಿ ಅತ್ಯಂತ ಸರಳವಾಗಿ ವಿವಾಹವಾಗಿದ್ದಾರೆ. ಈ ಮೂಲಕ ಗ್ರಾಮದ ಎಲ್ಲರ ಮುದ್ದಿನ ಮಗ ಎಂದೆನಿಸಿಕೊಂಡಿದ್ದಾರೆ.


ಮುಂಬೈ: ಎಲ್ಲರಿಗೂ ತಮ್ಮ ಮದುವೆ (Wedding Function) ಹೀಗೆಯೇ ನಡೆಯಬೇಕು ಎನ್ನುವ ಕನಸು ಇದ್ದೇ ಇರುತ್ತದೆ. ಅಪರೂಪವೆಂಬಂತೆ ಕೆಲವರು ಈ ಸಂದರ್ಭದಲ್ಲಿ ಬೇರೆಯವರ ಬಗ್ಗೆ (Simple Wedding) ಯೋಚಿಸುತ್ತಾರೆ. ತಮ್ಮ ಮದುವೆಯ ನೆನಪಿಗೆ ಅಂತ ಏನೋ ಸಣ್ಣಪುಟ್ಟ ಸಮಾಜ ಸೇವೆಗಳನ್ನು ಮಾಡುತ್ತಾರೆ. ದೊಡ್ಡ ದೊಡ್ಡ ಸೇವೆಗಳನ್ನು ದುಡ್ಡಿದ್ದವರು ಮಾತ್ರ ಮಾಡಲು ಸಾಧ್ಯ ಎಂದುಕೊಳ್ಳುತ್ತಾರೆ. ಆದರೆ ಮನಸ್ಸಿದ್ದರೆ ಎಲ್ಲವೂ ಸಾಧ್ಯವಿದೆ ಎಂಬುದನ್ನು ಮಹಾರಾಷ್ಟ್ರದ (Maharastra) ಚಂದ್ರಾಪುರ (chandrapura) ಜಿಲ್ಲೆಯ ಯುವಕನೊಬ್ಬ ತೋರಿಸಿಕೊಟ್ಟಿದ್ದಾನೆ. ತನ್ನ ಮದುವೆಗೆಂದು ಕೂಡಿಟ್ಟಿದ್ದ ಹಣದಲ್ಲಿ ತನ್ನ ಹಳ್ಳಿಯ ಎಲ್ಲರಿಗೂ ಉಪಯೋಗವಾಗುವ ಕಾರ್ಯವೊಂದನ್ನು ಮಾಡಿ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದಾನೆ.
ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ವರೋರಾ ತಹಸಿಲ್‌ನ ಸುಸಾ ಗ್ರಾಮದ ಶ್ರೀಕಾಂತ್ ಎಕುಡೆ ತಮ್ಮ ಮದುವೆಗೆಂದು ಕೂಡಿಟ್ಟ ಹಣವನ್ನು ಗ್ರಾಮದ ರೈತರ ಉಪಯೋಗಕ್ಕಾಗಿ ಖರ್ಚು ಮಾಡಿ ಅತ್ಯಂತ ಸರಳವಾಗಿ ವಿವಾಹವಾಗಿದ್ದಾರೆ. ಈ ಮೂಲಕ ಗ್ರಾಮದ ಎಲ್ಲರ ಮುದ್ದಿನ ಮಗ ಎಂದೆನಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಜನರು ತಮ್ಮ ಪ್ರೀತಿಪಾತ್ರರ ಮದುವೆಗೆಂದು ಆಭರಣ, ಉಡುಗೆ ತೊಡುಗೆ, ವಿವಿಧ ಉಪಕರಣಗಳು, ಪಾತ್ರೆಗಳು, ಪೀಠೋಪಕರಣಗಳಂತಹ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಇದಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಶ್ರೀಕಾಂತ್ ಅವರು ತಮ್ಮ ಅತಿಥಿಗಳಿಗೆ ಇಂತಹ ಯಾವುದೇ ವಸ್ತುಗಳನ್ನು ತಮಗೆ ಉಡುಗೊರೆಯಾಗಿ ನೀಡದಂತೆ ಮನವಿ ಮಾಡಿದ್ದಾರೆ.
ಸಮಾಜ ಸುಧಾರಕ ಜ್ಯೋತಿರಾವ್ ಫುಲೆ ಅವರು ಪ್ರತಿಪಾದಿಸಿದ 'ಸತ್ಯಶೋಧಕ್' ಮಾದರಿಯಿಂದ ಪ್ರೇರಿತರಾಗಿ ಏ. 28ರಂದು ಸರಳವಾಗಿ ಅಂಜಲಿ ಎಂಬ ಯುವತಿಯ ಕೈಹಿಡಿದ ಶ್ರೀಕಾಂತ್ ತಮ್ಮ ಅತಿಥಿಗಳಿಂದ ಉಡುಗೊರೆಗಳನ್ನು ಸ್ವೀಕರಿಸುವ ಬದಲು 90 ಸಸಿಗಳನ್ನು ನೆಡುವಂತೆ ಮಾಡಿದ್ದಾರೆ.
ಕೃಷಿಯಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಶ್ರೀಕಾಂತ್ ತಮ್ಮ ಸಂಬಂಧಿಕರಿಂದ ಸಾಂಪ್ರದಾಯಿಕ ಉಡುಗೊರೆಗಳನ್ನು ಸ್ವೀಕರಿಸುವ ಬದಲು ಗಿಡಗಳನ್ನು ನೆಟ್ಟು ಮದುವೆಯಾಗಿದ್ದಾರೆ.
ಶ್ರೀಕಾಂತ್ ತಮ್ಮ ವಿವಾಹ ಯೋಜನೆಗಳನ್ನು ರೂಪಿಸುವಾಗಲೇ ವಿವಿಧ ಕಾರ್ಯಕ್ರಮಗಳಿಗೆ ದುಂದು ವೆಚ್ಚ ಮಾಡುವುದನ್ನು ತಪ್ಪಿಸಬೇಕು ಎಂದು ಯೋಚಿಸಿದರು. ಇದಕ್ಕಾಗಿ ತಮ್ಮ ಕುಟುಂಬ ಸದಸ್ಯರು ಮತ್ತು ಅತಿಥಿಗಳ ಮನವೊಲಿಸಿದ ಅವರು ಸುಮಾರು 50,000 ರೂ. ಸಂಗ್ರಹಿಸಿ, ಅದನ್ನು ಬಳಸಿಕೊಂಡು ಸುಮಾರು 600 ಮೀಟರ್ ರಸ್ತೆಯನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದಾಗಿ ಈಗ ಅವರ ಗ್ರಾಮದ ನಿವಾಸಿಗಳು ತಮ್ಮ ಹೊಲಗಳಿಗೆ ಯಾವುದೇ ತೊಂದರೆ ಇಲ್ಲದೆ ತೆರಳಬಹುದಾಗಿದೆ.
ಇದನ್ನೂ ಓದಿ: NEET exam: ಇಂದು ದೇಶಾದ್ಯಂತ ನೀಟ್ ಪರೀಕ್ಷೆ: ಮೂಗುತಿ, ಹೈಹೀಲ್ಸ್ ಕೂಡ ನಿಷೇಧ
ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀಕಾಂತ್, ನಮ್ಮ ಗ್ರಾಮದಿಂದ ಹೊಲಗಳಿಗೆ ಹೋಗುವ ಮಾರ್ಗವು ಮಳೆಗಾಲದಲ್ಲಿ ತುಂಬಾ ಕೆಟ್ಟದಾಗುತ್ತದೆ. ಇದರಿಂದ ಜನರು ತಮ್ಮ ಕೃಷಿ ಹೊಲಗಳನ್ನು ಪ್ರವೇಶಿಸುವುದು ಅಸಾಧ್ಯವಾಗಿತ್ತು. ಸ್ಥಳೀಯರು ಮತ್ತು ಗ್ರಾಮ ಪಂಚಾಯತ್ ಸಹಾಯದಿಂದ ನಾವು ಈಗ ರಸ್ತೆಯನ್ನು ನಿರ್ಮಿಸಿದ್ದೇವೆ ಎಂದು ತಿಳಿಸಿದರು.
ಜನರು ಉಪಕರಣ, ಪಾತ್ರೆ ಮತ್ತು ಪೀಠೋಪಕರಣಗಳಂತಹ ಉಡುಗೊರೆಗಳಿಗಾಗಿ ಭಾರಿ ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಅವರು ನಾವು ನಮ್ಮ ಅತಿಥಿಗಳಿಗೆ ಅಂತಹ ಯಾವುದೇ ವಸ್ತುಗಳನ್ನು ನೀಡದಂತೆ ಕೇಳಿಕೊಂಡಿರುವುದಾಗಿ ತಿಳಿಸಿದರು.
ಸುಸಾ ಗ್ರಾಮದಲ್ಲಿ ಸಸಿಗಳನ್ನು ಪಡೆಯಲು ನಾವು ಹಣವನ್ನು ಸಂಗ್ರಹಿಸಿದ್ದೇವೆ. ಅಲ್ಲಿ 36 ವಿವಿಧ ರೀತಿಯ ಹಣ್ಣಿನ ಮರಗಳನ್ನು ನೆಡಲಾಗಿದೆ ಎಂದು ಶ್ರೀಕಾಂತ್ ಹೇಳಿದರು.