Friday, 22nd November 2024

Viral News: ಎಣ್ಣೆ ಏಟಿನಲ್ಲೇ ಶಾಲೆಗೆ ಬಂದ ಶಿಕ್ಷಕರು– ಮದ್ಯ ಮಾರಾಟ ನಿಷೇಧವಿರುವ ಬಿಹಾರದಲ್ಲೊಂದು ವಿಚಿತ್ರ ಘಟನೆ!

ಪಟನಾ: ʼಎಣ್ಣೆ ಬೇಕು ಅಣ್ಣ.. ಇನ್ನು ಸಾಕು ಚಿನ್ನ.. ಎಂದು ಅಪ್ಪ-ಮಗನ ಪಾತ್ರದಲ್ಲಿ ರವಿಚಂದ್ರನ್‌ ಮತ್ತು ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಡಿ ಕುಣಿದದ್ದು ನಮಗೆಲ್ಲಾ ಗೊತ್ತೇ ಇದೆ. ಆದ್ರೆ ಬಿಹಾರದ (Bihar) ಸರಕಾರಿ ಶಾಲೆಯೊಂದರಲ್ಲಿ (Government School) ಪ್ರಿನ್ಸಿಪಾಲ್‌ ಹಾಗೂ ಶಿಕ್ಷಕರಿಬ್ಬರೂ ಸಹ ಮೂಗಿನವರೆಗೆ ಎಣ್ಣೆ ಹೊಡ್ಕೊಂಡು ಬಂದಿರೋ ಸುದ್ದಿ ಇದೀಗ ಸಿಕ್ಕಾಪಟ್ಟೆ ವೈರಲ್‌ (Viral News) ಆಗಿದೆ.

ಇಲ್ಲಿನ ನಳಂದಾ ಜಿಲ್ಲೆಯ (Nalanda District) ಸರಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇದೀಗ ಇಬ್ಬರೂ ಶಿಕ್ಷಕರು ಪೊಲೀಸರ ಅತಿಥಿಗಳಾಗಿದ್ದಾರೆ. ಬಿಹಾರದಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದ್ದರೂ ಈ ಘಟನೆ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ. ಈ ವಾರದ ಪ್ರಾರಂಭದಲ್ಲಿ ಈ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಹಾರದಲ್ಲಿ 2016ರಿಂದಲೇ ಮದ್ಯ ಮಾರಾಟಕ್ಕೆ ನಿಷೇಧವಿದೆ.

ಶಾಲಾ ಪ್ರಿನ್ಸಿಪಾಲ್‌ ಆಗಿರುವ ನಾಗೇಂದ್ರ ಪ್ರಸಾದ್‌ ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ಸುಬೋಧ್‌ ಕುಮಾರ್‌ ಎಂಬವರೇ ಈ ರೀತಿಯಾಗಿ ಮದ್ಯಪಾನ ಮಾಡಿ ಶಾಲಾ ಆವರಣದಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಇಬ್ಬರು ಶಿಕ್ಷಕರು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿರುವುದು ಗ್ರಾಮಸ್ಥರು ನೋಡಿ ಅವರನ್ನು ವಿಚಾರಿಸತೊಡಗಿದಾಗ, ಎಣ್ಣೆ ಏಟಿನಲ್ಲಿದ್ದ ಇವರಿಬ್ಬರೂ ಗ್ರಾಮಸ್ಥರ ಮೇಲೆಯೇ ಹರಿಹಾಯ್ದಿದ್ದಾರೆ ಎಂಬ ಆರೋಪ ಇದೀಗ ವ್ಯಕ್ತವಾಗಿದೆ. ಬಳಿಕ ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪ್ರಸಾದ್‌ ಹಾಗೂ ಕುಮಾರ್‌ ಅವರನ್ನು ಬಂಧಿಸಿದ್ದಾರೆ. ಇವರಿಬ್ಬರೂ ಮದ್ಯಪಾನ ಮಾಡಿದ್ದರು ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಇದೀಗ ಈ ಇಬ್ಬರು ಶಿಕ್ಷಕರನ್ನೂ ಶಾಲೆಯಿಂದ ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Gyanvapi case: ಜ್ಞಾನವಾಪಿ ಮಸೀದಿಯೊಳಗೆ ಶಿವಲಿಂಗ ಪತ್ತೆ ವಿಚಾರ; 14 ದಿನಗಳ ಗಡುವು.. ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ

ಒಟ್ಟಿನಲ್ಲಿ, ವಿದ್ಯಾರ್ಥಿಗಳಿಗೆ ನೈತಿಕತೆ ಮತ್ತು ಸನ್ನಡತೆಯ ಪಾಠ ಮಾಡಬೇಕಾದ ಶಿಕ್ಷಕರೇ ಈ ರೀತಿಯಾಗಿ ಶಾಲೆಗೆ ಮದ್ಯಪಾನ ಮಾಡಿಕೊಂಡು ಬಂದು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುವ ಘಟನೆಗಳು, ನಮ್ಮ ಸಮಾಜ ಇಂದು ಎತ್ತಕಡೆಗೆ ಸಾಗುತ್ತಿದೆ ಎಂಬುದರ ಸಂಕೇತವಾಗಿದೆ. ಈ ಹಿಂದೆಯೂ ದೇಶದ ಹಲವಾರು ಕಡೆಗಳಲ್ಲಿ ಶಿಕ್ಷಕರು ಮದ್ಯಪಾ ಮಾಡಿಕೊಂಡೇ ಶಾಲೆಗೆ ಬಂದಿರುವ ಅಥವಾ ಶಾಲಾ ವರಾಂಡದಲ್ಲಿ ಮೈಮರೆತು ಬಿದ್ದುಕೊಂಡಿರುವ ವಿಡಿಯೋಗಳು ಮತ್ತು ಸುದ್ದಿಗಳು ಭಾರೀ ಸದ್ದು ಮಾಡಿದ್ದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.