Thursday, 21st November 2024

Viral News: 50 ಗಾಯಗಳು..ಪ್ರಾಣಿಗಳು ಕಚ್ಚಿ ಬಿಟ್ಟಿದ್ದ ಪುಟ್ಟ ದೇಹ… ಸೇತುವೆ ಮೇಲಿಂದ ಎಸೆಯಲ್ಪಟ್ಟ ಈ ಕಂದಮ್ಮ ಬದುಕುಳಿದಿದ್ದೇ ಪವಾಡ!

Viral News

ಲಖನೌ: ಆಯುಷ್ಯ ಇದ್ದರೆ ಸಾವಿಗೂ ಸವಾಲೊಡ್ಡಿ ಬದುಕುಳಿದು ಬರಬಹುದೆಂಬುದಕ್ಕೆ ಈ ಘಟನೆಯೇ ಸಾಕ್ಷಿ. ಪೋಷಕರು ಸೇತುವೆಯ ಮೇಲಿಂದ ಎಸೆದು ಹೋಗಿದ್ದ ನವಜಾತ ಶಿಶು(Newborn) ಬರೊಬ್ಬರಿ ಎರಡು ತಿಂಗಳ ಜೀರನ್ಮರಣ ಹೋರಾಟದಲ್ಲಿ ಬದುಕುಳಿದಿದೆ. ಪವಾಡಸದೃಶ್ಯ ಎಂಬಂತೆ ಬದುಕುಳಿದಿರುವ ಈ ಮಗು ಎಲ್ಲರಿಗೂ ಅಚ್ಚರಿ ಮೂಡುವಂತೆ ಮಾಡಿದೆ(Viral News).

ಏನಿದು ಘಟನೆ?

ಅಗಸ್ಟ್‌ನಲ್ಲಿ ನವಜಾತ ಶಿಶುವೊಂದನ್ನು ಸೇತುವೆ ಮೇಲಿಂದ ಎಸೆದು ಹೋದ ಅಮಾನುಷ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿತ್ತು. ಹೆತ್ತವರು ನವಜಾತ ಶಿಶುವನ್ನು ಸೇತುವೆ ಮೇಲಿಂದ ಎಸೆದು ಹೋಗಿದ್ದರು. ಕೆಳಗೆ ಎಸೆಯಲ್ಪಟ್ಟ ಮಗು ಮರದ ಮೇಲೆ ಸಿಲುಕಿ ಹಾಕಿ ಕೊಂಡು, ಅದರ ಮೈ ತುಂಬಾ ಗಾಯಗಳಾಗಿದ್ದವು. ಅಲ್ಲದೇ ಪಕ್ಷಿಗಳು ಅದನ್ನು ಕುಕ್ಕಿದ್ದವು. ಮಗು ಬದುಕುಳಿಯಬಹುದು ಎಂದು ಯಾರೊಬ್ಬರೂ ಊಹಿಸಿರಲಿಲ್ಲ. ನಂತರ ಗಾಯಗೊಂಡ ಮಗುವನ್ನು ಕಾನ್ಪುರದ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ವೈದ್ಯರು ಭರವಸೆ ನೀಡಿರಲಿಲ್ಲ.

ಇದೀಗ ಸತತ ಎರಡು ತಿಂಗಳ ನಿರಂತರ ಚಿಕಿತ್ಸೆಯಿಂದ ಮಗು ಗುಣಮಖಗೊಂಡಿದೆ. ಕಾನ್ಪುರ ಆಸ್ಪತ್ರೆಯ ಸಿಬ್ಬಂದಿಗಳು ಮಗುವಿನ ಆರೈಕೆ ಮಾಡಿದ್ದು, ಮಗುವನ್ನು ಅಕ್ಟೋಬರ್‌ 24 ರಂದು ಪೊಲೀಸ್‌ ಹಾಗೂ ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಕೃಷ್ಣ ಜನ್ಮಾಷ್ಟಮಿಯಂದು ಆಸ್ಪತ್ರೆಗೆ ಬಂದ ಮಗುವಿಗೆ ಕೃಷ್ಣ ಎಂದು ಹೆಸರಿಟ್ಟಿದ್ದೇವೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ. ಶಿಶುವಿಗೆ ಮೈ ತುಂಬಾ ಗಾಯಗಳಾಗಿದ್ದವು. ಮಗುವನ್ನು ಎತ್ತಿ ಕೊಳ್ಳಲು ಆಗುತ್ತಿರಲಿಲ್ಲ. ಆತ ಜೋರಾಗಿ ಅಳುತ್ತಿದ್ದ ನಾವು ದೂರದಿಂದಲೇ ಆತನಿಗೆ ಲಾಲಿ ಹಾಡು ಹೇಳಿ ಮಲಗಿಸುತ್ತಿದ್ದೆವು ಎಂದು ಆಸ್ಪತ್ರೆಯ ನರ್ಸ್‌ ಒಬ್ಬರು ಹೇಳಿದ್ದಾರೆ.

ಮಗುವಿನ ಹಸ್ತಾಂತರದ ಬಳಿಕ ಮಾತನಾಡಿದ ವೈದ್ಯೆ ಡಾ. ಕಲಾ ಸತತ ಎರಡು ತಿಂಗಳ ಆರೈಕೆಯ ನಂತರ ಈಗ ಆತ ಚೇತರಿಸಿಕೊಂಡಿದ್ದಾನೆ. ಆಸ್ಪತ್ರೆಯಿಂದ ಆತ ಹೊರಡುವಾಗ ಎಲ್ಲರ ಕಣ್ಣಲ್ಲಿ ನೀರು ಬಂತು. ಇಷ್ಟು ಕಡಿಮೆ ಅವಧಿಯಲ್ಲಿ ನಾವು ಮಗುವಿನ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದೇವೆ. ಅದರ ಹೆತ್ತವರು ಹೇಗೆ ಎಸೆದು ಹೋದರು? ಎಂದು ಆಶ್ಚರ್ಯವಾಗಿದೆ‌ ಕನಿಷ್ಟಪಕ್ಷ ಆಸ್ಪತ್ರೆ ಇಲ್ಲ ದೇವಸ್ಥಾನದ ಬಳಿಯಾದರೂ ಬಿಡಬಹುದಿತ್ತು ಎಂದು ಹೇಳಿದ್ದಾರೆ. ತಾವೇ ಹೆತ್ತ ಮಕ್ಕಳನ್ನು ಬೀದಿಯಲ್ಲಿ ಎಸೆಯುವ ಜನರ ಮಧ್ಯೆ ಕಾನ್ಪುರ ಆಸ್ಪತ್ರೆಯ ಸಿಬ್ಬಂದಿ ಮಾದರಿಯಾಗಿದ್ದಾರೆ.

ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಇಂತಹುದೇ ಘಟನೆ ನಡೆದಿದೆ. ಹೆಣ್ಣು ಮಗುವೊಂದನ್ನು ಪೋಷಕರು, ಹುಟ್ಟಿದ ಕೂಡಲೇ ಪೊದೆ ಬಳಿ ತಂದು ಬಿಟ್ಟು ಹೋಗಿದ್ದರು. ಮಗುವಿನ ಅಳು ಕೇಳಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಸಬ್‌ ಇನ್ಸ್‌ಪೆಕ್ಟರ್‌ ಪುಷ್ಪೆಂದ್ರ ಸಿಂಗ್ ನೇತೃತ್ವದಲ್ಲಿ ಗಾಜಿಯಾಬಾದ್‌ನ ದುಧಿಯಾ ಪೀಪಲ್‌ ಪೊಲೀಸ್ ಔಟ್‌ಪೋಸ್ಟ್‌ನ  ಪೊಲೀಸರು ಕೂಡಲೇ ಸಾರ್ವಜನಿಕರ ಕರೆಗೆ ಸ್ಪಂದಿಸಿ ಸ್ಥಳಕ್ಕಾಗಮಿಸಿ ಮಗುವನ್ನು ರಕ್ಷಣೆ ಮಾಡಿದರು. ಮಗುವಿನ ಹೆತ್ತವಿರಿಗಾಗಿ ಸಾಕಷ್ಟು ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಇನ್ಸ್‌ಪೆಕ್ಟರ್‌ ಪುಷ್ಪೆಂದ್ರ ಸಿಂಗ್ ದಂಪತಿ ತಾವೇ ಮಗುವನ್ನು ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿದೆ.

ಪುಷ್ಪೇಂದ್ರ ಸಿಂಗ್ ಹಾಗೂ ಪತ್ನಿ ರಾಶಿ ಖನ್ನಾ ಅವರು 2018ರಲ್ಲಿ ಮದುವೆಯಾಗಿದ್ದು, ಮಕ್ಕಳಿರಲಿಲ್ಲ. ಈಗ ನವರಾತ್ರಿ ವೇಳೆ ಅವರಿಗೆ ಈ ಹೆಣ್ಣು ಮಗು ಸಿಕ್ಕಿದ್ದು,  ಮಗುವಿನ ಈ ಆಗಮನವನ್ನು ದೇವರ ಆಶೀರ್ವಾದವೆಂದು ದಂಪತಿ ಬಣ್ಣಿಸಿದ್ದಾರೆ. 

ಇದನ್ನೂ ಓದಿ : Assault Case: ಸಂಚಾರ ನಿಯಮ ಉಲ್ಲಂಘನೆ ಪ್ರಶ್ನಿಸಿದ ಪೊಲೀಸ್‌ಗೆ ಒದ್ದು ಮಹಿಳೆ ರಂಪಾಟ! ವಿಡಿಯೊ ವೈರಲ್‌