Friday, 8th November 2024

Viral News: ಮದುವೆಗೆ ರಜೆ ಕೊಡಲ್ಲ ಎಂದ ಬಾಸ್‌, ವಿಡಿಯೋ ಕಾಲ್‌ನಲ್ಲೇ ಖುಬೂಲ್ ಹೈ ಎಂದ ವ್ಯಕ್ತಿ!

Viral News

ಶಿಮ್ಲಾ: ಮದುವೆ ಎಲ್ಲಿ, ಯಾವಾಗ ಹಾಗೂ ಹೇಗೆ ಆಗುತ್ತದೆ ಎಂಬುದು ಸ್ವರ್ಗದಲ್ಲಿಯೇ ನಿರ್ಧಾರವಾಗಿರುತ್ತದೆ ಎಂದು ಹಿರಿಯರು ಹೇಳುತ್ತಿರುತ್ತಾರೆ. ಅದಕ್ಕೆ ತಕ್ಕ ನಿದರ್ಶನ ಎಂಬಂತೆ ಇಲ್ಲೊಬ್ಬ ವ್ಯಕ್ತಿ ಆನ್‌ಲೈನ್‌ ಮೂಲಕ ಮದುವೆ ಆಗಿದ್ದಾನೆ. ಹೌದು ಭಾರತೀಯ ಮೂಲದ ಟರ್ಕಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಹಿಮಾಚಲ ಪ್ರದೇಶದ (Himachal Pradesh) ವ್ಯಕ್ತಿ ವಿಡಿಯೋ ಕಾಲ್‌ (Video Call) ಮೂಲಕ “ಖುಬೂಲ್ ಹೈ” ಎಂದು ಹೇಳಿ ವಿವಾಹವಾಗಿದ್ದಾನೆ (Wedding) . ಈಗ ಅದು ಎಲ್ಲೆಡೆ ವೈರಲ್‌ (Viral News) ಆಗುತ್ತಿದೆ.

ಬಿಲಾಸ್‌ಪುರದ ನಿವಾಸಿ ಅದ್ನಾನ್ ಮುಹಮ್ಮದ್ ಮತ್ತು ಹಿಮಾಚಲ ಪ್ರದೇಶದ ಮಂಡಿ ಮೂಲದ ವಧುವಿನ ಮದುವೆ ವಿಡಿಯೋ ಕಾಲ್‌ ಮೂಲಕ ನಡೆದಿದೆ. ವರ ಟರ್ಕಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮಾಡುವ ಕಂಪನಿಯ ಬಾಸ್‌ ಮದುವೆಗೆ ರಜೆ ಕೊಡಲು ನಿರಾಕರಿಸಿದ್ದಾರೆ. ವಧುವಿನ ಅಜ್ಜ ಅನಾರೋಗ್ಯದಿಂದ ಬಳಲುತ್ತಿದ್ದು ಆದಷ್ಟು ಬೇಗ ಮದುವೆಯಾಗುವಂತೆ ವಧುವಿನ ಮನೆಯವರು ಒತ್ತಾಯ ಮಾಡಿದ್ದಾರೆ. ಆದರೆ ರಜೆ ತೆಗೆದುಕೊಂಡು ಭಾರತಕ್ಕೆ ಬರಲು ಅದ್ನಾನ್ ಮುಹಮ್ಮದ್‌ಗೆ ಸಾಧ್ಯವಾಗಿರಲಿಲ್ಲ. ಅದಕ್ಕಾಗಿಯೇ ವಿಡಿಯೋ ಕಾಲ್‌ ಮೂಲಕ ಮದುವೆಗೆ ಎರಡು ಮನೆಯವರು ಒಪ್ಪಿಗೆ ಸೂಚಿಸಿದ್ದಾರೆ.

ನಂತರ ಭಾನುವಾರ ವರನ ಕಡೆಯವರು ದಿಬ್ಬಣ ಸಮೇತ ಮಂಡಿಗೆ ತೆರಳಿದ್ದಾರೆ. ಸೋಮವಾರ ಮದುವೆ ನಡೆದಿದೆ. ವಧುವಿನ ಮನೆಯಿಂದ ವರನಿಗೆ ವಿಡಿಯೋ ಕಾಲ್‌ ಮಾಡಲಾಗಿದೆ. ಮದುವೆ ಮಾಡಿಸುವ ಖಾಜಿ ವಧು ಹಾಗೂ ವರ ಇಬ್ಬರಿಗೂ “ಖುಬೂಲ್ ಹೈ” (ಮದುವೆಗೆ ಒಪ್ಪಿಗೆ ಇದೆಯೇ) ಎಂದು ಮೂರು ಬಾರಿ ಕೇಳುವ ಮೂಲಕ ಮದುವೆ ಸಂಪ್ರದಾಯವನ್ನು ಮುಗಿಸಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಮದುವೆ ಸಾಧ್ಯವಾಯಿತು ಎಂದು ವಧುವಿನ ಚಿಕ್ಕಪ್ಪ ಅಕ್ರಂ ಮೊಹಮ್ಮದ್ ಹೇಳಿದ್ದಾರೆ.

ಇದನ್ನೂ ಓದಿ:Muslim personal laws : ನಾಲ್ಕು ಮದುವೆಯಾಗುವುದು ಮುಸ್ಲಿಂ ಪುರುಷರ ಹಕ್ಕು ಎಂದ ಹೈಕೋರ್ಟ್‌

ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಧಾರವಾಡದಲ್ಲೂ ಇದೇ ರೀತಿಯಲ್ಲಿ ಆನ್‌ಲೈನ್‌ ಮೂಲಕ ಜೋಡಿಯೊಂದು ಮದುವೆಯಾಗಿತ್ತು. ಧಾರವಾಡ ಆದರ್ಶ ನಗರ ನಿವಾಸಿ ಇಮ್ರಾನ್ ಮಹಮ್ಮದ್‌ ನದಾಫ್ ಹಾಗೂ ಕೊಪ್ಪಳ ಬೈಲ್ದಾರ ಕಾಲೊನಿ ತಾಜಮಾ ಬೇಗಂ ವಿಡಿಯೋ ಕಾಲ್‌ ಮೂಲಕ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವಧು- ವರರಿಬ್ಬರನ್ನೂ ಅವರವರ ಮನೆಯಲ್ಲಿಯೇ ಕುಳ್ಳಿರಿಸಿದ ಎರಡೂ ಕುಟುಂಬದವರು ವಿಡಿಯೋ ಕಾಲ್ ಮೂಲಕ ಪರಸ್ಪರರ ಒಪ್ಪಿಗೆ ಪಡೆದು ಮದುವೆ ಕಾರ್ಯ ಮುಗಿಸಿದ್ದರು. ಕೊರೊನಾ ಬರುವ ಮೊದಲೇ ವಿವಾಹವನ್ನು ನಿಶ್ಚಯಿಸಲಾಗಿತ್ತು ಆದರೆ ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ಲಾಕ್‌ಡೌನ್‌ ಜಾರಿಯಲ್ಲಿತ್ತು. ಇದರಿಂದ ವಧು ವರರ ಮನೆಯವರು ಈ ರೀತಿಯಲ್ಲಿ ವಿವಾಹ ಮಾಡಿದ್ದರು.