Friday, 22nd November 2024

Viral News: ಎರಡೂ ಕೈಗಳಿಲ್ಲದಿದ್ದರೂ ಜೊಮ್ಯಾಟೊದಲ್ಲಿ ಫುಡ್ ಡೆಲಿವರಿ; ವಿಶೇಷಚೇತನ ವ್ಯಕ್ತಿಯ ಶ್ರಮಕ್ಕೆ ನೆಟ್ಟಿಗರ ಹ್ಯಾಟ್ಸ್‌ಆಫ್‌

Viral News

ನವದೆಹಲಿ: ಜೀವನದ ಸಣ್ಣಪುಟ್ಟ ಕೊರತೆಗಳ ಬಗ್ಗೆ ಚಿಂತಿಸುತ್ತಾ ಇಲ್ಲವೇ ಅದನ್ನೇ ಸದಾ ದೂಷಿಸುವವರ ಸಂಖ್ಯೆಯೇ ಹೆಚ್ಚು. ಆದರೆ ತಮ್ಮ ನ್ಯೂನತೆ ಮೆಟ್ಟಿ ನಿಂತು ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಹಲವರು ತೋರಿಸಿ ಕೊಟ್ಟಿದ್ದಾರೆ. ಇದೀಗ ಅಂತಹದೇ ವ್ಯಕ್ತಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಅದು ನೆಟ್ಟಿಗರ ಮನ ಗೆದ್ದಿದೆ.

ವಿಕಲಚೇತನ ವ್ಯಕ್ತಿಯೊಬ್ಬ ಜೊಮ್ಯಾಟೊ ಫುಡ್ ಆರ್ಡರ್‌ಗಳನ್ನು ತಲುಪಿಸಲು ಬೈಕ್‌ ಓಡಿಸುತ್ತಿರುವ ದೃಶ್ಯವನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದು ಎಲ್ಲೆಡೆ ವೈರಲ್‌ ಆಗುತ್ತಿದೆ. ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದರೂ ಡೆಲಿವರಿ ಏಜೆಂಟ್ ತನ್ನ ಸ್ಕೂಟರ್ ಅನ್ನು ಆತ್ಮವಿಶ್ವಾಸದಿಂದ ಚಲಾಯಿಸಿಕೊಂಡು ಹೋಗುವುದನ್ನು ಕಾಣಬಹುದು. ವಿಡಿಯೊ ಮಾಡಿದ ವ್ಯಕ್ತಿ ಅಂಕಲ್‌ ನಿಮಗೆ ಬೈಕ್‌ ಓಡಿಸಲು ಸಾಧ್ಯವೇ ಎಂದು ಕೇಳುತ್ತಾರೆ. ಇದಕ್ಕೆ ನಗುತ್ತಲೇ ಉತ್ತರಿಸುವ ಫುಡ್‌ ಡೆಲಿವರಿ ಏಜೆಂಟ್‌ ಹೌದು ಎಂದು ಉತ್ತರಿಸುತ್ತಾರೆ.

16 ಸಾವಿರ ವೀಕ್ಷಣೆ ಪಡೆದ ಈ ವಿಡಿಯೋ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಬಳಕೆದಾರರು ತರೇಹವಾರಿ ಕಾಮೆಂಟ್‌ ಮಾಡಿದ್ದು ನೀವು ರಿಯಲ್‌ ಹೀರೋ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು “ಜೀವನದಲ್ಲಿನ ಕಷ್ಟಗಳು ಮನುಷ್ಯನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಸುರಕ್ಷತೆಗಾಗಿ ದಯವಿಟ್ಟು ಹೆಲ್ಮೆಟ್‌ ಬಳಸಿ ಎಂದು ಸಲಹೆ ಕೊಟ್ಟಿದ್ದಾರೆ. ಇನ್ನೂ ಕೆಲವರು ನಿಮ್ಮ ಪರಿಶ್ರಮಕ್ಕೆ ಒಳ್ಳೆಯ ಫಲ ಸಿಗುತ್ತದೆ ಎಂದು ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ : Viral Video: ಕಾರಿನಲ್ಲಿ ಹೋಗುತ್ತಿದ್ದ ದಂಪತಿಯನ್ನು ಮಾರಕಾಸ್ತ್ರ ಹಿಡಿದುಕೊಂಡು ಬೆನ್ನಟ್ಟಿದ ದರೋಡೆಕೋರರು; ವಿಡಿಯೊ ವೈರಲ್‌

ವಿಶೇಷ ಚೇತನ ಜೊಮ್ಯಾಟೊ ಏಜೆಂಟ್ ಅಂತರ್ಜಾಲದಲ್ಲಿ ಮೆಚ್ಚುಗೆಗೆ ಪಾತ್ರರಾಗಿರುವುದು ಇದೇ ಮೊದಲಲ್ಲ. ಈ ಹಿಂದೆ, ಮೋಟರ್‌ಬೈಕ್‌ನಂತೆ ಸಜ್ಜು ಮಾಡಿರುವ ಗಾಲಿಕುರ್ಚಿಯಲ್ಲಿ ಸಂಚರಿಸಿ ಫುಡ್‌ ಡೆಲಿವರಿ ಮಾಡುತ್ತಿದ್ದ ಮತ್ತೊಂದು ಡೆಲಿವರಿ ಏಜೆಂಟ್ ವಿಡಿಯೋ ಆನ್‌ಲೈನ್‌ನಲ್ಲಿ ಹೆಚ್ಚುಗಮನ ಸೆಳೆದಿತ್ತು. ಸಾಮಾಜಿಕ ಜಾಲತಾಣ ಬಳಕೆದಾರ ನಾರಾಯಣ ಕಣ್ಣನ್ ಅವರು ಪೋಸ್ಟ್ ಮಾಡಿದ ಈ ವಿಡಿಯೋ ವ್ಯಾಪಕ ಮೆಚ್ಚುಗೆಗಳಿಸಿತ್ತು ಮತ್ತು ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಅದನ್ನು ಮರು ಪೋಸ್ಟ್ ಮಾಡಿದ್ದರು.