Thursday, 21st November 2024

Viral Video: ಜೋಕಾಲಿ ರಾಡ್‌ಗೆ ಸಿಲುಕಿ ಬಾಲಕಿಯ ನೆತ್ತಿಯ ಚರ್ಮದ ಸಮೇತ ಕಿತ್ತುಬಂದ ಕೂದಲು; ಶಾಕಿಂಗ್‌ ವಿಡಿಯೊ

ಲಕ್ನೋ: ಉತ್ತರ ಪ್ರದೇಶದ ಕನೌಜ್ ನಲ್ಲಿನ ಮೇಳವೊಂದರಲ್ಲಿ (Kannauj Fair) ಭಯಾನಕ ಮತ್ತು ಬೀಭತ್ಸವೆನ್ನಬಹುದಾದ ಘಟನೆಯೊಂದು ನಡೆದಿದೆ. ಜೋಕಾಲಿಯ ರೋಲರ್ ಗೆ ಬಾಲಕಿಯ ತಲೆಗೂದಲು ಅಚಾನಕ್ ಆಗಿ ಸಿಕ್ಕಿಹಾಕಿಕೊಂಡು ನಡೆದ ದುರ್ಘಟನೆಯಲ್ಲಿ ಆ ಬಾಲಕಿಯ ಕೂದಲು ಸಹಿತ ತಲೆಬುರುಡೆ ಮೇಲಿನ ಚರ್ಮ ಎದ್ದು ಬಂದಿದೆ. ಈ ಭಯಾನಕ ಘಟನೆಯ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಈ ಫೂಟೇಜ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ನೋಡುಗರ ಎದೆ ಝಲ್ಲೆನೆಸುವಂತಿದೆ.

ಸ್ವಾಮಿ ನಿತ್ಯಾನಂದ ಸೇವಾ ಸಮಿತಿ ಆಶ್ರಯದಲ್ಲಿ ಪ್ರತೀ ವರ್ಷ, ಎರಡು ದಿನಗಳ ಉತ್ಸವ ಮಾಧೋನಗರದಲ್ಲಿ ನಡೆಯುತ್ತದೆ. ಈ ಉತ್ಸವದಲ್ಲಿ ಪೂಜಾ ಕಾರ್ಯಕ್ರಮಗಳು, ಮೆರವಣಿಗೆಗಳು ಮತ್ತು ವಿವಿಧ ಮನೊರಂಜನಾ ಕಾರ್ಯಕ್ರಮಗಳು ನಡೆಯುತ್ತವೆ. ಈ ಬಾರಿಯ ಉತ್ಸವದಲ್ಲಿ ಆಯೋಜನೆಗೊಂಡಿದ್ದ ಮೇಳದಲ್ಲಿ ಈ ದುರ್ಘಟನೆ ನಡೆದಿದ್ದು, ಬಾಲಕಿಯ ತಲೆಗೂದಲು ಮತ್ತು ಅದರಡಿಯ ಪೂರ್ತಿ ಚರ್ಮ ಜೋಕಾಲಿಯ ರಾಡ್ ಗೆ ಸಿಲುಕಿಕೊಂಡಿದ್ದು, ತಕ್ಷಣವೇ ಅಲ್ಲಿದ್ದವರು ಜೋಕಾಲಿಯ ಚಕ್ರವನ್ನು ನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದಾರೆ.

ಸೋಮವಾರದಂದು ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದ್ದು, ಕ್ಷಣಮಾತ್ರದಲ್ಲಿ ಎಲ್ಲೆಡೆ ವೈರಲ್ ಆಗಿದ್ದು ಮಾತ್ರವಲ್ಲದೇ ನೆಟ್ಟಿಗರು ಬೆಚ್ಚಿಬೀಳುವಂತೆ ಮಾಡಿದೆ.

ರಕ್ತಸಿಕ್ತ ತಲೆಯೊಂದಿಗೆ ಬಾಲಕಿಯನ್ನು ಅಲ್ಲಿಂದ ಹೊರ ತರುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ದಾಖಲಾಗಿದೆ. ಈ ಘಟನೆ ಕನೌಜ್ ನ ಮಾಧೋನಗರ್ ಗ್ರಾಮದಲ್ಲಿ ನಡೆದಿದ್ದು, ಇದು ತಾಲಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದುದಾಗಿದೆ.

ಈ ದುರ್ಘಟನೆ ನ.09ರ ಶನಿವಾರ ಸಾಯಂಕಾಲ ನಡೆದಿರುವುದಾಗಿ ತಿಳಿದುಬಂದಿದ್ದು, ಈ ಬಾಲಕಿಯನ್ನು 13 ವರ್ಷದ ಅನುರಾಧಾ ಕಥೇರಿಯಾ ಎಂದು ಗುರುತಿಸಲಾಗಿದೆ. ತಲ್ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿರುವ ಬಾಲಕಿ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಬಳಿಕ ಆಕೆಯನ್ನು ಸಮೀಪದಲ್ಲಿರುವ ಗುರುಸಾಯಿಗಂಜ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಆ ಬಳಿಕ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ: Hamas Torture Tactics: ಒತ್ತೆಯಾಳುಗಳಿಗೆ ಹಮಾಸ್‌ ಉಗ್ರರು ಯಾವ ರೀತಿ ಚಿತ್ರಹಿಂಸೆ ಕೊಡ್ತಿದ್ದಾರೆ ಗೊತ್ತಾ? ಇಲ್ಲಿದೆ ವಿಡಿಯೋ

ಇಂತಹ ರೋಚಕ ಆಟಗಳು ಪ್ರೇಕ್ಷಕರಿಗೆ ಅದ್ಭುತ ಅನುಭವಗಳನ್ನು ನೀಡುತ್ತವೆಯಾದರೂ ಇಲ್ಲಿ ಪ್ರತಿಯೊಬ್ಬರ ಸುರಕ್ಷತೆಗೆ ಆದ್ಯತೆ ನೀಡುವುದು ಅಷ್ಟೇ ಅಗತ್ಯ ಎಂದು ಸುರಕ್ಷತಾ ತಜ್ಞರು ಅಭಿಪ್ರಾಯಪಡುತ್ತಾರೆ. ಮತ್ತು ಇಂತಹ ದೈತ್ಯ ಜೋಕಾಲಿಗಳಲ್ಲಿ ಕುಳಿತುಕೊಳ್ಳುವವರು, ಇದು ಪೂರ್ತಿಯಾಗಿ ನಿಲ್ಲದೇ ತಮ್ಮ ಸೀಟುಗಳಿಂದ ಎದ್ದೇಳುವುದೂ ಸಹ ಅಪಾಯಕಾರಿ ಮಾತ್ರವಲ್ಲದೇ ಸೀಟ್ ಬೆಲ್ಟ್, ಅಡ್ಡಪಟ್ಟಿಗಳನ್ನು ಸರಿಯಾಗಿ ಹಾಕಿಕೊಂಡಿರುವುದನ್ನೂ ಸಹ ಖಚಿತಪಡಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದ್ದಾರೆ. ಮತ್ತು ಇವುಗಳಲ್ಲಿ ಕುಳಿತು ಆನಂದಿಸುವ ಸಂದರ್ಭದಲ್ಲಿ ನಿಲ್ಲುವುದು, ಬಾಗುವುದು ಅಥವಾ ಸುರಕ್ಷತಾ ಪರಿಕರಗಳನ್ನು ಸಡಿಲಗೊಳಿಸುವುದೇ ಮೊದಲಾದ ಕೆಲಸಗಳನ್ನು ಯಾರೂ ಮಾಡಬಾರದು, ಯಾಕೆಂದರೆ ಇವೆಲ್ಲವೂ ನಮ್ಮ ಸುರಕ್ಷತೆಗಾಗಿ ಇರುವಂತದ್ದು ಎಂಬುದನ್ನು ಸುರಕ್ಷತಾ ತಜ್ಞರು ಒತ್ತಿ ಹೇಳುತ್ತಾರೆ.