Tuesday, 5th November 2024

Viral Video: ಪೋಷಕರೇ ಎಚ್ಚರ… ಎಚ್ಚರ…! ಚೂಯಿಂಗ್‌ ಗಮ್‌ ಗಂಟಲಿಗೆ ಸಿಲುಕಿ 4 ವರ್ಷದ ಮಗು ಸಾವು

Viral Video

ಕಾನ್ಪುರ: ಹಠ ಹಿಡಿದು ಅಳುವ ಮಗುವಿನ ಬಾಯಿಗೆ ಸಿಹಿ ಸಿಹಿಯಾದ ಚಾಕೋಲೆಟ್‌ ಕೊಟ್ಟರೆ ಹತ್ತು ನಿಮಿಷ ಯಾವುದೇ ಕಿರಿಕಿರಿ ಇಲ್ಲದೇ ಇರಬಹುದು ಎಂಬುದು ಪೋಷಕರ ಅಭಿಪ್ರಾಯ. ಆದರೆ ಈ ಚಾಕೋಲೆಟ್‌ ಮಾಡುವ ಅವಾಂತರ ಒಂದಾ ಎರಡಾ….? ಇತ್ತೀಚೆಗೆ ಮಗುವಿಗೆ ಚೂಯಿಂಗ್‌ ಗಮ್‌ ಗಂಟಲಿನಲ್ಲಿ ಸಿಲುಕಿ 4 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ (Viral Video)ಆಗಿದೆ.  

ಬಾರ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬಾರ್ರಾ ಜರೌಲಿ ಹಂತ -1 ರಲ್ಲಿ ಈ ಘಟನೆ ನಡೆದಿದೆ. ವರದಿ ಪ್ರಕಾರ ಮಗು ಹತ್ತಿರದ ಅಂಗಡಿಯಿಂದ ಫ್ರೂಟೋಲಾ ಚೂಯಿಂಗ್‌ ಗಮ್‌ ಅನ್ನು ಖರೀದಿಸಿದೆ. ಇದನ್ನು ಮಗು ತಿನ್ನುತ್ತಿದ್ದಾಗ ಅದು ಅವನ ಗಂಟಲಿನಲ್ಲಿ ಸಿಲುಕಿಕೊಂಡಿತು. ನಂತರ ಮಗುವಿನ ತಾಯಿ ಮಗುವಿಗೆ ನೀರು ಕುಡಿಸಿದ್ದರಿಂದ ಚೂಯಿಂಗ್‌ ಗಮ್‌ ಗಂಟಲಿನ ಕೆಳಕ್ಕೆ ಜಾರಿ ಮಗುವಿಗೆ ಉಸಿರಾಡಲು ಆಗಲಿಲ್ಲವಂತೆ. ತಕ್ಷಣ  ಮಗುವಿನ ಕುಟುಂಬದವರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ವೈದ್ಯರಿಗೆ ಮಗುವಿನ  ಗಂಟಲಿನಲ್ಲಿ ಸಿಲುಕಿದ ಚೂಯಿಂಗ್‌ ಗಮ್‌ ಹೊರಗೆತೆಗೆಯಲು ಸಾಧ್ಯವಾಗಲಿಲ್ಲ. ದೀಪಾವಳಿಯ ಪ್ರಯುಕ್ತ ವೈದ್ಯರು ರಜೆಯಲ್ಲಿದ್ದ ಕಾರಣ ವೈದ್ಯರಿಗಾಗಿ ಕುಟುಂಬದವರು ಮಗುವನ್ನು ಸುಮಾರು 3-4 ಆಸ್ಪತ್ರೆಗಳಿಗೆ ಕರೆದೊಯ್ದರು. ಆದರೆ ಮಗುವಿಗೆ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗದೆ ಮಗು ಉಸಿರುಗಟ್ಟಿ ಸಾವನ್ನಪ್ಪಿತು.

ಸುಮಾರು ಮೂರು ಗಂಟೆಗಳ ಕಾಲ ಜೀವಕ್ಕಾಗಿ ಹೋರಾಡಿದ ನಂತರ ಮಗು ದುರಂತವಾಗಿ ಪ್ರಾಣ ಕಳೆದುಕೊಂಡಿದೆ. ಇತ್ತ ಮಗು ಚೂಯಿಂಗ್‌ ಗಮ್‌ ಖರೀದಿಸಿದ ಅಂಗಡಿಯ ಮಾಲೀಕ ಅಂಗಡಿಯನ್ನು ಮುಚ್ಚಿ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಇದರ ನಡುವೆ  ಈ ಬಗ್ಗೆ ತನಿಖೆ ನಡೆಸಿ ಚೂಯಿಂಗ್‌ ತಯಾರಕಾ ಕಂಪನಿ ವಿರುದ್ಧ ಪ್ರಕರಣ ದಾಖಲಿಸುವಂತೆ ಕುಟುಂಬ ಸದಸ್ಯರು ಆಹಾರ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಕಾಲಲ್ಲಿ ಸರಪಳಿ… ಖಾಕಿಗೆ ಚಳ್ಳೆಹಣ್ಣು ತಿನ್ನಿಸಿ ಕೈದಿ ಎಸ್ಕೇಪ್- ವಿಡಿಯೋ ಇದೆ

ಪೊಲೀಸರು ಸ್ಥಳಕ್ಕೆ ಆಗಮಿಸಿ ಮಗುವಿನ ಮೃತ ದೇಹವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.  ಆದರೆ ಈ ವಿಷಯಕ್ಕೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳದೇ  ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಕುಟುಂಬ ಸದಸ್ಯರು ನಿರಾಕರಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಂಗಡಿಯವನನ್ನು ಬಂಧಿಸಲು ಪೊಲೀಸರು ಆತನಿಗಾಗಿ ಹುಡುಕಾಟ  ನಡೆಸಿದ್ದಾರೆ.