Monday, 18th November 2024

Viral Video: ಭಿಕ್ಷುಕ ಕುಟುಂಬದಿಂದ 20 ಸಾವಿರ ಜನರಿಗೆ ಭೂರಿ ಭೋಜನ- ಈ ಅದ್ಧೂರಿ ಔತಣಕೂಟ ನೋಡಿ ಎಲ್ರೂ ಶಾಕ್‌!

Viral video (6)

ಇಸ್ಲಮಾಬಾದ್‌: ಭಿಕ್ಷುಕರು ಲಕ್ಷಾಧಿಪತಿ ಕೆಲವೊಮ್ಮೆ ಕೋಟ್ಯಧಿಪತಿಗಳಾಗಿರುವ ಸುದ್ದಿಗಳನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಮಾತ್ರವಲ್ಲದೇ, ಭಿಕ್ಷೆ ಬೇಡುವುದನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡವರಲ್ಲಿ ಕೆಲವರು ಐಷಾರಾಮಿ ಜೀವನವನ್ನು ನಡೆಸುತ್ತಿರುವ ಸುದ್ದಿಯನ್ನೂ ಸಹ ನಾವು ಕೇಳುತ್ತಿರುತ್ತೇವೆ. ಅದಕ್ಕೊಂದು ನಿದರ್ಶನವೆಂಬಂತೆ ನಮ್ಮ ನೆರೆಯ ಪಾಕಿಸ್ತಾನದಲ್ಲಿ ಭಿಕ್ಷುಕ ಕುಟುಂಬವೊಂದು 1.25 ಕೋಟಿ ಪಾಕಿಸ್ತಾನಿ ಕರೆನ್ಸಿ ವೆಚ್ಚದಲ್ಲಿ ಅದ್ದೂರಿ ಕಾರ್ಯಕ್ರಮವೊಂದನ್ನು ಆಯೋಜಿಸಿ 20 ಸಾವಿರ ಜನರಿಗೆ ಭೂರಿ ಭೋಜನವನ್ನು ಏರ್ಪಡಿಸಿರುವ ಘಟನೆಯೊಂದು ಇದೀಗ ವೈರಲ್‌ (Viral Video) ಆಗಿದ್ದು, ಈ ಸುದ್ದಿ ಕೇಳಿದವರೆಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

ಪಾಕಿಸ್ತಾನದ (Pakistan) ಗುಜ್ರನ್‌ ವಾಲಾ (Gujranwala) ಪ್ರಾಂತ್ಯದಲ್ಲಿ ಈ ಕಾರ್ಯಕ್ರಮ ನಡೆದಿರುವ ಕುರಿತು ವರದಿಯಾಗಿದ್ದು, ಭಿಕ್ಷುಕ ಕುಟುಂಬವೊಂದು ತಮ್ಮ ಅಜ್ಜಿಯ 40ನೇ ಪುಣ್ಯಸ್ಮರಣೆಯನ್ನು ಅದ್ದೂರಿಯಾಗಿ ಆಚರಿಸಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಬರುವವರಿಗಾಗಿ ಎರಡು ಸಾವಿರ ವಾಹನಗಳ ವ್ಯವಸ್ಥೆಯನ್ನೂ ಸಹ ಮಾಡಿರುವುದು ಈ ಕಾರ್ಯಕ್ರಮದ ವೈಭೋಗಕ್ಕೆ ಸಾಕ್ಷಿಯಾಗಿತ್ತು.

ಗುಜ್ರನ್‌ ವಾಲಾದ ರಹ್ವಾಲಿ ರೈಲ್ವೇ ನಿಲ್ದಾಣದ ಸಮೀಪ ಈ ಕಾರ್ಯಕ್ರಮ ಆಯೋಜನೆಯಾಗಿತ್ತು. ಪಂಜಾಬ್‌ ಪ್ರಾಂತದ ಬಹಳಷ್ಟು ಜನರು ಈ ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಬಂದವರಿಗೆ ವೈವಿಧ್ಯಮಯ ಮೆನುಗಳ ಭೂರಿ ಭೂಜನವನ್ನೂ ಸಹ ವ್ಯವಸ್ಥೆ ಮಾಡಲಾಗಿತ್ತು. ಊಟಕ್ಕೆ ಸಿರಿ ಪೇಯಿ, ಮುರಬ್ಬ ಮತ್ತು ವಿವಿಧ ಮಾಂಸದಡುಗೆಗಳು ಗಮನ ಸೆಳೆದಿತ್ತು. ಇನ್ನು ರಾತ್ರಿ ಊಟದ ಮೆನುವಿನಲ್ಲಿ, ಮಟನ್‌, ನಾನ್‌ ಮಟರ್‌ ಗಂಜ್‌ (ಸ್ವೀಟ್‌ ರೈಸ್)‌ ಮತ್ತು ವಿವಿಧ ಡೆಸೆರ್ಟ್‌ ಗಳು ಇತ್ತು. ಇದಕ್ಕಾಗಿ ಉಮಾರು 250 ಆಡುಗಳನ್ನು ಬಲಿ ಕೊಡಲಾಗಿತ್ತು.

ಇದನ್ನೂ ಓದಿ: Daksh Gupta: ವಾರದಲ್ಲಿ 84 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಬೇಕು ಎಂದ ಭಾರತೀಯ-ಅಮೆರಿಕನ್ ಸಿಇಒಗೆ ಜೀವ ಬೆದರಿಕೆ

ಈ ಮೆಘಾ ಪಾರ್ಟಿಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಕಾರ್ಯಕ್ರಮದ ಒಟ್ಟು ಆಯೋಜನೆಯ ಕುರಿತಾಗಿ ಒಟ್ರಾಶಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಈ ಕಾರ್ಯಕ್ರಮಕ್ಕೆ ಹಣದ ಮೂಲವನ್ನು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಭಿಕ್ಷುಕರ ಕುಟುಂಬ ಇಂತಹ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿರುವುದು ಜೀವನದ ನಿಜವಾದ ವ್ಯಂಗ್ಯ ಎಂದು ಹೇಳಿಕೊಂಡಿದ್ದಾರೆ.

“ನಮ್ಮ ಮೋದಿಜಿ  ಪ್ರತೀ ತಿಂಗಳು 80 ಕೋಟಿ ಭಿಕ್ಷುಕರಿಗೆ ಆಹಾರವನ್ನು ನೀಡುತ್ತಿದ್ದಾರೆ” ಎಂದು ಒಬ್ಬ ಎಕ್ಸ್‌ ಬಳಕೆದಾರ ಕಮೆಂಟ್‌ ಮಾಡಿದ್ದರೆ, ʼಪಾಕಿಸ್ತಾನ ಭಿಕ್ಷುಕರ ದೇಶ” ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. “ಪಾಕಿಸ್ತಾನದಲ್ಲಿ, ಆಹಾರಕ್ಕಾಗಿ ಯಾರಿಗೆ ಭಿಕ್ಷೆ ಬೇಡುವ ಕಲೆ ಸಿದ್ಧಿಸಿದೆಯೋ ಅಂತವರು ಎಂದಿಗೂ ಹಸಿದಿರುವುದಿಲ್ಲ!ʼ ಎಂದು ವ್ಯಂಗ್ಯವಾಡಿದ್ದಾರೆ. ಒಟ್ಟಿನಲ್ಲಿ ಪಾಕಿಸ್ತಾನದ ಭಿಕ್ಷುಕ ಕುಟುಂಬ ನಡೆಸಿರುವ ಈ ಅದ್ದೂರಿ ಕಾರ್ಯಕ್ರಮ ಎಲ್ಲೆಡೆ ಸದ್ದು ಮಾಡುತ್ತಿರುವುದು ಮಾತ್ರ ಸುಳ್ಳಲ್ಲ..!