Wednesday, 11th December 2024

Viral Video: ಬೀದಿ ಬದಿ ಭಿಕ್ಷೆ ಬೇಡುವ ಈ ಬಾಲಕಿಯ ಇಂಗ್ಲಿಷ್ ಕೇಳಿದ್ರೆ ‘ವೆರಿ ಗುಡ್’ ಅನ್ನಲೇಬೇಕು!

Viral Video

ಬೀದಿಯಲ್ಲಿ ಭಿಕ್ಷೆ ಬೇಡುವ ಬಾಲಕಿಯೊಬ್ಬಳು (begging girl) ವಿದೇಶೀಯರೊಂದಿಗೆ ಇಂಗ್ಲಿಷ್‌ನಲ್ಲಿ (english) ನಿರರ್ಗಳವಾಗಿ ಮಾತನಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ತಾನು ಶಾಲೆಗೆ ಹೋಗಿಲ್ಲ, ಭಿಕ್ಷಾಟನೆ ಮಾಡುವಾಗ ಇಂಗ್ಲಿಷ್ ಮಾತುಗಳನ್ನು ಕೇಳಿ ಕೇಳಿ ಕಲಿತಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ.

ಇಂಗ್ಲಿಷ್ ಕಲಿಕೆ ಹೆಚ್ಚಿನವರಿಗೆ ಸವಾಲಾಗಿರುತ್ತದೆ. ಆದರೆ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಕಲಿಕೆ ಎಲ್ಲರಿಗೂ ಅನಿವಾರ್ಯ ಶಾಲೆಗೆ ಹೋಗಿ ಕಲಿತರೂ ಕೆಲವರಿಗೆ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವುದು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಯುವತಿ ಶಾಲೆಗೂ ಹೋಗದೆ ಇಂಗ್ಲಿಷ್ ಕಲಿತಿರುವುದನ್ನು ನೋಡಿದರೆ ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ ಎನ್ನಬಹುದು.

ಪೂರ್ಣ ಸಮರ್ಪಣೆಯೊಂದಿಗೆ ಯಾರಾದರೂ ಯಾವುದೇ ಭಾಷೆಯನ್ನು ಕಲಿಯಬಹುದು ಮಾತ್ರವಲ್ಲದೆ ಅದನ್ನು ಮಾತನಾಡುವ ಮತ್ತು ಬರೆಯುವಲ್ಲಿ ಪ್ರವೀಣರಾಗಬಹುದು. ಎಕ್ಸ್‌ನಲ್ಲಿ ಹಂಚಿಕೊಂಡಿರುವ ಈ ಯುವತಿಯ ವಿಡಿಯೋ ಈಗ ಭಾರಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿದೇಶಿ ಯಾತ್ರಿಕರೊಬ್ಬರೊಂದಿಗೆ ಯುವತಿ ಇಂಗ್ಲಿಷ್ ನಲ್ಲಿ ಸಂವಾದ ನಡೆಸುತ್ತಿರುವುದನ್ನು ಕಾಣಬಹುದು. ಆಕೆಯ ಭಾಷಾ ಪ್ರಾವೀಣ್ಯಕ್ಕೆ ವಿದೇಶಿ ಯಾತ್ರಿಕನೂ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿರುವ ಈ ವಿಡಿಯೋ ನೋಡಿ ದೇಶ, ವಿದೇಶದ ಅನೇಕರು ಬಾಲಕಿಯ ಕೌಶಲವನ್ನು ಶ್ಲಾಘಿಸಿದ್ದಾರೆ. ಅಲ್ಲದೇ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಶಾಲೆಗೆ ಹೋಗುವೆ ಎಂದ ಹುಡುಗಿ

ಈ ವಿಡಿಯೋದಲ್ಲಿ ಹುಡುಗಿ ತಾನು ರಾಜಸ್ಥಾನದವಳು ಏನು ಹೇಳಿಕೊಂಡಿದ್ದಾಳೆ. ಬಡತನದ ಕಾರಣದಿಂದ ನನಗೆ ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಆದರೆ ತನಗೂ ಶಾಲೆಗೆ ಹೋಗಬೇಕು ಎನ್ನುವ ಇಚ್ಛೆ ಇದೆ ಎಂದು ಹೇಳಿದ್ದಾಳೆ. ಹುಡುಗಿ ನಿರರ್ಗಳವಾಗಿ ಈ ಎಲ್ಲ ವಿಷಯಗಳನ್ನು ಇಂಗ್ಲಿಷ್‌ಲ್ಲೇ ವಿದೇಶಿ ಸಂದರ್ಶಕನಿಗೆ ಹೇಳಿಕೊಂಡಿದ್ದಾಳೆ. ಇದು ವಿದೇಶಿ ಯಾತ್ರಿಕನ ಮನ ಸೆಳೆದಿದೆ.

ಅವನು ಯಾಕೆ ನೀನು ಭಿಕ್ಷೆ ಬೇಡುತ್ತಿದ್ದೀಯಾ? ಇಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಿ. ನಿನಗೆ ಕೆಲಸ ಸಿಗುತ್ತದೆ ಎನುತ್ತಾನೆ. ಅದಕ್ಕೆ ಯುವತಿ ನಾನು ಶಾಲೆಗೆ ಹೋಗಿಲ್ಲ. ಹೀಗಾಗಿ ಯಾರು ನನಗೆ ಕೆಲಸ ಕೊಡುವುದಿಲ್ಲ. ನಾನು ಬಡ ಕುಟುಂಬದಿಂದ ಬಂದಿದ್ದು, ತನ್ನ ಕುಟುಂಬವನ್ನು ಸಾಕಲು ಭಿಕ್ಷಾಟನೆ ಮಾಡಬೇಕಾಗಿದೆ ಎಂದು ವಿವರಿಸಿದ್ದಾಳೆ.

ಆಕೆಯ ಪರಿಸ್ಥಿತಿಯಿಂದ ಭಾವುಕರಾದ ವಿದೇಶಿಗ, ನಾನು ನಿನ್ನನ್ನು ಶಾಲೆಗೆ ಕಳುಹಿಸಿದರೆ ನೀನು ಹೋಗುತ್ತೀಯಾ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಹುಡುಗಿ ಹೌದು ಖಂಡಿತಾ ಹೋಗುತ್ತೇನೆ ಎಂದು ಹೇಳಿದ್ದಾಳೆ.

ವಿದೇಶಿಗನು ಅವಳ ಮಾಹಿತಿಯನ್ನು ಪಡೆದು ಫೌಂಡೇಶನ್ ಮೂಲಕ ಅವಳಿಗೆ ಸಹಾಯ ಮಾಡುವುದಾಗಿ ಹೇಳಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ಮಂದಿ ಕಾಮೆಂಟ್ ಕೂಡ ಮಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ @azizkavish ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು ಮಾತ್ರವಲ್ಲದೆ ಅನೇಕರು ಹಂಚಿಕೊಂಡಿದ್ದಾರೆ.

Viral Video: ಬೆಂಗಳೂರಿನಲ್ಲಿ ಮಹಿಳೆಯರು ಶಾರ್ಟ್ಸ್‌ ಧರಿಸುವಂತಿಲ್ವಾ? ಭಾರೀ ವೈರಲ್‌ ಆಗ್ತಿದೆ ಈ ವಿಡಿಯೋ

ಅನೇಕ ಜನರು ಹುಡುಗಿಗೆ ಸಹಾಯ ಮಾಡಲು ಮುಂದೆ ಬಂದಿದ್ದು, ಆಕೆಯ ಧೈರ್ಯ ಮತ್ತು ಆತ್ಮವಿಶ್ವಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಕಾಮೆಂಟ್ ನಲ್ಲಿ ಸಮಾಜದಲ್ಲಿನ ಬಡತನ ಮತ್ತು ಶಿಕ್ಷಣದ ಕೊರತೆಯ ಗಂಭೀರ ಸಮಸ್ಯೆಗಳನ್ನು ಈ ವಿಡಿಯೋ ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ ಪ್ರತಿಭೆ ಯಾವುದೇ ಸಂದರ್ಭದಲ್ಲೂ ಮರೆಯಾಗಲು ಸಾಧ್ಯವಿಲ್ಲ. ಆದರೆ ಅದಕ್ಕೆ ಸರಿಯಾದ ನಿರ್ದೇಶನ ಮತ್ತು ಬೆಂಬಲದ ಅಗತ್ಯವಿದೆ ಎಂದು ಹೇಳಿದ್ದಾರೆ.