ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮನುಷ್ಯರಲ್ಲಿ ಮನುಷ್ಯತ್ವ ಇಲ್ಲದಂತಾಗಿದೆ. ಮೂಕ ಪ್ರಾಣಿಗಳ ಜೊತೆ ಕ್ರೂರವಾಗಿ ವರ್ತಿಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಹಲವಾರು ವಿಡಿಯೊಗಳನ್ನು ನಾವು ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ನೋಡುತ್ತಿರುತ್ತೇವೆ. ಹಸುವನ್ನು ಲೈಂಗಿಕತೆಯಲ್ಲಿ ಬಳಸಿಕೊಳ್ಳುವುದು, ಅವುಗಳ ಮೇಲೆ ರಾಡ್‍ಗಳಿಂದ ಹಲ್ಲೆ ಮಾಡುವುದು ಹೀಗೆ ಹಲವಾರು ಘಟನೆಗಳು ನಮ್ಮ ಮನಸ್ಸಿಗೆ ನೋವನ್ನುಂಟು ಮಾಡಿವೆ. ಆದರೆ ಮನುಷ್ಯರಲ್ಲಿಯೂ ಕೆಲವರು ಮೂಕ ಪ್ರಾಣಿಗಳ ಮೇಲೆ ಕರುಣೆ ತೋರಿಸುವವರಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಕೆಲವೊಂದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಸುವಿನ ವಿಡಿಯೊವೊಂದು ಪೋಸ್ಟ್ ಆಗಿದ್ದು, ಅದು ಹಲವರ ಮನಗೆದ್ದಿದ್ದು ಸಿಕ್ಕಾಪಟ್ಟೆ ವೈರಲ್ (Viral Video)ಆಗಿದೆ.
ಈ ವೈರಲ್ ವಿಡಿಯೊದಲ್ಲಿ ವ್ಯಕ್ತಿಗಳಿಬ್ಬರು ಬೈಕ್‍ನಲ್ಲಿ ಹೋಗುತ್ತಿದ್ದಾಗ ಸಂಕಷ್ಟದಲ್ಲಿ ಸಿಲುಕಿದ ಹಸುವಿಗೆ ಸಹಾಯ ಮಾಡಿದ್ದಾರೆ. ಈ ಹೃದಯಸ್ಪರ್ಶಿ ಕ್ಷಣವು ತ್ವರಿತವಾಗಿ ಸೋಶಿಯಲ್ ಮೀಡಿಯಾದಲ್ಲಿ ಜನರ ಮನ ಸೆಳೆದಿದೆ. ಈ ವಿಡಿಯೊದಲ್ಲಿ ಇಬ್ಬರು ವ್ಯಕ್ತಿಗಳು ಬೈಕ್‍ನಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ, ಅವರು ಗಾರ್ಡ್ರೈಲ್‍ನಲ್ಲಿ ಸಿಲುಕಿಕೊಂಡಿರುವ ಹಸುವನ್ನು ನೋಡಿದ್ದಾರೆ. ಹಸುವಿನ ಹಿಂಬದಿ ಕಾಲುಗಳು ಗಾರ್ಡ್ರೈಲ್‍ನಲ್ಲಿ ಸಿಲುಕಿ ಹಸುವಿಗೆ ಇನ್ನೊಂದು ಬದಿಗೆ ಹೋಗಲು ಸಾಧ್ಯವಾಗದೆ ಒದ್ದಾಡುತ್ತಿತ್ತು.
Helping a cow in trouble
— Science girl (@gunsnrosesgirl3) September 23, 2024
pic.twitter.com/qac2KqRjs3
ಈ ಪರಿಸ್ಥಿತಿಯಲ್ಲಿ ಹಸುವನ್ನು ನೋಡಿದ ಆ ವ್ಯಕ್ತಿಗಳು ಬೈಕ್ ನಿಲ್ಲಿಸಿ ಹಸುವಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಅವರಲ್ಲಿ ಒಬ್ಬ ಹಸುವಿನ ಹಿಂದಿನ ಕಾಲುಗಳನ್ನು ಎತ್ತಿ ಗಾರ್ಡ್ರೈಲ್‍ಗಳಿಂದ ಬಿಡಿಸಿದರೆ ಇನ್ನೊಬ್ಬ ಹಸುವನ್ನು ಮುಂದಿನಿಂದ ಕೆಳಗೆ ಬೀಳದಂತೆ ಬ್ಯಾಲೆನ್ಸ್ ಮಾಡಿದ್ದಾನೆ.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿನ ಜ್ಯೂಸ್ ಕುಡಿದರೆ ಎಷ್ಟೊಂದು ಪ್ರಯೋಜನ!
ಈ ವಿಡಿಯೋವನ್ನು ಸೈನ್ಸ್ ಗರ್ಲ್ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದು 7 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಹಲವಾರು ಕಾಮೆಂಟ್‍ಗಳನ್ನು ಪಡೆದುಕೊಂಡಿದೆ. ಹಲವಾರು ಬಳಕೆದಾರರು ಅವರ ರಕ್ಷಣಾ ಕಾರ್ಯದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು “ಮಹಾನ್ ಜನರು!” ಎಂದು ಹೇಳಿದರೆ, ಇನ್ನೊಬ್ಬರು “ಹಸುವಿಗೆ ಸಹಾಯ ಮಾಡುವಲ್ಲಿ ಅಂತಹ ದಯೆ ಮತ್ತು ಸಹಾನುಭೂತಿಯನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು” ಎಂದು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಮೂರನೆಯವರು, “ಒಳ್ಳೆಯ ಮನುಷ್ಯ.” ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು ಇದು ಒಂದು ಒಳ್ಳೆಯ ಕಾರ್ಯವೆಂಬುದಾಗಿ ತಿಳಿಸಿದ್ದಾರೆ.