ಹೊಸದಿಲ್ಲಿ: ಕೆಲವರಿಗೆ ವೇದಿಕೆ ಏರಿ ಮೈಕ್ ಹಿಡಿದು ಮಾತನಾಡುವುದೆಂದರೆ ಏನೋ ಒಂದು ರೀತಿಯ ಕಸಿವಿಸಿ. ಇದನ್ನೇ ಸಭಾ ಕಂಪನ ಎಂದು ಕರೆಯುತ್ತಾರೆ. ಆದರೆ ಈಗಿನ ಮಕ್ಕಳಿಗೆ ಬಾಲ್ಯದಲ್ಲೇ ವೇದಿಕೆಗಳು ಸಿಗುವ ಕಾರಣ ಮತ್ತು ಸೋಶಿಯಲ್ ಮೀಡಿಯಾದ (Social Media) ವ್ಯಾಪಕ ಪ್ರಭಾವದಿಂದಾಗಿ ಸಾಮಾನ್ಯವಾಗಿ ಅಳುಕೆಂಬುದು ಇರುವುದಿಲ್ಲ. ಇದಕ್ಕೆ ಪೂರಕವಾಗಿ ಪುಟಾಣಿ ಬಾಲಕಿಯೊಬ್ಬಳ ಕ್ರಿಸ್ಮಸ್ ಭಾಷಣ (Christmas Speech) ಇದೀಗ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.
ಪುಟಾಣಿಯೊಬ್ಬಳು ಶಾಲೆಯಲ್ಲಿ ವೇದಿಕೆಯನ್ನೇರಿ ಮೈಕ್ ಹಿಡಿದುಕೊಂಡು ಕ್ರಿಸ್ಮಸ್ ಭಾಷಣವನ್ನು ಬೋಲ್ಡಾಗಿ ನೀಡಿ ಗಮನ ಸೆಳೆದಿದ್ದಾಳೆ. ಈ ನಡುವೆ ಆಕೆಯ ಮಾತನ್ನು ಆಕೆಯ ಜತೆಗಿದ್ದ ಶಿಕ್ಷಕಿ ಮಧ್ಯದಲ್ಲೇ ತಡೆದಿದ್ದು, ಇದು ನೆಟ್ಟಿಗರ ಕುತೂಹಲವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ.
ಕಪ್ಪು ಬಣ್ಣದ ಆಕರ್ಷಕ ಗೌನ್‌ನಲ್ಲಿ ಮಿಂಚುತ್ತಿದ್ದ ಪುಟಾಣಿ ಬಾಲಕಿಯೊಬ್ಬಳು ಸ್ಟೇಜ್ ಏರಿ ಸಭಿಕರ ಮುಂದೆ ಯಾವುದೇ ಅಳುಕಿಲ್ಲದೆ ಮಾತು ಪ್ರಾರಂಭಿಸುವುದು ಈ ವೈರಲ್ ವಿಡಿಯೊದಲ್ಲಿ ದಾಖಲಾಗಿದೆ. ಆಕೆ ತನ್ನ ಬಗ್ಗೆ, ತನ್ನ ಶಾಲೆಯ ಬಗ್ಗೆ ಒಳ್ಳೆಯ ಮುದ್ದಾಗಿ ಮಾತನಾಡುತ್ತಾಳೆ. ಆದರೆ ಆಕೆ ಅದೊಂದು ಪದವನ್ನು ಹೇಳುತ್ತಿದ್ದಂತೆ ಆಕೆಯ ಜತೆ ನಿಂತಿದ್ದ ಶಿಕ್ಷಕಿ ಆಕೆಯ ಕೈಯಿಂದ ಮೈಕ್ ತೆಗೆದುಕೊಂಡಿದ್ದಾರೆ ಮತ್ತು ಹಾಗೆ ಹೇಳ್ಬೇಡ ಎಂದಿದ್ದಾರೆ. ಅದಕ್ಕೆ ಆ ಪುಟಾಣಿ ‘ಓಕೆ’ ಎಂದು ಹೇಳಿ ನಗುತ್ತಾ ವೇದಿಕೆಯಿಂದ ನಿರ್ಗಮಿಸುತ್ತಿರುವುದು ಈ ವಿಡಿಯೊದಲ್ಲಿ ಕಂಡು ಬಂದಿದೆ.
ಪುಟಾಣಿಯನ್ನು ಸಭೆಗೆ ಪರಿಚಯಿಸುವ ಶಿಕ್ಷಕಿ ಬಳಿಕ ಆಕೆಗೆ ಮೈಕ್ ನೀಡುತ್ತಾರೆ. ‘ನನಗೆ ನನ್ನ ಬಗ್ಗೆ ಬಹಳಷ್ಟು ಹೆಮ್ಮೆಯಿದೆ ಮತ್ತು ನನ್ನ ತರಗತಿಯಲ್ಲಿರುವ ನನ್ನ ಗೆಳೆಯರ ಕುರಿತಾಗಿಯೂ ನನಗೆ ಹೆಮ್ಮೆ ಇದೆ. ಆದ್ರೆ ಆ ಒಂದು ಹುಡುಗನನ್ನು ಬಿಟ್ರೆ, ನನ್ನ ತರಗತಿ ಚೆನ್ನಾಗಿದೆ’ ಎಂದು ಹೆಳುತ್ತಿದ್ದಂತೆ, ಪಕ್ಕದಲ್ಲಿ ನಿಂತಿದ್ದ ಶಿಕ್ಷಕಿ ಆಕೆಯ ಕೈಯಿಂದ ಮೈಕ್ ಪಡೆದುಕೊಂಡು ‘ಅದನ್ನು ಹೇಳೋದು ಬೇಡ’ ಎಂದು ಆಕೆಗೆ ನಗುತ್ತಾ ಹೇಳುತ್ತಾರೆ.
ಎಲ್ಲರ ಮುಂದೆ ಈ ಬಾಲಕಿ ತನಗೆ ಆಗದ ಆ ಹುಡುಗನ ಹೆಸರನ್ನು ಹೇಳಿ ಆತನಿಗೆ ಮುಜುಗರವಾಗುವುದು ಬೇಡವೆಂದು ಶಿಕ್ಷಕಿ ಆ ಬಾಲಕಿಯ ಕೈಯಿಂದ ಮೈಕ್ ತೆಗೆದುಕೊಂಡು ಪರಿಸ್ಥಿತಿಯನ್ನು ನಿಭಾಯಿಸಿರುವುದು ಇದೀಗ ಪ್ರಶಂಸೆಗೆ ಪಾತ್ರವಾಗಿದೆ. ಶಿಕ್ಷಕಿಯ ಈ ಸೂಚನೆಗೆ ಯಾವುದೇ ಮುಜುಗರವಿಲ್ಲದೆ ಬಾಲಕಿ ನಗುತ್ತಾ ಅಲ್ಲಿಂದ ತೆರಳುತ್ತಿರುವುದೂ ಸಹ ಇದೀಗ ಎಲ್ಲರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆಕೆ ವೇದಿಕೆಯಿಂದ ಕ್ಯುಟಾಗಿ ನರ್ತಿಸುತ್ತಾ ಖುಷಿಖುಷಿಯಾಗಿ ತೆರಳುತ್ತಾಳೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇದನ್ನು ನೋಡಿದವರ ಮುಖದಲ್ಲಿ ನಗು ಚಿಮ್ಮಿದೆ. ಮತ್ತು ತನ್ನ ತರಗತಿಯ ಕುರಿತಾಗಿ ಬಾಲಕಿಯ ಪ್ರಾಮಾಣಿಕ ಮಾತುಗಳಿಗೆ ಎಲ್ಲರೂ ಫಿದಾ ಆಗಿದ್ದಾರೆ. ಮತ್ತು ಈ ವಿಡಿಯೋದ ಕಮೆಂಟ್ ಸೆಕ್ಷನ್ ‘ನಗು’ವಿನ ಇಮೋಜಿಗಳಿಂದ ತುಂಬಿ ಹೋಗಿದೆ.
‘ತಾಳಿ… ನಮಗೆ ಇನ್ನುಳಿದ ಕಥೆ ಕೇಳಬೇಕು’ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು, ‘ಆಕೆಗೆ ಹೇಳಲು ಬಿಡಿ. ನಮಗೀಗ ಕುತೂಹಲ ಹಾಗೆಯೇ ಉಳಿದುಕೊಂಡಿದೆ’ ಎಂದು ಹೇಳಿದ್ದಾರೆ. ಇನ್ನೊಬ್ಬರು ಈಕೆಯನ್ನು ‘ಆತ್ಮವಿಶ್ವಾಸದ ರಾಯಭಾರಿ’ ಎಂದು ಕರೆದಿದ್ದಾರೆ.
ಲೆಬನಾನ್ ಫಾರೆವರ್ ಅಫೀಷಿಯಲ್ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿರುವ ಈ ಕ್ಯೂಟ್ ವಿಡಿಯೊ ಬಾಲಕಿಯಷ್ಟೇ ಮುದ್ದಾಗಿದೆ.