ಬೆಂಗಳೂರು: ಕೌಟುಂಬಿಕ ಕಲಹ ಪ್ರಕರಣದಲ್ಲಿ ಡಿವೋರ್ಸ್ ಪಡೆದ ಪತಿ, ಪತ್ನಿ ಹಾಗೂ ಆತನ ಮಕ್ಕಳ ಖರ್ಚಿಗಾಗಿ ತನ್ನ ಸಂಬಳದಲ್ಲಿ ಸ್ವಲ್ಪ ಭಾಗವನ್ನು ನೀಡಬೇಕಾಗುತ್ತದೆ. ಇದನ್ನು ಕಾನೂನಿನಲ್ಲಿ ತಿಳಿಸಲಾಗಿದೆ. ಹಾಗಾಗಿ ಪತ್ನಿಯಾದವಳು ಜೀವನಾಂಶ ಕೇಳುವ ಹಕ್ಕನ್ನು ಹೊಂದಿರುತ್ತಾಳೆ. ಆದರೆ ಇಲ್ಲೊಬ್ಬ ಪತ್ನಿ ಪತಿಯ ಬಳಿ ಹೆಚ್ಚಿನ ಜೀವನಾಂಶ ಕೇಳಿದ್ದಕ್ಕೆ ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರು ನೀಡಿದ ಹೇಳಿಕೆಯೊಂದು ವೈರಲ್ (Viral video) ಆಗಿದೆ. ಕರ್ನಾಟಕ ಹೈಕೋರ್ಟ್‍ನ ಯೂಟ್ಯೂಬ್ ಚಾನೆಲ್ ರಾಜ್ಯದ ನ್ಯಾಯಾಂಗದಲ್ಲಿ ನಡೆಯುತ್ತಿರುವ ಕೋರ್ಟ್ ಹಾಲ್ ಕಲಾಪಗಳು ಮತ್ತು ಇತರ ಘಟನೆಗಳ ನೇರ ಪ್ರಸಾರವನ್ನು ಮಾಡುತ್ತದೆ. ಹಾಗಾಗಿ ಈ ಪ್ರಕರಣದ ವಿಚಾರಣೆಯ ವಿಡಿಯೊವನ್ನು ಕರ್ನಾಟಕ ಹೈಕೋರ್ಟ್‍ನ ಯೂಟ್ಯೂಬ್ ಚಾನೆಲ್‍ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಚಾರಣೆಯ ಸಮಯದಲ್ಲಿ, ತಿಂಗಳಿಗೆ ಕೇವಲ 12,000 ರೂ.ಗಳನ್ನು ಗಳಿಸುವ ಪತಿಯು ತನ್ನ ಮಗುವಿನ ಖರ್ಚಿಗಾಗಿ ತಿಂಗಳಿಗೆ 10,000 ರೂ.ಗಳನ್ನು ಪಾವತಿಸುತ್ತಿದ್ದಾನೆ ಎಂದು ಹೈಕೋರ್ಟ್ ನ್ಯಾಯಾಧೀಶರು ತಿಳಿದುಕೊಂಡರು. ದುಡಿಮೆಯಿಂದ ಕಡಿಮೆ ಹಣ ಸಂಪಾದಿಸುವ ಪತಿ ಮಕ್ಕಳ ಆರೈಕೆಗಾಗಿ ಹೆಚ್ಚು ಹಣವನ್ನು ಹೇಗೆ ನೀಡುತ್ತಾನೆ ಎಂಬ ನ್ಯಾಯಾಧೀಶರ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ವಿಡಿಯೊದಲ್ಲಿ, ನ್ಯಾಯಾಧೀಶರು, “ಮೊದಲನೆಯದಾಗಿ, ಕೇವಲ 12,000 ರೂ.ಗಳನ್ನು ಗಳಿಸುವ ವ್ಯಕ್ತಿಗೆ ಜೀವನಾಂಶಕ್ಕಾಗಿ 10,000 ರೂ.ಗಳನ್ನು ಪಾವತಿಸಲು ಹೇಗೆ ಆದೇಶಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಆ ವ್ಯಕ್ತಿಗೆ ತನ್ನದೇ ಆದ ಜೀವನವೂ ಇದೆ. ಅವನು ಬದುಕಲು 2,000 ರೂ.ತುಂಬಾ ಕಡಿಮೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಕ್ರಮಕ್ಕೆ ಸಮ್ಮತಿ ನೀಡಲಾಗುವುದಿಲ್ಲ. ಮಕ್ಕಳ ಖರ್ಚಿಗಾಗಿ ರೂ. 10,000 ಸೂಕ್ತ ಎಂದು ನ್ಯಾಯಾಲಯವು ಯಾವ ಆಧಾರದ ಮೇಲೆ ತೀರ್ಮಾನಿಸಬಹುದು? ಹಣ ಖರ್ಚು ಮಾಡಲು ಯಾವುದೇ ಮಿತಿಯಿಲ್ಲ, ಆದರೆ ಇಷ್ಟು ಕಡಿಮೆ ಹಣದಿಂದ ತನ್ನ ಜೀವನವನ್ನು ನಡೆಸುವ ವ್ಯಕ್ತಿಯ ಜೀವನದ ಬಗ್ಗೆಯೂ ನ್ಯಾಯಾಲಯ ಅರ್ಥಮಾಡಿಕೊಳ್ಳಬೇಕು” ಎಂದು ಅವರು ಹೇಳಿದರು.
ಕೋರ್ಟ್ ವಿಚಾರಣೆಯ ಆರಂಭದಲ್ಲಿ, ಪತ್ನಿಯ ಕಡೆಯ ವಕೀಲರು ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಾಧೀಶರಿಗೆ ತಿಳಿಸಿದಾಗ ನ್ಯಾಯಾಧೀಶರು ಜೀವನಾಂಶದ ಮೊತ್ತದ ಬಗ್ಗೆ ಕೇಳಿದ್ದಾರೆ. ಆಗ ವಕೀಲರು ಪತ್ನಿಗೆ ಏನನ್ನೂ ನೀಡಲಾಗಿಲ್ಲ, ಆದರೆ ಮಗನಿಗೆ ತಿಂಗಳಿಗೆ 10,000 ರೂ.ಗಳನ್ನು ನೀಡಲು ಆದೇಶಿಸಲಾಗಿದೆ ಎಂದು ಹೇಳಿದರು. ನಂತರ ನ್ಯಾಯಾಧೀಶರು ಪತಿಯ ಆದಾಯದ ಬಗ್ಗೆ ಕೇಳಿದರು. ಇದಕ್ಕೆ ಉತ್ತರಿಸಿದ ಪತ್ನಿಯ ವಕೀಲರು, ಪತಿಯ ಸಂಬಳ 62,000 ರೂ. ಎಂದಿದ್ದಾರೆ. ಆದರೆ, ಪತಿಯ ಕಡೆಯ ವಕೀಲರು ತಮ್ಮ ಕಕ್ಷಿದಾರರ ಸಿಟಿಸಿ ತಿಂಗಳಿಗೆ 18,000 ರೂ ಮತ್ತು ಟೇಕ್-ಅವೇ ಸಂಬಳ ಕೇವಲ 12,000 ರೂ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ತನ್ನ ಸಂಬಳದಲ್ಲಿ ಹೆಚ್ಚು ಹಣ ಮಕ್ಕಳ ಖರ್ಚಿಗೆ ನೀಡಿ ಉಳಿದ ಕಡಿಮೆ ಹಣದಲ್ಲಿ ಅವನು ಹೇಗೆ ಜೀವನ ನಡೆಸುವುದು ?” ಎಂದು ಪ್ರಶ್ನಿಸಿದ್ದಾರೆ. ಪತಿಯ ಸಂಬಳ ಹೆಚ್ಚಾದಾಗ ಮಕ್ಕಳ ಆರೈಕೆ ವೆಚ್ಚವನ್ನು ಹೆಚ್ಚಿಸಲು ಪತ್ನಿ ಪ್ರತ್ಯೇಕ ಅರ್ಜಿ ಸಲ್ಲಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ವಿಡಿಯೊಗಾಗಿ ಇಲ್ಲಿ ಲಿಂಕ್ ಕ್ಲಿಕ್ ಮಾಡಿ
https://x.com/ShoneeKapoor/status/1829760319880610155