ಅವಳಿ-ಜವಳಿ ಮಕ್ಕಳಿದ್ದಲ್ಲಿ ಅವರಲ್ಲಿ ಯಾರು ಯಾರೆಂದು ನಿಖರವಾಗಿ ಗುರುತಿಸುವುದು ಹಲವರಿಗೆ ಕಷ್ಟವಾಗಬಹುದು. ಆದರೆ ಇಲ್ಲೊಂದು ಕರುಣಾಜನಕ ಘಟನೆಯಲ್ಲಿ ಸಾಮಾಜಿಕ ಜಾಲತಾಣ (Social Media) ಇನ್ ಫ್ಲುಯೆನ್ಸರ್ (Influencer) ಒಬ್ಬರು, ಸಾವನ್ನಪ್ಪಿದ ತನ್ನ ಅವಳಿ ಸಹೋದರಿಯ ಪಾತ್ರವನ್ನು ಹಲವು ವರ್ಷಗಳ ಕಾಲ ನಿಭಾಯಿಸಿ, ಆಕೆ ಮೃತಪಟ್ಟಿರುವ ವಿಚಾರವನ್ನು ತನ್ನ ಅಜ್ಜ-ಅಜ್ಜಿಗೆ ತಿಳಿಯಂದಂತೆ ಎಚ್ಚರಿಕೆ ವಹಿಸಿದ ಸುದ್ದಿ ಮತ್ತು ಇದಕ್ಕೆ ಸಂಬಂಧಿಸಿದ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ (Viral Video).
ಲೈಫ್ ಸ್ಟೈಲ್ (Life Style) ಮತ್ತು ಫುಡ್ ವಿಡಿಯೊಗಳ (Food Video) ಮೂಲಕ ಟಿಕ್‌ಟಾಕ್‌ನಲ್ಲಿ (TikTok) ಫೇಮಸ್ ಆಗಿರುವ 34 ವರ್ಷದ ಆನಿ ನ್ಯೂ ಈ ರೀತಿಯಾಗಿ ತನ್ನ ಅವಳಿ ಸಹೋದರಿಯ ಮರಣದ ಸುದ್ದಿಯನ್ನು ಹಲವಾರು ವರ್ಷಗಳ ಕಾಲ ತನ್ನ ಕುಟುಂಬದವರಿಂದ ಮುಚ್ಚಿಟ್ಟವರು.
ಆನಿ ಹೇಳಿಕೊಂಡಂತೆ, ಈಕೆಯ ಅವಳಿ ಸಹೋದರಿ ಐದು ವರ್ಷಗಳ ಹಿಂದೆ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ್ದಳು. ಆಕೆಯ ಸಾವಿನ ದುಃಖದಲ್ಲಿದ್ದ ಈ ಕುಟುಂಬ ಈಕೆಯ ಸಾವಿನ ಸುದ್ದಿಯನ್ನು ಆ ಕುಟುಂಬದ ಹಿರಿಯ ಜೀವಗಳಿಗೆ ತಿಳಿಸಿದೇ ಇರಲು ನಿರ್ಧರಿಸಿದ್ದರು. ಇದಕ್ಕೆ ಕಾರಣ, ಅವರ ಆರೋಗ್ಯ ಸ್ಥಿತಿ ಸರಿಯಿಲ್ಲದೇ ಇದ್ದಿದ್ದು. ಈ ಸಾವಿನ ಸುದ್ದಿಯನ್ನು ಅವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು ಎಂಬ ಕಾರಣಕ್ಕೆ ಆನಿ ಕುಟುಂಬಸ್ಥರು ಅಜ್ಜಿ-ತಾತಂದಿರಿಗೆ ಈ ಸಾವಿನ ಸುದ್ದಿಯನ್ನು ತಿಳಿಸದೇ ಇರುವ ನಿರ್ಧಾರವನ್ನು ಕೈಗೊಂಡರು. ಇದರಲ್ಲಿ ಆನಿಯ ತಂದೆಯ ಪಾತ್ರ ಮಹತ್ವದ್ದಾಗಿತ್ತು.
ʼʼಕೊನೆಗೂ ನೀನು ನಿನ್ನ ಅವಳಿ ಸಹೋದರಿ ಐದು ವರ್ಷಗಳ ಹಿಂದೆ ತೀರಿ ಹೋಗಿದ್ದಳೆಂದು ಹೇಳಿದೆಯಲ್ಲಾ? ಬಳಿಕ ಅವರು ನಮ್ಮ ಮನೆಯಲ್ಲಿದ್ದ ಪ್ರತಿ ಫ್ಯಾಮಿಲಿ ಫೊಟೋಗಳಲ್ಲಿ ಆಕೆ ಇದ್ದ ಫೊಟೋಗಳನ್ನು ತೆಗೆದು ಹಾಕಿದರು.” ಎಂದು ಆಕೆ ಟ್ವಿಟ್ಟರ್ (X) ವಿಡಿಯೊದಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೊ ಇದೀಗ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.
ತನ್ನ ಅವಳಿ ಸಹೋದರಿ ಜೀವಂತವಾಗಿದ್ದಾಳೆಂದು ತನ್ನ ತಾತಂದಿರನ್ನು ನಂಬಿಸಲು ಆನಿ ರಜಾ ದಿನಗಳಲ್ಲಿ ಅವರಿಗೆ ಆಕೆಯ ಹೆಸರಿನಲ್ಲಿ ಕರೆ ಮಾಡುತ್ತಿದ್ದಳು. ಕೊನೆಗೆ, ಆಕೆಯ ಅಜ್ಜಿ ಅನಾರೋಗ್ಯದಿಂದ ಹಾಸಿಗೆ ಹಿಡಿದರುವ ಕಾರಣ ವಿಧಿಯಿಲ್ಲದೇ ಆನಿ ತನ್ನ ಅವಳಿ ಸಹೋದರಿಯ ಸಾವಿನ ಸುದ್ದಿಯನ್ನು ಭಾರವಾದ ಮನಸ್ಸಿನಿಂದ ಹೇಳಿದ್ದಾಳೆ.
“ನನ್ನ ತಂದೆ ಈ ಸತ್ಯವನ್ನು ಅವರಿಂದ ಮುಚ್ಚಿಡುವಂತೆಯೂ ಇರಲಿಲ್ಲ. ಹಾಗೆಂದು ಈ ಸತ್ಯವನ್ನು ಹೇಳಿ ಆ ಹಿರಿಯ ಜೀವಗಳಿಗೆ ನೋವು ಕೊಡುವಂತೆಯೂ ಇರಲಿಲ್ಲ” ಎಂದು ಆನಿ ಈ ವಿಡಿಯೋದಲ್ಲಿ ತನ್ನ ಕುಟುಂಬದ ಈ ಸಂಕಷ್ಟದ ಪರಿಸ್ಥಿತಿ ಕುರಿತು ವಿವರಿಸಿದ್ದಾಳೆ. “ಆದರೆ ದೇವರೇ ನಮ್ಮನ್ನು ಕ್ಷಮಿಸು, ಅವರಿಗೀಗ 92 ವರ್ಷ, ಅವರಿಗೆ ಏನಾದರೂ ಸಂಭವಿಸಿದರೆ…ʼʼ
ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಹೃದಯ ವಿದ್ರಾವಕ ಸುಳ್ಳಿನ ಕುರಿತಾಗಿ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಲವರು ಆಕೆಯ ಕುರಿತಾಗಿ ಕರುಣೆಯ ಭಾವನೆಯನ್ನು ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಆಕೆಯ ಕುಟುಂಬದ ಈ ನಿರ್ಧಾರದ ಕುರಿತು ಗೊಂದಲವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Self Harming: ಹೆಂಡ್ತಿ ಕಾಟಕ್ಕೆ ಬೇಸತ್ತು ಪ್ರಾಣ ಬಿಟ್ಟ ಮತ್ತೊಬ್ಬ ವ್ಯಕ್ತಿ; ಡೆತ್ ನೋಟ್ ಬರೆದು ಆತ್ಮಹತ್ಯೆ
ʼʼಈ ಕುಟುಂಬಕ್ಕೆ ಈ ನಷ್ಟದಿಂದ ಮುಂದಕ್ಕೆ ಹೋಗಲು ಇದಕ್ಕಿಂತ ಉತ್ತಮ ಆಯ್ಕೆ ಇರಲಿಲ್ಲ ಎಂದು ನನಗನ್ನಿಸುತ್ತದೆʼ’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ‘ʼಆಕೆಯದ್ದು ಸಂಪೂರ್ಣ ತಪ್ಪಿಲ್ಲ. ನನ್ನ ಕುಟುಂಬ ಒಂದು ದುರಂತವನ್ನೆದುರಿಸಿದಲ್ಲಿ, ಆ ಕೆಟ್ಟ ಸುದ್ದಿಯನ್ನು ನನ್ನ ಅಜ್ಜಿ ಕೇಳ ಬಯಸುವುದಿಲ್ಲʼ’ ಎಂದು ಇನ್ನೊಬ್ಬರು ಹೇಳಿದ್ದಾರೆ.
“ಆ ದುಃಖದ ಮಾಹಿತಿಯನ್ನು ಅವರಿಗೇ ಹೇಳದೇ ನಿರಾಕರಿಸುವ ಯಾವುದೇ ಹಕ್ಕು ಅವರಿಗಿಲ್ಲ. ಆ ಹಿರಿಯ ಜೀವಗಳು ಅಗಲಿದ ತಮ್ಮ ಮೊಮ್ಮಗಳಿಗೆ ಅಂತಿಮ ವಿದಾಯ ಹೇಳಲಿಲ್ಲ. ಆಕೆಯನ್ನು ಕೊನೆಯದಾಗಿ ಬಿಳ್ಕೊಡಲೂ ಇಲ್ಲ. ಅವರು ಕೊಡುವ ಕಾರಣ ಸ್ವಾರ್ಥದಿಂದ ಕೂಡಿದೆ’ʼ ಎಂದು ಇನ್ನೊಬ್ಬರು ಈ ಘಟನೆಯ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇಷ್ಟಾಗಿಯೂ ಆನಿಯ ತಾತನಿಗೆ ತನ್ನ ಒಬ್ಬಳು ಮೊಮ್ಮಗಳು ತೀರಿ ಹೋಗಿರುವ ವಿಚಾರ ಇನ್ನೂ ಗೊತ್ತಾಗಿಲ್ಲ!