Wednesday, 20th November 2024

Israel Palestine War : ಇಸ್ರೆಲ್‌ ಬಾಂಬ್‌ ದಾಳಿಗೆ ನಲುಗಿದ ಸಹೋದರಿಯನ್ನುಹೆಗಲ ಮೇಲೆ ಹೊತೊಯ್ದ ಪುಟ್ಟ ಬಾಲಕಿ; ವಿಡಿಯೊ ವೈರಲ್

Viral Video

ಗಾಜಾ: ಮಧ್ಯ ಪ್ರಾಚ್ಯ ರಾಷ್ಟ್ರದಲ್ಲಿ ಯುದ್ಧದ ಭೀತಿ ಹೆಚ್ಚಾಗಿದ್ದು, ಅಲ್ಲಿನ ಯುದ್ಧ ಪೀಡಿತ ಪ್ರದೇಶವಾದ ಗಾಜಾದಲ್ಲಿ ನಡೆದ ಘಟನೆಯ ವಿಡಿಯೊಂದು ವೈರಲ್ (Viral Video)ಆಗಿ ಎಲ್ಲರ ಗಮನ ಸೆಳೆದಿದೆ. ಯುದ್ಧದ ಭೀತಿಯ ನಡುವೆಯೂ ಬದುಕುಳಿಯಲು ಪ್ಯಾಲೆಸ್ತೀನಿಯನ್ ಬಾಲಕಿಯೊಬ್ಬಳು ಹೋರಾಟ ನಡೆಸಿದ್ದಾಳೆ. ಗಾಜಾದಲ್ಲಿ ಯುದ್ಧದ ಭೀತಿ ಹೆಚ್ಚಾಗಿದ್ದರೂ ಗಾಯಗೊಂಡ ತನ್ನ ಸಹೋದರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಅವಳನ್ನು ಹಲವು ದೂರದವರೆಗೆ ಹೆಗಲ ಮೇಲೆ ಹೊತ್ತುಕೊಂಡೇ ಹೋಗಿದ್ದಾಳಂತೆ.

ವರದಿ ಪ್ರಕಾರ, ಇಸ್ರೇಲ್ ಮತ್ತು ಗಾಜಾ ನಡುವೆ ನಡೆಯುತ್ತಿರುವ ಯುದ್ಧದ ಪ್ರದೇಶದಲ್ಲಿ ನಡೆದ ಘಟನೆ ಇದಾಗಿದೆ. ಪುಟ್ಟ ಬಾಲಕಿಯೊಬ್ಬಳು ತಾನು ದಣಿದಿದ್ದರೂ ಕೂಡ ಗಾಯಗೊಂಡ ತನ್ನ ಸಹೋದರಿಗೆ ಚಿಕಿತ್ಸೆ ಕೊಡಿಸಲು ಹೆಗಲ ಮೇಲೆ ಹೊತ್ತುಕೊಂಡು ಬರಿಗಾಲಿನಲ್ಲಿ ಒಂದು ಗಂಟೆಗಳ ಕಾಲ ನಡೆದುಕೊಂಡು ಹೋಗಿದ್ದಾಳೆ. ಅವಳ ಆ ಧೈರ್ಯ ಹಾಗೂ ದೃಢನಿಶ್ಚಯವನ್ನು ಕಂಡು ಅನೇಕರು ಆಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವೈರಲ್ ವಿಡಿಯೊದಲ್ಲಿ, ಬಾಲಕಿಯೊಬ್ಬಳು ತನ್ನ ಹೆಗಲ ಮೇಲೆ ಮತ್ತೊಂದು ಬಾಲಕಿಯನ್ನು ಹೊತ್ತುಕೊಂಡು ಬಂದಿರುವ ದೃಶ್ಯವಿದೆ. ವ್ಯಕ್ತಿಯೊಬ್ಬ ಬಂದು ಬಾಲಕಿಯ ಬಳಿ ಏನಾಗಿದೆ ಎಂದು ಕೇಳಿದಾಗ ಆ ಬಾಲಕಿಯು ತನ್ನ ಸ್ಥಿತಿಯನ್ನು ವಿವರಿಸಿದ್ದಾಳೆ. ಗಾಯಗೊಂಡ ತನ್ನ ಸಹೋದರಿಗೆ ಸೂಕ್ತ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾಳೆ.  ಆಕೆಯ ಆ ಮಾತು ಕೇಳುಗರ ಹೃದಯವನ್ನು ಕಲುಕುವಂತಿದೆ. ಕನಿಕರಗೊಂಡ ಆ ವ್ಯಕ್ತಿ ತನ್ನ ಕಾರಿನಲ್ಲಿ ಅವರಿಬ್ಬರನ್ನು ಕರೆದುಕೊಂಡು ಆಸ್ಪತ್ರೆಯ ಬಳಿ ಬಿಟ್ಟಿದ್ದಾರೆ. ಆಕೆ ಆಸ್ಪತ್ರೆಗೆ ತಲುಪಿದಾಗ ಕೂಡ ಸಹೋದರಿಯನ್ನು ಹೆಗಲ ಮೇಲೆ ಹಾಕಿಕೊಂಡೇ ಆಸ್ಪತ್ರೆಯ ಒಳಗೆ ಹೋಗಿದ್ದಾಳೆ.

ಇದನ್ನೂ ಓದಿ: ಕೇಸ್ ನಂಗೆ ಕೊಟ್ರೆ ದರ್ಶನ್‌ ಜೈಲಿಂದ ಬಿಡಿಸಿ ವಿಜಯಲಕ್ಷ್ಮಿ ಮುಂದೆ ನಿಲ್ಲಿಸುವೆ ; ಬಿಗ್‌ಬಾಸ್‌ ಜಗದೀಶ್‌

ಎಕ್ಸ್‌ನ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. “ಈ ವಿಡಿಯೊವನ್ನು ನೋಡಿದರೆ  ನನ್ನ ಹೃದಯಕ್ಕೆ ನೋವಾಗುತ್ತದೆ. ಅಂತಹ ಮುಗ್ಧ ಮನಸ್ಸಿಗೆ ಇಂತಹ ನೋವು ಎಂದಿಗೂ ಸಿಗಬಾರದು” ಎಂದು ಒಬ್ಬರು  ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು, “ಯುದ್ಧವನ್ನು ನಿಲ್ಲಿಸಿ. ಯಾವ ಮಗುವೂ ಇದನ್ನು ಸಹಿಸಬಾರದು” ಎಂದು ಹೇಳಿದ್ದಾರೆ.  ಮೂರನೇ ಬಳಕೆದಾರರು “ಯಾರಿಗಾದರೂ ಅವಳ ಹೆಸರು ತಿಳಿದಿದೆಯೇ? ಅವಳ ಧೈರ್ಯ ಅಗಾಧವಾಗಿದೆ” ಎಂದಿದ್ದಾರೆ. ಇನ್ನೂ ಅನೇಕರು ದುಃಖದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ  ಮತ್ತು ಹಿಂಸಾಚಾರವನ್ನು ಕೊನೆಗೊಳಿಸುವಂತೆ ಮನವಿ ಮಾಡಿದ್ದಾರೆ.