Wednesday, 18th December 2024

Viral Video: ಮದರ್ ಮೇರಿಯ ವಿಗ್ರಹಕ್ಕೆ ಸೀರೆಯ ಸಿಂಗಾರ! ವೈರಲ್ ಆಯ್ತು ಕೇರಳ ಚರ್ಚ್‌ನ ಈ ವಿಡಿಯೊ

ತ್ರಿಶೂರ್‌: ವಿಶ್ವಾದ್ಯಂತ ಕ್ರಿಸ್ಮಸ್ (Christmas) ಸಂಭ್ರಮಾಚರಣೆಗೆ ಕ್ರೈಸ್ತ ಬಾಂಧವರು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಭಾರತದಲ್ಲೂ ಸಹ ಕ್ರಿಶ್ಚಿಯನ್ ಸಮುದಾಯದವರು ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು (New Year) ಸ್ವಾಗತಿಸಲು ಅಗತ್ಯವಿರುವ ಪೂರ್ವಸಿದ್ಧತೆಗಳನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಇದಕ್ಕೆ ಪೂರಕವಾಗಿ ದೇವರ ನಾಡು ಕೇರಳದಿಂದ ವಿಡಿಯೋ ಒಂದು ವೈರಲ್ (Viral Video) ಆಗುತ್ತಿದ್ದು, ಈ ವಿಡಿಯೋದಲ್ಲಿ ಕೆಲವು ಮಹಿಳೆಯರು ಮದರ್ ಮೇರಿ (Mother Mary) ವಿಗ್ರಹಕ್ಕೆ ಚೆಂದದ ಸೀರೆಯನ್ನು ಅಂದವಾಗಿ ಉಡಿಸಿ ಕ್ರಿಸ್ಮಸ್ ಸಂಭ್ರಮಕ್ಕೆ ತಮ್ಮ ಚರ್ಚ್‌ ಅನ್ನು ಸಜ್ಜುಗೊಳಿಸುತ್ತಿದ್ದಾರೆ. ಈ ವಿಡಿಯೋ ಕಂಡು ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ನೆಟ್ಟಿಗರು ಸಂಭ್ರಮಿಸುತ್ತಿದೆ.

ಕೇರಳದ (Kerala) ತ್ರಿಶೂರ್‌ನಲ್ಲಿರುವ (Thrissur) ಮುಕ್ಕಟ್ಟುಕರದಲ್ಲಿರುವ (Mukkattukara) ಚರ್ಚ್ ಒಂದರಲ್ಲಿ ಮದರ್ ಮೇರಿ ವಿಗ್ರಹಕ್ಕೆ ಸೀರೆ ಉಡಿಸುವ ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿರುವಂತೆ, ಚರ್ಚ್ ಒಳಭಾಗದಲ್ಲಿ ಕೆಲವರು ಪ್ರಾರ್ಥನೆ ಸಲ್ಲಿಸುವುದರಲ್ಲಿ ನಿರತರಾಗಿದ್ದರೆ, ಇನ್ನು ಕೆಲವು ಮಹಿಳೆಯರು ಅಲ್ಲಿದ್ದ ಮದರ್ ಮೇರಿ ವಿಗ್ರಹಕ್ಕೆ ಸೀರೆಯನ್ನು ಉಡಿಸುತ್ತಿದ್ದಾರೆ. ಹೀಗೆ ಸೀರೆ ಉಡಿಸಿದ ಬಳಿಕ ಆ ವಿಗ್ರಹವನ್ನು ಇಬ್ಬರು ಯುವಕರು ಅದರ ಸ್ವಸ್ಥಾನದಲ್ಲಿರಿಸುತ್ತಾರೆ. ಈ ದೃಶ್ಯಗಳು ಇದೀಗ ನೆಟ್ಟಿಗರ ಗಮನ ಸೆಳೆದಿದೆ.

ವಿಡಿಯೋದ ಪ್ರಾರಂಭದಲ್ಲಿ ಯುವತಿಯೊಬ್ಬಳು ಮದರ್ ಮೇರಿಗೆ ಉಡಿಸುವ ಹಳದಿ ಸೀರೆಯ ಸೆರಗನ್ನು ಸರಿಮಾಡುತ್ತಿರುವುದು ಕಾಣಬಹುದು. ಇನ್ನೊಬ್ಬರು ಸಿರೆಯ ನೆರಿಗೆಯನ್ನು ನಾಜೂಕಾಗಿ ಜೊಡಿಸುತ್ತಿದ್ದಾರೆ. ಹೀಗೆ ಮದರ್ ಮೇರಿಗೆ ಚೆಂದವಾಗಿ ಸೀರೆಯನ್ನು ಉಡಿಸಿದ ಬಳಿಕ ಆ ವಿಗ್ರಹದ ಸೌಂದರ್ಯವೇ ಬದಲಾಗಿರುವುದು ಕಂಡುಬರುತ್ತದೆ. ಸಿರೆಯಲ್ಲಿ ಕಂಗೊಳಿಸುತ್ತಿರುವ ಮದರ್ ಮೇರಿ ವಿಗ್ರಹಕ್ಕೆ ಆ ಬಳಿಕ ಕಡು ನೀಲಿ ಹಾಗೂ ಬಂಗಾರದ ಬಣ್ಣದ ಕಿರೀಟವನ್ನು ಇರಿಸಿದಾಗ ಆ ವಿಗ್ರಹದ ಚೆಲುವು ಇನ್ನಷ್ಟು ಹೆಚ್ಚಾದಂತೆ ತೋರುತ್ತದೆ. ಇದಕ್ಕೆ ಪೂರಕವಾಗಿ ಕೊನೆಯಲ್ಲಿ ಮದರ್ ಮೇರಿಯ ಅಭಯ ಹಸ್ತದಲ್ಲಿ ಪವಿತ್ರ ರೋಸರಿಯನ್ನು ಇರಿಸಿದಾಗ ಆ ವಿಗ್ರಹದ ಚೆಲುವು ಮತ್ತು ಪಾವಿತ್ರ್ಯತೆಗೆ ಇನ್ನಷ್ಟು ಮೆರುಗು ಬಂದಂತಾಗುತ್ತದೆ.

ಈ ಸಂಭ್ರಮದ ಕ್ಷಣಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಇದಕ್ಕೆ ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಇನ್ ಸ್ಟಾಗ್ರಾಂನಲ್ಲಿ ಈ ವಿಡಿಯೋ 3.6 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಸೀರೆಯಲ್ಲಿ ಕಂಗೊಳಿಸುತ್ತಿರುವ ಮದರ್ ಮೇರಿಯ ಈ ವಿಡಿಯೋಗೆ ಲಕ್ಷಾಂತರ ಇನ್ ಸ್ಟಾ ಬಳಕೆದಾರರು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: SM Krishna Death: ಉದ್ಯಾನ ನಗರಿಯನ್ನು ʼಸಿಲಿಕಾನ್‌ ಸಿಟಿʼ ಆಗಿಸಿದ ಮುತ್ಸದ್ಧಿ ಎಸ್‌ಎಂ ಕೃಷ್ಣ

ಒಟ್ಟಿನಲ್ಲಿ ಪ್ರತೀ ಬಾರಿ ಯಾವುದಾದರೊಂದು ವಿಶೇಷ ವಿಡಿಯೋಗಳಿಗೆ ಟ್ರೆಂಡ್ ಆಗುವ ಸೋಷಿಯಲ್ ಮೀಡಿಯಾ ಈ ಬಾರಿ ಕ್ರಿಸ್ಮಸ್ ಸಂಭ್ರಮಾಚರಣೆಗೆ ಮೊದಲೇ ಮದರ್ ಮೇರಿಯ ಸೀರೆ ಉಟ್ಟ ವಿಗ್ರಹದ ಈ ವಿಡಿಯೋ ಟ್ರೆಂಡಿಂಗ್ ಆಗಿರುವುದು ವಿಶೇಷವಾಗಿದೆ.