Viral Video: ನಡು ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಸ್ಟಂಟ್ ಮಾಡಿದ ಯುವಕರು ಅರೆಸ್ಟ್
ಬೆಂಗಳೂರಿನ ಇಬ್ಬರು ಯುವಕರು ಜನನಿಬಿಡ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಪ್ರಯಾಣಿಸುವಾಗ ವ್ಹೀಲಿಂಗ್ ಮಾಡಿದ್ದಾರೆ, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಡಿವಾಳ ಸಂಚಾರ ಪೊಲೀಸರು ಅವರನ್ನು ಬಂಧಿಸಿದ್ದಾರೆ.

stunt viral video

ಬೆಂಗಳೂರು: ರೈಲ್ವೆ ಹಳಿಗಳ ಮೇಲೆ ಸ್ಟಂಟ್, ಹೈವೆಯಲ್ಲಿ ಸ್ಟಂಟ್ ಹೀಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಇಂದಿನ ಯುವಜನಾಂಗ ಏನೇನೋ ಸರ್ಕಸ್ ಮಾಡುತ್ತಿದೆ. ಇದೀಗ ಬೆಂಗಳೂರಿನ ಇಬ್ಬರು ಯುವಕರು ಜನನಿಬಿಡ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿ ಮಡಿವಾಳ ಸಂಚಾರ ಪೊಲೀಸರು ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರ ಅಧಿಕೃತ ಹ್ಯಾಂಡಲ್ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ, ಇಬ್ಬರು ಯುವಕರು ಸ್ಕೂಟರ್‌ನಲ್ಲಿ ಅಪಾಯಕಾರಿ ಸ್ಟಂಟ್ ಮಾಡುವುದನ್ನು ಸೆರೆ ಹಿಡಿಯಲಾಗಿದೆ. ಇದನ್ನು ನೋಡಿದ ಅಧಿಕಾರಿಗಳು ಅಪರಾಧಿಗಳನ್ನು ಗುರುತಿಸಿ ಬಂಧಿಸಿದ್ದಾರೆ. "ಬೆಂಗಳೂರು ರಸ್ತೆಗಳು ಸುರಕ್ಷಿತ ಸವಾರಿಗಾಗಿಯೇ ಹೊರತು ಸ್ಟಂಟ್ ಶೋಗಳಿಗಾಗಿ ಅಲ್ಲ!ʼʼ ಎಂದು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ವಿಡಿಯೊದಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರಲ್ಲಿ ಒಬ್ಬ ಮುಂಭಾಗದ ಚಕ್ರ ಎತ್ತಿ ವ್ಹೀಲಿಂಗ್ ಮಾಡಿದರೆ, ಹಿಂದೆ ಕುಳಿತವನು ಖುಷಿಯಿಂದ ಕುಣಿದಿದ್ದಾನೆ. ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಸ್ಟಂಟ್‍ಗಳನ್ನು ಮಾಡುವುದು ಅಪಾಯಕಾರಿ ಮಾತ್ರವಲ್ಲ - ಅದು ಕಾನೂನುಬಾಹಿರವೂ ಹೌದು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 279ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದು ರಾಶ್ ಡ್ರೈವಿಂಗ್‌ಗೆ ಸಂಬಂಧಿಸಿದ್ದಾಗಿದೆ. ಈ ರೀತಿಯ ಕೃತ್ಯಗಳು ಶಿಕ್ಷಾರ್ಹ ಅಪರಾಧಗಳಾಗಿವೆ. ಮೂಲಭೂತವಾಗಿ, ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಯಾವುದೇ ಅಜಾಗರೂಕ ಸ್ಟಂಟ್ ಈ ವರ್ಗಕ್ಕೆ ಸೇರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
Bengaluru roads are for safe rides, not stunt shows! Try wheeling, and you’ll be starring in a cautionary tale. #driveresponsibly #weserveweprotect #SafetyFirst pic.twitter.com/Of6mKqZXRM
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) February 7, 2025
ಈ ವಿಡಿಯೊಗೆ ಅನೇಕರು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ನೆಟ್ಟಿಗರು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿ, "ಈ ಸ್ಟಂಟ್‌ಗಳು ಅಪಾಯಕಾರಿ. ಅವರು ತಮ್ಮ ಪ್ರಾಣವನ್ನು ಏಕೆ ಪಣಕ್ಕಿಡುತ್ತಾರೆ?” ಎಂದು ಕೇಳಿದ್ದಾರೆ.
ಇಂತಹ ಕೃತ್ಯಗಳಿಂದ ಕೋಪಗೊಂಡ ಇನ್ನೊಬ್ಬರು, "ಇದು ಅಮಾನವೀಯವೆಂದು ತೋರಿದರೆ ಕ್ಷಮಿಸಿ. ಆದರೆ ಈ ಗೂಂಡಾಗಳಿಗೆ ಎಲ್ಲರ ಎದುರಿಗೆ ಗುಂಡು ಹಾರಿಸುವಂತಹ ಕಾನೂನು ಬೇಕು. ಸಮಾಜ ವಿರೋಧಿ ಶಕ್ತಿಗಳನ್ನು ಸಂಪೂರ್ಣ ಆಕ್ರಮಣಕಾರಿಯಾಗಿ ಎದುರಿಸಬೇಕು. ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ, ಅವರಿಗೆ ಇಂತಹ ಶಿಕ್ಷೆ ನೀಡಿದರೆ ಈ ಅಪಾಯಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು” ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ನಡುರಸ್ತೆಯಲ್ಲೇ ಖುಲ್ಲಂ ಖುಲ್ಲಾ ರೊಮ್ಯಾನ್ಸ್! ಜೋಡಿಯ ವಿಡಿಯೊ ಫುಲ್ ವೈರಲ್
ಇತ್ತೀಚೆಗೆ ಚಲಿಸುತ್ತಿದ್ದ ಬೈಕ್‍ನಲ್ಲಿ ಕುಳಿತ ದಂಪತಿ ರೊಮ್ಯಾನ್ಸ್ ಮಾಡುತ್ತಾ ಅಪಾಯಕಾರಿ ಸ್ಟಂಟ್‍ಗಳನ್ನು ಮಾಡಿದ್ದ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿತ್ತು. ಉತ್ತರ ಪ್ರದೇಶದ ಮೊರಾದಾಬಾದ್‍ನಲ್ಲಿಈ ಘಟನೆ ನಡೆದಿದ್ದು, ಮಹಿಳೆಯು ಪೆಟ್ರೋಲ್ ಟ್ಯಾಂಕ್ ಮೇಲೆೆ ಕುಳಿತು ಬೈಕ್ ರೈಡ್ ಮಾಡುತ್ತಿದ್ದ ತನ್ನ ಸಂಗಾತಿಯನ್ನು ತಬ್ಬಿಕೊಂಡಿರುವುದು ವಿಡಿಯೊದಲ್ಲಿ ಸೆರೆಯಾಗಿತ್ತು. ವೈರಲ್ ಆಗಿರುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ರೋಶವನ್ನು ಹುಟ್ಟುಹಾಕಿತ್ತು. ದಂಪತಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಹೆದ್ದಾರಿಯಲ್ಲಿ ಅಪಾಯಕಾರಿ ಸ್ಟಂಟ್‍ಗಳಲ್ಲಿ ತೊಡಗುವ ಮೂಲಕ ತಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದರು.
ವಿಡಿಯೊದಲ್ಲಿ ಮಹಿಳೆ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿದ್ದರೆ, ಬೈಕ್ ಸವಾರ ಹೆದ್ದಾರಿಯ ಮಧ್ಯದಲ್ಲಿ ಬೈಕ್ ಅನ್ನು ವೇಗವಾಗಿ ಓಡಿಸುತ್ತಿರುವುದು ಸೆರೆಯಾಗಿದೆ. ಈ ಘಟನೆಯನ್ನು ಅದೇ ಹೆದ್ದಾರಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಡಿಯೊ ಮಾಡಿ ನಂತರ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.