Deekshit Nair Column: ಇಳಂಗೋವನ್ ಎಂಬ ಅಧ್ಯಾತ್ಮ ಜೀವಿ
ಅಂಥವನ ಕಣ್ಣಲ್ಲೂ ಹೊಳಪಿತ್ತು. ಭರವಸೆಯ ಮಾತುಗಳನ್ನಾಡುತ್ತಿದ್ದ. ಜಗತ್ತಿನ ಪರಮ ಸತ್ಯಗಳನ್ನು ತಿಳಿಸಿ ಕೊಡುತ್ತಿದ್ದ. ಎಲ್ಲೆಲ್ಲಿಗೋ ಕೈ ಹಿಡಿದು ನಡೆಸಿಕೊಂಡು ಹೋಗುತ್ತಿದ್ದ
Ashok Nayak
December 15, 2024
ಅಧ್ಯಾತ್ಮದ ಬೆನ್ನು ಹತ್ತಿದ್ದ ನಿರೂಪಕನನ್ನು ಇಳಂಗೋವನ್ ಎಂಬಾತ ಕೈ ಹಿಡಿದು ನಡೆಸಿದ ಕಥನವೇ, ಸಾಹಿತಿ ಜೋಗಿ ಅವರ ಹೊಸ ಕಾದಂಬರಿ.
ದೀಕ್ಷಿತ್ ನಾಯರ್
ಇಳಂಗೋವನ್ ಎಂಬಾತನು ಗಾಳಿಗುಡ್ಡದ ಬಳಿ ಕಮ್ಮಾರಿಕೆ ಕೆಲಸ ಮಾಡಿಕೊಂಡು ಜೀವಿಸುತ್ತಿದ್ದವನು. ಲೌಕಿಕ ಬದುಕಿನಿಂದ ಕಳಚಿಕೊಂಡು ಅಲೌಕಿಕ ಬದುಕಿಗೆ ತನ್ನನ್ನು ತಾನು ತೆರೆದುಕೊಂಡಿದ್ದವನು. ಅವನು ದೇವರು, ದೈವತ್ವ ಮತ್ತು ಆಧ್ಯಾತ್ಮಗಳ ಕುರಿತು ಮಾತನಾಡಬಲ್ಲವನಾಗಿದ್ದ. ನಶ್ವರ ಬದುಕಿನ ಪರಮಾರ್ಥವನ್ನು ಡಬಲ್ಲವ ನಾಗಿದ್ದ. ತನ್ನ ನಿಜ ಸ್ವರೂಪವನ್ನು ಅರಿಯುವ ಪ್ರಯತ್ನದಲ್ಲಿದ್ದ. ಪ್ರತಿ ಕ್ಷಣವೂ ಆತ್ಮ ಸಾಕ್ಷಾತ್ಕಾರದ ಕಡೆಗೆ ಹೆಜ್ಜೆ ಹಾಕುತ್ತಿದ್ದ. ಸಾವನ್ನು ಗೆಲ್ಲಲು ಹೆಣಗಾಡುತ್ತಿದ್ದ. ಆಗಾಗ್ಗೆ ಹುಚ್ಚು ಹುಚ್ಚಾಗಿ ವರ್ತಿಸುತ್ತಿದ್ದ. ನೂರಾರು ಪ್ರಶ್ನೆಗಳಿಗೆ ಒಂದೆರಡು ಬಾರಿ ಅಷ್ಟೇ ಉತ್ತರಿಸುತ್ತಿದ್ದ. ಅವನು ವಿಚಿತ್ರ ಜೀವಿ.ಈ ಲೋಕದ ಪರಿವೆ ಇಲ್ಲದವನು. ಎಲ್ಲಾ ಜಂಜಾಟಗಳಿಂದಲೂ ಮುಕ್ತಿ ಪಡೆದವನು. ವೈರಾಗ್ಯ ತಾಳಿದವನು.
ಅಂಥವನ ಕಣ್ಣಲ್ಲೂ ಹೊಳಪಿತ್ತು. ಭರವಸೆಯ ಮಾತುಗಳನ್ನಾಡುತ್ತಿದ್ದ. ಜಗತ್ತಿನ ಪರಮ ಸತ್ಯಗಳನ್ನು ತಿಳಿಸಿ ಕೊಡುತ್ತಿದ್ದ. ಎಲ್ಲೆಲ್ಲಿಗೋ ಕೈ ಹಿಡಿದು ನಡೆಸಿಕೊಂಡು ಹೋಗುತ್ತಿದ್ದ. ದಣಿವರಿಯದೆ ನಡೆದು ಮತ್ತೆಲ್ಲೋ ಕೂತುಬಿಡುತ್ತಿದ್ದ. ಶತಮಾನದ ಕತೆಗಳನ್ನು ಒಂದೇ ಸಮನ ಒದರಿ ಬಿಡುತ್ತಿದ್ದ.ಇಳಂಗೋವನ್ ಒಂದು ರೀತಿಯ ಚಿತ್ರ ವಿಚಿತ್ರ ಮನುಷ; ಅವನನ್ನೇ ಅವಧೂತ ಎನ್ನಬಹುದೇ!
ಅಧ್ಯಾತ್ಮದ ಸುಳಿಯಲ್ಲಿದ್ದ ನಿರೂಪಕರನ್ನು ಅವರ ಅಣ್ಣ ಗಾಳಿಗುಡ್ಡದ ಬಳಿ ಕರೆದುಕೊಂಡು ಹೋದರು. ಇಳಂಗೋವನ್‌ಗೆ ಒಪ್ಪಿಸಿದರು. ಪ್ರಾರಂಭದಲ್ಲಿ ಇಳಂಗೋವನ್ ಮೋಹಕ್ಕೆ ಸಿಲುಕಿದ್ದ ಅವರ ಅಣ್ಣ ಕಾಲಕ್ರಮೇಣ ಅವನನ್ನು ಮರೆತೇಬಿಟ್ಟರು. ಲೇಖಕ ಮಾತ್ರ ಇಳಂಗೋವನ್ ಸಹವಾಸಕ್ಕೆ ಬಿದ್ದರು. ತಮ್ಮೊಳಗಿದ್ದ ಎಲ್ಲವನ್ನು ಅವನಲ್ಲಿ ಕಂಡುಕೊಂಡರು. ಅವನನ್ನು ಗುರು ಎಂದು ಭಾವಿಸಿದರು. ಇಳಂಗೋವನ್ ತನಗೇ ಗೊತ್ತಿಲ್ಲದಂತೆ ಸಾಕಷ್ಟು ಕಲಿಸಿದ. ಹೆಗಲು ಸವರಿದ. ಸಾಂತ್ವನ ಹೇಳಿದ. ಬದುಕು ಮುಗಿದೇ ಹೋಯಿತು ಅಂದುಕೊಂಡಾಗ ಕಾಣೆಯಾಗಿದ್ದ ಅವನು ಮತ್ತೆ ದಾರಿ ಮಧ್ಯೆ ಸಿಕ್ಕಿದ.
ಆ ಇಳಂಗೋವನ್ ಕಳೆದ ೪೦ ವರ್ಷಗಳಿಂದ ನಿರೂಪಕರಲ್ಲಿದ್ದಾನೆ. ಏನೂ ತೋಚದೆ ಇದ್ದಾಗ ಅವನ ಎದುರು ಮಗುವಿನಂತೆ ಕೂತುಬಿಡುತ್ತಾರೆ. ಎಲ್ಲದಕ್ಕೂ ಅವನೊಬ್ಬನಿದ್ದಾನೆ ಎಂಬ ನಂಬಿಕೆ. ಹೌದು, ಇಳಂಗೋವನ್ ಇದ್ದಾನೆ. ನಶ್ವರತೆಯ ನಡುವೆಯೇ ಶಾಶ್ವತ ಆನಂದ ಯಾವುದು ಎಂದು ತಡಕಾಡುತ್ತಿದ್ದ ನಿರೂಪಕರಿಗೆ ಸಿಕ್ಕವನುಇಳಂಗೋವನ್. ಬಹುವಾಗಿ ಕಾಡಿದ ಇಳಂಗೋವನ್ ಒಮ್ಮೆ ಇದ್ದಕ್ಕಿದ್ದಂತೆ ಆಧ್ಯಾತ್ಮ,ಅಲೌಕಿಕತೆ ಒಂದು ಶಾಪ. ಅದು ತೀರದ ಮೋಹ ಎಂದು ಬಿಡುತ್ತಾನೆ. ನಿರೂಪಕರು ಈಗಲೂ ಆಧ್ಯಾತ್ಮದ ಹುಡುಕಾಟದಲ್ಲಿದ್ದಾರೆ.
ಇಳಂಗೋವನ್ - ಜೋಗಿ ಅವರ ೧೦೦ನೇ ಕೃತಿ. ಆಧ್ಯಾತ್ಮ, ತತ್ವಜ್ಞಾನ, ಅಲೌಕಿಕತೆಯ ಹುಡುಕಾಟ ಮತ್ತು ಪಯಣದಲ್ಲಿ ಆಸಕ್ತಿ ಇರುವವರು ಒಂದು ಕಂತಿನಲ್ಲಿ ಓದಿ ಮುಗಿಸಬಹುದಾದ ಪುಸ್ತಕ. ಶುದ್ಧ ಫಿಲಾಸಫಿಯಂತೆ ಅಥವಾ ಕತೆಯಂತೆ ಓದಿಕೊಳ್ಳಬಹುದು. ಕೆಲವರಿಗೆ ಬೋರಿಂಗ್ ಅನ್ನಿಸುವ ಆಧ್ಯಾತ್ಮದ ವಿಷಯ ಇಲ್ಲಿ ಕುತೂಹಲಮೂಡಿಸುತ್ತದೆ. ಹಾಕುತ್ತಾ ಹೋದಂತೆ ನಮ್ಮ ನಿಜ ಸ್ವರೂಪ ನಮ್ಮ ಅರಿವಿಗೆ ಬರುತ್ತದೆ.ಅಧ್ಯಾತ್ಮವೂ ರುಚಿಸುತ್ತದೆ. ಅಧ್ಯಾತ್ಮ ಮತ್ತು ಅಲೌಕಿಕತೆಗೆ ತೆರೆದುಕೊಳ್ಳಲು ಪ್ರಯತ್ನಿಸಿದ ಲೇಖಕರ ಅನುಭವದ ತಳಹದಿ ಇಲ್ಲಿದೆ. ಇಲ್ಲಿ ಮಹಾನ್ ತತ್ವಜ್ಞಾನಿಗಳಾದ ಓಶೋ, ಜಿಡ್ಡು ಕೃಷ್ಣಮೂರ್ತಿ, ಯುಜಿ ಕೃಷ್ಣಮೂರ್ತಿ ಮುಂತಾದವರು ಸಿಗುತ್ತಾರೆ. ಅವರು ಹೇಳಿದ ಅಧ್ಯಾತ್ಮದ ಪಾಠ ಎದೆಗೆ ಇಳಿಯುತ್ತದೆ.
ಆದರೂ ಅವನೊಬ್ಬ ತೀರಾ ಇಷ್ಟವಾಗುತ್ತಾನೆ. ಅವನು ಇಳಂಗೋವನ್. ಅವನು ನಮಗೂ ಸಿಗಬಹುದು. ಹೆಜ್ಜೆ ಸೋಲುವ ತನಕ ಅವನೊಂದಿಗೆ ನಡೆಯಲು ನಾವು ಸಿದ್ಧರಿರಬೇಕು. ಯಾವುದೋ ಸಂದರ್ಭದಲ್ಲಿ ದಾರಿ ಮುಗಿ ಯಿತು ಅಂತ ಅಂಚಿಗೆ ಬಂದು ನಿಂತಾಗ ಕೈ ಹಿಡಿದು ನಡೆಸುತ್ತಾನೆ. ಗಾಜಿನ ಮುಂದೆ ಕೂತಿದ್ದ ನಾವು ಇಳಂಗೋವನ್ ಓದಿ ಮುಗಿಸುವಷ್ಟರಲ್ಲಿ ಕನ್ನಡಿ ಮುಂದೆ ಕೂರುತ್ತೇವೆ. ‘ಚೆನ್ನಾಗಿ ಬದುಕ್ತಾ ಹೋಗೋದೇ ಬದುಕಿಗೆ ನಾವು ಕೊಡುವ ಗೌರವ. ಆದರೆ ಸಂತೋಷವಾಗಿದ್ದಾಗ ಬದುಕನ್ನು ಪ್ರೀತಿಸದೇ ಹೋದರೆ, ಕಾಯಿಲೆ ಬಿದ್ದಾಗ, ಕಷ್ಟ ಬಂದಾಗ ಬದುಕು ನಿನ್ನನ್ನು ಪ್ರೀತಿಸುವುದಿಲ್ಲ’ -ಇಳಂಗೋವನ್
ಇದನ್ನೂ ಓದಿ: #GauriNair