Dikshit Nair Column: ಹೋರಾಟದ ಹಾದಿ ಹಿಡಿದ ಮಥಾಯ್
Dikshit Nair Column: ಹೋರಾಟದ ಹಾದಿ ಹಿಡಿದ ಮಥಾಯ್
Ashok Nayak
December 8, 2024
ದೀಕ್ಷಿತ್ ನಾಯರ್
ಕೆನ್ಯಾ ದೇಶದ ಈ ಮಹಿಳೆ, ತನ್ನ ಹಳ್ಳಿಯನ್ನು ರಕ್ಷಿಸಲು, ತನ್ನ ಪರಿಸರವನ್ನು ಉಳಿಸಲು, ಆ ಮೂಲಕ ಮನುಕುಲ ವಾಸಿಸುವ ಪ್ರಕೃತಿಯನ್ನು ರಕ್ಷಿ ಸಲು ಹಿಡಿದದ್ದು ಹೋರಾಟದ ಹಾದಿ.
ಮಾಥಾಯ್ ಸಾಹಸಿ ಹೆಣ್ಣು ಮಗಳು. ಹೋರಾಟ ಅವಳ ಅಸ್ಮಿತೆ. ಆಕೆ ತನ್ನ ಜನಪರ ಕೆಲಸ ಗಳಿಂದಲೇ ಜಗತ್ತಿನಾದ್ಯಂತ ಸುದ್ದಿಯಾದವಳು. ಒಂದು ಸಣ್ಣ ಹಳ್ಳಿಯ ಹೆಣ್ಣು ತನ್ನ ಬದುಕಿನಲ್ಲಿ ಎದುರಾದ ಅಗ್ನಿ ದಿವ್ಯಗಳನ್ನು ದಾಟಿಕೊಂಡು ಬೆಳೆದು ನಿಂತದ್ದೇ ಅಚ್ಚರಿ. ಅವಳು ಅನುಭವಿಸಿದ ಯಾತನೆಗಳೇ ಅವಳನ್ನು ಅತೀ ಎತ್ತರಕ್ಕೆ ಬೆಳೆಸಿತು.
ವಂಗಾರಿ ಮಾಥಾಯ್ (1940-2011) ಗಟ್ಟಿಗಿತ್ತಿ. ಆಫ್ರಿಕಾದ ಕೆನ್ಯಾದಲ್ಲಿ ಜನನ; ಅಮೆರಿಕದಲ್ಲಿ ಉನ್ನತ ವಿದ್ಯಾಭ್ಯಾಸ. ಬದುಕಿನಲ್ಲಿ ನಿರಂತರ ನೊಂದು ದೃಢವಾದವಳು. ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಹಗಲು-ರಾತ್ರಿ ಏಕಮಾಡಿ ದುಡಿದವಳು. ಅವಳು ಯಾವುದಕ್ಕೂ ಕುಗ್ಗಿದವಳಲ್ಲ. ಕೊರಗಿದವಳಲ್ಲ. ಮತ್ತೆ ಮತ್ತೆ ಮೇಲೆದ್ದು ನಿಂತವಳು. ಮಾಥಾಯ್ ಹೋರಾಟದಿಂದಲೇ ತನ್ನ ಊರು ಮತ್ತು ತನ್ನ ಜನಾಂಗದ ಜನರನ್ನು ಬದಲು ಮಾಡಿ ದವಳು. ಅವರಲ್ಲಿ ನೂರಾರು ಕನಸುಗಳನ್ನು ಬಿತ್ತಿದವಳು. ಒಂದಿಡೀ ಸಮಾಜ ಮತ್ತು ರಾಜಕೀಯ ರಂಗವನ್ನು ಬೆರಗುಗೊಳಿಸಿದವಳು. ಅವಳು ಬದುಕು ತನ್ನನ್ನು ನೂಕಿದ ಕಡೆಗೆಲ್ಲ ಹೆಜ್ಜೆ ಇಡುತ್ತಾ ಹೋದಳು. ದಣಿದಳು, ಸಾಽಸಿದಳು. ಅಸಾಮಾನ್ಯ ಮಹಿಳೆ ಅನ್ನಿಸಿಕೊಂಡಳು.
ಎಲ್ಲಾ ಪ್ರಶಸ್ತಿ-ಸನ್ಮಾನ ಮತ್ತು ಬಿರುದು-ಬಾವಲಿಗಳು ಅವಳನ್ನು ಹುಡುಕಿಕೊಂಡು ಬಂದವು. ನೊಬೆಲ್ ಶಾಂತಿ ಪುರಸ್ಕಾರವನ್ನೂ ಪಡೆದಳು; ಆ ಪ್ರತಿಷ್ಠಿತ ಪುರಸ್ಕಾರವನ್ನು ಪಡೆದ ಮೊದಲ ಆಫ್ರಿಕನ್ ಮಹಿಳೆ ಎಂಬ ದಾಖಲೆ ಬರೆದಳು. ಆಕೆ ತನ್ನ ಬದುಕಿನ ಕಡೆಯ ದಿನಗಳಲ್ಲಿ ತನ್ನ ಕತೆಗಳೆಲ್ಲವನ್ನೂ ದಾಖಲಿಸಿದಳು. ಎಷ್ಟೋ ಹೆಣ್ಣುಮಕ್ಕಳಿಗೆ ಸೂರ್ತಿಯಾದಳು. ಮತ್ತೆ ಮೇಲೆಳುವಂತೆ ಭರವಸೆ ತುಂಬಿದಳು.
‘ಮತ್ತೆ ಮೇಲೇಳುತ್ತೇನೆ’ ವಂಗಾರಿ ಮಾಥಾಯ್ ಬದುಕಿನ ಪುಟಗಳ ಸಂಚಯ. ಎಂ ಆರ್ ಕಮಲ ಅವರು ಆಕೆಯ ಬದುಕನ್ನು ಕನ್ನಡೀಕರಿಸಿದ್ದಾರೆ. ಕಳೆದ ಮೂರೂವರೆ ದಶಕಗಳಿಂದ ಅನುವಾದ ಕೆಲಸವನ್ನು ತಪಸ್ಸಿನಂತೆ ಮಾಡಿ ಕೊಂಡು ಬರುತ್ತಿರುವ ಅವರು ಪ್ರಸ್ತುತ ‘ಮತ್ತೆ ಮೇಲೆಳುತ್ತೇನೆ’ ಕೃತಿಯ ಮೂಲಕವೂ ಅನುವಾದಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ. ಮಾಥಾಯ್ ಸ್ವತಃ ನಮ್ಮ ಮನೆಯ ಮಗಳು ಅನ್ನಿಸುವಂತೆ ಬರೆದಿದ್ದಾರೆ. ಇಲ್ಲಿನ ಮಣ್ಣನ್ನು ಎರಕ ಹೊಯ್ದಿದ್ದಾರೆ. ಮತ್ತೊಮ್ಮೆ ಅನುವಾದ ಸಾಹಿತ್ಯಕ್ಕೆ ಒಂದು ಬೌದ್ಧಿಕ ಚೌಕಟ್ಟನ್ನು ಹಾಕಿಕೊಟ್ಟಿದ್ದಾರೆ. ಭಾಷೆ,ನಿರೂಪಣೆ ಎಲ್ಲವೂ ಆಪ್ತವಾಗಿದೆ. ಮೂಲ ಬರಹಕ್ಕೆ ಧಕ್ಕೆ ತರದೆ ವಂಗಾರಿ ಮಾಥಾಯ್‌ಗೆ ಎಲ್ಲ ರೀತಿಯಲ್ಲೂ ನ್ಯಾಯ ಒದಗಿಸಿದ್ದಾರೆ.
ಮಾಥಾಯ್ ಅನ್ನು ಕೆನ್ಯಾದಿಂದ ಕರ್ನಾಟಕಕ್ಕೆ, ಕನ್ನಡಕ್ಕೆ ಕರೆ ತಂದಿದ್ದಾರೆ. ಇದು ಕನ್ನಡಕ್ಕೆ ಅಗತ್ಯವಿದ್ದ ಪುಸ್ತಕ. ಸದ್ಯ ಮಾಥಾಯ್ ನಮ್ಮವಳು ಅನ್ನಿಸಿದ್ದಾಳೆ. ‘ನಾವೆಲ್ಲ ಈ ಬೆತ್ತಲೆ ಭೂಮಿಗೆ ಬಟ್ಟೆಯನ್ನು ಹಾಕುವ ಕೆಲಸಮುಂದುವರಿಸುತ್ತಿದ್ದೇವೆ. ಪ್ರಪಂಚದಾದ್ಯಂತ ಈ ನೀಲಿಗ್ರಹಕ್ಕೆ ಇದೇ ಕೆಲಸವನ್ನು ಕಾಳಜಿಯಿಂದ ಮಾಡುವವರ ಜೊತೆಯಲ್ಲಿದ್ದೇವೆ. ನಮಗೆ ಹೋಗುವುದಕ್ಕೆ ಮತ್ತಾವ ಜಾಗವು ಇಲ್ಲ.
ಕೆಳಮಟ್ಟಕ್ಕಿಳಿಸಿದ ಪರಿಸರವನ್ನು, ಅದರಿಂದಾಗುತ್ತಿರುವ ನೋವನ್ನು ಕಂಡಾಗ ಆತ್ಮ ತೃಪ್ತಿಯಿಂದರಲಾಗುವುದಿಲ್ಲ. ಕಳವಳಕ್ಕೀಡಾಗಿ ಏನಾದರೂ ಮಾಡಬೇಕೆಂದು ಯೋಚಿಸುತ್ತೇವೆ ಹೊರತು ಸೋತು ಕೈ ಚೆಲ್ಲುವುದಕ್ಕಾ ಗುವುದಿಲ್ಲ.ಅದರ ಹೊರೆಯನ್ನು ಹೊತ್ತ ತಕ್ಷಣ ಕಾರ್ಯರೂಪಕ್ಕೆ ಇಳಿಸುತ್ತೇವೆ. ಈಗಿನ ಮತ್ತು ಮುಂದಿನ ತಲೆಮಾರುಗಳ ಜೊತೆಗೆ ಇಡೀ ಜೀವ ಜಗತ್ತು ‘ಎದ್ದು ನಿಂತು ಮತ್ತು ನಡೆ’ ಯುವುದಕ್ಕೆ ಬದ್ಧರಾಗಿದ್ದೇವೆ. ಮತ್ತೆ ಮೇಲೆಳುತ್ತೇನೆ.’
ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ