Thursday, 12th December 2024

370ರ ವಿಧಿಯೇ ಕಾಶ್ಮೀರದ ಸಮಸ್ಯೆಗಳಿಗೆ ಕಾರಣ

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ – ೨೪೧

ಶೇಖ್ ಅಬ್ದುಲ್ಲಾನನ್ನು ಅಲ್ಲಿನ ಮುಖ್ಯಮಂತ್ರಿ ಮಾಡಬೇಕು ಎಂಬ ಒಂದೇ ಕಾರಣಕ್ಕೆ ಪಿಒಕೆ ಪಾಕಿಸ್ತಾನದ ಪಾಲಾಯಿತು ದಿ ಕಾಶ್ಮೀರ್ ಫೈಲ್ಸ್ ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಒಂದು ಭಾಗವಷ್ಟೆ | ಇನ್ನೂ ಅನೇಕ ಕೃತ್ಯಗಳಾಗಿವೆ

ಬೆಂಗಳೂರು: ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರ ಬಿಡುಗಡೆಯಾದ ಮೇಲೆ ಪತ್ರಿಕೆ, ಟಿವಿ, ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಬಹಳಷ್ಟು ಚರ್ಚೆಗಳಾಗುತ್ತಿವೆ.

ಆದರೆ, ಈ ಚಲನಚಿತ್ರದಲ್ಲಿ ತೋರಿಸಿದ್ದಷ್ಟೇ ಅಲ್ಲ, ಕಾಶ್ಮೀರದಲ್ಲಿ ಅದಕ್ಕಿಂತ ಹೆಚ್ಚು ದೌರ್ಜನ್ಯ, ದೇಶವಿರೋಧಿ ಚಟುವಟಿಕೆ ಗಳು ನಡೆದಿವೆ. ಈ ಎಲ್ಲದರ ಬಗ್ಗೆ ಹೆಚ್ಚು ಚರ್ಚೆ ಗಳಾಗಿ ಹುದುಗಿ ಹೋಗಿರುವ ಮತ್ತಷ್ಟು ಸತ್ಯ ಸಂಗತಿಗಳು ಹೊರಬರಬೇಕಿದೆ. ಆ ಮೂಲಕ ಕಾಶ್ಮೀರದಲ್ಲೇನಾಯಿತು ಎಂಬುದನ್ನು ಜಗತ್ತಿಗೆ ತಿಳಿಸುವ ಕೆಲಸ ಆಗಬೇಕಾಗಿದೆ ಎಂದು ಅಂಕಣಕಾರ ಮೋಹನ್ ವಿಶ್ವ ಹೇಳಿದ್ದಾರೆ.

ವಿಶ್ವವಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಕಾಶ್ಮೀರ ಅಂದು-ಇಂದು’ ಕಾರ್ಯಕ್ರಮದಲ್ಲಿ ಇತ್ತೀಚೆಗಿನ ತಮ್ಮ ಕಾಶ್ಮೀರ ಪ್ರವಾಸದ ಅನುಭವ ಮತ್ತು ಕಾಶ್ಮೀರದಲ್ಲಿ ಹಿಂದೆ ಏನೆಲ್ಲಾ ಆಗಿದೆ ಎಂಬ ವಿಚಾರಗಳನ್ನು ಹಂಚಿಕೊಂಡರು. ಕಾಶ್ಮೀರ ಎಂದರೆ ಅದನ್ನು ಭೂಲೋಕದ ಸ್ವರ್ಗ ಎನ್ನುತ್ತೇವೆ. ಆದರೆ, ಹೊರಗಿನವರು ಆ ಸ್ವರ್ಗಕ್ಕೆ ಕಾಲಿಡಲು ಭಯ ಪಡುತ್ತಿದ್ದರು ಎಂದರೆ ಅಲ್ಲಿನ ಭಯಾನಕ ಪರಿಸ್ಥಿತಿ ಯಾವ ಮಟ್ಟದಲ್ಲಿತ್ತು ಎಂಬು ದನ್ನು ನಾವು ಊಹಿಸಬಹುದು. ಆದರೆ, ಹಿಂದೆ ಕಾಶ್ಮೀರ ಹೇಗಿತ್ತು ಗೊತ್ತೇ? ಕಶ್ಯಪ ಮುನಿಯಿದ್ದ, ವಿದ್ಯಾದೇವತೆ ಶಾರದೆಯ ಪೀಠ ಸ್ಥಾಪನೆ ಮಾಡಿರುವಂತಹ ಪುಣ್ಯ ಭೂಮಿ ಕಾಶ್ಮೀರ. ಶಂಕರಾಚಾರ್ಯರು ತಪಸ್ಸು ಮಾಡಲು ಕಾಶ್ಮೀರಕ್ಕೆ ತೆರಳಿದ್ದರು.

ಸ್ವಾಮಿ ವಿವೇಕಾನಂದರು ತುಲಮುಲ್ಲಾ ದ ಖೀರ್ ಭವಾನಿ ದೇವಸ್ಥಾನದಲ್ಲಿ ತಮ್ಮ ಅಂತ್ಯದ ದಿನಗಳನ್ನು ಕಳೆದರು ಎಂದು ಹೇಳಲಾಗುತ್ತದೆ. ಅಷ್ಟೆ ಅಲ್ಲದೆ ಪಂಚತಂತ್ರ ಕಥೆಗಳು ಹುಟ್ಟಿದ ಜಾಗ ಕಾಶ್ಮೀರ. ಇಂತಹ ಮಹನೀಯರು ತಮ್ಮ ಸಾಧನೆಗೆ ಕಾಶ್ಮೀರವನ್ನು ಆಯ್ಕೆ ಮಾಡಿಕೊಂಡಿದ್ದರು ಎಂದರೆ ಆ ಜಾಗದ ಶಕ್ತಿಯೇ ಮುಖ್ಯ ಕಾರಣ.

ಆದರೆ, ಈ ಪುರಾಣ, ಇತಿಹಾಸಗಳನ್ನು ನಮಗೆ ಶಾಲೆಯಲ್ಲೂ ಯಾರೂ ಹೇಳಲಿಲ್ಲ. ನಂತರದಲ್ಲಿ ಕಾಶ್ಮೀರದ ಬಗ್ಗೆ ನಾವು ಓದಿದ್ದೇ ಬೇರೆ, ಅಲ್ಲಿ ನಡೆದಿರುವುದೇ ಬೇರೆ ಎಂದರು. ಕಾಶ್ಮೀರದ ನೈಜ ಘಟನೆಗಳನ್ನು ದಿ ಕಾಶ್ಮೀರ್ ಫೈಲ್ಸ್ ಹೇಳಲು ಆರಂಭಿಸಿದಾಗ ಈ ಕುರಿತು ಸಾಕಷ್ಟು ಚರ್ಚೆ ಆರಂಭವಾಗಿದೆ. ಅಲ್ಲಿನ ಇತಿಹಾಸವನ್ನು ನೋಡುವುದಾದರೆ, ಸ್ವಾತಂತ್ರ್ಯಾ ನಂತರ ಶೇಖ್ ಅಬ್ದುಲ್ಲಾ ಅವರನ್ನು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮಾಡುವ ನಿರ್ಧಾರಕ್ಕೆ ರಾಜ ಹರಿಸಿಂಗ್ ವಿರೋಧಿಸಿದ್ದರು. ಆದರೆ, ಅಂದಿನ ಪ್ರಧಾನಿ ಜವಹರಲಾಲ ನೆಹರು ಅವರು ಅಬ್ದುಲ್ಲಾ ಪರವಾಗಿ ನಿಂತರು. ಈ ಪರ-ವಿರೋಧವನ್ನು ಬಳಸಿಕೊಂಡು ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿ ನಡೆಸಿ ಇಂದಿನ ಪಿಒಕೆ(ಪಾಕ್ ಆಕ್ರಮಿತ ಕಾಶ್ಮೀರ) ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು.

ಶೇಖ್ ಅಬ್ದುಲ್ಲಾನನ್ನು ಅಲ್ಲಿನ ಮುಖ್ಯಮಂತ್ರಿ ಮಾಡಬೇಕು ಎಂಬ ಒಂದೇ ಕಾರಣಕ್ಕೆ ಪಿಒಕೆ ಪಾಕಿಸ್ತಾನದ ಪಾಲಾಯಿತು. ಈ ಎಲ್ಲ ಬೆಳವಣಿಗೆಗಳನ್ನು ನೋಡಲಾರದೆ ರಾಜ ಹರಿಸಿಂಗ್ ಜಮ್ಮುವನ್ನು ಭಾರತಕ್ಕೆ ಸೇರಿಸಿಬಿಟ್ಟ ಎಂದರು. ಈ ಎಲ್ಲ ಬೆಳವಣಿಗೆಯ ನಂತರ ೩೭೦ನೇ ವಿಧಿ ಮೂಲಕ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ. ವಿಶೇಷ ಸ್ಥಾನಮಾನ ವಿಚಾರದಲ್ಲಿ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡಿದೆ ಮತ್ತು ಈಗಲೂ ಮಾಡುತ್ತಾ ಬಂದಿದೆ. ತಾತ್ಕಾಲಿಕವಾಗಿ ಹೇರಲಾಗಿದ್ದ ೩೭೦ರ ವಿಧಿಯನ್ನು ಮುಸಲ್ಮಾನರ ಮತಕ್ಕಾಗಿ ಅಧಿಕಾರದಲ್ಲಿದ್ದಷ್ಟು ದಿನ ತೆಗೆಯಲೇ ಇಲ್ಲ. ಇದರ ಪರಿಣಾಮ ಸರಕಾರ ಮಾತ್ರವಲ್ಲದೇ ಮಾಧ್ಯಮ, ವಿಶ್ವವಿದ್ಯಾನಿಲಯಗಳು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರತ್ಯೇಕತಾವಾದಿಗಳಿಗೆ ಸಹಾಯ ಸಿಕ್ಕಿತ್ತು. ಇದರಿಂದಾಗಿ ಹೊರಗಿನಿಂದ ಬಂದವರು ಯಾವುದೇ ಕೆಲಸ ಪ್ರಾರಂಭ ಮಾಡಲಾಗುತ್ತಿರಲಿಲ್ಲ.

ಭೂಮಿಕೊಳ್ಳಲು ಅಗಲಿಲ್ಲ. ಅಲ್ಲಿದ ಜನರನ್ನು ಹೊರಗಿನ ಪ್ರಪಂಚಕ್ಕೆ ಪರಿಚಯ ಮಾಡದೆ ಪಂಜರದ ಗಿಳಿಗಳಂತೆ ಕೂಡಿಡ ಲಾಯಿತು. ಯಾವುದೇ ಸ್ಥಾನಮಾನ ಕೊಟ್ಟರೂ ಅವರಿಗೆ ರಾಷ್ಟ್ರೀಯತೆ ಬರುವುದಿಲ್ಲ. ಆದ್ದರಿಂದ ‘ಸಂಪೂರ್ಣ ವಿಭಜನೆ ಆದರೆ ಒಳ್ಳೆಯದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾದೀತು’ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ಎಚ್ಚರಿಸಿದ್ದರು. ಆದರೆ, ಕಾಂಗ್ರೆಸ್ ಅದನ್ನು ಪರಿಗಣಿಸದೇ ಇದ್ದುದೇ ಇಂದಿನ ಎಲ್ಲ ಸಮಸ್ಯೆಗಳಿಗೆ ಕಾರಣ ಎಂದು ಹೇಳಿದರು.
ಕಾಶ್ಮೀರದಲ್ಲಿ ಕೇವಲ ಪಂಡಿತರಲ್ಲದೆ ಸಿಕ್ಕರು, ಜೈನರು, ಪಾರ್ಸಿಗಳೂ ಇದ್ದರು. ಅವರ ಕಥೆ ತೆಗೆದರೆ ಮತಷ್ಟು ಸತ್ಯ ಘಟನೆಗಳು ಹೊರಬೀಳುತ್ತದೆ. ಇಂದಿನ ಪಿಒಕೆ ಉಳಿಸಿಕೊಳ್ಳಲು ಭಾರತಕ್ಕೆ ಒಂದು ಅವಕಾಶವಿತ್ತು.

೧೯೭೧ರ ಭಾರತ-ಪಾಕ್ ಯುದ್ದದಲ್ಲಿ ಬಂಧನಕ್ಕೊಳಗಗಿದ್ದ ಪಾಕಿಸ್ತಾನಿ ಕೈದಿಗಳನ್ನು ಬಿಡುವಾಗ, ಕೈದಿಗಳ ಬದಲಾಗಿ ಇಒಕೆ ಭಾರತಕ್ಕೆ ಒಪ್ಪಿಸುವಂತೆ ಬೇಡಿಕೆ ಇಡಬಹುದಾಗಿತ್ತು. ಅದನ್ನೂ ಆಗಿನ ಕಾಂಗ್ರೆಸ್ ಸರಕಾರ ಮಾಡಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ವಿಚಾರದ ಬಗ್ಗೆ ಪ್ರಶ್ನೆ ಮಾಡಲಿಲ್ಲ. ಒಂದು ವೇಳೆ ಇದನ್ನು ಮಾಡಿದಿದ್ದಿದ್ದರೆ ಕಾಶ್ಮೀರದಲ್ಲಿ ಇದೆಲ್ಲ ದುರಂತ ಗಳು ನಡೆಯುತ್ತಲೇ ಇರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಬದಲಾಗುತ್ತಿದೆ ಕಾಶ್ಮೀರ: ಆದರೆ, ಈಗಿನ ಕಾಶ್ಮೀರದ ಚಿತ್ರಣ ಬದಲಾಗಿದೆ. ೨೦೧೯ರಲ್ಲಿ ೩೭೦ನೇ ವಿಧಿ ರದ್ದುಗೊಳಿಸಿದ ನಂತರ ವಾತಾವರಣ ತಿಳಿಯಾಗಿದೆ. ಅದಕ್ಕೂ ಮುನ್ನ ಲಾಲ್‌ಚೌಕ್‌ನಲ್ಲಿ ಭಾರತದ ತಿರಂಗ ಹರಿಸಲೂ ಅವಕಾಶ ನೀಡುತ್ತಿರಲಿಲ್ಲ. ಈಗ ಲಾಲ್ ಚೌಕ್‌ನಲ್ಲಿ ಓಡಾಡುತ್ತಿದ್ದರೆ, ಬೆಂಗಳೂರಿನ ಜಯನಗರದಲ್ಲಿ ಓಡಾಡುತ್ತಿರುವಂತೆ ಭಾಸವಾಗುತ್ತದೆ. ಆದರೆ, ಇಡೀ ಕಾಶ್ಮೀರ ಸಂಪೂರ್ಣವಗಿ ಬದಲಾಗಲು ಇನ್ನೂ ಕೆಲವು ಸಮಯ ಬೇಕಾಗುತ್ತದೆ. ಬದಲಾವಣೆ ತರಲು ಮೊದಲು ಅಲ್ಲಿನ ಯುವಕರಿಗೆ ಕೆಲಸ ಸಿಗಬೇಕು. ಪ್ರವಾಸೋದ್ಯಮದ ಬಗ್ಗೆ ಹೆಚ್ಚು ಗಮನ ನೀಡಬೇಕಿದೆ.

ಪ್ರವಾಸೋದ್ಯಮವೇ ಕಾಶ್ಮೀರದ ಜನರಿಗೆ ಮೂಲ ಆದಾಯ. ಹೀಗಾಗಿ ಈ ಎಲ್ಲ ಅಂಶಗಳ ಬಗ್ಗೆ ಗಮನಹರಿಸುವ ಮೂಲಕ ಜಮ್ಮು ಕಾಶ್ಮೀರವನ್ನು ಮತ್ತೆ ಸ್ವರ್ಗ ಮಾಡಬೇಕಾಗಿದೆ ಎಂದು ಹೇಳಿದರು. ಕೇಂದ್ರ ಸರಕಾರ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ
ವಿಶೇಷ ಸ್ಥಾನಮಾನ ರದ್ದುಗೊಳಿಸಿ ಅದನ್ನು ಮೂರು ಭಾಗವಾಗಿ ವಿಂಗಡಿಸಿದಾಗ ಬಹುತೇಕ ಎಲ್ಲ ಪಕ್ಷಗಳು, ಮುಸ್ಲಿಮ್ ಸಂಘಟನೆಗಳು ವಿರೋಧಿಸಿದ್ದವು.

ಕಾಶ್ಮೀರ ಹೊತ್ತಿ ಉರಿಯುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಈಗ ಏನಾಗಿದೆ? ಯಾರಿಂದ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ, ಜಮ್ಮು-ಕಾಶ್ಮೀರದ ಜನರಿಗೆ ಹಿಂಸೆಯಿಂದ ಮುಕ್ತಿ ಬೇಕಾಗಿತ್ತು. ಹೀಗಾಗಿ ಎತ್ತಿಕಟ್ಟುವ ಹುನ್ನಾರಗಳಿಗೆ ಅವರು ಬಲಿಯಾಗಲಿಲ್ಲ. ಹೀಗಾಗಿ ದಿನನಿತ್ಯ ನಡೆಯುತ್ತಿದ್ದ ಭಯೋತ್ಪಾದನಾ ಕೃತ್ಯಗಳಿಗೆ ತಡೆ ಬಿದ್ದಿದೆ. ಈಗ ಬೆರಳೆಣಿಕೆಯಷ್ಟು ಭಯೋತ್ಪಾದನಾ ಕೃತ್ಯಗಳು ಮಾತ್ರ ನಡೆಯುತ್ತಿವೆ. ಕ್ರಮೇಣ ಇದೂ ಇಳಿಮುಖವಾಗಲಿದೆ ಎಂದು ತಿಳಿಸಿದರು.

***
? ನೂರಾರು ವರ್ಷದಿಂದ ಜತೆಗಿದ್ದ ನೆರೆಹೊರೆಯವರಾಗಿದ್ದ ಮುಸಲ್ಮಾನರೇ ಭಯೋತ್ಪಾದಕರಿಗೆ ಪಂಡಿತರ ಬಗ್ಗೆ ಸುಳಿವು
ನೀಡಿ ಈ ದೃಷ್ಟೃತ್ಯಕ್ಕೆ ಸಹಾಯ ಮಾಡುತ್ತಿದ್ದರು.

? ಭೂಲೋಕದ ಸ್ವರ್ಗವಾಗಿದ್ದಕಾಶ್ಮೀರವನ್ನು ಹೊರಗಿನ ಪ್ರಪಂಚಕ್ಕೆ ತೆರೆದುಕೊಳ್ಳಲು ಮತೀಯ ಶಕ್ತಿಗಳು ಬಿಡಲೇ ಇಲ್ಲ. ಇದರ
ಪರಿಣಾಮ ಕಾಶ್ಮೀರ ಜನರಿಂದ ದೂರವಾಯಿತು.

? ೨೦೧೯ರಲ್ಲಿ ಜಮ್ಮುಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಲಾಯಿತು. ಅದನ್ನು ಮೊದಲೇ ಮಾಡಿದ್ದಿದ್ದರೆ ಈ ಸ್ಥಿತಿ ಬರುತ್ತಲೇ ಇರರಲಿಲ್ಲ.

? ಭಾರತ ದೇಶದಿಂದ ಅಷ್ಟೂ ಸಹಾಯ ಪಡೆದರೂ ಕಾಶ್ಮೀರದ ಬಹುತೇಕ ಮುಸ್ಲಿಮರು ಭಾರತದ ಪರ ನಿಲ್ಲಲಿಲ್ಲ. ಮತ ಬ್ಯಾಂಕ್‌ಗಾಗಿ ಅಧಿಕಾರ ನಡೆಸಿದವರೂ ಅವರ ಬೆಂಬಲಕ್ಕೆ ನಿಂತರು.

? ತಮ್ಮದೇ ಜಾಗದಲ್ಲಿ ತಾವೇ ನಿರಾಶ್ರಿತರಾಗಿ ಬದುಕುತ್ತಿರುವುದು ಕಾಶ್ಮೀರಿ ಪಂಡಿತರು ಮಾತ್ರ. ಕಾಶ್ಮೀರದಲ್ಲಿ ತೊಂದರೆಗೆ ಸಿಲುಕಿದ್ದು ಪಂಡಿತರು ಮಾತ್ರವಲ್ಲ, ಬೇರೆಯವರೂ ಇದ್ದಾರೆ.