Sunday, 15th December 2024

ಇಂಗ್ಲಿಷ್‌ ಅಗತ್ಯವೇನು ಎಂಬುದನ್ನರಿತು ಕಲಿಯಲಿ

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ – 218

‘ಇಂಗ್ಲಿಷ್ ಏಕೆ ಬೇಕು-ಎಷ್ಟು ಬೇಕು’ ಎಂಬ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರಿನ ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ.ನಾಗಣ್ಣ ಅರಿವಿನ ಉಪನ್ಯಾಸ

ಬೆಂಗಳೂರು: ಭಾಷೆ ಎಂಬುದು ಸಾಮಾಜಿಕ ಚಟುವಟಿಕೆ ಎಂಬುದು ಸತ್ಯ. ಈ ನಿಟ್ಟಿನಲ್ಲಿ ಆಂಗ್ಲ ಭಾಷೆಯನ್ನು ಜನರು ಆಸ್ಥೆಯಿಂದ ಸ್ವೀಕರಿಸಿದ್ದೇ
ಇಂಗ್ಲಿಷ್ ರಾಷ್ಟ್ರೀಯ ಭಾಷೆಯಾಗುವುದಕ್ಕೆ ಮೂಲ ಕಾರಣ.

ಇಂಗ್ಲಿಷ್ ಭಾಷೆಯ ವಿಸ್ತಾರ, ವಿಫಲತೆ, ಅದನ್ನು ಕಲಿಯುವ ಸವಾಲು, ಭಾಷೆಯ ಸಂಭ್ರಮ ಎಲ್ಲವನ್ನೂ ನೋಡಬೇಕಿದೆ. ಭಾಷೆ ಏಕೆ ಬೇಕು ಎಂದು ಕೇಳುವುದು ಸುಲಭ. ಆದರೆ, ಅದಕ್ಕೆ ಮುನ್ನ ಎಷ್ಟು ಬೇಕು ಎಂಬು ದನ್ನು ನಾವು ಅರಿಯಬೇಕಿದೆ ಎಂದು ಮೈಸೂರಿನ ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ.ನಾಗಣ್ಣ ಹೇಳಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಇಂಗ್ಲಿಷ್ ಏಕೆ ಬೇಕು- ಎಷ್ಟು ಬೇಕು’ ಎಂಬ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಅರಿವಿನ ಉಪನ್ಯಾಸ ನೀಡಿದರು. ಇಂಗ್ಲಿಷ್ ಎಷ್ಟು ಬೇಕಾಗುತ್ತದೆ ಎಂಬುದು ಅವರವರ ಅಗತ್ಯ, ಆಸಕ್ತಿ ಮತ್ತು ಅಭೀಪ್ಸೆಗೆ ಸಂಬಂಧಪಟ್ಟ ವಿಚಾರ. ಇಂಗ್ಲಿಷ್ ಇಂದಿಗೂ ಗ್ರಂಥಾಲಯ ಭಾಷೆ ಆಗಿಯೂ ಉಳಿದಿರುವುದರಿಂದ, ಗ್ರಂಥಾಲಯದ ಪುಸ್ತಕಗಳನ್ನು ಓದುವಷ್ಟು ಗಳಿಸಿಕೊಳ್ಳಬೇಕು. ಆರಂಭದ ಕಲಿಕೆಯ ಇಂಗ್ಲಿಷ್‌ನಿಂದ ಹಿಡಿದು ಬರ್ಟ್ರೆಂಡ್ ರೆಸಲ್ ಅವರ ಹಿಸ್ಟರಿ ಆಫ್ ವೆಸ್ಟರ್ನ್ ಫಿಲಾಸಫಿ ಗ್ರಂಥವನ್ನು ಅರ್ಥ ಮಾಡಿಕೊಳ್ಳುವಷ್ಟು, ಮಹರ್ಷಿ ಅರವಿಂದೋ, ಸ್ವಾಮಿ ವಿವೇಕಾನಂದರ ಕೃತಿಶ್ರೇಣಿಯನ್ನು ತಿಳಿದು ಕೊಳ್ಳುವಷ್ಟು ಇಂಗ್ಲಿಷ್ ನಮಗೆ ಬೇಕಾಗುತ್ತದೆ.

ಅದೇ ರೀತಿ ಶೇಕ್ಸ್‌ಪಿಯರ್ ನಾಟಕಗಳು ಮತ್ತು ನಾಟಕಗಳಿಗೆ ಸಂಬಂಧ ಪಟ್ಟ ವಿಮರ್ಶೆಯನ್ನ ಓದಿ ಅರ್ಥ ಮಾಡಿಕೊಳ್ಳುವಷ್ಟು ಇಂಗ್ಲಿಷ್ ಬೇಕಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಆಕಾಶದಷ್ಟು ಬೇಕಾಗುತ್ತದೆ ಎಂದು ತಿಳಿಸಿದರು.

ಇಂಗ್ಲಿಷ್ ಏಕೆ ಬೇಕು?: ೧೫೮೦ರ ಕಾಲಘಟ್ಟದಲ್ಲಿ ಇಂಗ್ಲೆಂಡ್‌ನಲ್ಲಿ ಸಾಮಾನ್ಯ ನಾವೀಕ ‘ಜಾನ್ ಮಲ್ಕಾಸ್ಟರ್’ ತನ್ನ ಇಂಗ್ಲಿಷ್ ಭಾಷೆ ಎಷ್ಟು ಚಿಕ್ಕದು ಎಂಬುದರ ಬಗ್ಗೆ ವಿಷಾಧದಿಂದ ಒಂದು ಮಾತು ಹೇಳಿದ್ದಾನೆ. ‘ನನ್ನ ಇಂಗ್ಲಿಷ್ ಭಾಷೆಯನ್ನು ಇಂಗ್ಲೆಂಡ್‌ನ ಎಲ್ಲ ದ್ವೀಪದವರೂ ಮಾತನಾಡುವುದಿಲ್ಲ. ಒಂದು ಸಣ್ಣ ಭೌಗೋಳಿಕ ಪ್ರದೇಶಕ್ಕೆ ಈ ಭಾಷೆ ಸೀಮಿತಗೊಂಡಿದೆ’ ಎಂದು ಹೇಳುತ್ತಾನೆ. ಆ ರೀತಿ ವಿಷಾದ ವ್ಯಕ್ತ ಪಡಿಸಿದ ನಂತರ ಕೇವಲ ೪೦೦ರಿಂದ ೫೦೦ ವರ್ಷದಲ್ಲಿ ಈ ಭಾಷೆ ಸಮುದ್ರದಂತೆ ವ್ಯಾಪಿಸಿದೆ. ಇದರಿಂದ ವರ್ತಮಾನದಲ್ಲಿ ಇಂಗ್ಲಿಷ್ ಭಾಷೆ ವ್ಯಾಪಿಸಿರುವ ಕ್ರಮದ ಬಗ್ಗೆ ತಿಳಿಯುತ್ತದೆ. ಇದರ ವ್ಯಾಪಕತೆ ಜಗತ್ತಿನ ಬಹುಬಾಗಗಳಲ್ಲಿ ಸಾಂಸ್ಕೃತಿಕ ಮತ್ತು ವಾಣಿಜ್ಯ ಪ್ರಭಾವಕ್ಕೆ ಕಾರಣವಾಗಿದೆ ಎಂದರು.

ಇದರ ಜತೆಗೆ ಇಂಗ್ಲಿಷ್ ಈ ಪ್ರಮಾಣದಲ್ಲಿ ನಮ್ಮನ್ನು ಸಮುದ್ರದ ಹಾಗೆ ಸುತ್ತುವರಿದಿರುವುದಕ್ಕೆ ಅಮೇರಿಕಾದ ಮಟಿರಿಯಲ್ ನಾಗರಿಕತೆ ಕೂಡ ಪ್ರಧಾನ ಕಾರಣ. ಆ ಕಾರಣದಿಂದ ಅಂತಾರಾಷ್ಟ್ರೀಯ ಭಾಷೆಯಾಗಿ ಹೊರಹೊಮ್ಮಿದೆ. ಇವತ್ತಿಗೂ ಪ್ರಚಲಿತವಿರುವ ಇತರ ಭಾಷೆಗಳಿಗೆ ಇಂಗ್ಲಿಷ್ ಪರ್ಯಾಯ ವಲ್ಲ ಎಂಬುದು ನಿಜ. ಆದರೂ ಇಂಗ್ಲಿಷ್ ಅನ್ನು ದ್ವಿತೀಯ ಭಾಷೆಯಾಗಿ ಬಳಸುವಂತಹ ವಿಶಾಲ ಪ್ರಪಂಚವಿದೆ ಎಂದು ತಿಳಿಸಿದರು.

ಬೇರೆ ಬೇರೆ ದೇಶದ ಜನರ ಸಂಪರ್ಕ ಭಾಷೆಯಾಗಿ ಇದನ್ನು ಬಳಸಬಹುದಾಗಿದೆ. ಭಾರತದಂತಹ ವಿಶಾಲ ದೇಶದಲ್ಲಿ ಬೇರೆ ಬೇರೆ ರಾಜ್ಯಗಳ ಸಂಪರ್ಕ ಬೆಳೆಸಲು ಇಂಗ್ಲಿಷ್ ಹೊರತಾಗಿ ಬೇರೆ ಭಾಷೆಯಿಲ್ಲ. ಇಂಗ್ಲಿಷ್ ಶೈಕ್ಷಣಿಕವಾಗಿ ನಮಗೆ ಪರಿಚಯವಾದಷ್ಟು ಪ್ರಮಾಣದಲ್ಲಿ ನಮ್ಮ ನೆರೆಕರೆಯ ಭಾಷೆ ಪರಿಚಯವಾಗಲಿಲ್ಲ ಎಂದು ಅಭಿಪ್ರಾಯಪಟ್ಟರು.

ಇಂಗ್ಲಿಷ್ ಭಾಷೆ ಬೇಕು ಎಂಬುದಕ್ಕೆ ಇದು ಅಂತಾರಾಷ್ಟ್ರೀಯ ಭಾಷೆಯಾಗಿ ಹೊರಹೊಮ್ಮಿರುವುದು ಮುಖ್ಯ ಕಾರಣ. ಆದರೆ, ಇತರ ಕೆಲವು ಭಾಷೆಗಳು ಅಂತಾರಾಷ್ಟ್ರೀಯ ಭಾಷೆಯ ಸ್ಥಾನ ಪಡೆಯಲು ಪೈಪೋಟಿ ನಡೆಸಿರುವುದು ಉಂಟು. ಎಸ್ ಪ್ರಾಂಟೊ, ನೋವಿಯಲ್ ಭಾಷೆ ಸೃಷ್ಟಿಯಾಯಿತು. ಪ್ರಜ್ಞಾಪೂರ್ವಕವಾಗಿ ಕಟ್ಟಲ್ಪಟ್ಟ ಭಾಷೆಗಳು ಅವು. ಒಂದು ಸಾವಯವ ಭಾಷೆ ಸಹಜವಾಗಿರುತ್ತದೆ ಮತ್ತು ನಿರಂತರ ಬದಲಾವಣೆಗೆ ಒಳಗಾಗುತ್ತಿರುತ್ತದೆ. ಬದಲಾವಣೆಗೆ ಒಳಗಾಗುವುದೇ ಅದರ ಸೌಂದರ್ಯ. ಈ ರೀತಿಯ ಕೃತಕ ಭಾಷೆಗಳನ್ನು ಹುಡುಕುವ ಬದಲು ಈಗಾಗಲೇ ಅಸ್ತಿತ್ವದಲ್ಲಿರುವ ಭಾಷೆ ಯೊಂದನ್ನು ಪರಿಗಣಿಸುವುದು ಉತ್ತಮ ಎಂದು ತಜ್ಞರು ತೀರ್ಮಾನಿಸಿದರು. ಆಗಲೇ ಇಂಗ್ಲಿಷ್ ಪ್ರಾಧಾನ್ಯತೆ ಪಡೆಯಿತು ಎಂದರು.

ಶಬ್ಧ ಬಂಡಾರ
ನಮ್ಮ ಭಾಷೆಯೊಳಗೆ ಇಂಗ್ಲಿಷ್ ಭಾಷೆಯನ್ನು ವಿಲೀನ ಮಾಡಿಕೊಂಡಿದ್ದೇವೆ. ನಮ್ಮ ದೈನಂದಿನ ಚಟುವಟಿಕೆ ಮತ್ತು ದಿನಚರಿ ಸಂಗವಾಗಿ ಅದು ಬಳಕೆ ಯಲ್ಲಿದೆ. ವೈವಿಧ್ಯಮಯ, ಭಿನ್ನ ಜಾತಿಯ ವಿಫಲವಾದ ಶಬ್ಧ ಬಂಡಾರವನ್ನು ಇಂಗ್ಲಿಷ್ ಭಾಷೆ ಹೊಂದಿದೆ. ಸುಮಾರು ೧೩ ಶತಮಾನಗಳಿಂದ ಈ ಭಾಷೆ ಬೇರೆ ಬೇರೆ ಜನರ ಸಂಪರ್ಕಕ್ಕೆ ಒಳಗಾಗಿರುವುದರಿಂದ ಬೇರೆ ಭಾಷೆಗಳ ಶಾಶ್ವತವಾದ ಮುದ್ರೆ ಬಿದ್ದಿದೆ. ಫ್ರೆಂಚ್, ರೋಮನ್, ಲ್ಯಾಟಿನ್, ಡೆನ್ಮಾರ್ಕ್, ನಾರ್ವೆ, ಇಟಲಿ, ಸ್ಪೇನ್, ಅಮೇರಿಕದ ರೆಡ್ ಇಂಡಿಯನ್ಸ್ ಮತ್ತು ಭಾರದ ಸೈನಿಕರ ಪ್ರಭಾವವಕ್ಕೂ ಈ ಭಾಷೆ ಒಳಗಾಗಿದೆ ಎಂದರು. ನಮ್ಮ ಭಾಷೆಯನ್ನು ನಿರಂತರವಾಗಿ ಪೋಷಿಸಿ, ಪಾಲಿಸಿ ಅಭಿವೃದ್ಧಿಗೊಳಿಸುವುದರ ಜತೆಗೆ ಇಂಗ್ಲಿಷ್ ಭಾಷೆಯನ್ನು ರೂಡಿಸಿಕೊಳ್ಳಬೇಕು. ಈ ಜೋಡಿ ಜವಾಬ್ದಾರಿಯನ್ನು ಹೊರಲು ನಾವು ಸಿದ್ಧರಾಗಬೇಕಾಗುತ್ತದೆ. ಇದನ್ನು ಬಿಟ್ಟು ಬೇರೆ ಗತ್ಯಂತರವಿಲ್ಲ ಎಂದರು.

ಸಂಸ್ಕೃತ ಸದೃಢ ಭಾಷೆ
ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತ ಭಾಷೆಯನ್ನು ಯಾರೂ ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಸಂಸ್ಕೃತದ ಪ್ರಭಾವವನ್ನು ನಾವು ತಿಳಿದು ಕೊಳ್ಳಬೇಕಾಗಿದೆ. ಬರ್ಲಿನ್ ಮತ್ತು ಜರ್ಮನ್ ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತ ಭಾಷೆ ಸದೃಢವಾಗಿದೆ. ಅದು ಎಲ್ಲ ಭಾಷೆಗಳಿಗೂ ತಾಯಿ. ಅಷ್ಟು ಸುಲಭವಾಗಿ ಅದನ್ನು ಡೆಡ್ ಲ್ಯಾಂಗ್ವೇಜ್ ಎಂದು ಪರಿಗಣಿಸ ಬಾರದು. ವೈವಿಧ್ಯಮಯವಾಗಿ, ವಿಫಲವಾಗಿ ಬೆಳೆಯಲು ತುಂಬಾ ಅರ್ಥಚಾಯೆ ಉಳ್ಳ ಶಬ್ದ ಭಂಡಾರ ಸಂಸ್ಕೃತದಲ್ಲಿರುವುದರಿಂದಲೇ ಅದರ ಶ್ರೀಮಂತಿಕೆ ಹೆಚ್ಚಿದೆ.

ವಿಸ್ತೀರ್ಣ ಮತ್ತು ಸಂಕೀರ್ಣ ಶಬ್ಧಕೋಶ ಇಂಗ್ಲಿಷ್ ಭಾಷೆಯನ್ನು ವಿಶ್ವ ಭಾಷೆಯಾಗಿ ಪರಿಗಣಿಸುವಲ್ಲಿ ಸಮಸ್ಯೆ ತಂದೊಡ್ಡಿದೆ. ಅದರ ಕಾಗು ಣಿತಕ್ಕೂ,
ಉಚ್ಛಾರಣೆಗೂ ಇರುವ ವ್ಯತ್ಯಾಸ ಇದಕ್ಕೆ ಕಾರಣ. ಬೇರೆ ಭಾಷೆಗಳು ಸ್ಪರ್ಧೆ, ಪೈಪೋಟಿಗೆ ಇಳಿದು ಪರಾಭವವನ್ನು ಒಪ್ಪಿದ್ದರಿಂದ ಇಂಗ್ಲಿಷ್ ವಿಶ್ವ ಮಾಧ್ಯಮವಾಗಿದೆ.

***

ಬೇಸಿಕ್ ಇಂಗ್ಲಿಷ್‌ನಲ್ಲಿರುವುದು ೮೫೦ ಪದ ಮಾತ್ರ

೨ನೇ ಮಹಾಯುದ್ಧದಲ್ಲಿ ಬ್ರಿಟಿಷ್ ಸರಕಾರದಿಂದ ಬೇಸಿಕ್ ಇಂಗ್ಲಿಷ ಅಧಿಕೃತ ಭಾಷೆಯಾಗಿ ಪರಿಗಣನೆ

ಇಂಗ್ಲೆಂಡ್‌ನಲ್ಲಿ ಇದೇ ‘ಪರ್ಫೆಕ್ಟ್ ಇಂಗ್ಲಿಷ್’ ಎಂದು ಹೇಳಲಾಗಿಲ್ಲ

ಪ್ರಪಂಚದಲ್ಲಿ ಇಬ್ಬರು ವ್ಯಕ್ತಿಗಳು ಒಂದೇ ರೀತಿ ಈ ಭಾಷೆ ಉಚ್ಛರಿಸಲು ಸಾಧ್ಯವಿಲ್ಲ

ಇಂಗ್ಲಿಷ್ ಬಲಿಪೀಠದಲ್ಲಿ ನಮ್ಮ ಭಾಷೆಯನ್ನು ನಾವು ಬಲಿಕೊಡಲು ಸಾಧ್ಯವೇ ಇಲ್ಲ

ಇಂಗ್ಲಿಷಿನೊಂದಿಗೆ ಸಮತೋಲನ ಮಾಡಿಕೊಂಡು ಪೈಪೋಟಿಯಲ್ಲಿ ಹೋಗಬೇಕಿ‌ದ್ದೆ.

***

ಇಂಗ್ಲಿಷ್ ದೈನಂದಿನ ಚಟುವಟಿಕೆಯಲ್ಲಿ ಅನಿವಾರ್ಯವಾಗಿದೆ. ಈ ಭಾಷಾ ಪ್ರಯೋಗವಿಲ್ಲದೆ ಮಾತುಕತೆ ಆಗುವುದಿಲ್ಲ ಎಂಬಂತಾಗಿದೆ. ಆದರೆ, ಇಂಗ್ಲಿಷ್ ಮಾತನಾಡದ ದೇಶಗಳನ್ನೂ ನೋಡಬೇಕು. ಬ್ರಿಟನ್‌ನಲ್ಲಿ ಇಂಗ್ಲಿಷ್ ಹುಟ್ಟಿತಾದರೂ ಪಕ್ಕದ ವೇಲ್ಸ್‌ನಲ್ಲಿ ಇಂಗ್ಲಿಷ್ ಮಾತನಾಡುವುದಿಲ್ಲ. ಸ್ಕಾಟ್‌ಲ್ಯಾಂಡ್‌ನಲ್ಲಿ ಸ್ಕಾಟಿಷ್ ಭಾಷೆ ಬಳಸುತ್ತಾರೆ. ಪ್ಯಾರಿಸ್‌ನಲ್ಲಿ ಫ್ರೆಂಚ್ ಇದೆ. ಚೀನಾದಲ್ಲಿ ಇಂಗ್ಲಿಷ್ ಮಾತನಾಡುವುದಿಲ್ಲ. ಇಂಗ್ಲಿಷ್ ಭಾಷೆ ಭಾರತದಲ್ಲಿ ಅನಿವಾರ್ಯಾವಾದರೂ ಜಾಗತಿಕ ಮಟ್ಟದಲ್ಲಿ ಅನಿವಾರ್ಯವಲ್ಲ. ಜರ್ಮನಿ, ಸ್ಪೈನ್‌ನಲ್ಲಿ ಇಂಗ್ಲಿಷ್ ದಾಳಿ ಮಾಡಲು ಬಿಟ್ಟಿಲ್ಲ. ಯೂರೋಪ್ ದೇಶಗಳಲ್ಲಿ ಇಂಗ್ಲಿಷ್ ಬಳಸುವುದಿಲ್ಲ. ಭಾರತದಲ್ಲಿ ನಾವು ಈ ಭಾಷೆಯನ್ನು ಒಪ್ಪಿ, ಅಪ್ಪಿಕೊಂಡಿದ್ದೇವೆ
-ವಿಶ್ವೇಶ್ವರ ಭಟ್
ಪ್ರಧಾನ ಸಂಪಾದಕರು, ವಿಶ್ವವಾಣಿ ದಿನಪತ್ರಿಕೆ