Saturday, 14th December 2024

ಇನ್ನೂ ಬೇಟಿ ಪಢಾವೋ ಎನ್ನುವ ಸ್ಥಿತಿ ಇರುವುದು ಶೋಚನೀಯ

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ- 189

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ರಾಜ್ಯದ ಮೊದಲ ಐಪಿಎಸ್ ಅಧಿಕಾರಿ ಡಿ.ರೂಪಾ ಭಾಗಿ

ಬೆಂಗಳೂರು: ಸಮಾಜ ಎಷ್ಟೊಂದು ಮುಂದುವರಿದಿದೆ. ಶೈಕ್ಷಣಿಕ, ಆಡಳಿತ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲು ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸಾಧನೆ ಮಾಡುತ್ತಿದ್ದಾರೆ. ಹೀಗಿದ್ದರೂ ಇನ್ನೂ ಭೇಟಿ ಬಚಾವೋ, ಭೇಟಿ ಪಡಾವೋ ಅಂತಹ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದು ಶೋಚನೀಯ. ಸಮಾಜದಲ್ಲಿ ಹೆಣ್ಣು ಮಕ್ಕಳು ಸಮನಾಗಿ ಬದುಕಬೇಕಾದರೆ ಸರಕಾರದ ಯೋಜನೆಗಳಿಗಿಂತ ಜನರ ಭಾವನೆಗಳು ಮುಖ್ಯವಾಗುತ್ತದೆ. ಅಂತಹ
ವಾತಾವರಣ ಮೂಡಿಸುವ ಕೆಲಸ ಆಗಬೇಕು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ವಿಶ್ವವಾಣಿ ಕ್ಲಬ್ ಹೌಸ್ ಏರ್ಪಡಿಸಿದ್ದ ಸಂವಾದದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದ ಐಪಿಎಸ್ ಅಧಿಕಾರಿ ಡಿ.ರೂಪಾ ಹೆಣ್ಣು ಮಕ್ಕಳ ಕುರಿತು ಮಾತನಾಡಿದ್ದು ಹೀಗೆ. ತಾಯಿ, ಹೆಂಡತಿ, ತಂಗಿ, ಅಕ್ಕ, ಮಗಳು ಹೀಗೆ ಯಾವುದಾದರೂ ಒಂದು ರೀತಿಯಲ್ಲಿ ಮನೆಯಲ್ಲಿ ಹೆಣ್ಣು ಮಕ್ಕಳಿರುತ್ತಾರೆ. ಆದರೆ ಹೆಚ್ಚು ಮನೆಗಳಲ್ಲಿ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎಂಬ ಭಾವನೆ ಹೊಂದಿರು ತ್ತಾರೆ. ಈ ಮನಸ್ಥಿತಿಯಿಂದಾಗಿ ಹೆಣ್ಣು ಮಕ್ಕಳಲ್ಲಿ ಇರುವ ಆಸೆ, ಆಕಾಂಕ್ಷೆ ಮತ್ತು ಪ್ರತಿಭೆಗಳು ಅವರ ನಾಶವಾಗಿಹೋಗುತ್ತದೆ.

ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹೆಣ್ಣು ಮಕ್ಕಳಿಗೆ ಹತ್ತು ಹಲವು ನಿಬಂಧನೆಗಳನ್ನು ಹೇರಲಾಗುತ್ತದೆ. ಇದರಿಂದ ಹೆಣ್ಣು ಮಕ್ಕಳ ಸ್ವಾಭಿಮಾನಕ್ಕೆ ಘಾಸಿ ಮಾಡಿದಂತ್ತಾಗುತ್ತದೆ. ಹೀಗಾಗಿ ಕಾಲ ಬದಲಾದಂತೆ ನಾವು ಕೂಡ ಬದಲಾಗ ಬೇಕು. ಇನ್ನೂ ಹಳೇ ಕಾಲದ ಪದ್ಧತಿಗೆ ಜೋತು ಬಿದ್ದಿರುವುದು ಎಷ್ಟು ಸರಿ?ಎಷ್ಟೇ ವಿದ್ಯಾವಂತರಾದರು ನಾವು ಬದಲಾಗುತ್ತಿಲ್ಲ.

ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚಾರಕ್ಕೂ ವ್ಯತ್ಯಾಸ ತಿಳಿಯಬೇಕು: ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ನೀಡಬೇಕು. ತಮಗೆ ಬೇಕಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವು ದರಿಂದ ಹಿಡಿದು ತಮಗೆ ಉತ್ತಮ ಜೀವನ ನಡೆಸಲು ಏನೆಲ್ಲಾ ಬೇಕೋ ಅಲ್ಲವನ್ನೂ ಸ್ವತಂತ್ರವಾಗಿ ಪಡೆದುಕೊಳ್ಳುವಂತಾಗಬೇಕು. ಶಿಕ್ಷಣ, ಉದ್ಯೋದಿಂದ ಹಿಡಿದು ಎಲ್ಲ ವಿಚಾರಗಳಲ್ಲೂ ಅವರಿಗೆ ಸ್ವಾತಂತ್ರ್ಯ ಬೇಕು ಮತ್ತು ನೀಡಬೇಕು. ಆದರೆ ಯಾವತ್ತೂ ಆ ಸ್ವಾತಂತ್ರ್ಯ ಸ್ವೇಚ್ಛಾಚಾರ ಆಗಬಾರದು. ಅದಕ್ಕಾಗಿ ಹೆಣ್ಣು ಮಕ್ಕಳು ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚಾರಕ್ಕೂ ಮಧ್ಯೆ ಇರುವ ವ್ಯತ್ಯಾಸ ತಿಳಿದುಕೊಳ್ಳಬೇಕು. ಆಗ ಮಾತ್ರ ಹೆಣ್ಣು ಮಕ್ಕಳು ನಿಜವಾಗಿಯೂ ಸ್ವತಂತ್ರರಾಗಿ ಇರಲು ಸಾಧ್ಯವಾಗುತ್ತದೆ.

ಮೊದಲೆಲ್ಲಾ ಹೆಣ್ಣು ಮಕ್ಕಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಲು ಭಯ ಬೀಳುತ್ತಿದ್ದರು. ಆದರೆ, ಈಗಿನ ಸಮಾಜದಲ್ಲಿ ಅವರಿಂದಲೂ ಸಾಕಷ್ಟು ಅಪರಾಧ
ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಹೆಣ್ಣು ಮಕ್ಕಳಲ್ಲಿರುವ ಕ್ರಿಯಾಶೀಲತೆಯ ಕೊರತೆ ಮುಖ್ಯ ಕಾರಣ. ಮಹಿಳೆಯರು ಸಾಧ್ಯವಾದಷ್ಟು ತಮ್ಮನ್ನು ಯಾವುದಾದ ರೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸದಾ ಚಟುವಟಿಕೆಯಿಂದಿರಬೇಕು. ಇಲ್ಲವಾದಲ್ಲಿ ತಲೆಗೆ ನೂರಾರು ಋಣಾತ್ಮಕ ಚಿಂತನೆಗಳು ಹುಟ್ಟುತ್ತವೆ. ತಲೆಯಲ್ಲಿ ಏನೇನೋ ಅಲೋಚನೆಗಳು ಬರುತ್ತವೆ. ಇದು ಕೆಲವೊಮ್ಮೆ ಅಪರಾಧ ಕೃತ್ಯಗಳಿಗೂ ಕಾರಣವಾಗುತ್ತದೆ.

ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಹೆಚ್ಚು ಚಿಂತಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಶ್ರೋತೃಗಳೊಂದಿಗೂ ಸಂವಾದ ನಡೆಸಿದ ಡಿ. ರೂಪಾ, ಅವರ ಪ್ರಶ್ನೆ, ಸಂಶಯಗಳಿಗೆ ಸ್ಪಂದಿಸಿದರು, ಉತ್ತರವನ್ನೂ ನೀಡಿದರು. ಸಮಾಜದಲ್ಲಿ ಹೆಣ್ಣು ಮಕ್ಕಳು ಯಾವ ರೀತಿ ನಡೆದುಕೊಳ್ಳಬೇಕು. ಹೆಣ್ಣು ಮಕ್ಕಳೊಂದಿಗೆ ಪುರುಷರು ಯಾವ ರೀತಿ ವ್ಯವಹರಿಸಬೇಕು ಎಂಬಿತ್ಯಾದಿ ವಿಚಾರಗಳನ್ನು ಹಂಚಿಕೊಂಡರು.

ರೂಪಾ ಮತ್ತೇನು ಹೇಳಿದರು?

? ಹೊರಗಿನ ಪ್ರಪಂಚದಲ್ಲಿ ಹೆಣ್ಣುಮಕ್ಕಳು ದೈಹಿಕಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ ಬಳಲುತ್ತಿದ್ದಾರೆ. ಉನ್ನತ ಹುದ್ದೆಗಳಲ್ಲಿ ಹೆಣ್ಣು ಮಕ್ಕಳಿಗೆ ಅವಕಾಶ ನೀಡಬೇಕು.
? ಹೆಣ್ಣಿಗೂ ಆಸೆ, ಆಕಾಂಕ್ಷೆ ಇರುತ್ತದೆ, ಅದಕ್ಕೆ ಬೆಲೆ ಕೊಡದಿದ್ದರೆ ಆಕೆಗೆ ಅನ್ಯಾಯ ಮಾಡಿದಂತಾಗುತ್ತದೆ.
? ಸಂದಿಗ್ಧ ಪರಿಸ್ಥಿತಿಗೆ ತಮ್ಮನ್ನು ಒಡ್ಡಿಕೊಳ್ಳದೆ ತಮಗೆ ಬೇಕಾದ್ದನ್ನು ಸಾಽಸುವುದು ಸ್ವಾತಂತ್ರ್ಯ. ಪರಿಸ್ಥಿತಿಯನ್ನು ಮೀರಿದರೆ ಅದು ಸ್ವೇಚ್ಛಾಚಾರ. ಆಗ ಹೆಣ್ಣುಮಕ್ಕಳು ತೊಂದರೆಗೆ ಒಳಗಾಗುತ್ತಾರೆ.
? ಹೆಣ್ಣು ಮಕ್ಕಳ ಪಾಲಿಗೆ ಬಡತನ ಬಾಧೆಯಲ್ಲ, ಅದೊಂದು ಪ್ರೇರಣಾ ಶಕ್ತಿ. ಜೀವನದಲ್ಲಿ ಸಾಧಿಸಲು ಹುರುದುಂಬಿಸುತ್ತದೆ. ಬಡತನದಿಂದ ಬಂದ ಮಕಳಲ್ಲಿ ಸಾಽಸುವ ಕಿಚ್ಚು ಹೆಚ್ಚು.

ಡಿ. ರೂಪಾ ಅವರ ಬಗ್ಗೆ 
? ಪ್ರಪ್ರಥಮ ಕನ್ನಡ ಮಹಿಳಾ ಐಪಿಎಸ್ ಅಧಿಕಾರಿ

? ರಾಜ್ಯದ ಪ್ರಥಮ ಮಹಿಳಾ ಗೃಹ ಕಾರ್ಯದರ್ಶಿ
? ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ
? ನಿರ್ಭಯ ಟೆಂಡರ್ ವಿಚಾರವಾಗಿ ದನಿ ಎತ್ತಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ೫೦೦ ಕೋಟಿ ರೂ ಉಳಿತಾಯ.
? ೨೦೦೦ನೇ ಇಸವಿಯಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ ೪೩ನೇ ರ‍್ಯಾಂಕ್ ಪಡೆದು ತೇರ್ಗಡೆ.
? ಧಾರವಾಡ, ಬೀದರ್,ಗದಗ್, ಯಾದಗಿರಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ
? ೨೦೦೭ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಉಮಾಭಾರತಿ ಅವರನ್ನು ಬಂಧಿಸುವ ಧೈರ್ಯ
? ಅರ್ಹ ಸೇವೆಗೆ ನೀಡಲಾಗುವ ರಾಷ್ಟಪತಿ ಪದಕ

ಮಾಧ್ಯಮದಲ್ಲಿ ಹೆಣ್ಣು ಬಹುಸಂಖ್ಯಾತಳು 
ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಗೌರವ ಮತ್ತು ಅವಕಾಶ ಸಿಗಬೇಕು ಎಂಬ ನಿಟ್ಟಿನಲ್ಲಿ ಶತಮಾನಗಳಿಂದಲೂ ಪ್ರಯತ್ನ ನಡೆಯುತ್ತಿದೆ. ಅನೇಕ ದಶಕಗಳ ಹೋರಾಟದ ಫಲವಾಗಿ ಮಹಿಳೆಯರಿಗೆ ಸಮಾನ ಹಕ್ಕು ನೀಡಲಾಯಿತು. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಪ್ರತಿ ವರ್ಷ ಅ.೧೧ರಂದು ಅಂತಾರಾಷ್ಟ್ರೀಯ ಹೆಣ್ಣು
ಮಗುವಿನ ದಿನ ಆಚರಿಸುತ್ತದೆ. ಭಾರತದಲ್ಲಿ ಈ ಕುರಿತು ಹೆಚ್ಚು ಜಗೃತಿ ಮೂಡಿಸಲು ಜ.೨೪ರಂದು ರಾಷ್ಟ್ರೀಯ ಹೆಣ್ಣು ಮಗುವಿನ ದಿನವಾಗಿ ಆಚರಿಸಲಾಗುತ್ತದೆ. ೧೯೭೦ರ ದಶಕದಲ್ಲಿ ಸುದ್ದಿಮನೆಗಳಲ್ಲಿ (ಪತ್ರಿಕಾ ಮಾಧ್ಯಮ) ಹೆಣ್ಣುಮಕ್ಕಳಿಗೆ ಅವಕಾಶ ನೀಡುತ್ತಿರಲಿಲ್ಲ. ರಾತ್ರಿ ವೇಳೆ ಹೆಣ್ಣು ಮಕ್ಕಳು ಕೆಲಸ ಮಾಡುವುದು ಕಷ್ಟ, ಅವರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿತ್ತು.

ಆದರೆ, ಇಂದು ದೃಶ್ಯ ಮಾಧ್ಯಮದಲ್ಲಿ ಪುರುಷರೇ ಅಲ್ಪಸಂಖ್ಯಾತರಾಗಿದ್ದು. ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನು ಡಿ. ರೂಪಾ ಅವರ ಬಗ್ಗೆ ಹೇಳುವುದಾದರೆ ಅವರಿಗೆ ಯಾವುದೇ ಹುದ್ದೆ, ಜವಾಬ್ದಾರಿ ನೀಡಿದರೂ, ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಾರೆ ಎಂದು ವಿಶ್ವವಾಣಿ ದಿನಪತ್ರಿಕೆ ಪ್ರಧಾನ
ಸಂಪಾದಕರಾದ ವಿಶ್ವೇಶ್ವರ ಭಟ್ ಹೇಳಿದರು.