Thursday, 12th December 2024

ವರ್ಣನಾತೀತ ಗಾಯಕ ಸ್ವರ ಭಾಸ್ಕರ ಪಂಡಿತ್‌ ಭೀಮಸೇನ್‌ ಜೋಶಿ

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ ೨೦೭

ಪಂಡಿತ್ ಭೀಮಸೇನ್ ಜೋಶಿ ಎಂದರೆ ನೆನಪಿಗೆ ಬರುವುದು ಹಿಂದೂಸ್ತಾನಿ ಸಂಗೀತ. ಈ ಸಂಗೀತ ಪ್ರಾಕಾರಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದು ಕೊಟ್ಟ ಸಂಗೀತ ಮಾತ್ರಿಕ. ಭಾರತರತ್ನ ಪುರಸ್ಕೃತರಾದ ಪಂಡಿತ್ ಭೀಮಸೇನ್ ಜೋಶಿಯವರ ಭಾಗ್ಯದ ಲಕ್ಷ್ಮೀ ಬಾರಮ್ಮ ಗೀತೆಯಿಂದಲೇ  ಸೂರ್ಯೋ ದಯವನ್ನು ಸ್ವಾಗತಿಸುವ ಅದೆಷ್ಟು ಮಂದಿ ಇಲ್ಲ ಹೇಳಿ.

ಪಂಡಿತ್ ಭೀಮಸೇನ್ ಜೋಶಿ, ಬಸವರಾಜ ರಾಜ್‌ಗುರು, ಮಲ್ಲಿಕಾರ್ಜುನ ಮನ್ಸೂರ್, ಗಂಗುಬಾಯಿ ಹಾನಗಲ್ ಹಿಂದುಸ್ಥಾನಿ ಸಂಗೀತದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದ ಕರ್ನಾಟಕದ ಪಂಚರತ್ನಗಳು. ಇಂತಹ ಮಹಾನ್ ಸಂಗೀತ ಸಾದಿಗ್ಗಜರನ್ನು ವಿಶ್ವಕ್ಕೆ ನೀಡಿದ ಶ್ರೇಷ್ಠತೆ ಕನ್ನಡ ನಾಡಿನದ್ದು.

ಪಂಡಿತ್ ಭೀಮಸೇನ್ ಜೋಶಿ ಅವರ ಜನ್ಮದಿನದ ಅಂಗವಾಗಿ ಶುಕ್ರವಾರ ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ಸಂಗೀತ ಸಾಮ್ರಾಟ ಭೀಮಸೇನನಿಗೆ ಶತನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪಂಡಿತ್ ಹಾಸಣಗಿ ಗಣಪತಿ ಭಟ್, ಭೀಮಸೇನ್ ಜೋಶಿ ಅವರೊಂದಿಗಿನ ತಮ್ಮ ಒಡನಾಟವನ್ನು ಹಂಚಿ ಕೊಂಡರು. ಕುಂದಗೋಳದಲ್ಲಿ ನಡೆಯುವ ಸವಾಯಿ ಗಂಧರ್ವರ ಪುಣ್ಯತಿಥಿಯಂದು ದೇಶದ ಮೂಲೆ ಮೂಲೆಯಿಂದ ವಿವಿಧ ಸಂಗೀತಗಾರರು ಯಾವುದೇ ಅಪೇಕ್ಷೆ ಇಲ್ಲದೆ ಬಂದು ತಮ್ಮ ಗಾನ ಸುಧೆಯನ್ನು ಹರೆಸು ತ್ತಾರೆ. ನನ್ನ ಗುರುಗಳಾದ ಬಸವರಾಜ ರಾಜಗುರು ಅವರು ನನ್ನನ್ನೂ ಆ ಕಾರ್ಯಕ್ರಮಕ್ಕೆ ತೆರಳುವಂತೆ ತಿಳಿಸಿದ್ದರು.

ಅಲ್ಲಿ ಬೇರೆ ಬೇರೆ ರೀತಿಯ, ತರಹೇವಾರು ಸಂಗೀತಗಾರರು ಬಂದಿದ್ದರು. ಭೀಮಸೇನ ಜೋಶಿಕೂಡ ಅಲ್ಲಿದ್ದರು. ಆಗಿನ ಕಾಲದಲ್ಲೇ ಪ್ರಸಿದ್ಧಿ ಪಡೆದಿದ್ದ ಅವರನ್ನು ನೋಡಲು ಜನಸಮೂಹವೇ ಸೇರಿತ್ತು. ಒಳಗೆ ಪ್ರವೇಶ ಸಿಗದಿ ದ್ದರೂ ದೂರದಲ್ಲೇ ಕುಳಿತು ಸಂಗೀತ ಕೇಳುವ ಅವಕಾಶ ದೊರೆಯಿತು. ಅವರ ಸಂಗೀತ ಕೇಳಿದ ಮೇಲೆ ವಾರಗಟ್ಟಲೆ, ತಿಂಗಳಾನುಗಟ್ಟಲೆ, ವರ್ಷಗಟ್ಟಲೆ ಎನ್ನುವಹಾಗೆ ಅದರ ಗುಂಗಿನಿಂದ ಹೊರಬರಲು ಆಗಲಿಲ್ಲ. ಅದು ಅವರ ಸಂಗೀತದ ವಿಶೇಷತೆ. ಯಾರಿಗೆ ಸಂಗೀತ, ಸಂಗೀತ ಶಾಸ ತಿಳಿಯುತ್ತದೆ, ಯಾರಿಗೆ ತಿಳಿಯುವುದಿಲ್ಲ ಈ ಎರಡೂ ವರ್ಗದ ಜನರಿಗೆ ತಿಳಿಯುವಂತೆ, ಅವರ ಹೃದಯಕ್ಕೆ ಮುಟ್ಟುವಂತಹದ್ದೇ ನಿಜವಾದ ಸಂಗೀತ ಎಂದು ಸ್ವತಃ ಭೀಮಸೇನ ಜೋಶಿ ಅವರೇ ಹೇಳುತ್ತಿದ್ದರು.

ಅಂತಹ ಸಂಗೀತವನ್ನ ಅವರು ಸಾಧಿಸಿಕೊಂಡಿದ್ದರು. ಅವರ ಅಭ್ಯಾಸ ಕ್ರಮ ನೋಡುವುದಾದರೆ, ದಿನದಲ್ಲಿ ಹದಿನೈದರಿಂದ ಹದಿನಾರು ಗಂಟೆ ಅಭ್ಯಾಸ
ಮಾಡುತ್ತಿದ್ದರಂತೆ. ಒಂದು ತಂಬೂರಿಯನ್ನು ಸದಾ ಇಟ್ಟುಕೊಂಡು, ಎಚ್ಚರವಾದಾಗ ತಂಬೂರಿ ಮೀಟುವುದು ಹಾಡುವುದು ಇದೇ ಅವರ ಕೆಲಸ ವಾಗಿತ್ತು. ತಪಸ್ಸಿನ ರೀತಿಯಲ್ಲಿ ಅಭ್ಯಾಸ ಮಾಡಿದಂತಹ ಕಲಾವಿದರು ಎಂದು ತಿಳಿಸಿದರು.

ಅವರ ಧ್ವನಿ ಅಭ್ಯಾಸದಿಂದ ಪುಷ್ಠಿಗೊಂಡಂತಹದ್ದು. ಅನ್ಯರಿಗೆ ತಲುಪುವಂತೆ ನೋಡಿಕೊಂಡರು. ಅವರು ಸಾದಾರಣವಾಗಿ ಒಂದು ಹಾಡು ಹಾಡಿದರೂ ಜನರಿಗೆ ತಲುಪುತ್ತದೆ. ಆದ್ದರಿಂದ ಅವರು ಈ ದೇಶದಲ್ಲಿ ಹಿಂದೆ ಕಾಣದ, ಮುಂದೆ ಕಾಣಲು ಸಾಧ್ಯವಿಲ್ಲದ ಸ್ಥಿತಿಯನ್ನು ತಲುಪಿದರು. ಸ್ವರಭಾಸ್ಕರ ಎಂದು ಕರೆಸಿಕೊಂಡ ಭೀಮಸೇನ್‌ಜೋಷಿ ಅವರ ಗಾಯನವನ್ನು ವರ್ಣನೆ ಮಾಡಲು ಸಾಧ್ಯವಿಲ್ಲ. ಸಂಗೀತವನ್ನು ಚೆನ್ನಾಗಿತ್ತು ಎಂದು ಹೇಳಬಹುದೇ ಹೊರತು, ಹೇಗೆ ಚೆನ್ನಾಗಿತ್ತು ಎಂದು ಹೇಳಲು ಸಾಧ್ಯವಿಲ್ಲ. ಇವರ ಹಾಡು ಕೂಡ ಅನುಭವಕ್ಕೆ ವೇದ್ಯವಾದಂತಹದ್ದು. ನೇರವಾಗಿ ಹೃದಯವನ್ನೇ
ಜಾಲಾಡಿಸಿಬಿಡುತ್ತದೆ. ಮನಸ್ಸಿಗೆ ಮರೆವು ನೀಡುವಂತ ಸಂಗೀತ ಅವರದ್ದು.

***

ಭೀಮಸೇನ್ ಜೋಶಿ ಸರಳ ಮತ್ತು ಧೀಮಂತ ವ್ಯಕ್ತಿತ್ವ ಉಳ್ಳವರು. ಅವರ ಸಂಗೀತ ಪಯಣವನ್ನು ಅವಲೋಕಿಸಿದರೆ ಅವರ ಶ್ರೇಷ್ಠತೆ ತಿಳಿಯುತ್ತದೆ. ಅವರು ಭಾರತಕ್ಕೆ ಒದಗಿಬಂದ ನಿಜ ವಾದ ಭಾರತ ರತ್ನ ಎಂದು ತಿಳಿದುಬರುತ್ತದೆ.

– ನಂಜನಗೂಡು ಮೋಹನ್, ಸಂಪಾದಕೀಯ ಸಲಹೆಗಾರರು, ವಿಶ್ವವಾಣಿ ದಿನಪತ್ರಿಕೆ

ಧಾರವಾಡದಲ್ಲಿ ಬೇಂದ್ರೆ ಅವರ ಬಳಿ ಒಬ್ಬರು ಹೇಳಿದ್ದರಂತೆ, ಆಗೊಬ್ಬನಿದ್ದ ಥಾನ್‌ಸೇನ ಎಂದು. ಆಗ ಬೇಂದ್ರೆಯವರು ಹೇಳಿದ್ದರಂತೆ ಈಗಿದ್ದಾನಲ್ಲ ಭೀಮಸೇನ ಎಂದು. ಹುಟ್ಟಿದ್ದು ಕನ್ನಡ ನಾಡಿನಲ್ಲಿ. ಕಾರ್ಯಕ್ಷೇತ್ರ ಮಹಾರಾಷ್ಟ್ರ, ಗುರುವನ್ನರಸಿ ಸುತ್ತಿದ್ದು ಉತ್ತರಭಾರತ. ಸಂಗೀತ ಸುಧೆ ಹರಿಸಿದ್ದು
ದೇಶ-ವಿದೇಶಗಳಲ್ಲಿ. ಹಿಂದುಸ್ತಾನಿ ಸಂಗೀತ ಪ್ರಪಂಚದಲ್ಲಿ ಘರಾಣಗಳ ಸಮನ್ವಯದ ವಿಸ್ಮಯಗಳನ್ನ ಅನುಭವಿಸಲು ಪಂಡಿತ್ ಭೀಮಸೇನ ಜೋಶಿ ಅವರನ್ನು ಆಲಿಸಬೇಕು. ಕಿರಾಣ ಘರಾಣದ ಮಾಹಾನ್ ಸಾಧಕ, ಸವಾಯಿ ಗಂಧರ್ವರ ಹೆಮ್ಮೆಯ ಶಿಷ್ಯನನ್ನು ಕರ್ನಾಟಕ ಮತ್ತು ಮಹರಾಷ್ಟ್ರ ಎರಡೂ ರಾಜ್ಯಗಳು ತಮ್ಮದೇ ವರಪುತ್ರ ಎಂದು ಅಂಗೀಕರಿಸಿ ಆಲಂಗಿಸಿಕೊಂಡಿದೆ. ಕನ್ನಡಿಗರಾದಂತಹ ಸರ್.ಎಂ.ವಿಶ್ವೇಶ್ವರಯ್ಯ ಅವರಿಗೆ ಭಾರತ ರತ್ನ ಪ್ರಶಸ್ತಿ ಪಡೆದ ನಂತರ ೫೩ ವರ್ಷಗಳ ತನಕ ಯಾರಿಗೂ ಭಾರತರತ್ನ ದೊರಕಿರಲಿಲ್ಲ. ನಂತರ ಭೀಮಸೇನ ಜೋಷಿ ಅವರು ಭಾಜನರಾದವರು. ರಥಸಪ್ತಮಿ
ಸೂರ್ಯ ಪಥ ಬದಲಿಸುವ ದಿನ ಜನಿಸಿ ಹಿಂದುಸ್ಥಾನಿ ಸಂಗೀತದ ಪಥವನ್ನೇ ಬದಲಿಸಿದರು.

ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕರು, ವಿಶ್ವವಾಣಿ ದಿನಪತ್ರಿಕೆ

***

ಶಿವರಾಮ ಕಾರಂತರು ಮತ್ತು ಭೀಮಸೇನ ಜೋಶಿ ಇಬ್ಬರು ಮೊದಲ ಬಾರಿಗೆ ಒಂದೇ ವೇದಿಕೆ ಹಂಚಿಕೊಂಡದ್ದು ನಮ್ಮ ಕಾರ್ಯಕ್ರಮದಲ್ಲಿ.

ಭೀಮಸೇನ ಜೋಶಿ ಅವರು ಎಲ್ಲೇ ಹೋಗಲಿ, ಗುಂಪನ್ನು ಆಕರ್ಷಿಸುವ ಶಕ್ತಿ ಹೊಂದಿ ದ್ದರು. ಸಂಗೀತ ಕಲಾವಿದರಿಗೆ ಅದು ಸುಲಭ ಸಾಧ್ಯವಲ್ಲ.