Friday, 22nd November 2024

ಬಿಟ್ ಕಾಯಿನ್ ಬೇಡಿಕೆ ಹೆಚ್ಚಾದಂತೆ ಬೆಲೆ ಹೆಚ್ಚು

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ – 134

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸೈಬರ್ ಪರಿಣಿತ ಡಾ.ಅನಂತ ಪ್ರಭು

ಕ್ರಿಪ್ಟೋ ಕರೆನ್ಸಿಗಳ ಪೈಕಿ ಮೊದಲನೆಯದು ಇದು

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಟ್ ಕಾಯಿನ್ ಹಗರಣ ಭಾರಿ ಸದ್ದು ಮಾಡುತ್ತಿದೆ. ರಾಜಕೀಯ ಪಕ್ಷಗಳಿಗಂತೂ ಇದು ಆರೋಪ-ಪ್ರತ್ಯಾರೋಪಕ್ಕೆ ವೇದಿಕೆಯಾಗಿದೆ. ಆದರೆ, ಬಿಟ್ ಕಾಯಿನ್ ಎಂದರೇನು ಎಂಬುದೇ ಅನೇಕರಿಗೆ ಗೊತ್ತಿಲ್ಲ. ಈ ಕುರಿತ ಕೆಲ ರಹಸ್ಯ ಸಂಗತಿಗಳನ್ನು ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕೇಳುಗರ ಮುಂದಿಟ್ಟಿದ್ದಾರೆ ಸೈಬರ್ ಪರಿಣಿತ ಡಾ.ಅನಂತ ಪ್ರಭು ಅವರು.

ಬಿಟ್ ಕಾಯಿನ್ ಕುರಿತು ಅವರು ಹೇಳಿದ್ದಿಷ್ಟು….ಕ್ರಿಪ್ಟೋ ಕರೆನ್ಸಿಗಳ ಪೈಕಿ ಮೊದಲನೆ ಯದು ಬಿಟ್ ಕಾಯಿನ್. ಇದು ಇಂದಿಗೂ ಅತ್ಯಂತ ಜನಪ್ರಿಯ ಕ್ರಿಪ್ಟೋ ಕರೆನ್ಸಿ. ಜತೆಯ ಸಾವಿರಾರು ಬಗೆಯ ಕ್ರಿಪ್ಟೋ ಕರೆನ್ಸಿಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಅದರಲ್ಲಿ ಕೆಲವು ಬಿಟ್ ಕಾಯಿನ್‌ಗಳ ರೂಪಾಂತರದಂತೆಯೂ ಇವೆ. ಬಿಟ್ ಕಾಯಿನ್ ಬೇಡಿಕೆ ಹೆಚ್ಚಾದಂತೆ ಅದರ ಬೆಲೆಯೂ ಹೆಚ್ಚಾಗುತ್ತದೆ.

೨೦೦೯ರಲ್ಲಿ ಸಂತೋಷಿ ನಕಮೋಟೋ ಎಂಬ ಸಂಸ್ಥೆ ಬಿಟ್ ಕಾಯಿನ್ ವ್ಯವಸ್ಥೆಯನ್ನು ಪರಿಚಯಿಸಿತು. ಡಿಜಿಟಲ್ ವ್ಯಾಲೆಟ್ ಇರಬೇಕು. ಯಾವುದೇ ಬ್ಯಾಂಕ್ ಇದರ ಮೇಲೆ ಅವಲಂಬನೆ ಆಗಬಾರದು ಎಂಬ ಕಾರಣಕ್ಕೆ ಬಿಟ್ ಕಾಯಿನ್ ಜಾರಿಗೆ ತರಲಾಯಿತು. ಇದು ವರ್ಚುಯಲ್ ಕರೆನ್ಸಿ ಆಗಿದೆ. 2009 ರಲ್ಲಿ ಬಿಟ್‌ಕಾಯಿನ್‌ಗೆ ಬೆಲೆ ಇರಲಿಲ್ಲ. 2021ರಲ್ಲಿ ಒಂದು ಬಿಟ್ ಕಾಯಿನ್ ಬೆಲೆ 65 ಸಾವಿರ ಸಾವಿರ ಡಾಲರ್ ಆಗಿದೆ. ರುಪಾಯಿಗಳಲ್ಲಿ ನೋಡುವುದಾದರೆ 49 ಲಕ್ಷ ರು. ಎಂದು ಹೇಳಿದರು. ಬಿಟ್ ಕಾಯಿನ್‌ನಲ್ಲಿ ಕ್ರಿಪ್ಟೋಗ್ರಾಫಿ ಮತ್ತು ಇನ್ನೊಂದು ಕರೆನ್ಸಿ ಎಂಬ ವಿಧಗಳಿವೆ. ಯಾರಿಗಾದರೂ ಒಬ್ಬರಿಗೆ ಸಂದೇಶ ಕಳುಹಿಸಲು ಎನ್‌ಕ್ರಿಪ್ಟ್ ಮಾಡಿ ಕಳುಹಿಸುತ್ತೇವೆ. ಅದನ್ನು ಕ್ರಿಪ್ಟೋಗ್ರಾಫಿ ಎನ್ನುತ್ತಾರೆ.

ಕ್ರಿಪ್ಟೋ ಕರೆನ್ಸಿ ಅಂದರೆ ಯಾರಿಗಾದರೂ ಹಣ ಕಳುಹಿಸಿದರೆ ಅದು ಪಡೆದವರು ಮತ್ತು ಕಳುಹಿಸಿದವರನ್ನು ಬಿಟ್ಟು ಬೇರ‍್ಯಾರಿಗೂ ಗೊತ್ತಾಗಬಾರದು ಎಂಬುದು. ಜಗತ್ತಿನಲ್ಲಿ ನವೆಂಬರ್ ತಿಂಗಳಲ್ಲಿ 7 ಸಾವಿರ ಕ್ರಪ್ಟೋ ಕರೆನ್ಸಿ ಬಳಕೆಯಲ್ಲಿವೆ. ಅದರಲ್ಲಿ ಒಂದು ಬಿಟ್ ಕಾಯಿನ್. ಬಿಟ್ ಕಾಯಿನ್ ಬಗ್ಗೆ ತಿಳಿಯಲು ಗಣಿತ ಮತ್ತು ಕಂಪ್ಯೂಟರ್ ಬಳಕೆ ಕುರಿತು ಪರಿಣಿತಿ ಹೊಂದಿರಬೇಕು. ಇದನ್ನು ಕೂಡಿಡುವುದು ಡಿಜಿಟಲ್ ವ್ಯಾಲೆಟ್ ಇರುತ್ತದೆ. ಡಿಜಿಟಲ್ ವ್ಯಾಲೆಟ್‌ನಲ್ಲಿ ಬಿಟ್ ಕಾಯಿಲ್ ಶೇಖರಿಸಬಹುದು ಮತ್ತು ಯಾರಿಗೆ
ಬೇಕೋ ಅವರಿಗೆ ಕಳುಹಿಸಬಹುದು.

ಹಿಂದೆ ಯಾರಿಗಾದರೂ ಏನಾದರೂ ಪರ್ಯಾಯವಾಗಿ ಕೊಡಲು ಮೊದಲು ಬಾರ್ಟರ್ (ವಿನಿಮಯ) ಪದ್ಧತಿ ಇತ್ತು. ಧಾನ್ಯಗಳ ಬದಲಾಗಿ ಬೇರೆ ಏನಾದರೂ ಕೊಡುತ್ತಿದ್ದರು. ಬಳಿಕ ಚಿಪ್ಪುಗಳು, ಕಾಯಿನ್, ನಂತರ ಗೋಲ್ಡ್ ಬಾರ್ ಮತ್ತು ಸಿಲ್ವರ್ ಬಾರ್ ಬಳಕೆಗೆ ಬಂತು. ಬಳಿಕ ಫಿಯಟ್ ಮನಿ (ಪೇಪರ್ ಹಣ) ಬಂತು. ಎಲ್ಲಾ ದೇಶಗಳಲ್ಲಿ ಅವರದೇ ಆದ ಬ್ಯಾಂಕ್ ಇದೆ. ಸರಕಾರ ನೋಟು ಮುದ್ರಣ ಮಾಡುತ್ತದೆ. ನಾವು ಹಣ ಬ್ಯಾಂಕ್‌ನಲ್ಲಿ ಇಡುತ್ತೇವೆ. ಅವರು ನಮಗೆ ಬಡ್ಡಿ ಕೊಡುತ್ತಾರೆ.

ನಾವು ಹೂಡಿದ ಹಣವನ್ನು ಬ್ಯಾಂಕ್‌ನವರು ಇತರರಿಗೆ ಸಾಲ ಕೊಡುತ್ತಾರೆ. ಸರಕಾರದಿಂದ ಅಧಿಕೃತವಾಗಿ ಮುದ್ರಣ ಮಾಡಲಾಗಿ ರುವ ನೋಟುಗಳು ಹಾಗೂ ನಾಣ್ಯಗಳನ್ನು ನಾವು ಕರೆನ್ಸಿ ಎನ್ನುತ್ತೇವೆ. ಹಾಗೆಯೇ, ಕ್ರಿಪ್ಟೋ ಕರೆನ್ಸಿ ಎನ್ನುವುದು ಒಂದು ಕಾಲ್ಪನಿಕ ಡಿಜಿಟಲ್ ಕರೆನ್ಸಿಯಾಗಿದ್ದು, ಒಬ್ಬರಿಂದ ಒಬ್ಬರಿಗೆ ನೋಟು ಅಥವಾ ನಾಣ್ಯಗಳಂತೆ ಹಸ್ತಾಂತರ ಮಾಡಲು ಸಾಧ್ಯ ವಿಲ್ಲದ, ಆದರೆ ಅತ್ಯಾಧುನಿಕ ಗಣಕಯಂತ್ರಗಳು ಹಾಗೂ ಮೊಬೈಲ್ ಫೋನ್‌ಗಳ ಮುಖಾಂತರ ಒಬ್ಬರು ಇನ್ನೊಬ್ಬರೊಂದಿಗೆ ವಿನಿಮಯ ಮಾಡಿಕೊಳ್ಳಲು ಸಾಧ್ಯವಿರುವ ಕರೆನ್ಸಿಯಾಗಿದೆ. ಇಂತಹ ಕಿಪ್ಟ್ರೋ ಕರೆನ್ಸಿಗಳು ನೂರಾರು ಸಂಖ್ಯೆಯಲ್ಲಿದ್ದು ಇವು ಗಳಲ್ಲಿ ಬಿಟ್ ಕಾಯಿನ್ ಕೂಡಾ ಒಂದು.

ಇನ್ನಿತರ ಪ್ರಮುಖ ಕ್ರಿಪ್ಟೋ ಕರೆನ್ಸಿಗಳೆಂದರೆ ಬಿಟ್‌ಕಾಯಿನ್ ಕ್ಯಾಷ್, ಇಥೇರಿಯಮ, ಲೈಟ್ ಕಾಯಿನ್, ಸ್ಟೆರ್, ರಿಪಲ, ಡೋಜ್ಕಾ ಯಿನ್, ಬಿಎಟಿ (ಬೇಸಿಕ್ ಅಟೆನ್ಷನ್ ಟೋಕನ್), ಮೊನೆರೋ, ಹೊರೈಝನ್ ಮುಂತಾದವು. ಬಿಟ್‌ಕಾಯಿನ್‌ನಲ್ಲಿ ಸೆಂಟ್ರಲ್ ಸರ್ವರ್ ಇಲ್ಲ. ಈ ಸರ್ವರ್ ಇಲ್ಲ ಅಂದರೆ ಬಿಟ್ ಕಾಯಿನ್ ಬಳಕೆ ಮಾಡುವ ಲೆಡ್ಜರ್ ಇರುತ್ತದೆ. ಅದಕ್ಕೆ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ಎಂದು ಕರೆಯುತ್ತೇವೆ ಎಂದರು.

ಬಿಟ್ ಕಾಯಿನ್ ಗಣಿಗಾರಿಕೆ ಹೇಗೆ? 
ಬಿಟ್ ಕಾಯಿನ್ ವಿಕೇಂದ್ರೀಕೃತ ಕರೆನ್ಸಿ. ಅಂದರೆ, ಇದನ್ನು ಯಾವುದೇ ಕೇಂದ್ರೀಯ ಬ್ಯಾಂಕ್ ನಿಯಂತ್ರಿಸುವುದಿಲ್ಲ. ಆದರೆ ಬಿಟ್‌ಕಾಯಿನ್ ಹೊಂದಿರುವ ಜನರ ಸಮುದಾಯದಿಂದ ಇದನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಇದನ್ನು ಬಿಟ್ ಕಾಯಿನ್ ಎಂದು ಕರೆಯಲಾಗುತತಿದೆಯಾದರೂ, ನಿಜವಾದ ನಾಣ್ಯವಿಲ್ಲ. ಒಂದು ಬಿಟ್‌ಕಾಯಿನ್ ಮೂಲತಃ ಕಂಪ್ಯೂಟರ್ ಕೋಡ್‌ನ ಕೆಲವು ಸಾಲುಗಳು. ಅದು ಯಾರಿಗಾದರೂ ಕಳುಹಿಸಿದಾಗ ಅಥವಾ ಯಾವುದಕ್ಕಾದರೂ ಪಾವತಿಸಲು ಬಳಸಿದಾಗ ಹೆಚ್ಚಿನ ಕೋಡ್‌ಅನ್ನು ರಚಿಸುತ್ತದೆ. ಇವುಗಳೆಲ್ಲವನ್ನೂ ನಿಯಂತ್ರಿಸಲು ಬ್ಲಾಕ್ಬೈನ್ ಎಂಬ ವ್ಯವಸ್ಥೆಯಿದ್ದು, ಸಂಪೂರ್ಣ ವ್ಯವಹಾರಗಳಿಗೆ
ಇದರ ಅನುಮೋದನೆ ಬೇಕಾಗುತ್ತದೆ.

ಒಂದು ಬ್ಲಾಕ್ ಅನ್ನು ವೆರಿಪೈ ಮಾಡಿದರೆ 6.25 ಬಿಟ್ ಕಾಯಿನ್ ರಿವಾರ್ಡ್ ಆಗಿ ಸಿಗುತ್ತದೆ. ದಿನಕ್ಕೆ 144 ಬ್ಲಾಕ್ ಬರುತ್ತದೆ. ಇದಕ್ಕೆ ಬಿಟ್ ಕಾಯಿನ್ ಮೈನಿಂಗ್ ಎಂದು ಕರೆಯುತ್ತಾರೆ ಎಂದು ಅನಂತಪ್ರಭು ಅವರು ತಿಳಿಸಿದರು.