ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವೀರಕಪುತ್ರ ಶ್ರೀನಿವಾಸ್ ಅವರಿಂದ ಹೊಸ ಸಾಹಸದ ಅನುಭವಾಮೃತ
ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು
ನನ್ನ ಜೀವನದಲ್ಲಿ ಅನೇಕ ವರ್ಷಗಳ ಕಾಲ ಏಕೈಕ ಸ್ನೇಹಿತನಾಗಿದ್ದುದು ಪುಸ್ತಕ. ಫುಟ್‌ಪಾತ್‌ನಲ್ಲಿ ಕಾಲ ಕಳೆಯುತ್ತಿದ್ದಾಗಲೂ ನನ್ನ ಕೈಹಿಡಿದದ್ದು ಅದೇ ಪುಸ್ತಕ. ಪುಸ್ತಕಗಳನ್ನು ಓದಿಯೇ ಸಾಧನೆ ಮಾಡುವ ನಿರ್ಧಾರ ಮಾಡಿದೆ. ನನ್ನಲ್ಲಿದ್ದ ಕನ್ನಡ ಪುಸ್ತಕದ ಪ್ರೇಮವೇ ಈ ವೀರಲೋಕ ಪ್ರಕಾಶನದ ಹುಟ್ಟಿಗೆ ಕಾರಣವಾಯಿತು.
ಮುಂದೊಂದು ದಿನ ನೋಡಿದ ಸ್ಥಳಗಳಲ್ಲೆಲ್ಲಾ ಕನ್ನಡ ಪುಸ್ತಕ ಕಾಣುವ ಕನಸು ನನ್ನದು ಎಂದು ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ. ಕನ್ನಡ ಪುಸ್ತಕ ಗಳಿಗೆ ಸ್ಟಾರ್ ಪಟ್ಟ ತಂದುಕೊಟ್ಟು ಇತ್ತೀಚೆಗೆ ಖಾಸಗಿ ಹೋಟೆಲ್‌ನಲ್ಲಿ ೧೦ ಪುಸ್ತಕ ಗಳನ್ನು ಲೋಕಾರ್ಪಣೆ ಮಾಡಿ, ಕನ್ನಡ ಪುಸ್ತಕ ಕ್ಷೇತ್ರಕ್ಕೆ ಹೊಸ ಮಾರುಕಟ್ಟೆ ನೀಡಲು ಶ್ರಮಿಸುತ್ತಿರುವ ವೀರಕಪುತ್ರ ಶ್ರೀನಿವಾಸ್ ವಿಶ್ವವಾಣಿ ಕ್ಲಬ್‌ಹೌಸ್ ಕಾರ್ಯಕ್ರಮದಲ್ಲಿ ತಮ್ಮ ಹೊಸ ಸಾಹಸದ ಅನುಭವಾಮೃತ ಹಂಚಿಕೊಂಡರು.
ನನ್ನಲ್ಲಿ ಪುಸ್ತಕ ಪ್ರೀತಿ ಹುಟ್ಟಿದ್ದು ನನ್ನ ಬಾಲ್ಯಾವಸ್ಥೆಯಲ್ಲಿ. ಶಾಲೆಯಲ್ಲಿ ನಾಗರಾಜ ಶಾಸಿ ಎಂಬುವರು ನಮ್ಮ ಗುರು ಗಳಾಗಿದ್ದರು. ೩ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದ ನಮಗೆ ೪ನೇ ತರಗತಿಯ ಪುಸ್ತಕ ನೀಡಿ, ಇಷ್ಟವಾದ ಪಾಠ ಓದಿಕೊಂಡು ಬನ್ನಿ ಎಂದು ಹೇಳಿದ್ದರು. ಬೇಸಿಗೆ ರಜೆಯಲ್ಲಿ ಆ ಕನ್ನಡ ಪುಸ್ತಕದ ೧ರಿಂದ ೧೩೬ಪುಟದವರೆಗೆ ಬಾಯಿ ಪಾಠ ಮಾಡಿಕೊಂಡು ಹೋಗಿದ್ದೆ. ಶಾಲೆಗೆ ಹೋದ ಬಳಿಕ ಇಡೀ ಪುಸ್ತಕವನ್ನು ಹೇಳಿದೆ. ಆಗ ಶಿಕ್ಷಕರು ಪ್ರೇರಿತರಾಗಿ ನನ್ನ ಬಗ್ಗೆ ಊರಿನೆಲ್ಲರ ಬಳಿ ಹೇಳಿದರು. ಇಡೀ ಪುಸ್ತಕವನ್ನೇ ಬಾಯಿಪಾಠ ಮಾಡಿದ್ದು ದೊಡ್ಡ ಸುದ್ದಿಯಾಯಿತು. ಅದರಿಂದ ನನ್ನಲ್ಲಿ ಹೆಮ್ಮೆ ಮೂಡಿತು. ಅಲ್ಲಿಂದ ನನ್ನ ಓದಿನ ಹುಚ್ಚು ಶುರುವಾಗಿತ್ತು ಎಂದರು.
ನಮಗೆ ತಾಜ್ ಪಾಷಾ ಎಂಬ ಮೇಷ್ಟ್ರು ಇದ್ದರು. ತರಗತಿಗೆ ಬಾಲಮಂಗಳ, ಚಂದಮಾಮಾ ಮಕ್ಕಳ ಪುಸ್ತಕ ತಂದಿದ್ದರು. ಓದಲು ಕೇಳಿದಾಗ ನೀಡಲಿಲ್ಲ. ಹೀಗಾಗಿ ಅವರು ಮಲಗಿದ್ದಾಗ ಒಂದು ಪುಸ್ತಕ ಕದ್ದು ತಂದೆ. ಇದನ್ನು ಕಿಟಕಿಯಲ್ಲಿ ಗಮನಿಸುತ್ತಿದ್ದ ಸ್ನೇಹಿತ ಮೇಷ್ಟ್ರಿಗೆ ವಿಷಯ ತಿಳಿಸಿದ. ಮೇಷ್ಟ್ರು ಚೆನ್ನಾಗಿ ಥಳಿಸಿದರು. ಇದನ್ನೆಲ್ಲಾ ನೋಡುತ್ತಿದ್ದ ನನ್ನ ಸ್ನೇಹಿತ ಶ್ರೀನಿವಾಸ್
ಎಂಬಾತ, ಶಾಲೆಯಲ್ಲಿದ್ದ ಇಡೀ ಪುಸ್ತಕದ ಬಾಕ್ಸ್‌ಅನ್ನು ರಾತ್ರಿ ತಂದುಕೊಟ್ಟಿದ್ದ. ಮಾರನೇ ದಿನ ಕೆಲವರು ಮನೆಗೆ ಬಂದು, ನಿಮ್ಮ
ಮಗ ಪುಸ್ತಕ ಕದ್ದಿದ್ದಾನೆ ಎಂದು ಹೇಳಿದರು.
ಶ್ರೀನಿವಾಸ ಶಾಲೆಯಿಂದ ಪುಸ್ತಕ ಕದ್ದು ತರುವಾಗ ದಾರಿಯುದ್ದಕ್ಕೂ ಕೆಲ ಪುಸ್ತಕಗಳನ್ನು ಬೀಳಿಸಿಕೊಂಡು ಬಂದಿದ್ದರಿಂದ ನಾನೇ ಕದ್ದಿದ್ದು ಎಂದುಕೊಂಡಿದ್ದರು. ಹೀಗಾಗಿ ಊರಿನಲ್ಲಿ ನಮಗೆ ಪುಸ್ತಕ ಕಳ್ಳರು ಎಂಬ ಹೆಸರು ಬಂತು. ಇದು ಹೆಮ್ಮೆ ಮತ್ತು ಮುಜುಗರ ಎರಡನ್ನೂ ಮೂಡಿಸಿತ್ತು ಎಂದು ಬಾಲ್ಯದ ಘಟನೆಗಳನ್ನು ವಿವರಿಸಿದರು.
೨೦೦೦ನೇ ಇಸವಿಯಲ್ಲಿ ಬೆಂಗಳೂರಿಗೆ ಬಂದಾಗ ವಿಶ್ವೇಶ್ವರ ಭಟ್, ರವಿ ಬೆಳೆಗೆರೆ ಹಾಗೂ ಪಿ.ಲಂಕೇಶ್ ಅವರ ಪತ್ರಿಕೆಗಳಲ್ಲಿ ನಮ್ಮ ಯಜಮಾನರಾದ ವಿಷ್ಣು ಸರ್ (ನಟ ವಿಷ್ಣುವರ್ಧನ್) ಅವರ ಸುದ್ದಿಗಳನ್ನು ಓದುತ್ತಿದ್ದೆ. ೨೦೦೭ರವರೆಗೆ ಫುಟ್‌ಪಾತ್‌ನಲ್ಲಿ
ಜೀವನ ಕಳೆದಿದ್ದೇನೆ. ಆಗೆಲ್ಲಾ ನನ್ನ ಕೈಹಿಡಿದದ್ದು ಪುಸ್ತಕ. ಒಂದೊಂದು ಬರಹವೂ ನನ್ನ ಜೀವನದ ಯಶಸ್ಸಿಗೆ ಪ್ರೇರೇಪಣೆ
ನೀಡುತ್ತಿತ್ತು. ಅದರ ಪರಿಣಾಮ ಇಂದು ಒಂದು ದೊಡ್ಡ ಸೆಂಸ್ಥೆಯ ಮಾಲೀಕನಾದೆ. ಸಂಸ್ಥೆಯ ಮಾಲೀಕನಾಗಿರುವ, ಹೋಟೆಲ್ ನಡೆಸಿರುವ ಯಶಸ್ಸಿನ ಹಿಂದೆ ಇರುವುದು ಈ ಪುಸ್ತಕಗಳೇ. ಮುಂದೆ ಬಡತನದಿಂದ ಹೊರಬರಲು ಬರವಣಿಗೆಯಿಂದ ದೂರ ಉಳಿಯುವಂತಾಯಿತು. ಈಗ ಬಡತನ ಗೆದ್ದಿದ್ದೇನೆ.
ಆದರೆ, ಜೀವನದಲ್ಲಿ ಅದೆಷ್ಟೋ ವರ್ಷ ಏನೋ ಕಳೆದುಕೊಂಡಿದ್ದೇನೆ. ಪುಸ್ತಕದ ಸಾಂಗತ್ಯವನ್ನು ಕಳೆದುಕೊಂಡಿದ್ದೇನೆ
ಎಂದು ತಿಳಿಯಿತು. ಹೀಗಾಗಿ ಮತ್ತೆ ಪುಸ್ತಕ ಓದಲು ಪ್ರಾರಂಭಿಸಿದೆ ಎಂದರು.
ಮೊದಲು ಸಂಪರ್ಕಿಸಿದ್ದು ವಿಶ್ವೇಶ್ವರ ಭಟ್ಟರನ್ನು: ಸಾಹಿತಿಯೊಬ್ಬರ ೧೦೦೦ ಪುಸ್ತಕ ಮುದ್ರಣವಾದರೆ ಅದರಲ್ಲಿ ೩೦೦
ಗ್ರಂಥಾಲಯಗಳಿಗೆ, ೧೦೦ ಸ್ನೇಹಿತರಿಗೆ, ೧೦೦ ಗೋದಾಮಿನಲ್ಲಿರುತ್ತವೆ. ಕಡಿಮೆ ಪುಸ್ತಕಗಳು ಮಾರಾಟವಾಗುತ್ತಿವೆ ಎಂದು ಕೆಲವು ಪ್ರಕಾಶಕ ಸ್ನೇಹಿತರು ಹೇಳುತ್ತಿದ್ದರು.
ಹೀಗಾಗಿ ಅಂತಹ ಸಾಹಿತಿಗಳ ಪುಸ್ತಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಿಸಿ, ಜನರಿಗೆ ತಲುಪಿಸಿದರೆ ಹೇಗೆ ಎಂಬ ಯೋಚನೆ
ಬಂತು. ಏಕೆಂದರೆ, ಕನ್ನಡ ಪುಸ್ತಕಗಳ ಓದುಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರಿಗೆ ಪುಸ್ತಕ ತಲುಪಿಸಿದರೆ ಓದುತ್ತಾರೆ ಎಂಬುದು ನನಗೆ ಗೊತ್ತಿತ್ತು. ಹೀಗಾಗಿ ಪುಸ್ತಕ ಪ್ರಕಾಶನ ಆರಂಭಿಸುವ ಯೋಚನೆ ಮಾಡಿ ಪತ್ನಿ ಮತ್ತು ಹಲವು ಸ್ನೇಹಿತರ ಜತೆ ಮಾತನಾಡಿದೆ. ಎಲ್ಲರೂ ಇದು ಸಾಧ್ಯವೇ ಎಂದು ಅನುಮಾನ ವ್ಯಕ್ತಪಡಿಸಿದರು. ಆದರೂ ಮನಸ್ಸಿನಲ್ಲಿ ಕುಳಿತಿದ್ದ ಪ್ರಕಾಶನದ ಯೋಚನೆ ದೂರವಾಗಲಿಲ್ಲ.
ಪ್ರಕಾಶನ ಸಂಸ್ಥೆ ಆರಂಭಿಸಿಯೇ ತೀರಬೇಕು ಎಂದು ಈ ಯೋಜನೆ ಹಿಡಿದು ಮೊದಲು ಸಂಪರ್ಕಿಸಿದ್ದೇ ವಿಶ್ವೇಶ್ವರ ಭಟ್ ಅವರನ್ನು. ಈ ಬಗ್ಗೆ ಇನ್ನಷ್ಟು ವಿಸ್ತಾರವಾದ ಅಂಶಗಳು ಮತ್ತು ಹೊಸ ಯೋಜನೆಗಳನ್ನು ಅವರು ನನ್ನಲ್ಲಿ ತುಂಬಿದರು. ನಂತರ ಲೇಖಕ ಜೋಗಿ, ನಟ ರಮೇಶ್ ಅರವಿಂದ್, ದೀಪಾ ಹಿರೇಗುತ್ತಿ, ರವಿ ಕೃಷ್ಣಾ ರೆಡ್ಡಿ, ಅನಂತ್, ಗಣೇಶ್ ಕಾಸರಗೂಡು ಅವರನ್ನು ಸಂಪರ್ಕಿಸಿದೆ. ಇವರೆಲ್ಲರೂ ತಮ್ಮ ಕೃತಿಗಳನ್ನು ನೀಡಿದರು. ಕೃತಿ ನೀಡದೇ ಇರುವಅನೇಕರು ನನ್ನ ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ತಾವು ಪ್ರಕಾಶಕರಾಗಿ ಬೆಳೆದ ದಾರಿಯನ್ನು ವಿವರಿಸಿದರು.
ಏನಿದರ ಉದ್ದೇಶ ಹಾಗೂ ಯೋಜನೆ?: ಶಾಪಿಂಗ್ ಮಾಲ್, ಹೋಟೆಲ್ ಅಥವಾ ಯಾವುದೇ ಮನರಂಜನೆಗಳು ನಮ್ಮ ಕಣ್ಣಳತೆಯ ದೂರದಲ್ಲೇ ಸಿಗುತ್ತದೆ. ಆದರೇ ಪುಸ್ತಕಕ್ಕಾಗಿ ಗಾಂಧಿ ಬಜಾರ್‌ಗೋ ಅಥವಾ ಅಲ್ಲೆಲ್ಲೋ ದೂರ ಹೋಗಬೇಕಾಗಿದೆ.
ಹೀಗಾಗಿ, ಕನ್ನಡಿಗರು ಇರುವ ಸ್ಥಳದಲ್ಲೇ ಕನ್ನಡ ಪುಸ್ತಕ ಏಕೆ ಸಿಗಬಾರದು ಎಂಬ ಉದ್ದೇಶದಿಂದ ಕನ್ನಡ ಪುಸ್ತಕಗಳನ್ನು
ಓದುಗರಿಗೆ ತಲುಪಿಸುವ ಕಾರ್ಯಕ್ರಮ ಹಾಕಿಕೊಂಡಿದ್ದೇನೆ.
ಜನರು ಹೆಚ್ಚು ಓಡಾಡುವ ಪ್ರದೇಶಗಳಲ್ಲಿ ಪುಸ್ತಕಗಳ ಸ್ಟ್ಯಾಂಡ್ ಇಟ್ಟು ಅವುಗಳಲ್ಲಿ ಕನ್ನಡ ಪುಸ್ತಕಗಳನ್ನು ಇಟ್ಟು ಮಾರಾಟ
ಮಾಡಲು ತೀರ್ಮಾನಿಸಿದ್ದೇನೆ ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದರು.
ಫ್ಲೆಕ್ಸಿಬಲ್ ಸ್ಟಾಂಡ್: ಇದರಲ್ಲಿ ೧೦ ಪುಸ್ತಕ ಇಡಬಹುದು. ಅದರ ಮೇಲೆ ನಮ್ಮ ಕ್ಯೂಆರ್ ಕೋಡ್ ಸ್ಕ್ಯಾನರ್ ಇರುತ್ತದೆ. ಅದನ್ನು ಸ್ಕ್ಯಾನ್ ಮಾಡಿದರೆ ನಿಮಗೆ ಬೇಕಾದ ಪುಸ್ತಕ ನಿಮಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಇದಲ್ಲದೆ, ಆಗಸ್ಟ್‌ನಿಂದ ಪ್ರತಿ ವಾರ ಒಂದು ಕನ್ನಡ ಪುಸ್ತಕ ಬಿಡುಗಡೆ ಮಾಡುವ ನಿರ್ಧಾರ ಮಾಡಿದ್ದೇವೆ. ಇದರ ಜತೆಗೆ ಎಲ್ಲ ಪ್ರಕಾಶನಗಳ ಪುಸ್ತಕಗಳೂ
ಸಿಗುವಂತೆ ನೋಡಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ಈಗಾಗಲೇ ೭೫ ಸ್ಟ್ಯಾಂಡ್ ಸ್ಥಾಪಿಸಿದ್ದೇವೆ. ಇದನ್ನು ೧೦೦೦ ಮಾಡುವ
ಉದ್ದೇಶ ಹೋಂದಿದ್ದೇವೆ. ಮುಂದಿನ ದಿನಗಳಲ್ಲಿ ಟಯರ್ ೨-೩ ಪಟ್ಟಣಗಳಲ್ಲೂ ಸ್ಟ್ಯಾಂಡ್ ಸ್ಥಾಪಿಸಲಾಗುತ್ತದೆ ಎಂದು
ಹೇಳಿದರು.
ಕಾಲ್ ಸೆಂಟರ್: ಕನ್ನಡ ಪುಸ್ತಕಗಳ ಮಾಹಿತಿ ಮತ್ತು ಮಾರಾಟಕ್ಕಾಗಿ ೧೬ ಜನರನ್ನೊಳಗೊಂಡ ಕಾಲ್ ಸೆಂಟರ್ ಸ್ಥಾಪನೆ
ಮಾಡಲಾಗಿದೆ. ಶಿಕ್ಷಕರು, ಸಾಹಿತಿಗಳು, ಚಿಂತಕರು ಹೀಗೆ ೮ ಲಕ್ಷ ಜನರ ಡಾಟಾ ನಮ್ಮ ಬಳಿ ಇದೆ. ಎಲ್ಲರಿಗೂ ಕರೆ ಮಾಡಿ, ಇಂಥ
ಪುಸ್ತಕ ಬಂದಿದೆ. ಓದುತ್ತೀರಾ ಎಂದು ಕೇಳುತ್ತೇವೆ. ಖರೀದಿಸಿ ಓದುತ್ತೇವೆ ಎಂದರೆ ಅವರಿಗೆ ಪುಸ್ತಕ ಕಳುಹಿಸಲಾಗುತ್ತದೆ. ಇಲ್ಲ
ಎಂದರೆ ಓದುವವರಿದ್ದರೆ ಅವರ ದೂರವಾಣಿ ಸಂಖ್ಯೆ ನೀಡುತ್ತೀರಾ ಎಂದು ಕೇಳುತ್ತೇವೆ. ಜೂ.೯ರಿಂದ ಕಾಲ್‌ಸೆಂಟರ್ ಆರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ೭೦೨೨೧೨೨೧೨೧ ಸಂಖ್ಯೆಗೆ ಕರೆ ಮಾಡಿ ವಿಳಾಸ ನೀಡಿದರೆ ಮನೆಗೆ ಪುಸ್ತಕ ಬರುತ್ತದೆ
ಎಂದರು.
***
ಕನ್ನಡ ಪುಸ್ತಕ ಮಾರಾಟದಲ್ಲಿ ಇರುವ ತೊಡಕು ಕಂಡು ವೀರಲೋಕ ಪ್ರಕಾಶನ ಸಂಸ್ಥೆಯನ್ನು ಸ್ಥಾಪನೆ ಮಾಡಲಾಗಿದೆ.
ಕೋವಿಡ್ ನಂತರ ೨೭ ಲಕ್ಷ ಹೊಸ ಓದುಗರು ಹುಟ್ಟಿಕೊಂಡಿದ್ದಾರೆ. ಅವರ ಕೈನಲ್ಲಿ ಪುಸ್ತಕ ಇಡುವ ಕೆಲಸವಾಗಬೇಕಿದೆ.
ಅ ಕೆಲಸ ನಾವು ಮಾಡುತ್ತಿದ್ದೇವೆ. ಜೂ.೨೫ರಂದು ಸಂಜೆ ೫ಕ್ಕೆ ಮೈಸೂರಿನಲ್ಲಿರುವ ಮಂಡ್ಯ ರಮೇಶ್ ಅವರ ನಟನಾ
ರಂಗಮಂದಿರದಲ್ಲಿ ಎಲ್ಲ ಕೃತಿಗಳ ಮರು ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮುಂದಿನ ದಿನಗಳಲ್ಲಿ ಬೀದರ್, ಬಳ್ಳಾರಿ, ಚಿತ್ರದುರ್ಗ, ಕೋಲಾರ, ಹಾಸನ ಹೀಗೆ ವಿವಿಧ ಭಾಗಗಳಲ್ಲಿ ಕನ್ನಡ ಪುಸ್ತಕಗಳನ್ನು ವಿಸ್ತಾರಗೊಳಿಸುವ ಯೋಜನೆ ಮಾಡಿಕೊಂಡಿದ್ದೇನೆ.
ರಾಯಭಾರಿ ನೇಮಕ
ಎಲ್ಲದಕ್ಕೂ ಜಾಹೀರಾತು ಬಹಳ ಮುಖ್ಯ. ಹೀಗಾಗಿ ಪುಸ್ತಕ ಓದುವ ಬಗ್ಗೆ ಒಬ್ಬ ರಾಯಭಾರಿ ಬೇಕು ಎಂದು ನಿರ್ಧರಿಸಿ ಸಾಹಿತ್ಯದ ಜ್ಞಾನ ಹೊಂದಿರುವ ನಟ ರಮೇಶ್ ಅರವಿಂದ್ ಅವರನ್ನು ನೇಮಕ ಮಾಡಿಕೊಂಡಿದ್ದೇವೆ. ಕನ್ನಡ ಪುಸ್ತಕ ಏಕೆ ಓದಬೇಕು ಎಂಬು ದರ ಬಗ್ಗೆ ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
***
ಮನೆ ಮನೆಗೆ ಕನ್ನಡ ಪುಸ್ತಕ. ಇದೊಂದು ಹೊಸ ಕಲ್ಪನೆ ಹಾಗೂ ದಿಟ್ಟ ಪ್ರಯತ್ನ. ಕರ್ನಾಟಕದಲ್ಲಿ ಸುಮಾರು ೬೦೦ ಸಕ್ರಿಯ ಪ್ರಕಾಶನಗಳಿವೆ. ಕೆಲವು ಲೇಖಕರು ತಮ್ಮದೇ ಆದ ಪ್ರಕಾಶನ ಪ್ರಾರಂಭಿಸಿದ್ದಾರೆ. ಅದನ್ನೂ ಸೇರಿಸಿದರೆ ಸುಮಾರು ೧ ಸಾವಿರ ಪ್ರಕಾಶನ ಸಂಸ್ಥೆಗಳು ಇರಬಹುದು. ಆದರೂ ಕನ್ನಡ ಪುಸ್ತಕಗಳನ್ನು ಪ್ರಕಟ ಮಾಡುವುದು, ಮಾರಾಟ ಮಾಡುವುದು ದೊಡ್ಡ ಸಾಹಸ ಎಂಬಂತಿದೆ. ೧,೦೦೦ ಪುಸ್ತಕ ಮಾರುವುದು ಕಷ್ಟ ಎನ್ನುವ ಸ್ಥಿತಿಯಲ್ಲಿದ್ದೇವೆ. ಹಾಗಾದರೆ ಓದುವವರಿಲ್ಲವೇ ಎಂದರೆ, ಇದ್ದಾರೆ. ಆದರೂ ಮಾರಾಟ ಏಕೆ ಕಷ್ಟ ಎಂಬುದು ಇನ್ನೂ ತಿಳಿದಿಲ್ಲ. ಇಂತಹ ಸಂದರ್ಭದಲ್ಲಿ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ವೀರಲೋಕ ಪ್ರಕಾಶನವನ್ನು ಹೊಸ ಮೂಸೆಯಲ್ಲಿ ಪ್ರಾರಂಭ ಮಾಡಲಾಗಿದೆ. ಇದರ ಹಿಂದೆ ಕನ್ನಡದ ಬಗ್ಗೆ ಕಾಳಜಿ ಮತ್ತು ಪ್ರೀತಿ ಇದೆ. ಯಾವುದೇ ಒಂದು ಕೆಲಸವಾಗಲೀ ಹಣಕ್ಕಿಂತ ಹೆಚ್ಚಿನದಾಗಿ ಆತ್ಮವಿಶ್ವಾಸ ಮತ್ತು ನಂಬಿಕೆ ಇರಬೇಕು. ಆಗ ಮಾತ್ರ ಅದು ಯಶಸ್ಸು ಕಾಣಲು ಸಾಧ್ಯ.
-ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಶ್ವವಾಣಿ