ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ – 139
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಾಸುದೇವ ಶರ್ಮಾ ಅಭಿಪ್ರಾಯ
ಶೇ.70ರಷ್ಟು ಮಂದಿ ಗ್ರಾಮೀಣ ವಾಸಿಗಳು
ಬೆಂಗಳೂರು: ಬಡತನದಿಂದಾಗಿ ಕುಟುಂಬಗಳಲ್ಲಿ ಬೇಕಾದ್ದನ್ನು ಕೊಳ್ಳುವ ಸಾಮರ್ಥ್ಯ ಇಲ್ಲದಿರುವುದೇ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಲು ಕಾರಣ. ಮಕ್ಕಳ ಅಪೌಷ್ಟಿಕತೆ, ಕಳ್ಳ ಸಾಗಣೆ, ಬಾಲಾಪರಾಧ, ಬಾಲ್ಯವಿವಾಹ ಕುರಿತು ವಾಸ್ತವ ಸ್ಥಿತಿ ಪರಿಗಣಿಸಿ ವರದಿ
ತಯಾರಿಸಬೇಕು. ಆ ವರದಿ ಆಧರಿಸಿ ಮಕ್ಕಳ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಬೇಕು.
ಇದು ಚೈಲ್ಡ್ ರೈಟ್ಸ್ ಟ್ರಸ್ಟ್ ಮಕ್ಕಳ ಹಕ್ಕುಗಳ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮಾ ಅವರ ಅಭಿಪ್ರಾಯ.
ವಿಶ್ವ ಮಕ್ಕಳ ಹಕ್ಕುಗಳ ದಿನಾಚರಣೆ ಅಂಗವಾಗಿ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿದ ಅವರು, ಆರೋಗ್ಯ, ಶಿಕ್ಷಣ, ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಮಕ್ಕಳ ಪರಿಸ್ಥಿತಿ ಹೇಗಿದೆ ಎಂಬುದನ್ನು ಮೊದಲು ತಿಳಿದು ಕೊಳ್ಳಬೇಕು. ಮುಂದಿನ 10 ವರ್ಷಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಸುಧಾರಣೆಗೆ ಏನು ಮಾಡಬೇಕು ಎಂದು ವಿಶ್ಲೇಷಿಸ ಬೇಕು. ಇದಕ್ಕೆ ಒಂದು ಸಮಯ ನಿಗದಿ ಮಾಡಿ ಅದಕ್ಕೆ ಬೇಕಾದ ಹಣಕಾಸು ನೆರವು ಒದಗಿಸಬೇಕು ಎಂದು ಹೇಳಿದರು.
ಹಕ್ಕು ಎನ್ನುವುದು ಮಾತನಾಡುವುದು ಮತ್ತು ಅಭಿಪ್ರಾಯ ವ್ಯಕ್ತಪಡಿಸುವುದು. ಭಾರತದ ಪ್ರಜೆಗಳಾದ ಮಕ್ಕಳಿಗೆ ಮಾತನಾಡುವ, ಅಭಿಪ್ರಾಯ ವ್ಯಕ್ತಪಡಿಸುವ, ಮುಕ್ತ ವಾಗಿ ಓಡಾಡುವ, ದುರುಪಯೋಗ ವಿರುದ್ಧ ರಕ್ಷಣೆ ಪಡೆಯುವ, ಜೀವನ ಮತ್ತು ಸ್ವಾತಂತ್ರತ್ಯ ರಕ್ಷಣೆ ಪಡೆಯುವ ಹಕ್ಕುಗಳು ಇವೆ.
ಶಿಕ್ಷಣದ ಹಕ್ಕೂ ಇದೆ. ಮಕ್ಕಳ ಸಾಗಣೆ ತಡೆ, ಬಲವಂತ ದುಡಿಮೆ ನಿಷೇಧ ಮುಂತಾದ ಕಾನೂನುಗಳಿವೆ. ಆದರೂ ಮಕ್ಕಳಿಗೆ ತಮ್ಮ ಹಕ್ಕುಗಳು ಸಿಗುತ್ತಿಲ್ಲ ಎಂದ ಅವರು ಅಲ್ಪ ಸಂಖ್ಯಾತ ಕುಟುಂಬದ ಮಕ್ಕಳೇ ಹೆಚ್ಚಾಗಿ ಬಾಲ ಕಾರ್ಮಿಕರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ಶೇ.70ರಷ್ಟು ಮಂದಿ ಗ್ರಾಮೀಣ ವಾಸಿಗಳು. 35 ಕೋಟಿ ಮಕ್ಕಳು ಗ್ರಾಮೀಣ ಭಾಗದಲ್ಲಿ, 15 ಕೋಟಿ ಮಕ್ಕಳು ನಗರ ಪ್ರದೇಶದಲ್ಲಿದ್ದಾರೆ. ಗ್ರಾಮಗಳಲ್ಲಿರುವ 35 ಕೋಟಿ ಮಕ್ಕಳಿಗೆ ಗುಣಮಟ್ಟದ ಸೌಲಭ್ಯ ಕೊಡಲು ಸಾಧ್ಯವಾಗುತ್ತಿಲ್ಲ. ಮಕ್ಕಳಲ್ಲಿ
ಪೌಷ್ಟಿಕತೆ ಕಾಪಾಡುವಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಹಿಂದೆ ಬಿದ್ದಿದೆ ಎಂದರು.
ತಾರತಮ್ಯವಿಲ್ಲದ ಬದುಕು ನಡೆಸಬೇಕು ಎಂಬುದನ್ನು ಸಂವಿಧಾನವೇ ಹೇಳಿದೆ. ಆದರೆ, ಧರ್ಮ, ಜಾತಿ, ವರ್ಣ, ಅಂತಸ್ತು ಆಧಾರದ ಮೇಲೆ ತಾರತಮ್ಯಕ್ಕೆ ಮೂಲೆಗುಂಪಾಗಿರುವ ಮಕ್ಕಳ ಸಂಖ್ಯೆ ಅತ್ಯಧಿಕವಾಗುತ್ತಿದೆ. ಮಕ್ಕಳ ಹಕ್ಕುಗಳ ರಕ್ಷಣೆಗೆ ನಮ್ಮ ದೃಷ್ಟಿಕೋನ ಬದಲಾಯಿಸಬೇಕು ಎಂದು ಹೇಳಿದರು. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಿದೆ. ಈ ದೇಶದ ಗಡಿ ಯೊಳಗೆ ಯಾರು ಜನಿಸಿದ್ದಾರೋ ಅವರು ದೇಶದ ಪ್ರಜೆಗಳು. ನಾವೆಲ್ಲರೂ ಪ್ರಜೆಗಳಾಗಿರುವಾಗ ನಮಗೆ ಹುಟ್ಟಿದವರು ಕೂಡ ಪ್ರಜೆಗಳೇ ಆಗಿದ್ದಾರೆ. ದೇಶದ ಪ್ರಜೆಗಳಿಗೆ ಸಂವಿಧಾನದ ಹಕ್ಕುಗಳು ಇರುತ್ತವೆ. ಆ ಹಕ್ಕುಗಳು ಮಕ್ಕಳಿಗೂ ಅನ್ವಯವಾಗುತ್ತವೆ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು ಎಂದರು.
ಮಕ್ಕಳಿಗೆ ಸಂಬಂಧಿಸಿದ ಸೇವೆ. ಕಾರ್ಯಕ್ರಮಗಳು ಕೆಲವರಿಗೆ ಮಾತ್ರ ಸೀಮಿತವಾಗಿದೆ. ಅದರ ಬದಲು ಮಕ್ಕಳ ರಕ್ಷಣೆ, ಅವರ ಸೇವೆಯನ್ನು ಎಲ್ಲರೂ ನಮ್ಮದು ಎಂದು ಭಾವಿಸುವಂತಾಗಬೇಕು. ಆಗ ಮಕ್ಕಳು ಸುರಕ್ಷಿತವಾಗಿ ಮತ್ತು ಆರೋಗ್ಯವಂತರಾಗಿ
ಬೆಳೆಯಲು ಸಾಧ್ಯ ಎಂದು ಹೇಳಿದರು.
ಮಕ್ಕಳಲ್ಲಿ ಪ್ರಜೆಗಳೆಂಬ ಭಾವನೆ ಮೂಡಿಸಿ
ಮಕ್ಕಳು ಕೂಡ ಈ ದೇಶದ ಪ್ರಜೆಗಳು ಎಂಬ ಧೋರಣೆ ಬೆಳೆಸಿಕೊಳ್ಳಬೇಕು, ಮಕ್ಕಳಿಗೂ ಹಕ್ಕುಗಳಿವೆ ಎಂಬುದನ್ನು ಪರಿಗಣಿಸ ಬೇಕು. ಮಕ್ಕಳ ತಾಯಿಯ ಆರೋಗ್ಯ ಕಾಪಾಡುವುದಕ್ಕೆ ಆದ್ಯತೆ ನೀಡಬೇಕು. ನಮ್ಮ ದೇಶದಲ್ಲಿ ಸೌಲಭ್ಯ, ಮಾಹಿತಿ, ಜ್ಞಾನ ಇರುವವರಿಗೆ ಸೇವೆಗಳು ಸುಲಭವಾಗಿ ಸಿಗುತ್ತದೆ. ಯಾವುದೇ ಸೌಲಭ್ಯ ಇಲ್ಲದ ಕುಟುಂಬದ ಮಕ್ಕಳು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಕ್ಕಳಲ್ಲಿ ಚಿಕ್ಕವರಿದ್ದಾಗಿನಿಂದಲೇ ನಾನು ಈ ದೇಶದ ಪ್ರಜೆ ಎಂಬ ಮನೋಭಾವ ಬಿತ್ತಬೇಕು. ಮಕ್ಕಳಿಗೆ ಕೊಡಬೇಕಾದ ಸೌಲಭ್ಯ, ಶಿಕ್ಷಣ ನೀಡಬೇಕು ಎಂದು ಶರ್ಮಾ ಹೇಳಿದರು.
ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಕಡಿಮೆ.
ದೇಶದಲ್ಲಿ ಮಕ್ಕಳಿಗೆ ಸಿಗಬೇಕಾದ ಸೌಲಭ್ಯ ಪರಿಪೂರ್ಣವಾಗಿ ಸಿಗುತ್ತಿಲ್ಲ.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬುದು ಘೋಷಣೆಗೆ ಸೀಮಿತ.
ಮಕ್ಕಳ ಜತೆ ಹಿರಿಯರು ಸನ್ನಡತೆಯಿಂದ ವರ್ತನೆ ಮಾಡಬೇಕು.
ಮಕ್ಕಳ ಅವಶ್ಯಕತೆಗಳನ್ನು ಪೂರೈಸುವ ಕೆಲಸ ಸಮರ್ಪಕವಾಗಿ ಆಗಬೇಕು.
ಮಕ್ಕಳಿಗೆ ಅವರ ಹಕ್ಕುಗಳ ಸೂಕ್ತ ಸಮಯಕ್ಕೆ ಸಿಗುವಂತೆ ಮಾಡಬೇಕು.
ವಯಸ್ಕರೇ ಮಕ್ಕಳಿಗೆ ಸೌಲಭ್ಯ ದೊರೆಯದಂತೆ ತಡೆಯುತ್ತಿದ್ದಾರೆ.
ಮಕ್ಕಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಇಲಾಖೆ ಇರಬೇಕು
***
ಚೈಲ್ಡ್ ರೈಟ್ಸ್ ಟ್ರಸ್ಟ್ ಮಕ್ಕಳ ಹಕ್ಕುಗಳ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ವಾಸುದೇವ ಶರ್ಮಾ, ಮಕ್ಕಳ ಹಕ್ಕುಗಳ ರಕ್ಷಣಾ
ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಯಂಸೇವಾ ಸಂಸ್ಥೆ, ಸರಕಾರ, ಅಂತಾರಾಷ್ಟ್ರೀಯ ಏಜೆನ್ಸಿಗಳು, ವಿವಿಧ ಸಂಘ ಸಂಸ್ಥೆಗಳ ಜತೆ ಸೇರಿ ಮಕ್ಕಳ ಹಕ್ಕುಗಳ ರಕ್ಷಣೆ ಮಾಡಿದ್ದಾರೆ. ಕರ್ನಾಟಕ ಮಕ್ಕಳ ಹಕ್ಕು ನಿಗಾ ಕೇಂದ್ರದ ರಾಜ್ಯ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ. 2006ರಿಂದ ಮಕ್ಕಳ ಹಕ್ಕುಗಳ ಗ್ರಾಮಸಭೆ ಆಯೋಜಿಸಿದ್ದಾರೆ. ಮಕ್ಕಳಿಗೆ ನ್ಯಾಯದಾನ, ಮಕ್ಕಳ ಕಳ್ಳ ಸಾಗಣೆ ತಡೆ, ಶಿಕ್ಷಣದ ಬಗ್ಗೆ ನೂರಾರು ಲೇಖನ ಹಾಗೂ ಪುಸ್ತಕ ಬರೆದಿದ್ದಾರೆ. ಪ್ರತಿಷ್ಠತಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
– ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು