Thursday, 12th December 2024

ಅಂಗಾಂಗ ದಾನ ಮಾಡಿ, ಸಾವಿನ ನಂತರವೂ ಬದುಕಿ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ದೇಹದಾನ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷೆ ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರಿಂದ ಉಪನ್ಯಾಸ

ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು

ನಾವೆಲ್ಲರೂ ಭಕ್ತಿಯಿಂದ ಪೂಜಿಸುವ ಗಜಾನನ, ಬದಲಿ ಅಂಗಗಳನ್ನು ಜೋಡಿಸಿಕೊಂಡ ಪ್ರಥಮ ವ್ಯಕ್ತಿ. ಅಂಗದಾನ ಮಾಡಿದ್ದು ಗಜಾಸುರ. ಅಗಾಂಗ ಜೋಡಿಸುವ ಶಸ್ತ್ರಚಿಕಿತ್ಸೆ ಮಾಡಿದ್ದು ಪರಮೇಶ್ವರ. ಶಿವಗಣಗಳೇ ಅಂಗಾಂಗ ದಾನದ ಮಧ್ಯವರ್ತಿಗಳು. ಅಂಗದಾನ ಮಾಡಿದ ಗಜಾಸುರನಿಗೆ ಮೋಕ್ಷ ಪ್ರಾಪ್ತಿಯಾಯಿತು.

ಹೀಗೆ ಪುರಾಣದ ಕಥೆ ಮೂಲಕ ಅಂಗಾಗ ದಾನದ ಮಹತ್ವ ವಿವರಿಸಿದವರು ದೇಹದಾನ ಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷೆ ಝಾನ್ಸಿರಾಣಿ ಲಕ್ಷ್ಮೀಬಾಯಿ.ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ದೇಹದಾನ ಮಹಾದಾನ’ ಕುರಿತ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಮತ್ತು ದೇಹದಾನದ ಮಹತ್ವಗಳ ಕುರಿತಂತೆ ಅರಿವಿನ ಉಪನ್ಯಾಸ ನೀಡಿದ ಅವರು, ಪುರಾಣಗಳಲ್ಲೇ ಅಂಗಾಗ ದಾನದ ಮಹತ್ವ ತಿಳಿಸಿದ್ದಾರೆ. ಆ ಮಹತ್ವ ವೈಜ್ಞಾನಿಕ ಯುಗ ದಲ್ಲೂ ಇದೆ.

ಅಂಗಾಂಗ ದಾನದ ಜತೆಗೆ ದೇಹದಾನವೂ ಅತ್ಯಂತ ಮಹತ್ವದ್ದು ಎಂದರು. ಈ ಹಿಂದೆ ರಕ್ತದಾನ ಮಾಡುವುದಕ್ಕೂ ಜನ ಹೆದರು ತ್ತಿದ್ದರು. ಆದರೆ, ಈಗ ಅದರ ಅರಿವಿದೆ. ಹಾಗೆಯೇ ದೇಹದಾನದ ಬಗ್ಗೆಯೂ ಅರಿವು ಮೂಡಿಸುವ ಕೆಲಸವಾಗಬೇಕಿದೆ. ನಮ್ಮ ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ದೇಹದಾನಕ್ಕೆ ಮಹತ್ವ ನೀಡುತ್ತಿದ್ದಾರೆ. ಇಡೀ ಕುಟುಂಬವೇ ದೇಹದಾನಕ್ಕೆ ನೊಂದಣಿ ಮಾಡಿಸುತ್ತಾರೆ ಎಂದು ಹೇಳಿದರು.

ಈ ಹಿಂದೆ ಕೂದಲು ದಾನದ ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ. ಹೀಗಾಗಿ ಕೂದಲು ಮಾಫಿಯಾ ಕೂಡ ನಡೆಯುತ್ತಿತ್ತು. ಆದ್ದರಿಂದ ನಮ್ಮ ಸಂಘಟನೆಯವರು ಹೆಚ್ಚು ಓಡಾಡಿ ಕೂದಲು ದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದರು. ಇದರ ಪರಿಣಾಮ ಕೂದಲು ದಾನ ಕೊಂಚ ಮಟ್ಟಿಗೆ ಹೆಚ್ಚಾಗಿದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ವಿಗ್ ಮಾಡಿಕೊಡುವ ಬಗ್ಗೆ ವಿಗ್ ತಯಾ ರಿಸುವವರ ಜತೆ ಸೇರಿ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕೂದಲು ದಾನ ಕೂಡ ರಕ್ತದಾನದಂತೆ ಸಾಮಾನ್ಯವಾಗ ಬಹುದು ಎಂಬ ವಿಶ್ವಾಸ ಮೂಡಿದೆ ಎಂದು ತಿಳಿಸಿದರು. ಒಬ್ಬ ಮನುಷ್ಯನ ಬ್ರೈನ್ ಡೆಡ್ ಆದ ನಂತರವಷ್ಟೇ ಆತ ಮೃತ ಪಟ್ಟಿದ್ದಾನೆ ಎಂದು ವೈದ್ಯಲೋಕದಲ್ಲಿ ದೃಢೀಕರಿಸಲಾಗುತ್ತದೆ.

ಬ್ರೈನ್ ಡೆಡ್ ಆದ ಮೇಲೂ ವೆಂಟಿಲೇಟರ್‌ನಲ್ಲಿ ಆತನನ್ನು ಇಟ್ಟರೆ ದೇಹದ ಅಂಗಾಂಗಳು ಜೀವಂತವಾಗಿರುತ್ತವೆ. ಆ ಸಂದರ್ಭ ದಲ್ಲಿ ವ್ಯಕ್ತಿಯ ಅಂಗಾಂಗಳನ್ನು ದಾನ ಮಾಡಬಹುದು. ಬ್ರೈನ್ ಡೆಡ್ ಆದ ನಂತರ ವ್ಯಕ್ತಿ ವೆಂಟಿಲೇಟರ್‌ನಲ್ಲಿ ಇರುವಾಗಲೇ ೨೪ರಿಂದ ೪೮ಗಂಟೆಯೊಳಗಾಗಿ ಅಂಗಾಂಗಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು.

ಯಾವ ಅಂಗ ಯಾವಾಗ ದಾನ ಮಾಡಬಹುದು?
ನಮಗೆ ಆಗಿ ಮಿಕ್ಕಿದ್ದನ್ನು ದಾನ ಮಾಡಬೇಕು. ಅಂದರೆ ನಾವು ಬದುಕಿರುವಾಗ ಕೂದಲು, ಉಗರು, ಅಸ್ತಿಮಜ್ಜೆ, ರಕ್ತ, ಲಿವರ್
ಹಾಗೂ ಸತ್ತ ನಂತರ ಕಣ್ಣು, ಹೃದಯ, ಚರ್ಮ, ಕೂದಲು, ಮೂಳೆ ದಾನ ನೀಡಬಹುದು.

ಚರ್ಮದಾನ ಅನೇಕರಿಗೆ ತಿಳಿದಿರಲಿಲ್ಲ : ಮನುಷ್ಯ ಮೃತಪಟ್ಟ ೬ ಗಂಟೆ ಒಳಗೆ ಚರ್ಮದಾನ ಮಾಡಬಹುದಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಎರಡೇ ಸ್ಕಿನ್ ಬ್ಯಾಂಕ್ ಇವೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಬೆಳಗಾವಿಯಲ್ಲಿ ಒಂದು ಬ್ಯಾಂಕ್ ಇದೆ. ಇದರ ಬಗ್ಗೆಯೂ ಹೆಚ್ಚಿನ ಅರಿವು ಮೂಡಿಸುವ ಕೆಲಸವಾಗಬೇಕಿದೆ.

ಶ್ರೀಲಂಕಾದಲ್ಲಿ ನೇತ್ರದಾನ ಕಡ್ಡಾಯ: ನಮ್ಮ ದೇಶದಲ್ಲಿ ಅಂಗಾಂಗ ದಾನದ ಬಗ್ಗೆ ಅರಿವು ಕಡಿಮೆ. ಅದರಲ್ಲೂ ನೇತ್ರದಾನದ ಬಗ್ಗೆ ಅರಿವಿಲ್ಲ. ಶ್ರೀಲಂಕಾದಂಥ ಚಿಕ್ಕ ದೇಶದಲ್ಲಿ ಯಾವುದೇ ವ್ಯಕ್ತಿ ನಿಧನದ ನಂತರ ಆತನ ಕಣ್ಣನ್ನು ಅಲ್ಲಿನ ಸರಕಾರ ವಶಪಡಿಸಿಕೊಳ್ಳುತ್ತದೆ. ಅಂದರೆ, ಅಲ್ಲಿ ನೇತ್ರದಾನ ಕಡ್ಡಾಯ.

ಹೀಗಾಗಿ ಶ್ರೀಲಂಕಾ ಸಾವಿರಾರು ಸಂಖ್ಯೆಗಳಲ್ಲಿ ಕಣ್ಣಿನ ಹರ್ನಿಯಾವನ್ನು ಭಾರತಕ್ಕೆ ಮಾರಾಟ ಮಾಡುತ್ತದೆ. ನೇತ್ರದಾನದ
ಬಗ್ಗೆ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಶಾಲಾ ಶಿಕ್ಷಣದಲ್ಲಿ ಸೇರಿಸಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ
ಎಂದು ಝಾನ್ಸಿರಾಣ್ ಲಕ್ಷ್ಮೀಬಾಯಿ ಹೇಳಿದರು.

***

ಪುನೀತ್‌ರಿಂದ ನೇತ್ರದಾನಕ್ಕೆ ಮಹತ್ವ ಹೆಚ್ಚಾಯಿತು
ವರನಟ ಡಾ.ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಇಬ್ಬರೂ ನೇತ್ರದಾನ ಮಾಡಿದ್ದಾರೆ. ಆದರೆ, ನೇತ್ರದಾನಕ್ಕೆ
ನಿಜ ವಾದ ಮಹತ್ವ ಮತ್ತು ಪ್ರಚಾರ ಸಿಕ್ಕಿದ್ದು, 2021ರಲ್ಲಿ ಪುನೀತ್ ರಾಜ್‌ಕುಮಾರ್ ಅವರು ನೇತ್ರದಾನ ಮಾಡಿದ ಬಳಿಕ. ಕೇವಲ 6 ತಿಂಗಳಲ್ಲಿ 90 ಸಾವಿರ ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.

ಮೊದಲಿನಿಂದಲೂ ರಾಜ್‌ಕುಮಾರ್ ಕುಟುಂಬದವರಲ್ಲಿ ನೇತ್ರದಾನದ ಬಗ್ಗೆ ಅರಿವಿದೆ. ನೇತ್ರದಾನದ ವಿಚಾರದಲ್ಲಿ ಕೊಟ್ಟ ಮಾತಿನಂತೆ ಡಾ.ರಾಜ್ ಕುಟುಂಬ ನಡೆದುಕೊಂಡಿದೆ. ಇಷ್ಟಾದರೂ ಭಾರತದಲ್ಲಿ ಕಣ್ಣಿನ ಬೇಡಿಕೆಯಷ್ಟು ಪೂರೈಕೆ ಆಗುತ್ತಿಲ್ಲ
ಎಂದು ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಹೇಳಿದರು. ಕಣ್ಣಿನ ದಾನದ ವಿಚಾರದಲ್ಲಿ ಮಾಡಬೇಕಾದ ಮೂರು ಮುಖ್ಯ ಕೆಲಸವೆಂದರೆ ಕುಟುಂಬಕ್ಕೆ ತಿಳಿಸುವುದು, ನೋಂದಣಿ ಮಾಡಿಸುವುದು ಮತ್ತು ನೋಂದಣಿ ಕಾರ್ಡ್ ಬಂದ ನಂತರ ಸಾಮಾಜಿಕ ಜಾಲತಾಣ ಗಳಲ್ಲಿ ಹಂಚಿಕೊಳ್ಳುವುದು. ಇದರಿಂದ ಹೆಚ್ಚಿನವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ನಿಮ್ಮ ಹತ್ತಿರದವರು ಯಾರಾದರೂ ಮೃತಪಟ್ಟರೆ ಅವರನ್ನು ನೇತ್ರದಾನ ಮಾಡುವಂತೆ ಪ್ರೇರೇಪಿಸಬೇಕು. ಏಕೆಂದರೆ, ಒಬ್ಬರ ಕಣ್ಣಿನಿಂದ ನಾಲ್ಕು ಮಂದಿಗೆ ದೃಷ್ಟಿ ನೀಡಲು ಸಾಧ್ಯವಾಗುತ್ತದೆ ಎಂಬುದನ್ನು ನಾವು ಮರೆಯಬಾರದು ಎಂದರು.

*
‘ನಾನು ಸತ್ತ ನಂತರ ಹೂತು ಹಾಕಿದರೆ ಕೊಳೆತು ಹೋಗುತ್ತೇನೆ, ನನ್ನನ್ನು ಸುಟ್ಟು ಹಾಕಿದರೆ ಬೂದಿ ಆಗುತ್ತೇನೆ, ಒಂದು ವೇಳೆ ದಾನ ಮಾಡಿದರೆ, ನಾನು ಬೇರೆಯವರ ದೇಹದಲ್ಲಿ ಜೀವಿಸುವ ಮೂಲಕ ಅನೇಕರಿಗೆ ಸಂತೋಷ ನೀಡುತ್ತೇನೆ’ ಎಂಬ ಮಾತು ನೆನಪಾಗುತ್ತದೆ. ನಾವು ನಮ್ಮ ನಿಧನದ ನಂತರವೂ ಬದುಕಿರಬೇಕು, ಹತ್ತಾರು ಜನರ ಜೀವನ ಹಸನಗೊಳಿಸಬೇಕು ಎಂದರೆ ಅಂಗಾಂಗ ದಾನ, ದೇಹದಾನ ಮಾಡಬೇಕು. ಇದಕ್ಕೆ ಗಟ್ಟಿ ಮನಸ್ಸು ಮುಖ್ಯ. ಇದಕ್ಕೆ ನಮ್ಮ ಆಚಾರ-ವಿಚಾರ ತೊಡಕಾಗುತ್ತದೆ. ನಮ್ಮ ನಂಬಿಕೆಗಳೇ ಅಡ್ಡಿಯಾಗುತ್ತವೆ ಎಂದಾದರೂ ಅವೆಲ್ಲವನ್ನೂ ಮೀರಿ ದೇಹದಾನ ಮಾಡಲು ಮುಂದಾಗಬೇಕು.
– ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಶ್ವವಾಣಿ

ಪುನೀತ್ ರಾಜಕುಮಾರ್ ನೇತ್ರದಾನದಿಂದ ನಾಲ್ಕು ಮಂದಿಗೆ ದೃಷ್ಟಿ ನೀಡಲಾಗಿದೆ.

ಕಣ್ಣು ಮತ್ತು ದೇಹದಾನಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ.

ಅಂಗಾಂಗ ದಾನದಿಂದ ಸಾವಿನ ಹೊಸ್ತಿಲ್ಲಿರುವವರಿಗೆ ಜೀವದಾನ ಮಾಡಿದ ಸಾರ್ಥಕತೆ ಸಿಗುತ್ತದೆ.

ಪ್ರಾಣಿಗಳ ಕೆಲವು ಅಂಗವೂ ಮನುಷ್ಯರಿಗೆ ಉಪಯೋಗವಾಗುತ್ತವೆ ಎಂದು ಪುರಾಣ ಹೇಳುತ್ತದೆ.

ಆಪ್ ಮೂಲಕ ದೇಹದಾನ ಅಥವಾ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಳ್ಳಲು ಅವಕಾಶ ಇದೆ.

‘ಸೋಟೋ’ ( ಸ್ಟೇಟ್ ಆರ್ಗ್‌ನ್ ಟ್ರಾಂನ್ಸ್ ಪ್ಲಾಂಟೇಷನ್) ನಲ್ಲಿ ಆನ್‌ಲೈನ್ ಮುಖಾಂತರ ದಾನ ಪ್ರಕ್ರಿಯೆ.

ದೇಹದಾನ ಮಾಡಿದ ವ್ಯಕ್ತಿಗೆ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು ಬಂದು ಗೌರವ ಸಮರ್ಪಣೆ ಮಾಡುತ್ತಾರೆ.

ದೇಹದಾನಕ್ಕೆ ವಿಲ್ ಮಾಡಬಹುದು. ಕುಟುಂಬದವರ ಒಪ್ಪಿಗೆ ಇಲ್ಲದಿದ್ದರೆ ನಾಮಿನಿ ಮುಖಾಂತರ ವಿಲ್ ಮಾಡಬಹುದು.

ಐಶ್ವರ್ಯ ರೈ ಅವರ ಹೊಕ್ಕುಳ ಬಳ್ಳಿ ಸಂರಕ್ಷಣೆ ಮಾಡಲಾಗಿದೆ. ಮುಂದೊಂದು ದಿನ ಏನಾದರೂ ನೂನ್ಯತೆ ಎದುರಾದರೆ, ಅದರಲ್ಲಿರುವ ಟಿಶ್ಯೂ ಉಪಯೋಗಕ್ಕೆ ಬರುತ್ತದೆ. ಇದನ್ನು ಮೊದಲ ಬಾರಿಗೆ ಮಾಡಿದ್ದು ಐಶ್ವರ್ಯ ರೈ.