Friday, 22nd November 2024

ಪೋಷಕರೇ, ನಿಮ್ಮ ಪ್ರತಿಷ್ಠೆಗೆ ಮಕ್ಕಳನ್ನು ತುಳಿಯದಿರಿ

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ – 151

ಬಾಲ ಪ್ರತಿಭೆಗಳಿಗೆ ಅವರ ಖ್ಯಾತಿಯೇ ಮುಳುವಾಗದಿರಲಿ ವಿಚಾರ ಕುರಿತ ಕಾರ್ಯಕ್ರಮದಲ್ಲಿ ಮಾಸ್ಟರ್ ಆನಂದ್ ಹಿತವಚನ ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ತೆಂಡೂಲ್ಕರ್, ದ್ರಾವಿಡ್, ಡಾಕ್ಟರ್, ಎಂಜಿನಿಯರ್ ಇತ್ಯಾದಿ ಆಗಬೇಕೆನ್ನುವ ಮೂಲಂಗಿ ಕಟ್ಟಿ, ಅವರನ್ನು ಹಾಳು ಮಾಡುತ್ತೇವೆ. ಗೋರ (ಭಕ್ತ ಕುಂಬಾರ) ಭಕ್ತಿಯಲ್ಲಿ ಪರವಶನಾಗಿ ತನ್ನ ಮಗುವನ್ನು ಮಣ್ಣಿನಲ್ಲಿ ತುಳಿಯು ವಂತೆ, ಲೈಕ್ಸ್, ಕಾಮೆಂಟ್ ಗಳ ಮೂಲಕ ಪೋಷಕರು ಎಂಜಾಯ್ ಮಾಡಲು ಹೋಗಿ, ಮಕ್ಕಳನ್ನು ತುಳಿದುಹಾಕುತ್ತಾರೆ ಎಂದು ನಟ, ನಿರ್ದೇಶಕ, ನಿರೂಪಕ ಮಾಸ್ಟರ್ ಆನಂದ್ ಮಾರ್ಮಿಕವಾಗಿ ಹೇಳಿದರು.

‘ವಿಶ್ವವಾಣಿ’ ಕ್ಲಬ್‌ಹೌಸ್‌ನಲ್ಲಿ ಪೋಷಕರೇ ಎಚ್ಚರ ! ಬಾಲಪ್ರತಿಭೆಗಳಿಗೆ ಅವರ ಖ್ಯಾತಿಯೇ ಮುಳುವಾಗದಿರಲಿ ! ಎಂಬ ವಿಚಾರ ಕುರಿತಂತೆ ಅವರು ಮಾತನಾಡಿದರು. ನಾನು ನಟನೆ ಆರಂಭಿಸಿದ ಸಮಯದಲ್ಲಿಯೂ ಒತ್ತಡ ಇತ್ತು. ಆದರೆ, ಇಂದಿನ ದಿನಗಳಿಗೆ ಹೋಲಿಸಿ ದಾಗ ತುಂಬಾ ಭಿನ್ನತೆಯಿದೆ. ಆಗ, ಕಂಬಳಿಹುಳು ನಿಧಾನವಾಗಿ ಚಿಟ್ಟೆಯಾಗುವ ಸ್ಥಿತಿಯಿದ್ದರೆ, ಈಗ ಮೊಟ್ಟೆಯಿಂದ ಹೊರಗೆ ಬರುತ್ತಿದ್ದಂತೆ ಚಿಟ್ಟೆಯಾಗುವ ಸ್ಥಿತಿಯಿದೆ. ‘ಸೊಂಯ್ ಟಪಕ್’ ಎಂದು ರಾಕೆಟ್ ಬ್ಲಾಸ್ಟ್ ಆಗಿಬಿಡುತ್ತದೆ.

ರಾಕೆಟ್‌ನ ಚಲನೆ ಏನು? ನಂತರ ಅದರ ಪುಡಿ ಎಲ್ಲಿ ಬೀಳುವುದು ಎಂದು ಯಾರಿಗೂ ಗೊತ್ತಿಲ್ಲ. ಹಾಗಾಗಿ, ಪೋಷಕರು ತಮ್ಮ ವೇಗ ಕಡಿಮೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು. ಮುಂಚೆ ಸ್ಟಾರ್ ಇಸ್ ಬಾರ್ನ್ ಅಥವಾ ಸ್ಟಾರ್ ಈಸ್ ಕ್ರಿಯೇಟ್ ಆಗುತ್ತದೋ ಇಲ್ಲವೋ ಗೊತ್ತಿರಲಿಲ್ಲ. ಆದರೆ, ಇಂದಿನ ನವ ಮಾಧ್ಯಮಗಳ ಕಾಲದಲ್ಲಿ ಎಲ್ಲರೂ ಸ್ಟಾರ್ ಆಗಬಹುದಾಗಿದೆ. ಸೋಷಿಯಲ್ ಮೀಡಿಯಾ ಎರಡೂ ಕಡೆಯೂ ಹರಿತವಿರುವ ಕತ್ತಿ. ಹೀಗಾಗಿ ಬಹಳ ಎಚ್ಚರಿಕೆಯಿಂದಿರಬೇಕಿದೆ ಎಂದರು.

ತಮ್ಮ ಕುಟುಂಬ ಮತ್ತು ಕಲಾ ಕ್ಷೇತ್ರದ ಬೆಳವಣಿಗೆ ಕುರಿತು ಮಾಸ್ಟರ್ ಆನಂದ್ ಹೇಳಿದ್ದು ಹೀಗೆ…. ನಮ್ಮದು ಸಾಧಾರಣ ಕುಟುಂಬ. ಅಮ್ಮ ಬಿ.ಎಸ್. ಲತಾ (ನಂಜನಗೂಡು) ಹಾಗೂ ತಂದೆ, ಕೇಂದ್ರ ಸರಕಾರದ ಉದ್ಯೋಗಿ ವಿ. ಹರಿಹರನ್. ಅಮ್ಮ ತಮಾಷೆಯಾಗಿ ಮಾತನಾಡುವುದರ ಜತೆಗೆ ಕವಿತೆ ಬರೆಯುತಿದ್ದರೆ, ಅಪ್ಪ ಮಿಮಿಕ್ರಿ ಮಾಡುತ್ತಿದ್ದರು. ಈ ಕಲೆಯೇ ನನ್ನ ನನ್ನ ನಟನೆಗೆ ಕಾರಣವಾಯಿತೆನ್ನಬಹುದು. ನನ್ನ ಪ್ರತಿಭೆ ಬೆಳಕಿಗೆ ಬಂದಿದ್ದು, ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನಡೆಯು ತ್ತಿದ್ದ ಕಾರ್ಯಕ್ರಮವೊಂದರಲ್ಲಿ.

ಅಲ್ಲಿ ನಾನು ಡ್ಯಾನ್ಸ್ ಮಾಡಲು ಹಠ ಮಾಡಿದಾಗ, ಮೋಹನ್ ಜಿಂಪೆಟ್ಸ್ ಎಂಬ ಆರ್ಕೆಸ್ಟ್ರಾ ತಂಡವನ್ನು ಅಪ್ಪ ಒಪ್ಪಿಸಿದರು. ‘ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು…, ಗೀತೆಗೆ ಡ್ಯಾನ್ಸ್ ಮಾಡಿದಾಗ ಎಲ್ಲರೂ ಖುಷಿಪಟ್ಟರು. ಅಪ್ಪ ಆಗಿ
ನಿಂದ ಮಿಮಿಕ್ರಿ, ನಾಟಕ, ದೂರದರ್ಶನಗಳಿಗೆ ಕರೆ ದೊಯ್ಯುವುದನ್ನು ಆರಂಭಿಸಿದರು. ನನ್ನ ಮೊದಲ ಡೆಬ್ಯು ಆಗಿದ್ದು, ದೂರ ದರ್ಶನದಲ್ಲಿ ಅಮ್ಮ ನಡೆಸಿಕೊಟ್ಟ ‘ತುತ್ತಿ ಗೊಂದು ಕಥೆ’ ಮೂಲಕ. ಆನಂತರ ಅಕ್ಷಯ ನಾಟಕ, ದೂರದರ್ಶನದ ಪ್ರೇಮದ ಕಾರಂಜಿ, ದೊಡ್ಡಮನೆ, ಸೀತಾಪತಿ ಸಿಟಿಲೈಫ್ ಧಾರಾವಾಹಿಗಳಲ್ಲಿ ನಟಿಸಿದೆ.

ಕಾನಿಷ್ಕಾ ಹೋಟೆಲ್‌ನಲ್ಲಿ ಅಪ್ಪನೊಂದಿಗೆ ಹೋಗಿದ್ದಾಗ ಆಕಸ್ಮಿಕವಾಗಿ ರಾಜೇಂದ್ರಕುಮಾರ್ ಆರ್ಯ, ಗುರುದಾಸ್ ಶೆಣೈ ಹಾಗೂ ಸಿಹಿಕಹಿ ಚಂದ್ರು ಅವರು ನನ್ನ ಚಟುವಟಿಕೆ ನೋಡಿದ್ದರು. ಅಲ್ಲಿಂದ ರವಿಚಂದ್ರನ್ ಸರ್ ಅವರ ಪರಿಚಯವಾಗಿ, ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಕಿಂದರಿಜೋಗಿ ಸಿನಿಮಾ ಮೂಲಕ ಡೆಬ್ಯು ಆತು. ನನ್ನನ್ನು ಶೇರ್, ಲೈಕ್, ಸಬ್‌ಸ್ಕ್ರೈಬ್ ಮಾಡಿ
ದ್ದೆಲ್ಲವೂ ರವಿ ಸರ್. ಸೆಟ್ ನೋಡಲು ಯಾರೇ ಬಂದರೂ ಅವರಿಗೆಲ್ಲಾ ನನ್ನನ್ನು ಪರಿಚಯಿಸುತ್ತಿದ್ದರು.

ಕಿಂದರಿಜೋಗಿ ಬಿಡುಗಡೆಗೂ ಮುಂಚೆ ಮುತ್ತಿನಹಾರ, ಶಿವಶಂಕರ್, ಶಾಂತಿಕ್ರಾಂತಿ, ರಾಣಿ ಮಹಾರಾಣಿ, ಜೈಲರ್ ಜಗನ್ನಾಥ್ ಸಿನಿಮಾಗಳಲ್ಲಿ ನಟಿಸಿದ್ದೆ. ಗೌರಿ ಗಣೇಶ ಸಿನಿಮಾದಲ್ಲಿ ನನ್ನ ನಟನೆಗೆ ಉತ್ತಮ ಅಭಿಪ್ರಾಯಗಳು ಬಂದವು. ನಾನು ಮಾಡಿದೆ ಎನ್ನುವುದಕ್ಕಿಂತ ಫಣಿ ರಾಮಚಂದ್ರ ಸರ್, ಕುಣಿಗಲ್ ನಾಗಭೂಷಣ್ ಸರ್ ಇದಕ್ಕೆ ಕಾರಣರು ಎಂದು ಹೇಳಲೇಬೇಕು.

೨೦೦೦ದಲ್ಲಿ ನಟನೆ ಮತ್ತೆ ಪ್ರಾರಂಭವಾಯಿತು. ಸ್ವತಂತ್ರವಾಗಿ ನಟನೆ, ಧಾರಾವಾಹಿ ನಿರ್ದೇಶನ ಹೀಗೆ ಸಾಗಿತಾದರೂ, ವೈಫಲ್ಯ ಗಳು ಎದುರಾದವು. ಕಾರಣ, ಚಿಕ್ಕಂದಿನಲ್ಲಿ ನನಗೆ ಸಿಕ್ಕ ಮನ್ನಣೆ, ಪ್ರೀತಿಯ ಮುಂದೆ ನಂತರ ಮಾಡಿದ್ದೆಲ್ಲ ಏನೂ ಅಲ್ಲ
ಎಂಬಂತಹ ಅಭಿಪ್ರಾಯಗಳು ಬಂದವು. ಇದರಿಂದ ನಿರಾಶನಾದೆ. ದೇವಾನಂದ್ ಅವರ ಸಂದರ್ಶನವೊಂದನ್ನು ನೋಡಿದಾಗ, ನನಗೂ ಮುಂದೆ ಇದೇ ಏಕತಾನತೆ ಕಾಡಲಿದೆಯೇ ಎಂಬ ಭಯ ಶುರುವಾಯಿತು. ನಾನು ಯಾರು? ಎಂಬ ಪ್ರಶ್ನೆ ಕಾಡತೊಡಗಿ, ಅಧ್ಯಾತ್ಮದತ್ತ ವಾಲತೊಡಗಿದೆ.

ವಿನಯ್ ಗುರೂಜಿ ಅವರಿಂದ ಸಿಕ್ಕ ‘ಅಹಂಕಾರ- ಮಮಕಾರ ಇವೆರಡನ್ನೂ ತಿಳಿಯಾಗಿಸಲು ಎಷ್ಟು ಸಾಧ್ಯವೋ, ಅಷ್ಟು ಮಾಡು, ಎರಡು ‘ಕಾರ’ಗಳನ್ನು ಬಿಡುತ್ತಾ ಹೋಗು’ ಎಂಬ ಫಾರ್ಮುಲಾ ನನ್ನ ಜೀವನದ ಮೇಲೆ ಪ್ರಭಾವ ಬೀರಿದವು. ನಂತರ ನನ್ನ
ಈ ಬೆಳವಣಿಗೆ ನಿಮಗೆಲ್ಲಾ ತಿಳಿದೇ ಇದೆ ಎಂದು ವಿವರಿಸಿದರು.

ಬೇಬಿ ಶಾಮಿಲಿಯನ್ನು ಸಿಂಡ್ರೇಲಾಳಂತೆ ಬೆಳೆಸಿದ್ದರು
ನನ್ನೊಂದಿಗೆ ಸಿನಿಮಾದಲ್ಲಿ ಅಭಿನಯಿಸಿದ ಬೇಬಿ ಶಾಮಿಲಿ ಕಥೆಯೂ ಇದೇ ರೀತಿ ಆಗಿತ್ತು. ಚಿತ್ರೀಕರಣದ ಬಿಡುವಿನಲ್ಲಿ ನಾನು ಮಣ್ಣಿನಲ್ಲಿ ಆಟವಾಡಿಕೊಂಡು, ಜೋಳ, ಕಡಲೇಕಾಯಿ ತಿಂದುಕೊಂಡು ಜಾಲಿಯಾಗಿರುತ್ತಿದ್ದೆ. ನಂತರ ಮೇಕಪ್ ಮಾಡಿ ಕೊಂಡು ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೆ. ಆದರೆ, ಶಾಮಿಲಿಯನ್ನು ಅವರ ತಂದರೆ ‘ಸಿಂಡ್ರೆಲ್ಲಾ’ಳಂತೆ ಬೆಳೆಸಿದ್ದರು. ಆಟ ವಾಡಲು ಬಿಡದೆ, ನಿಯಂತ್ರಣ ಮಾಡುತ್ತಿದ್ದರು. ಆಕೆಗೆ ಎಲ್ಲಿಂದಲೋ ಐಸ್‌ಕ್ರೀಂ ಬರುತ್ತಿತ್ತು. ಅವಳೊಂದಿಗೆ ನಟಿಸುತ್ತಿದ್ದ ಪ್ರಾಣಿಗಳೂ ಎಸಿ ಕಾರ್‌ನಲ್ಲೇ ಇರುತ್ತಿದ್ದವು.

ಆಕೆ ರಜನಿಕಾಂತ್, ಚಿರಂಜೀವಿ ಅಂತಹ ಮೇರು ನಟರ ಜತೆಗೆ ಹಲವು ಭಾಷೆಗಳಲ್ಲಿ ನಟಿಸಿದ್ದಳು. ಆದರೆ, ಆಕೆ, ನನ್ನಂತೆ ಇರಲು ಇಷ್ಟಪಡುತ್ತಿದ್ದಳಾದರೂ ಸಾಧ್ಯವಾಗುತ್ತಿರಲಿಲ್ಲ. ಆದರೆ, ಈಗ ಆಕೆ ನಾಯಕಿಯಾಗಿ ಯಶಸ್ಸು ಕಾಣಲು ಸಾಧ್ಯವಾಗಿರುವುದಕ್ಕೆ ಇಂತಹ ನಕಾರಾತ್ಮಕ ಅಂಶಗಳೂ ಕಾರಣವಾಗಿರಬಹುದು ಎಂದು ಆನಂದ್ ಅಭಿಪ್ರಾಯಪಟ್ಟರು.

ಲೈಕ್, ಕಾಮೆಂಟ್ಸ್ ತಲೆಗೆ ತುಂಬಬೇಡಿ
ಈಗಿನ ಸಂದರ್ಭದಲ್ಲಿ ಲೈಕ್ಸ್, ಕಾಮೆಂಟ್ಸ್‌ಗಳೆಲ್ಲವನ್ನೂ ಪೋಷಕರು ನಿಮ್ಮಲ್ಲೇ ಇಟ್ಟುಕೊಳ್ಳಿ. ಮಕ್ಕಳ ತಲೆಗೆ ಅದನ್ನೆಲ್ಲಾ
ತುಂಬಬೇಡಿ. ಇತ್ತೀಚೆಗೆ ನನ್ನ ಮಗಳು ವಂಶಿಕಾ ಅಂಜಲಿ ಕಶ್ಯಪ್ ವೀಡಿಯೊ ವೈರಲ್ ಆಗಿ, ಪೇಜ್‌ಗೆ ಫಾಲೋವರ‍್ಸ್  ಜಾಸ್ತಿಯಾಗಿ ದ್ದನ್ನು ಪ್ರಸ್ತಾಪಿಸಿದ ನನ್ನ ಪತ್ನಿಗೆ ಮೌನವಾಗಿರುವಂತೆ ಹೇಳಿದೆ. ತನಗಿಂತ ತಂಗಿಗೆ ಹೆಚ್ಚು ಫಾಲೋವರ‍್ಸ್ ಇದ್ದಾರೆಂದು ೫ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಗ ನೊಂದುಕೊಂಡಾಗ, ಆತನಿಗೆ ಪ್ರಾಯೋಗಿಕವಾಗಿ ತಿಳಿಹೇ ಳಿದೆ. ನಿಜವಾಗಿಯೂ ನಮ್ಮೊಂದಿಗಿರುವವರೇ ನಮ್ಮ ಫಾಲೋ ವರ‍್ಸ್ ಆಗಿರುತ್ತಾರೆಂದು ತಿಳಿಸಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಕಿವಿಮಾತು
ಮಕ್ಕಳಿಗೆ ರಾಜಮುದ್ರೆ ಎಂಬುದು ವರವೂ ಹೌದು, ಶಾಪವೂ ಹೌದು. ಸಾಧಿಸಲು ಇದು ಬಿಟ್ಟರೆ ಬೇರಾವುದೂ ಇಲ್ಲ, ಅವಾರ್ಡ್‌ ಗಳ ಸಾಮ್ರಾಜ್ಯ ಇವೆಲ್ಲವನ್ನೂ ಅವರಲ್ಲಿ ತುಂಬಬೇಡಿ. ಸ್ಫೂರ್ತಿ ಇರಲಿ, ಆದರೆ ಅತಿಯಾದರೆ ಅಪಾಯಕಾರಿಯೂ ಆಗಲಿದೆ.
ಪ್ರಸಿದ್ಧಿಯಾದಾಗ ಸಿಗುವ ಪ್ರೀತಿ, ಬೇಕಾದ್ದು ಕಾಲಕ್ರಮೇಣ ಸಿಗುವುದಿಲ್ಲ ಎಂಬುದು ಅರಿವಾಗುತ್ತಾ ಹೋದಂತೆ ಜೀವನ
ಹಾಳಾಗುವುದರಲ್ಲಿ ಯಾವುದೇ ಸಂಶಯಗಳಿಲ್ಲ. ಮಕ್ಕಳನ್ನು ನಂಬರ್ ಒನ್ ಮಾತ್ರ ಮಾಡಿದಾಗ ಅದು ಅವರನ್ನು ಒಬ್ಬಂಟಿ ಯಾಗಿಸಲಿದೆ. ನಂತರದ ಸ್ಥಾನಗಳನ್ನು ತೋರಿಸುತ್ತಾ ನಂಬರ್ ಒನ್ ಅನ್ನು ಸೂರ್ತಿಯಾಗಿಸುವತ್ತ ಅವರ ಬದುಕನ್ನು ಉಜ್ವಲ ಗೊಳಿಸಬೇಕಾದ್ದು ಪೋಷಕರ ಕರ್ತವ್ಯವಾಗಿದೆ ಎಂದು ಮಾಸ್ಟರ್ ಆನಂದ್ ಹೇಳಿದರು.

***

‘ವಿಶ್ವವಾಣಿ’ ಕ್ಲಬ್‌ಹೌಸ್‌ನಲ್ಲಿ ಪಾಲ್ಗೊಂಡಿದ್ದು ತುಂಬಾ ಖುಷಿ ಯಾಗಿದೆ. ವಿಶ್ವೇಶ್ವರ ಭಟ್ ಸರ್ ಎದುರಿಗೆ ಸಿಕ್ಕಾಗಲೆಲ್ಲಾ ಹಲವು ವಿಷಯಗಳ ಬಗ್ಗೆ ಚರ್ಚಿಸುತ್ತೇವೆ. ಇತ್ತೀಚೆಗೆ ಅವರ ಕಚೇರಿಗೆ ಹೋದಾಗಲೂ ಸಿಬ್ಬಂದಿಯೊಂದಿಗೆ ಪೋಟೊ ತೆಗೆಸಿ ಕೊಂಡಿದ್ದೆ. ಇಲ್ಲಿ ನಾನು ಮಾತನಾಡುತ್ತಿರುವುದು ‘ಹತ್ತು ಹೆತ್ತವಳ ಮುಂದೆ ಒಂದು ಹೆತ್ತವಳು ಮಾತನಾಡಲು ಕುಳಿತಂತೆ’ ಇದೆ.
– ಮಾಸ್ಟರ್ ಆನಂದ್, ನಟ, ನಿರೂಪಕ, ನಿರ್ದೇಶಕ

ನಮ್ಮಲ್ಲಿ ಬಾಲಪ್ರತಿಭೆಗಳಿಗೆ ಕೊರತೆಯಿಲ್ಲ. ಇತ್ತೀಚೆಗಂತೂ ಮಕ್ಕಳು ತಮ್ಮ ವಯಸ್ಸಿಗೆ ಮೀರಿದ ಪ್ರತಿಭಾ ಪ್ರದರ್ಶನ ತೋರುತ್ತಿ
ದ್ದಾರೆ. ಮಕ್ಕಳನ್ನು ಹುರಿದುಂಬಿಸುವ ಜತೆಗೆ ಸರಿಯಾಗಿ ಬೆಳೆಸುವ ಹೊಣೆಗಾರಿಕೆಯೂ ಪೋಷಕರಿಗೆ ಇದೆ. ‘ಗೌರಿ ಗಣೇಶ’ ಸಿನಿಮಾ ದಲ್ಲಿ ಮಾ. ಆನಂದ್ ಅವರ ನಟನೆಯನ್ನು ಮರೆಯಲು ಸಾಧ್ಯವಿಲ್ಲ. ಬಾಲನಟನಲ್ಲದೆ, ಪ್ರಬುದ್ಧ ನಟ, ನಿರೂಪಕ, ನಿರ್ದೇಶಕ ನಾಗಿಯೂ ತೊಡಗಿಸಿಕೊಂಡಿದ್ದಾರೆ.

***

‘ಮಿಸ್ಟರ್, ಸ್ಪೋಕ್ ಲೈಕ್ ಮಾಸ್ಟರ್’ ಆಗಿದ್ದು, ಅವರ ಮಾತುಗಳು ಚೆಂದವಾಗಿ, ಹೃದಯಸ್ಪರ್ಶಿಯಾಗಿರುತ್ತದೆ. ಇಂದಿನ ಮಕ್ಕಳು ಮತ್ತು ಪೋಷಕರಿಗೆ ಒಳ್ಳೆಯ ಟಿಪ್ಸ್ ನೀಡಿದ್ದಾರೆ. ಇವರು ಬಾಲ ಪ್ರತಿಭೆಯೂ ಹೌದು, ಅಬಾಲ ಪ್ರತಿಭೆಯೂ ಹೌದು.

– ವಿಶ್ವೇಶ್ವರ ಭಟ್,
ವಿಶ್ವವಾಣಿ ಪ್ರಧಾನ ಸಂಪಾದಕರು