Monday, 16th September 2024

ಕನ್ನಡದ ಕಣ್ಣಪ್ಪ ಕಣ್ಣು ಕೊಟ್ಟಿದ್ದು ಹೇಗೆ ?

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ 120

ರಾಜ್‌ಕುಮಾರ್ ನೇತ್ರದಾನ ಮಾಡಿದ ಹಿಂದಿನ ಕಥೆ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ

ಬೆಂಗಳೂರು: ವರನಟ ಡಾ. ರಾಜ್‌ಕುಮಾರ್ ಅವರು ತಮ್ಮ ನೇತ್ರದಾನ ಮಾಡುವ ಜತೆಜತೆಯಲ್ಲಿ ನೇತ್ರ ಸಂಗ್ರಹಾಲಯ ಆರಂಭಿಸಿದ್ದರ ಹಿಂದಿನ ರೋಚಕ ಕಥೆಯನ್ನು ‘ವಿಶ್ವವಾಣಿ’ ಕ್ಲಬ್ ಹೌಸ್‌ನಲ್ಲಿ ನಾರಾಯಣ ನೇತ್ರಾಲಯದ ಸಂಸ್ಥಾಪಕ, ನೇತ್ರತಜ್ಞ ಡಾ.ಭುಜಂಗ ಶೆಟ್ಟಿ ಅವರು ಬಿಚ್ಚಿಟ್ಟರು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಡಾ.ಭುಜಂಗ ಶೆಟ್ಟಿ ಅವರು ವೈದ್ಯ ಶಿಕ್ಷಣವನ್ನು ಅಧ್ಯಯನ ಮಾಡುತ್ತಿದ್ದಾಗ ಹೆಚ್ಚಿನ ಕಣ್ಣುಗಳು ಶ್ರೀಲಂಕಾದಿಂದ ಬರುತ್ತಿತ್ತು. ಸುಮಾರು 50-60 ದೇಶಗಳಿಗೂ ಅದೇ ದೇಶ ಕಣ್ಣಿನ ದಾನವನ್ನು ಮಾಡುತ್ತಿತ್ತು. ಕಾರಣವನ್ನು ನೋಡಿದಾಗ ಅಲ್ಲಿನ ಬೌದ್ಧ ಧರ್ಮೀಯರು ಮೃತರಾದ ನಂತರ ತಮ್ಮ ದೇಹದ ಒಂದು ಭಾಗವನ್ನು ದಾನ ಮಾಡುತ್ತಿದ್ದರು. ಇದನ್ನು ಗಮನಿಸಿದ ಡಾ.ಭುಜಂಗ ಶೆಟ್ಟಿ ಅವರು ನಮ್ಮ ರಾಜ್ಯದಲ್ಲೂ ಕಣ್ಣಿನ ಸಂಗ್ರಹಾಲಯ ಇದ್ದರೆ ನಾವು ಬೇರೆ ದೇಶಗಳಿಂದ ತರಿಸುವುದು ಬೇಕಾಗುವುದಿಲ್ಲ ಎನ್ನುವುದನ್ನ ಅರಿತರು. ಈ ಕುರಿತಾಗಿನ ಜನಜಾಗೃತಿ ದೊಡ್ಡ ವ್ಯಕ್ತಿಗಳಿಂದಲೇ ಆಗಬೇಕಿತ್ತು. ಹಾಗಾಗಿ ನಟ ಡಾ. ರಾಜ್‌ಕುಮಾರ್ ಅವರ ಬಳಿ ಮಾತನಾಡಿ, ಅವರ ಹೆಸರನ್ನೇ ಇಟ್ಟರು ಮತ್ತು ರಾಜ್‌ಕುಮಾರ್ ಕೂಡ ಇದರ ಕುರಿತು ಜಾಗೃತಿ ಮೂಡಿಸಿದ್ದರು.

ಇನ್ನು ನೇತ್ರ ಆರೋಗ್ಯದ ಬಗ್ಗೆ ಮಾತನಾಡಿದ ಅವರು, ಆರೋಗ್ಯ ಇದ್ದರೆ ನೂರಾರು ಕನಸು ಕಾಣಬಹುದು. ಆರೋಗ್ಯವೇ ಇಲ್ಲದಿದ್ದರೆ ಇದು ದೊಡ್ಡ ಕನಸಾಗಿಯೇ ಮನದಲ್ಲಿ ಉಳಿಯಲಿದೆ. ಪಂಚೇಂದ್ರಿಯಗಳಲ್ಲಿ ಕಣ್ಣು ತುಂಬಾ ಮುಖ್ಯವಾದ ಅಂಗ. ಪ್ರತಿಯೊಬ್ಬರೂ ಇದರ ಕುರಿತಾಗಿ ಲಕ್ಷ್ಯ ವಹಿಸು ವುದು ತುಂಬಾ ಮುಖ್ಯ ಎಂದು ನಾರಾಯಣ ನೇತ್ರಾಲಯದ ಸಂಸ್ಥಾಪಕ, ನೇತ್ರತಜ್ಞ ಡಾ. ಭುಜಂಗ ಶೆಟ್ಟಿ ಅವರು ತಿಳಿಸಿದರು.

ಹೆಚ್ಚಿನವರು ಕಣ್ಣಿನ ಕುರಿತಾಗಿ ಅಲಕ್ಷ್ಯ ಮಾಡುವುದು ಇಂದಿನ ದಿನಗಳಲ್ಲಿ ಗಮನಿಸುತ್ತಿರುವ ಸಂಗತಿ. ಚಿಕ್ಕ ಮಕ್ಕಳಿದ್ದಾಗಲೇ ದೃಷ್ಟಿ ತಪಾಸಣೆಯನ್ನು ಮಾಡದಿದ್ದರೆ ಭವಿಷ್ಯದಲ್ಲಿ ತೊಂದರೆ ಆಗಬಹುದು. ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಹೇಳಿದರು. ಈಗಂತೂ ದೀಪಾವಳಿಯ ಸಮಯ. ಸಂಭ್ರಮ ಸಡಗರ ಎದ್ದು ಕಾಣುತ್ತದೆ. ಪರಿಸರ ಮಾಲಿನ್ಯದಿಂದ ಬೆಂಗಳೂರಿನಲ್ಲಿ ಹೆಚ್ಚಿನ ಮಂದಿ ಅಸ್ತಮಾ, ಅಲರ್ಜಿಯಂತಹ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪರಿಸರ ನಾಶ ಮಾಡುವುದು ತರವಲ್ಲ ಎಂದರು.

ಸಕ್ಕರೆ ಕಾಯಿಲೆ ಮತ್ತು ಕಣ್ಣು: ಸಕ್ಕರೆ ಕಾಯಿಲೆ ಇದ್ದವರು ಖಾಯಿಲೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಅನಿವಾರ್ಯ. ಇದೊಂದು ಅಪಾಯಕಾರಿ ಕಾಯಿಲೆಯಾಗಿದ್ದು ದೇಹದ ಎಲ್ಲಾ ಭಾಗಗಳಿಗೂ ಹೊಡೆತ ಕೊಡಬಹುದು. ಕಣ್ಣಿನ ಮೇಲೆ ಸಾಮಾನ್ಯವಾಗಿ ವ್ಯತಿರಿಕ್ತ ಪರಿಣಾಮವನ್ನೇ ಬೀರುತ್ತದೆ. ವರ್ಷಕ್ಕೆ ಒಮ್ಮೆಯಾದರೂ ಕಣ್ಣಿನ ತಪಾಸಣೆ ಮಾಡಿಸಬೇಕು.

ಭುಜಂಗ ಶೆಟ್ಟಿ ಹೇಳಿದ ಜಾಗೃತಿ ಮಾತು
ದೀಪಾವಳಿ ಹಬ್ಬದಂದು ಎಲ್ಲರೂ ದೀಪ ಹಚ್ಚುವುದರ ಮೂಲಕ ಹಬ್ಬವನ್ನು ಸಂಭ್ರಮಿಸೋಣ. ಪಟಾಕಿ ಬೇಡ. ಕಣ್ಣು ದೇಹದ ಉಳಿದ ಭಾಗಗಳಂತಲ್ಲ. ಒಂದು ಚಿಕ್ಕ ಕಿಡಿಯೂ ಕಣ್ಣನ್ನು ಹಾಳು ಮಾಡುತ್ತದೆ. ಇದು ಒಂದು ರೀತಿಯಲ್ಲಿ ಹಣ ಕೊಟ್ಟು ಕಣ್ಣು ಕಳೆದುಕೊಳ್ಳುವ ಹಾಗೆ. ಮಕ್ಕಳಿಗೆ ಕಣ್ಣಿನ
ತಪಾಸಣೆ ಮುಖ್ಯ: ಚಿಕ್ಕವರಿದ್ದಾಗಲೇ ಕಣ್ಣಿನ ತಪಾಸಣೆ ಮಾಡಿಸಬೇಕು. ದೋಷವಿದ್ದಲ್ಲಿ ದೇಹ ಬೆಳೆದಂತೆ ಕಣ್ಣಿಗೂ ಕೂಡ ತೊಂದರೆಯಾಗುತ್ತದೆ. ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಕಡ್ಡಾಯವಾಗಿ ತಪಾಸಣೆ ಮಾಡಿಸಬೇಕು. ದೋಷವಿದ್ದಲ್ಲಿ ಕನ್ನಡಕ ಬಳಸಬೇಕು.

ನೇತ್ರದಾನ ಮಹಾದಾನ : ನಾವು ನೇತ್ರದಾನವನ್ನು ಮಾಡುವ ನಿರ್ಧಾರವನ್ನು ಮಾಡಿದರೆ ಎಷ್ಟೋ ಜನರು ನಮ್ಮ ಕಣ್ಣುಗಳಿಂದ ಅವರ ಕನಸು ಗಳನ್ನು ನನಸು ಮಾಡಿಕೊಳ್ಳುತ್ತಾರೆ. ಆದರೆ ನಾವು ಕಣ್ಣಿನ ದಾನವನ್ನು ಮಾಡಿದ ನಂತರ ಮನೆಯವರಿಗೆ ತಿಳಿಸುವುದು ಕಡ್ಡಾಯ. ಯಾಕೆಂದರೆ ನೇತ್ರದಾನ ಮಾಡುವವರು ಕೊನೆಯುಸಿರೆಳೆದಾಗ, ನೇತ್ರಾಲಯಗಳಿಗೆ ಮನೆಯ ಸದಸ್ಯರೇ ಕರೆ ಮಾಡಬೇಕಾಗುತ್ತದೆ.

ಮುಖ್ಯಾಂಶಗಳು
ಮಕ್ಕಳ ಕಣ್ಣಿನ ಪರೀಕ್ಷೆ 6 ರಿಂದ 1 ವರ್ಷಕ್ಕೆ ಕಡ್ಡಾಯ
ಮಕ್ಕಳಲ್ಲಿ ಮೆಳ್ಳಗಣ್ಣು (ಮಾಲ್ಗಣ್ಣು) ಕಂಡರೆ ಅದು ಅದೃಷ್ಟ ಮಾತ್ರವಲ್ಲ ದೃಷ್ಟಿ ನಾಶಕ್ಕೂ ಕಾರಣ
ಗ್ಲೂಕೋಮಾ ಇದ್ದರೆ ವೈದ್ಯರು ನೀಡಿದ ಕಣ್ಣಿನ ಹನಿಗಳನ್ನು ಬಿಟ್ಟುಕೊಳ್ಳಿ
ಆನ್‌ಲೈನ್ ತರಗತಿಗಳು ಹೆಚ್ಚಾಗಿ ನಡೆಯುತ್ತಿದ್ದು, ಕಣ್ಣಿನ ಸಮಸ್ಯೆ ತಡೆಯಲು ಕನ್ನಡಕ ಕಡ್ಡಾಯ ಬಳಕೆ
ಕಣ್ಣಿನಲ್ಲಿ ಪೊರೆ ಉಂಟಾದಾಗ ವೈದ್ಯರನ್ನು ಬೇಟಿ ಮಾಡುವ ಮೂಲಕ ಪೊರೆ ತೆಗೆಸಬೇಕು
೪೦ ವರ್ಷದ ಆಸುಪಾಸಿನಲ್ಲಿ ಬರುವ ಕಣ್ಣಿನ ಸಮಸ್ಯೆ ಚಾಲೀಷ.

ವೈದ್ಯರನ್ನು ಭೇಟಿ ಮಾಡಿದರೆ ಉತ್ತಮ
ಯಾವುದೇ ಕಣ್ಣಿನ ಸಮಸ್ಯೆಗೆ ಔಷಧಿ ಹನಿಗಳನ್ನು ಬಿಟ್ಟ ನಂತರ ಕಡ್ಡಾಯವಾಗಿ 2 ನಿಮಿಷ ಕಣ್ಣು ತೆರೆಯಬೇಡಿ
ಕಣ್ಣಿನ ಹನಿ ಬಿಡುವ ಬಾಟಲಿಯ ತುದಿ ಮುಟ್ಟಬೇಡಿ. ಮುಚ್ಚಳ ತೆರೆದು 30 ದಿನಗಳ ನಂತರ ಅದನ್ನು ಬಳಸಲೇಬಾರದು.
ಕಣ್ಣಿನ ಸುರಕ್ಷತೆ ಬಗ್ಗೆ ವೈದ್ಯರ ಬಳಿ ಸಲಹೆ ಪಡೆದು ಸಂಬಂಧಿತ ಔಷಧಿ ಪಡೆಯಿರಿ

Leave a Reply

Your email address will not be published. Required fields are marked *