ನಮ್ಮ ಶಿಕ್ಷಣ ಪದ್ದತಿ ಎಂದರೆ ಅದು ಜ್ಞಾನಾರ್ಜನೆ: ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಗೀತಾ ರಾಮಾನುಜಂ
ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು
ತಮಗೆ ಪ್ರಿಯರಾದವರೆಂಬ ಕಾರಣಕ್ಕ ಸಾಹಿತಿಗಳು, ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಪ್ರತಿಷ್ಠಿತ ವ್ಯಕ್ತಿಗಳನ್ನು ಪಠ್ಯದಲ್ಲಿ ಸೇರಿಸಲು ಹೋಗಬಾರದು. ಆದರೆ, ನಮ್ಮಲ್ಲಿ ಆಗುತ್ತಿರುವುದು ಇದೇ. ಹೀಗಾಗಿ ಪಠ್ಯದಲ್ಲಿ ಮಕ್ಕಳೇ ಇಲ್ಲದಂತಾಗಿದೆ ಎಂದು ಶಿಕ್ಷಣ ತಜ್ಞೆ ಗೀತಾ ರಾಮಾನುಜಂ ಬೇಸರ ವ್ಯಕ್ತಪಡಿಸಿದ್ದಾರೆ.
‘ವಿಶ್ವವಾಣಿ ಕ್ಲಬ್‌ಹೌಸ್‘ ಏರ್ಪಡಿಸಿದ್ದ ‘ಶಿಕ್ಷಣ ಎಂದರೆ ಏನು? ಹೇಗಿರಬೇಕು?’ ಕಾರ್ಯ ಕ್ರಮದಲ್ಲಿ ಅರಿವಿನ ಉಪನ್ಯಾಸ ನೀಡಿ, ಮೆಕಾಲೆ ಇಂಗ್ಲಿಷ್ ಶಿಕ್ಷಣ ಪರಿಚಯಿಸುವ ಮೊದಲು ನಮ್ಮ ಶಿಕ್ಷಣ ಪದ್ಧತಿ ಎಂದರೆ ಅದು ಜ್ಞಾನಾರ್ಜನೆಯಾಗಿತ್ತು. ಈ ಜ್ಞಾನಾ ರ್ಜನೆಗೆ ಗುರುಕಲಕ್ಕೆ ಹೋಗುತ್ತಿದ್ದೇವೆ ಎಂದು ಹೇಳಲಾಗುತ್ತಿತ್ತು. ನಮ್ಮಲ್ಲಿ ಯಾವ ರೀತಿಯ ಶಿಕ್ಷಣ ಇರಬೇಕು ಎಂಬುದಕ್ಕೆ ಭೌಗೋಳಿಕತೆ ಬರುವ ಮುಂಚೆ, ಜಾತಿ-ಪಂಥಗಳು ಬರುವ ಮುನ್ನವೇ ಒಂದು ಪದ್ಧತಿ ಇತ್ತು. ಆದರೆ, ಇಂದು ಶಿಕ್ಷಣ ಕೇವಲ ಪಠ್ಯ, ಹಾಜ ರಾತಿ, ಪರೀಕ್ಷೆ, ಅಂಕಪಟ್ಟಿ, ಪದವಿ ಹಾಗೂ ಉದ್ಯೋಗ ಪಡೆಯುವ ಮಾರ್ಗವಾಗಿದೆ ಎಂದರು.
ಪಠ್ಯ ಪುಸ್ತಕ ವಿಚಾರಕ್ಕೆ ಬಂದರೆ, ಸಾಹಿತಿಗಳು, ರಾಜಕೀಯ ಪಕ್ಷಗಳು ತಮಗೆ ಪ್ರಿಯವಾದವರು, ಪ್ರತಿಷ್ಠಿತ ವ್ಯಕ್ತಿಗಳನ್ನು ಪಠ್ಯ ಪುಸ್ತಕ ಪರಿಷ್ಕರಣೆಗೆ ಕೂರಿಸುತ್ತಾರೆ. ಆದರೆ, ಅವರಿಗೆ ಪಠ್ಯದಲ್ಲಿ ಮಕ್ಕಳಿಗೆ ಏನು ಕೊಡಬೇಕು ಎಂಬುದೇ ಗೊತ್ತಿರುವುದಿಲ್ಲ.
ಪಠ್ಯದಲ್ಲಿ ಆ ವ್ಯಕ್ತಿಯನ್ನು ಸೇರಿಸಬೇಕು, ಇವರನ್ನು ಬಿಡಬೇಕು ಎಂಬುದನ್ನು ಬಿಟ್ಟು ಮಕ್ಕಳಿಗೇನು ಕೊಡಬೇಕು ಎಂಬುದನ್ನು ಮೊದಲು ನಿರ್ಧರಿಸಬೇಕು. ಅದಕ್ಕಿಂತ ಬೇಸರದ ಸಂಗತಿ ಎಂದರೆ ಮಕ್ಕಳ ಪಠ್ಯವನ್ನು ಯಾರು ನಿರ್ಧರಿಸಬೇಕು? ಹೇಗೆ ನಿರ್ಧರಿಸ ಬೇಕು ಎಂಬುದಕ್ಕೆ ಒಂದು ಸೂತ್ರವೇ ಇಲ್ಲದಂತಾಗಿದೆ. ರಾಜಕೀಯ ಪಕ್ಷಗಳು ತಮಗೆ ಬೇಕಾದವರನ್ನು, ಬೇಕಾದವರ ವಿವರ ಗಳನ್ನು ಸೇರಿಸುತ್ತಾರೆ.
ಆದರೆ, ಆ ಪಠ್ಯದಲ್ಲಿ ಮಕ್ಕಳೇ ಇಲ್ಲದಿರುವುದು ವಿಪರ್ಯಾಸ. ಶಿಕ್ಷಣ ಕ್ಷೇತ್ರದಲ್ಲಿ ಇಷ್ಟು ನಿರ್ಲಕ್ಷ್ಯ ಮಾಡುವುದಾದರೂ ಏಕೆ ಎಂದು ಪ್ರಶ್ನಿಸಿದರು. ಪಠ್ಯ ತಯಾರಿಸುವ ಮೊದಲು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮಕ್ಕಳಿಗೆ ಶಿಸ್ತು, ಶ್ರದ್ದೆ, ಶ್ರಮದ ಬಗ್ಗೆ ಶಿಕ್ಷಣ ನೀಡುವುದು ಮುಖ್ಯವಾಗುತ್ತದೆ. ಸೋಲು ಅನ್ನುವುದು ಅನಿವಾರ್ಯ ಎಂದು ತಿಳಿಸಿ, ಗೆಲ್ಲುವುದು ಹೇಗೆ
ಎಂಬ ಚಿತ್ರಣ ಇರುವ ಬರವಣಿಗೆ ನೀಡಬೇಕಿದೆ.
೧೦ನೇ ತರಗತಿವರೆಗೆ ಮಕ್ಕಳಿಗೆ ಕಂಟೆಂಟ್ ಓರಿಯಂಟೆಡ್ ಮೇಲೆ ಗಮನ ಇರುವುದಿಲ್ಲ. ಪಠ್ಯ ರಚನೆ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಅಥವಾ ರಾಜಕಾರಣಿಗಳು ತಲೆ ಹಾಕಬಾರದು ಎಂದು ಅಭಿಪ್ರಾಯಪಟ್ಟರು. ಇದುವರೆಗೆ ಪಠ್ಯ ರಚನೆ ಯಲ್ಲಿ ಆಗುತ್ತಿದ್ದ ಲೋಪಗಳನ್ನು ಸರಿಪಡಿಸಲೆಂದೇ ಈಗ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಬಂದಿದೆ. ಅದರ ಮೂಲಕ
ಮಕ್ಕಳಿಗೆ ವ್ಯಕ್ತಿತ್ವ ವಿಕಸನವಾಗುವಂತಹ ಶಿಕ್ಷಣ ನೀಡಬೇಕಾಗಿದೆ. ಅದರಿಂದ ಮಕ್ಕಳಲ್ಲಿ ದೃಢತೆ, ಸಬಲತೆ, ಆತ್ಮವಿಶ್ವವಾಸ ಬರುವ ಮೂಡಿಸುವ ಕೆಲಸ ಮಾಡಬೇಕು.
ಅದಕ್ಕೆ ಬೇಕಾದ ಶಿಕ್ಷಣವನ್ನು ನೀಡಬೇಕು. ಶಿಕ್ಷಣದಲ್ಲಿ ವಿಚಾರಗಳು ಗಟ್ಟಿಯಾಗಿದೆ. ಆದರೆ, ಅದನ್ನು ಮಕ್ಕಳಿಗೆ ನೀಡುವುದರಲ್ಲಿ ನಾವು ಎಡವುತ್ತಿದ್ದೇವೆ. ಆದ್ದರಿಂದ ಮಕ್ಕಳಿಗೆ ಬೇಕಾದ ಶಿಕ್ಷಣ ನೀಡಿ ಅವರನ್ನು ಕಲಿಕೆಗೆ ಪ್ರೇರೇಪಿಸಬೇಕೇ ವಿನಃ ಕಲಿಕೆಗೆ ತಳ್ಳ ಬಾರದು ಎಂದು ಸಲಹೆ ಮಾಡಿದರು.
*
ಗೀತಾ ಹೇಳಿದ್ದು, ಕೇಳಿದ್ದು
ಶಿಕ್ಷಣ ಕ್ಷೇತ್ರದಲ್ಲಿ ೫೨ ವರ್ಷದಿಂದ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಯಾವುದೇ ಸ್ಥಾನಕ್ಕೆ ಹೋದರೂ ಇಂದಿಗೂ ನನ್ನನ್ನು ನಾನು ಒಬ್ಬ ಉಪನ್ಯಾಸಕಿ ಎಂದೇ ತಿಳಿದುಕೊಂಡಿದ್ದೇನೆ.
ಒಬ್ಬ ಒಳ್ಳೆಯ ಗುರು ಆಗಬೇಕು ಎಂಬ ಹಂಬಲದಿಂದ ಈ ಕ್ಷೇತ್ರಕ್ಕೆ ಬಂದಿದ್ದೇನೆ. ಆದರೆ, ಇಂದಿನ ಶಿಕ್ಷಣ ಪದ್ಧತಿ ನೋಡಿದರೆ ನಮಗೆ ನಾವೇ ಅವಮಾನ ಮಾಡಿಕೊಂಡಂತೆ ಆಗಿದೆ. ಶಿಕ್ಷಣಕ್ಕೂ ಕೋವಿಡ್ ಸೋಂಕು ತಗುಲಿದಂತಾಗಿದೆ.
ಯಾವುದೇ ವ್ಯಕ್ತಿಯಾದರೂ ಆ ಕಾಲಕ್ಕೆ ತಕ್ಕ ನಿಲುವು ತೆಗೆದುಕೊಂಡಿರುತ್ತಾರೆ. ಆ ನಿಲುವುಗಳು ಕೂಡ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಹೀಗಾಗಿ ಶಿಕ್ಷಣದಲ್ಲಿ ವ್ಯಕ್ತಿ ಅಭಿಪ್ರಾಯಗಳನ್ನು ಪರಿಚಯ ಮಾಡುವುದು ಎಷ್ಟರಮಟ್ಟಿಗೆ ಸರಿ?
ಇಂದು ಸಾಹಿತಿಗಳು ಪಠ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಈ ರೀತಿ ಮಾತನಾಡುವ ಯಾರೂ ಕೂಡ ಮಕ್ಕಳಿಗೆ ನೀಡಬೇಕಾದ
ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ.
ಯಾರೇ ಆಗಲಿ ರಾಜಕೀಯವಾಗಿ, ಸೈದ್ಧಾಂತಿಕವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಶಿಕ್ಷಣ ಕ್ಷೇತ್ರದಲ್ಲಿ ಮಾಡಬಾರದು ಎಂದರು.
ಅನುಭವಿಗಳು, ಅನುಭಾವಿಗಳು, ಪರಿಸರ ತಜ್ಞರು, ಯಾವ ಪಕ್ಷಕ್ಕೂ ಸೇರದ ವ್ಯಕ್ತಿ, ಯಾವ ಸಿದ್ಧಾಂತಕ್ಕೂ ಒಳಪಡದವರು, ಭಾಷಾತಜ್ಞರು, ಮಕ್ಕಳ ತಜ್ಞರು ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಇರಬೇಕಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿರುವವರು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಯಾವುದೇ ವ್ಯಕ್ತಿಯ ಬಯೋಡೇಟಾ ಆಧರಿಸಿ ಅವರನ್ನು ಪಠ್ಯಪುಸ್ತಕ ಪರಿಷ್ಕರಣೆಗೆ ಆಯ್ಕೆ ಮಾಡಬಾರದು.
*
ಪಠ್ಯ ಪುಸ್ತಕ ಎಂದರೆ ಟಾರ್ಚ್ ಲೈಟ್ ಇದ್ದಂತೆ. ಆ ಟಾರ್ಚ್‌ಲೈಟ್ ಬೆಳಕಲ್ಲಿ ಮಕ್ಕಳು ತಮ್ಮ ಬಾಳನ್ನು ಬೆಳಗಿಸಿಕೊಳ್ಳಬೇಕು.
ಮಗುವಿನಲ್ಲಿ ಇರುವ ಸದೃಡತೆ, ನ್ಯೂನತೆ ಗುರುತಿಸಿ ಅದಕ್ಕೆ ಬೇಕಾದ ರೀತಿಯಲ್ಲಿ ಶಿಕ್ಷಣ ನೀಡುವುದೇ ನಿಜವಾದ ಶಿಕ್ಷಣ.
ಇತ್ತೀಚೆಗೆ ಜ್ಞಾನ ಆಧಾರಿತ, ವಿವೇಕ ಆಧಾರಿತ ಶಿಕ್ಷಣವೇ ಇಲ್ಲದಂತಾಗಿದೆ. ಅಂತಹ ಶಿಕ್ಷಣ ಕೊಡಲು ಮುಂದಾಗಬೇಕು.
***
ಭಾರತದ ಶೈಕ್ಷಣಿಕ ಪದ್ಧತಿಗೆ ಅದರದ್ದೇ ಆದ ದೊಡ್ಡ ಬುನಾದಿ ಇದೆ. ಶೈಕ್ಷಣಿಕ ಕ್ಷೇತ್ರ ಸಾರ್ವಜನಿಕ ಚರ್ಚೆಯಲ್ಲಿ
ಮುನ್ನೆಲೆಗೆ ಬಂದಿರುವುದು ಬಹಳ ಕಡಿಮೆ. ಬಂದಿದ್ದರೂ ಒಳ್ಳೆಯ ಕಾರಣಕ್ಕಾಗಿ ಬಂದಿದೆ. ಆದರೆ, ಇಂದು ನಕಾರಾತ್ಮಕವಾದ ವಿಚಾರಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೊಡ್ಡದಾಗಿ ವಿವಾದ ಎಬ್ಬಿಸುವ ರೀತಿಯಲ್ಲಿ ಚರ್ಚೆಗೆ ಬಂದಿದೆ.
– ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕರು, ವಿಶ್ವವಾಣಿ