ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಅಂಕಣಕಾರ ಸಂತೋಷ ಮೆಹೆಂದಳೆ ಮಾತು
ವಿಶ್ವವಾಣಿ ಕ್ಲಬ್ ಹೌಸ್ ಬೆಂಗಳೂರು
ಈಗಿನ ಸಮಾಜದಲ್ಲಿ ಅತಿ ಹೆಚ್ಚು ಅವಮಾನ ಅನುಭವಿಸುತ್ತಿರುವುದು ಗಂಡಸು. ಎಲ್ಲೇ ಆಗಲಿ, ಹೆಣ್ಣು, ಗಂಡು ಎಂಬ ವಿಚಾರ ಬಂದಾಗ ಬಹುತೇಕರು ನಿಲ್ಲುವುದು ಹೆಣ್ಣಿನ ಕಡೆ. ಗಂಡಸರೂ ಹೆಣ್ಣಿನ ಕಡೆಗೇ ನಿಲ್ಲು ತ್ತಾರೆ. ಇದರಿಂದ ತನ್ನದಲ್ಲದ ತಪ್ಪಿಗೂ ಆತ ಅವಮಾನ ಅನುಭವಿಸಬೇಕಾಗುತ್ತದೆ. ಆದರೆ, ಅದನ್ನೆಲ್ಲಾ ಸಹಿಸಿ ಕುಟುಂಬದ ರಕ್ಷಣೆಗಾಗಿ ಮತ್ತೆ ಎದ್ದು ನಿಲ್ಲುತ್ತಾನೆ ಎಂದು ಅಂಕಣಕಾರ ಸಂತೋಷ ಮೆಹೆಂದಳೆ ಹೇಳಿದರು.
ವಿಶ್ವವಾಣಿ ಕ್ಲಬ್‌ಹೌಸ್ ಹಮ್ಮಿಕೊಂಡಿದ್ದ ‘ಗಂಡಸರನ್ನೂ ಅರ್ಥ ಮಾಡಿಕೊಳ್ಳಿ ಪ್ಲೀಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯವರ ಮುಖದಲ್ಲಿ ಹಬ್ಬದ ಕಳೆ ನೋಡಿ ಸಂತಸ ಪಡುವವನು ಅಪ್ಪ ಎಂಬ ಗಂಡಸು. ದುಡಿಮೆಗಾಗಿ ಶೇ.77ರಷ್ಟು ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡುವವನು ಗಂಡಸು. ಹಾಗೆಂದು ಹೆಂಗಸರು ಈ ಕೆಲಸ ಮಾಡುವುದಿಲ್ಲ ಎಂದು ಅರ್ಥವಲ್ಲ. ಆದರೆ, ಗಂಡಸು ಮಾಡಿದ ಕೆಲಸಕ್ಕೆ ಬೆಲೆ ಸಿಗುವುದಿಲ್ಲ ಎಂದರು.
ಗಂಡಸರ ಬಗ್ಗೆ ಕೀಳಾಗಿ ಮಾತನಾಡುವುದು ತುಂಬಾ ಸುಲಭ ಎಂಬ ಪರಿಸ್ಥಿತಿ ನಿರ್ಮಾಣ ವಾಗಿದೆ. ಹಿಂದೆ ಹೆಣ್ಣು ಮಕ್ಕಳನ್ನು ಗಂಡಸರು ಅವಮಾನ ಮಾಡಿದ್ದರು ಎಂಬ ಕಾರಣಕ್ಕೆ ಈಗ ಸೇಡು ತೀರಿಸಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ. ಅದರಲ್ಲೂ ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಗಂಡಸರ ಬಗ್ಗೆಯೇ ಕವನ ಬರೆದು ಹೆಸರು ಮಾಡಿದ ಅನೇಕ ಲೇಖಕಿಯರಿದ್ದಾರೆ.
ಅವರ ಲೇಖನದಲ್ಲಿ ಕಳೆದ ಅನೇಕ ವರ್ಷಗಳಲ್ಲಿ ಇದ್ದ ಸಾಲುಗಳೇ ಇಗಲೂ ಇದೆ. ಪದ ಬಳಕೆಯಲ್ಲಷ್ಟೇ ವ್ಯತ್ಯಾಸ. ಕೆಲವರು ಗಂಡಸರ ಬಗ್ಗೆ ಅಶ್ಲೀಲ ಪದಗಳನ್ನೂ ಬಳಸಿದ್ದಾರೆ ಎಂದರು. ಗಂಡಸರನ್ನು ಕೀಳಾಗಿ ಕಾಣುವ ಲೇಖಕಿಯರು, ಗಂಡಸರ ಪ್ರಶ್ನೆಗೆ ಮೊಳೆ ಹೊಡೆಯಿರಿ ಎಂದು ಬರೆಯುತ್ತಾರೆ. ಗಂಡಸರ ಪ್ರಶ್ನೆಗಳಿಗೆ ಮಾತ್ರ ಏಕೆ, ಹೆಂಗಸರ ಪ್ರಶ್ನೆಗಳಿಗೆ ಮೊಳೆ ಹೊಡೆಯಬಾರದೇ
ಎಂದು ಪ್ರಶ್ನಿಸಿದರೆ ಅದು ಅಪರಾಧವಾಗುತ್ತದೆ. ಅದರ ಬದಲು ಗಂಡು-ಹೆಣ್ಣು ಎಂಬ ಪ್ರತ್ಯೇಕತೆ ಬಿಟ್ಟರೆ, ಹೆಣ್ಣು ಮಕ್ಕಳ ಜತೆಗೆ ಬಾಳಿ ಬದುಕಬೇಕಾದ ಮತ್ತೊಂದು ಜೀವಿ ಎಂದು ಪರಿಗಣಿಸಿದರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು.
ಕೆಲವೊಬ್ಬ ಮಹಿಳಾ ಲೇಖಕರಿದ್ದಾರೆ. ಸಾಮೂಹಿಕವಾಗಿ ಗಂಡಸರ ಬೀಜ ಒಡೆಯಿರಿ ಎಂದು ಬರೆದು ಹೆಸರು ಮಾಡುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ವಾದಗಳು ನಡೆಯುತ್ತವೆ. ಹೆಣ್ಣು ವಾದದ ಪ್ರತೀಕ ಎಂದು ಹೇಳಿಕೊಂಡು ಹೋದರೆ, ಆ ವಾದ ಸಮರ್ಪಕ ವಾಗಿದ್ದರೆ ಅವರ ಮೇಲೆ ಭರವಸೆ ಹುಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಗಂಡಸು ಎಂದಾಗ ಹಲವು ಆಯಾಮಗಳು ಎದುರಾಗುತ್ತವೆ. ಗಂಡನಾಗಿ, ಸ್ನೇಹಿತನಾಗಿ, ಸಹೋದರನಾಗಿ ಇಲ್ಲ ಅಪ್ಪನಾಗಿ ಆತ ಬದುಕಿನಲ್ಲಿ ಬರುತ್ತಾನೆ. ಹೆಣ್ಣು ಹೇಗೆ ನಾನಾ ಹಂತಗಳನ್ನು ದಾಟಿ ಬರುತ್ತಾಳೋ ಅದೇ ರೀತಿ ಪ್ರತಿಯೊಬ್ಬ ಗಂಡಸು ಕೂಡ ಬದುಕಿನಲ್ಲಿ ಇಂತಹ ಹಂತಗಳನ್ನು ದಾಟಿ ಬಂದಿರುತ್ತಾನೆ. ಗಂಡಸರ ಬಗ್ಗೆ ನಿಮ್ಮ ಸಿಟ್ಟು, ಆಕ್ರೋಶ ಏನೇ ಇರಲಿ. ಆದರೆ,
ಅದರೊಟ್ಟಿಗೆ ಗಂಡಸರನ್ನೂ ಅರ್ಥ ಮಾಡಿಕೊಳ್ಳಿ ಪ್ಲೀಸ್ ಎಂದು ಹೇಳಿದರು.
***
? ಗಂಡು-ಹೆಣ್ಣು ಎಂಬ ಪ್ರತ್ಯೇಕತೆ ಬಿಟ್ಟರೆ, ಹೆಣ್ಣು ಮಕ್ಕಳ ಜತೆಗೆ ಬಾಳಿ ಬದುಕಬೇಕಾದ ಮತ್ತೊಂದು ಜೀವಿ ಎಂದು ಪರಿಗಣಿಸಿದರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.
? ಹೆಣ್ಣು ವಾದದ ಪ್ರತೀಕ ಎಂದು ಹೇಳಿಕೊಂಡು ಹೋದರೆ, ಆ ವಾದ ಸಮರ್ಪಕವಾಗಿದ್ದರೆ ಅವರ ಮೇಲೆ ಭರವಸೆ ಹುಟ್ಟಲು ಸಾಧ್ಯವಾಗುತ್ತದೆ.
? ಹೆಣ್ಣಿನಂತೆಯೇ ಗಂಡಸೂ ಹಲವು ಹಂತಗಳನ್ನು ದಾಟಿ ಬಂದಿರುತ್ತಾನೆ. ಹೀಗಾಗಿ ಗಂಡಸರನ್ನೂ ಅರ್ಥ ಮಾಡಿಕೊಳ್ಳಿ ಪ್ಲೀಸ್.
***
ಇಲ್ಲಿಯ ತನಕ ಸಂಪೂರ್ಣವಾಗಿ ತನ್ನ ಹೆಂಡತಿಯನ್ನು ಅರ್ಥ ಮಾಡಿಕೊಂಡ ಗಂಡನೂ ಇಲ್ಲವಂತೆ. ಹಾಗೆಯೇ ಗಂಡ ನನ್ನು ಅರ್ಥ ಮಾಡಿಕೊಂಡ ಹೆಂಡತಿಯೂ ಇಲ್ಲವಂತೆ. ಗಂಡಸರು ಸಂಪಾದಕನಿದ್ದಂತೆ. ಸಂಪಾದಕ ತನ್ನ ಓದುಗರು ಯಾರೆಂದು ತಿಳಿಯದೆ ಬರೆಯುತ್ತಾನೆ. ಹಾಗೆಯೇ ಗಂಡ ಕೂಡ ತನ್ನ ಹೆಂಡತಿಯನ್ನು ಅರಿಯದೇ ಆಕೆಯೊಂದಿಗೆ ಜೀವನ ಸಾಗಿಸುತ್ತಾನೆ.
– ವಿಶ್ವೇಶ್ವರ ಭಟ್
ಪ್ರಧಾನ ಸಂಪಾದಕರು, ವಿಶ್ವವಾಣಿ