Sunday, 19th May 2024

ಪತ್ರಿಕೆ ಎಂದಿಗೂ ಜನಮುಖಿಯಾಗಿರಬೇಕು

ಪತ್ರಿಕಾ ದಿನಾಚರಣೆ ನಿಮಿತ್ತ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಪತ್ರಿಕೋದ್ಯಮ ಹಾದಿ ತಪ್ಪಿದೆಯೇ? ಎಂಬ ವಿಚಾರದ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಕನ್ನಡ ಪ್ರಭ, ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ, ಸುವರ್ಣ ನ್ಯೂಸ್ ವಾಹಿನಿಯ ಸುದ್ದಿ ವಿಭಾಗದ ಮುಖ್ಯಸ್ಥ ಅಜಿತ್
ಹನುಮಕ್ಕನವರ್, ಕನ್ನಡಪ್ರಭ ಪುರವಣಿ ವಿಭಾಗದ ಮುಖ್ಯಸ್ಥ ಜೋಗಿ, ಇಂಡಿಯನ್ ಎಕ್ಸ್‌ಪ್ರೆಸ್ ಮೈಸೂರು ವಿಭಾಗದ ಉಪ ಸಂಪಾದಕ ಶಿವಕುಮಾರ್, ಹಿರಿಯ ಪತ್ರಕರ್ತ ಗೌರೀಶ್ ಅಕ್ಕಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ, ಪತ್ರಕರ್ತರ ಸವಾಲುಗಳು, ಪತ್ರಿಕಾ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಸಂಪೂರ್ಣ ವಿವರ ಇಲ್ಲಿದೆ.

ಕ್ವಾಲಿಟಿ ಜಾಗಕ್ಕೆ ಕ್ವಾಂಟಿಟಿ ಬಂದಿದೆ: ರವಿ ಹೆಗಡೆ
ಯಾವ ಕ್ಷೇತ್ರದಲ್ಲಿ ಬದಲಾವಣೆಯಾಗಿಲ್ಲ? ಎಲ್ಲ ಕ್ಷೇತ್ರಗಳೂ ಬದಲಾವಣೆ ಕಂಡಿವೆ. ಸಮಾಜ ಬದಲಾದಂತೆ ಸಮಾಜದ ಕನ್ನಡಿಯಾಗಿರುವ ಪತ್ರಿಕೋದ್ಯಮವೂ ಬದಲಾ ಗುತ್ತಾ ಬಂದಿದೆ. ಹಾಗೆಂದು ಈ ಕ್ಷೇತ್ರದಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳಲು ಸಾಧ್ಯ ವಿಲ್ಲ. ಅದೇ ರೀತಿ ಎಲ್ಲವೂ ತಪ್ಪು ಎನ್ನಲೂ ಆಗದು. ಪತ್ರಿಕೋದ್ಯಮ ಹಿಂದೆ ಕ್ವಾಲಿ ಟೇಟಿವ್ ಆಗಿತ್ತು. ಈಗ ಕ್ವಾಂಟಿಟೇಟಿವ್ ಆಗಿದೆ. ಒಂದು ಕಾಲದಲ್ಲಿ ಮೌಲ್ಯಗಳು ಮತ್ತು ಗುಣಮಟ್ಟಕ್ಕೆ ಮಹತ್ವ ಇತ್ತು. ಆ ಮೂಲಕ ಪತ್ರಿಕೆ ಮತ್ತು ಮಾಧ್ಯಮದ ಮೌಲ್ಯಗಳನ್ನು ಅಳೆಯುವ ಕೆಲಸ ಆಗುತ್ತಿತ್ತು. ಆದರೆ, ಇಂದು ಯಾವುದು ಹೆಚ್ಚು ವೀಕ್ಷಣೆಗೊಳಗಾಗುವ ಚಾನಲ್, ಯಾವುದು ಹೆಚ್ಚು ಪ್ರಸಾರವಿರುವ ಪತ್ರಿಕೆ ಎಂದು ನೋಡುತ್ತಿದ್ದೇವೆ.

ಕ್ವಾಲಿಟಿಯ ಜಾಗವನ್ನು ಕ್ವಾಂಟಿಟಿ ತುಂಬಿದೆ. ಅಧಿಕಾರ ಇರುವ ಜಾಗದಲ್ಲಿ ಭ್ರಷ್ಟಾಚಾರ ಇದ್ದೇ ಇರುತ್ತದೆ. ಹಾಗಾಗಿ ಎಲ್ಲ ಕ್ಷೇತ್ರ ಗಳಂತೆ ಮಾಧ್ಯಮದಲ್ಲೂ ಭ್ರಷ್ಟರಿದ್ದಾರೆ. ಅಂತಹ ಭ್ರಷ್ಟರು ಇಲ್ಲದೇ ಇರುವ ಮಾಧ್ಯಮ ಕಟ್ಟುವುದೇ ಸಂಪಾದಕರಿಗೆ ಇರುವ ಸವಾಲು ಎಂದು ರವಿ ಹೆಗಡೆ ಹೇಳಿದರು.

ಪತ್ರಿಕೆ ಎಂದಿಗೂ ಜನಮುಖಿ ಆಗಿರಬೇಕು: ವಿಶ್ವೇಶ್ವರ ಭಟ್
ಪತ್ರಿಕೋದ್ಯಮ ಅವಸಾನದಂಚಿಗೆ ಹೋಗಿದೆ ಎಂಬ ಮಾತನ್ನು ಒಪ್ಪಲು ಸಾಧ್ಯಲ್ಲ. ಒಂದು ಸುದ್ದಿಗೆ ಯಾವ ಆಂಗಲ್ ನೀಡಿ ದ್ದೀರಿ? ಎಷ್ಟು ಕಾಲಮ್ ನೀಡಿದ್ದೀರಿ? ಈ ಮೂಲಕವಾಗಿ ಒಂದು ಸುದ್ದಿಯ ಹಿಂದೆ ನಡೆದಿರುವ ವ್ಯವಹಾರವನ್ನು ಓದುಗ ಪತ್ತೆ ಹಚ್ಚು ತ್ತಾನೆ. ಆ ಸಾಮರ್ಥ್ಯ ಓದುಗನಿಗಿದೆ. ಹೀಗಾಗಿ ಸುಲಭವಾಗಿ ಓದುಗನ ಮುಂದೆ ಪತ್ರಕರ್ತ ಬೆತ್ತಲಾಗುತ್ತಾನೆ. ರಾಜಕಾರಣಿ ಸುದ್ದಿಯನ್ನು ಮಾಧ್ಯಮಗಳು ಹಾಕುತ್ತವೆ. ಹಾಗೆಂದು ಹಣ ಪಡೆದು ಆ ಸುದ್ದಿ ಹಾಕಿಸಿಕೊಳ್ಳುವುದಿಲ್ಲ.

ಹೀಗಿದ್ದರೂ ಹಣ ಪಡೆದು ಸುದ್ದಿ ಹಾಕಲಾಗಿದೆ ಎಂಬ ತಪ್ಪು ಕಲ್ಪನೆ ಇದೆ. ಯಾವುದೇ ಸುದ್ದಿಯಾಗಲಿ. ಪ್ರಾಥಮಿಕವಾಗಿ ಸುದ್ದಿ ಯಾಗಿಯೇ ನೋಡುತ್ತೇವೆ. ಈ ಎಚ್ಚರ ಎಲ್ಲ ಓದುಗರಲ್ಲೂ ಇದೆ ಎಂದು ತಿಳಿಯುತ್ತೇನೆ. ಪತ್ರಿಕೆ ಎಂದಿಗೂ ಜನಮುಖಿಯಾಗಿಯೇ ಇರಬೇಕು. ಪತ್ರಕರ್ತರ ಕೊನೆಯ ಗುರಿ ಓದುಗರೇ. ಹೀಗಾಗಿ ಸಮಾಜದ ಎಲ್ಲ ವರ್ಗದವರನ್ನು ನಾವು ಪರಿಗಣಿಸ ಬೇಕಾಗುತ್ತದೆ. ಪತ್ರಿಕೋದ್ಯಮ ಎಂಬುದು ಒಂದು ಉದ್ಯಮ ಎಂಬುದರಲ್ಲಿ ಎರಡು ಮಾತಿಲ್ಲ. ಅದನ್ನು ತಪ್ಪಿಸಬೇಕಾದರೆ ಓದುಗರು ನೆರವಿಗೆ ಬರಬೇಕು. ಒಂದು ಪತ್ರಿಕೆ ಮುದ್ರಿಸಿ ಜನರಿಗೆ ತಲುಪಿಸಬೇಕಾದರೆ ೧೫ ರು. ಬೇಕು. ಈ ಹಣವನ್ನು ಓದುಗರೇ ನೀಡಿ ಖರೀದಿಸುವು ದಾದರೆ ಪತ್ರಿಕೆಗಳು ಜಾಹೀರಾತುಗಳನ್ನು ಅವಲಂಬಿಸುವುದನ್ನು ತಡೆಯಬಹುದು ಎಂದು ವಿಶ್ವೇಶ್ವರ ಭಟ್ ಹೇಳಿದರು.

ಪತ್ರಕರ್ತನ ಅಭಿಪ್ರಾಯಕ್ಕೆ ಮನ್ನಣೆ: ಹನುಮಕ್ಕನವರ್
ಎಲ್ಲ ಕ್ಷೇತ್ರಗಳಂತೆ ಮಾಧ್ಯಮ ಕ್ಷೇತ್ರವೂ ಬದಲಾಗಿದೆ. ಆದರೆ, ಬದಲಾವಣೆ ಎಂದಾಗ ಹಾದಿ ತಪ್ಪಿದೆಯೇ? ಹಾದಿ ತಪ್ಪುವುದು
ಎಂದರೇನು ಎಂಬ ಪ್ರಶ್ನೆ ಬರುತ್ತದೆ. ಪತ್ರಕರ್ತರಾದವರು ಘಟನೆಯನ್ನು ತಿಳಿಸಬೇಕೇ ಹೊರತು ಎಂದಿಗೂ ತಮ್ಮ ಅಭಿಪ್ರಾಯ ತಿಳಿಸಬಾರದು. ಅದನ್ನು ಓದುಗರು, ಕೇಳುಗರಿಗೆ ಬಿಡಬೇಕು ಎಂಬ ಅಘೋಷಿತ ನಿಯಮ ಪಾಲನೆ ಆಗುತ್ತಿತ್ತು. ಆದರೆ, ಈಗ ಸಾಮಾಜಿಕ ಜಾಲತಾಣಗಳಿಂದಾಗಿ ಘಟನೆಯ ಬಗ್ಗೆ ಜನರು ಬೇಗ ಮಾಹಿತಿ ಪಡೆಯುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳ ಮೊರೆ ಹೋಗುತ್ತಾರೆ.

ಹೀಗಾಗಿ ಅವರಿಗೆ ಹೆಚ್ಚಿನ ಮಾಹಿತಿ ನೀಡಬೇಕಾದರೆ ಘಟನೆ ಬಗ್ಗೆ, ಅದರ ಹಿಂದಿರುವ ವಿಚಾರಗಳ ಬಗ್ಗೆ ತಿಳಿಸಬೇಕಾಗಿರುವುದು ಪತ್ರಕರ್ತನಾದವನ ಕರ್ತವ್ಯ. ಮೇಲಾಗಿ ಅಭಿಪ್ರಾಯಕ್ಕೆ ಹೆಚ್ಚು ಮನ್ನಣೆ ಸಿಗುವ ಕಾಲಘಟ್ಟ ಪ್ರಾರಂಭವಾಗಿದೆ. ನಿಲುವು ಒಲವು ಇಟ್ಟುಕೊಂಡು ಪತ್ರಕರ್ತರು ಮತ್ತು ಪತ್ರಿಕೋದ್ಯಮ ನಡೆದುಕೊಂಡು ಬಂದಿದೆ. ಕಳೆದ ಹಲವು ವಾರಗಳಿಂದ ಸುದ್ದಿ ಚಾನಲ್‌ಗಳ
ವ್ಯೂವರ್‌ಶಿಪ್ ಹೆಚ್ಚಾಗಿದೆ. ಬೇಡದ ಆಶಯಗಳನ್ನು ಮಾಧ್ಯಮಗಳು ಜನರ ತಲೆಗೆ ತುಂಬಿಸುತ್ತವೆ ಎಂದಾದರೆ ಈ ಬೆಳವಣಿಗೆ ಸಾಧ್ಯವೇ ಎಂಬುದನ್ನು ಯೋಚಿಸಬೇಕು ಎಂದು ಅಜಿತ್ ಹನುಮಕ್ಕನವರ್ ಅಭಿಪ್ರಾಯಪಟ್ಟರು.

ಓದುಗರಿಗಾಗಿ ಪತ್ರಿಕೋದ್ಯಮ ಬದಲಾಗಬೇಕು: ಶಿವಕುಮಾರ್
ಮೂವತ್ತು ವರ್ಷಗಳ ಹಿಂದೆ ಇದ್ದ ಪತ್ರಿಕೋದ್ಯಮ ಇಂದು ಇಲ್ಲ. ೭೦ರ ದಶಕದಲ್ಲಿ ಇದ್ದ ಪತ್ರಿಕೊದ್ಯಮ ೨೦ನೇ ಶತಮಾನದಲ್ಲಿ ಅಪೇಕ್ಷಿಸಲು ಸಾಧ್ಯವಿಲ್ಲ. ಮಾಹಿತಿ ಹುಡುಕಿಕೊಂಡು ಹೋಗಿ ಸುದ್ದಿ ಮಾಡುವ ಪರಿಪಾಠ ದೂರವಾಗಿದೆ. ವ್ಯವಹಾರದ ವಿಷಯ ಬಂದಾಗ ಸಂಪಾದಕೀಯ ವಿಭಾಗ ಮಹತ್ವ ಕಳೆದುಕೊಳ್ಳುತ್ತದೆ. ಮಾಧ್ಯಮ ಕಚೇರಿಯಲ್ಲಿ ಸಿಇಓ ಮಾತು ಕೇಳಬೇಕೇ ಅಥವಾ ಸಂಪಾದಕರ ಮಾತು ಕೇಳಬೇಕೇ ಎಂಬ ಗೊಂದಲವಿದೆ. ಇತ್ತೀಚಿನ ಪತ್ರಿಕೋದ್ಯಮದಲ್ಲಿ ತನಿಖಾ ವರದಿಗಳು ಪ್ರಕಟವಾಗುತ್ತಿಲ್ಲ.

ಮಾಧ್ಯಮಗಳೂ ಮುಲಾಜಿಗೆ ಒಳಗಾಗುವ ಪರಿಸ್ಥಿತಿ ಬಂದಿದೆ. ಹಾಗೆಂದು ಪತ್ರಿಕೋದ್ಯಮ ಅವನತಿಗೆ ಹೋಗಿದೆ ಎಂಬುದು ಒಪ್ಪುವ ಮಾತಲ್ಲ. ಹಾಗಿದ್ದರೂ ಓದುಗರಿಗಾಗಿಯಾದರೂ ಪತ್ರಿಕೋದ್ಯಮ ಬದಲಾಗಬೇಕಿದೆ. ಪ್ರತಿಪಕ್ಷಗಳಂತೆ ಕೆಲಸ ಮಾಡ ಬೇಕಿದೆ ಎಂದು ಶಿವಕುಮಾರ್ ಅಭಿಪ್ರಾಯಪಟ್ಟರು.

***
ಪತ್ರಿಕೋದ್ಯಮ ಹಾದಿ ತಪ್ಪುತ್ತಿದೆಯೇ? ಎಂಬ ರ್ಶೀಕೆಯೊಂದಿಗೆ ಓದುಗರು ಹಾದಿ ತಪ್ಪುತ್ತಿದ್ದಾರೆಯೇ ಎಂಬುದನ್ನೂ ಯೋಚನೆ ಮಾಡಬೇಕಿದೆ. ಇಂದಿನ ಕಾಲಘಟ್ಟದಲ್ಲಿ ನಾವು ಒಂದು ಸುದ್ದಿ ತರುವ ಮುನ್ನ, ಅದರ ಬಗ್ಗೆ ಓದುಗನೇ ಒಂದು ನಿರ್ಣಯಕ್ಕೆ ಬಂದಿರುತ್ತಾನೆ. ಪರ-ವಿರೋಧದ ಗುಂಪುಗಾರಿಕೆ ಪ್ರಾರಂಭವಾಗಿದೆ. ಹೀಗಾಗಿ ಪತ್ರಿಕೋದ್ಯಮವನ್ನು ಸರಿದಾರಿಗೆ ತರುವ ಹೊಣೆಗಾರಿಕೆ ಓದುಗರ ಮೇಲೆ ಇದೆ.
– ಗೌರಿಶ್ ಅಕ್ಕಿ ಹಿರಿಯ ಪತ್ರಕರ್ತ

error: Content is protected !!