Sunday, 15th December 2024

ಆದರ್ಶ ಮುಖದ ಬಹುದೊಡ್ಡ ಪರಿಕಲ್ಪನೆ ರಾಮ

ಕ್ಲಬ್‌ಹೌಸ್ ಸಂವಾದ – ೨೩೮

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಪ್ರೊ.ಕೆ.ಈ.ರಾಧಾಕೃಷ್ಣ ಅವರಿಂದ ಅರಿವಿನ ಉಪನ್ಯಾಸ

ಬೆಂಗಳೂರು: ರಾಮ ಎಂಬ ಪದ ಒಂದು ಧರ್ಮ ಅಥವಾ ವ್ಯಕ್ತಿಗೆ ಸೀಮಿವಾದುದಲ್ಲ. ಇದೊಂದು ಪರಿಕಲ್ಪನೆ. ಅನೇಕ  ಗ್ರಂಥ ಗಳನ್ನು ಕೆದಕಿ ನೋಡಿದರೆ, ಈ ರಾಮ ಎಂಬುವ ಪರಿಕಲ್ಪನೆ ಇರಾನಿನಿಂದ ಜಪಾನಿನವರೆಗೆ, ಹಿಮಾಲಯದ ಸುತ್ತಮುತ್ತ
ಲಿನ ತಪ್ಪಲನ್ನು ಆವರಿಸಿಕೊಂಡ ಒಂದು ಆದರ್ಶ ಮುಖದ ಬಹುದೊಡ್ಡ ಪರಿಕಲ್ಪನೆ ಯಾಗುತ್ತದೆ ಎಂದು ಶಿಕ್ಷಣ ತಜ್ಞ ಪ್ರೊ.ಕೆ.ಈ .ರಾಧಾಕೃಷ್ಣ ಹೇಳಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ರಾಮರಾಜ್ಯ ಎಂದರೆ ಹೇಗಿರಬೇಕು’ ಕಾರ್ಯ ಕ್ರಮದಲ್ಲಿ ಅವರು ಅರಿವಿನ ಉಪನ್ಯಾಸ ನೀಡಿದರು. ರಾಮಾಯಣದ ಬರೆದ ವಾಲ್ಮಿಕಿ ಒಬ್ಬ ಅದ್ಬುತ ಕವಿ. ಆತನನ್ನು ಆದಿಕವಿ ಎಂದು ಕರೆಯಲಾಗುತ್ತದೆ. ಯಾವುದಕ್ಕೆ ಆದಿ ಎಂದು ನೋಡಿದರೆ, ಸಮಾಜದ ಎಲ್ಲರ ಬದುಕಿನ ಮೂಲ ಮೌಲ್ಯಗಳಿಗೆ ಮತ್ತು ಅದನ್ನು ಸಾರಿದ ಒಂದು ಮಹಾಕಾವ್ಯಕ್ಕೆ ಆತ ಆದಿ. ರಾಮರಾಜ್ಯ ಹೇಗಿರಬೇಕು ಎಂಬುದನ್ನು ರಾಮಾಯಣದ ಸುಮಾರು 24 ಸಾವಿರ ಶ್ಲೋಕಗಳೂ ಹೇಳುತ್ತವೆ. ಕೊನೆಯ 15 ಶ್ಲೋಕ ಗಳಲ್ಲಿ ರಾಮ ರಾಜ್ಯ ಹೇಗಿತ್ತು ಎಂದು ತಿಳಿಸುತ್ತದೆ ಎಂದರು.

ರಾಮರಾಜ್ಯದಲ್ಲಿ ಪ್ರಜೆಗಳು ಸುಭೀಕ್ಷವಾಗಿ ದ್ದರು. ಕಾಲಕಾಲಕ್ಕೆ ಮಳೆ-ಬೆಳೆ ಬರುತ್ತಿತ್ತು. ನದಿ ನೀರನ್ನು ಕಲ್ಮಶವಾಗದಂತೆ ನೋಡಿಕೊಳ್ಳಲಾಗುತ್ತಿತ್ತು. ಶ್ರೀರಾಮನ ವಿದೇಶ ನೀತಿ, ಆರ್ಥಕ ನೀತಿ, ಒಳಾಡಳಿತ ನೀತಿ ಅತ್ಯುತ್ತಮವಾಗಿದ್ದ ಕಾರಣ ಹೆಣ್ಣು
ಮಕ್ಕಳು ಮಧ್ಯರಾತ್ರಿಯಲ್ಲಿ ಯಾವುದೇ ಭೀತಿಯಿಲ್ಲದೆ ಓಡಾಡುತ್ತಿದ್ದರು. ಆದ್ದರಿಂದಲೇ ಮಹಾತ್ಮ ಗಾಂಧೀಜಿ ಕೂಡ ಶ್ರೀ ರಾಮ ನನಗೆ ಆದರ್ಶ ಎಂದು ಹೇಳುತ್ತಿದ್ದರು ಎಂದು ಹೇಳಿದರು.

ದಿನನಿತ್ಯದ ಜೀವನದಲ್ಲಿ ರಾಮನನ್ನು ಅನುಸರಿಸುತ್ತೇವೆ. ದಿನಿತ್ಯದ ಕೌಟುಂಬಿಕ ವ್ಯವಹಾರದಲ್ಲಿ, ಸ್ನೇಹದಲ್ಲಿ, ವ್ಯಾಪಾರ ವ್ಯವಹಾರಗಳಲ್ಲಿ ಆತನನ್ನು ಅನುಸರಿಸುತ್ತೇವೆ. ರಾಮತ್ವ ನಮ್ಮ ಜೀವ ಕಣಕಣದಲ್ಲಿ ಹುದುಗಿದ್ದು, ಅದು ಬೆಳಕಿಗೆ ಬರಬೇಕು.
ರಾಮ ರಾಜ್ಯ ಹೇಗಿರಬೇಕು ಎಂಬುದಿಲ್ಲ. ಆದು ಹೀಗೆಯೇ ಇದೆ ಎಂಬುದನ್ನು ರಾಮಾಯಣ ಹೇಳುತ್ತದೆ. ರಾಮಾಯಣದಲ್ಲಿ ಹೇಳಿದ ರಾಮರಾಜ್ಯ ನಮ್ಮಲ್ಲೇ ಇದೆ. ಅದು ಹೊರಬರಬೇಕಿದೆ. ಈ ವಿಚಾರದಲ್ಲಿ ಯಾವುದೇ ನಿರಾಶಾವಾದ ಬೇಡ. ಭಾರತೀಯ ಸಂಸ್ಕೃತಿ ಎಂಬುದು ಬ್ರಹ್ಮಾಂಡ. ಇಲ್ಲಿ ಸಾವಿರಾರು ನಕ್ಷತ್ರಗಳು ಇವೆ. ಅದರಲ್ಲಿ ರಾಮಾಯಣ ಪ್ರಮುಖವಾದದ್ದು ಎಂದರು.

ಗಾಂಧೀಜಿಯವರು ಬಲಿಷ್ಟ ಇಂಗ್ಲಿ,ರನ್ನು ಕೇವಲ ಒಂದು ಕೋಲು ಹಿಡಿದು, ಕ್ವಿಟ್ ಇಂಡಿಯ ಎಂದು ಹೇಳುತ್ತಾ ದೇಶ ಬಿಟ್ಟು
ಓಡಿಸಿದ್ದಾರೆ. ದಕ್ಷಿಣ ಆಫ್ರಿಕಾ ಅಧ್ಯಕ್ಷ ನೆಲ್ಸನ್ ಮಂಡೇಲಾ ಜೈಲಿನಲ್ಲಿ ತಾನು ಊಟ ಮಾಡುವಾಗ ಪಕ್ಕದಲ್ಲೇ ಮೂತ್ರ ಮಾಡಿ ಕಾಟ ನೀಡಿದ ವ್ಯಕ್ತಿಯನ್ನು ಅಧ್ಯಕ್ಷರಾದ ಮೇಲೆ ಅಡುಗೆ ಭಟ್ಟನನ್ನಾಗಿ ನೇಮಿಸಿಕೊಂಡಿದ್ದರು.

ಅಂತಹ ವ್ಯಕ್ತಿಗಳಿಗೆ ರಾಮರಾಜ್ಯದ ಪರಿಕಲ್ಪನೆ ಮಾದರಿಯಾಗಿ ರಾಜ್ಯ, ರಾಷ್ಟ್ರ ಕಟ್ಟಿದ ಉದಾಹರಣೆ ನಮ್ಮ ಕಣ್ಣಮುಂದಿದೆ ಎಂದು ತಿಳಿಸಿದರು. ತ್ಯಾಗರಾಜರು, ಕಬೀರ್ ದಾಸರು, ತುಳಸೀದಾಸರು ಸೇರಿದಂತೆ ಎಲ್ಲ ದಾಸವರೇಣ್ಯರು ರಾಮತ್ವವನ್ನು ಕೊಂಡಾಡಬೇಕಾದರೆ ಅವರು ರಾಮನನ್ನು ರಾಜ ಅಥವ ಪ್ರಭು ಎಂದು ನೋಡಲಿಲ್ಲ. ನಮ್ಮೊಳಗಿನ ಪ್ರಭುತ್ವದ ವಿಕಸನದ ಒಂದು ಬಿಂಬದಂತೆ ಕಂಡರು. ನಾವು ರಾಮನಾಗಬೇಕು ಎಂಬ ಕನಸಿನಲ್ಲಿ ರಾಮ ರಾಜ್ಯವನ್ನು ಕಟ್ಟಿದರು. ಈ ಕೆಲಸ
ನಮ್ಮಿಂದಲೂ ಸಾಧ್ಯವಿದೆ. ರಾಮ, ರಾವಣ, ಸೀತೆ, ಲಕ್ಷ್ಮಣ, ಭರತ, ಆಂಜನೇಯ, ವಾಲಿ-ಸುಗ್ರೀವರು ಸೇರಿದಂತೆ ವಾಲ್ಮೀಕಿ ತಮ್ಮ ರಾಮಾಯಣದಲ್ಲಿ ಬರುವ ಎಲ್ಲಾ ಪಾತ್ರಗಳ ಮೂಲಕ, ಸಮಾಜ ಹೀಗಿರಬೇಕು, ಆಡಳಿತ ವ್ಯವಸ್ಥೆ ಹೀಗಿರಬೇಕು ಎಂದು
ಮಾಲ್ಮೀಕಿ ತಿಳಿಸಿದ್ದಾರೆ. ವಾಲ್ಮೀಕಿ ನಮಗೆ ನೀಡಿರುವ ರಾಮಾಯಣ ಸಾಮಾಜಿಕ ಮಹಾಕಾವ್ಯ ಅಥವಾ ಶ್ರೇಷ್ಠ ಮಹಾಕಾವ್ಯ ಮಾತ್ರವಲ್ಲ, ಅದೊಂದು ಅಂತಿಮ ಮಹಾಕಾವ್ಯ. ಇದರಂತೆ ಮತ್ತೊಂದು ಬರಲು ಸಾಧ್ಯವಿಲ್ಲ ಎಂದರು.

ರಾಮಾಯಣದಲ್ಲಿ ತಿಳಿಸುವ ಪ್ರಭುತ್ವ ವಾಲ್ಮೀಕಿ ಪ್ರಕಾರ, ಗುಹೆಯಲ್ಲಿರುವ ಮಾನವ ಬೆಳಕನ್ನು ಕಂಡು ಹೊರಬಂದಾಗ ಆಹಾರ ಅರಸಿಕೊಂಡು ಹೋಗುತ್ತಾ ಒಂದು ತಂಡ ಕಟ್ಟಿದ. ಅದರಲ್ಲಿ ಜಾಣ, ನಿಪುಣ ಮತ್ತು ಬಲಿಷ್ಠ ಎಂಬ ಮೂರು ವರ್ಗದ ಜನರನ್ನು ಗುರುತಿಸಲಾಯಿತು. ನಾಯಕನಾದವನು ತನ್ನ ಗುಂಪಿಗೆ ರಕ್ಷಣೆ ಕೊಡುತ್ತೇನೆ ಎಂದು ಜನರಿಗೆ ಹೇಳಿ, ಅದಕ್ಕಾಗಿ ಸಂಪಾದನೆಯ ಒಂದು ಭಾಗವನ್ನು ಕೇಳಿದ್ದೇ ಪ್ರಭುತ್ವ. ಅದು ಹಾಗೆಯೇ ವಿಕಾಸಗೊಳ್ಳುತ್ತಾ ಬಂದಿದೆ.

ವಾಲ್ಮೀಕಿ ‘ಮಾನಿಶಾದಾ’ ಎನ್ನುತ್ತಾನೆ. ಅಂದರೆ, ಬೇಡನಾಗಬೇಡ, ನಾಯಕನಾಗು ಎಂದು. ಶಸ್ತ್ರ ಇದ್ದರೆ ಸಾಲದು, ಶಸಕ್ಕೆ ಶಾಸದ ಒತ್ತು ಇರಬೇಕು. ಆಗಲೇ ಅದು ಧರ್ಮವಾಗಿರುತ್ತದೆ. ರಾಮರಾಜ್ಯ ಧರ್ಮಾಧಾರಿತ ರಾಜ್ಯ. ಹೀಗಾಗಿ ಧರ್ಮ ಬಹಳ ಮುಖ್ಯವಾ ಗುತ್ತದೆ ಎಂದು ವಾಲ್ಮೀಕಿ ಹೇಳುತ್ತಾರೆ ಎಂದು ಪ್ರಒ.ಕೆ.ಈ.ರಾಧಾಕೃಷ್ಣ ಅಭಿಪ್ರಾಯಪಟ್ಟರು.

***

ರಾಮರಾಜ್ಯ ಸಾಕಾರ ಆಗಲಿಕ್ಕಿಲ್ಲ ಎಂದು ಕೆಲವು ಮಂದಿ ಹೇಳಬಹುದು. ಆದರೆ, ರಾಮನ ಆದರ್ಶ ದ ಕಡೆಗೆ ನಮ್ಮ ಚಿಂತನೆ ಇದ್ದೇ ಇರುತ್ತದೆ. ಅಷ್ಟರಮಟ್ಟಿಗೆ ರಾಮರಾಜ್ಯದ ಕಲ್ಪನೆ ನಮಗೆ ಯಾವಾಗಲೂ ಪ್ರೇರಣೆ ನಿಡುತ್ತಿರುತ್ತದೆ. ಕಲಿಯುಗದಲ್ಲಿ ರಾಮರಾಜ್ಯ ಸಾಧ್ಯವೇ? ಎಂದು ಅನೇಕ ಮಂದಿ ಭಾವಿಸಿರಬಹುದು. ಒಂದು ವೇಳೆ ಸಾಧ್ಯವಾಗದಿದ್ದರೂ ರಾಮರಾಜ್ಯದ
ಸಿದ್ದಾಂತ ಮತ್ತು ಆದರ್ಶ ಸದಾ ಪ್ರೇರಣೆ ನೀಡುತ್ತದೆ. ಆ ದಿಕ್ಕಿನ ಕಡೆಗೆ ದಿಟ್ಟವಾದ ಹೆಜ್ಜೆ ಇಡಲು, ಜೀವನದಲ್ಲಿ ನಂಬಿಕೆ, ವಿಶ್ವಾಸ ಇಟ್ಟುಕೊಳ್ಳಲು ಈ ಎಲ್ಲಾ ಕಲ್ಪನೆ, ಆದರ್ಶ, ಸಿದ್ಧಾಂತಗಳು ನೆರವಾಗುತ್ತವೆ.
– ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕರು, ವಿಶ್ವವಾಣಿ ಪತ್ರಿಕೆ

***

? ಶ್ರೀರಾಮ ಕೋದಂಡರಾಮನಾಗಿ ಕೊಲ್ಲುವುದು ಕೇವಲ ಆರು ಬಾರಿ. ಮಿಕ್ಕೆಲ್ಲಾ ಸಂದರ್ಭದಲ್ಲಿ ಆತ ಶಾಂತರಾಮ, ಪ್ರಜಾವತ್ಸಲರಾಮ, ಲೋಕಾಭಿರಾಮ, ಭುವನಪಾಣಿ ರಾಮ, ಸೀತಾರಾಮನಾಗಿರುತ್ತಾನೆ.

? ರಾಮ ಎಂದಾಕ್ಷಣ ಒಂದು ಆದರ್ಶದ ಕನಸನ್ನು ನಾವೆಲ್ಲರು ಕಾಣುತ್ತೇವೆ
? ರಾಮಾಯಣವನ್ನು ಓದುತ್ತಾ ರಾಮನೇ ತಾವಾಗಿಬಿಟ್ಟರು ಗಾಂಧೀಜಿ.

? ಗಾಂಧಿ ರಾಮರಾಜ್ಯದ ಕನಸು ಕಾಣಲಿಲ್ಲ, ಅದನ್ನು ತಮ್ಮ ದೇಹದಲ್ಲಿ ಅವರಿಸಿಕೊಂಡಿದ್ದರು.
? ಪಾಶ್ಚಾತ್ಯ ಲೋಕದಲ್ಲಿ ಪೊಲಿಟಿಕಲ್ ಸೈನ್ಸ್, ಫಿಲಾಸಫಿ ಪಾಠ ಮಾಡುವ ಅನೇಕ ಭಾರತೀಯ ಮೂಲದವರಲ್ಲದ ರಾಮಾಯಣವನ್ನು ಓದುತ್ತಿದ್ದಾರೆ. ಅದರ ಬಗ್ಗೆ ಗ್ರಂಥಗಳನ್ನು ಬರೆಯುತ್ತಿದ್ದಾರೆ.