Thursday, 21st November 2024

ಸುನಕ್‌ ಕಾರ್ಯಕ್ಷಮತೆಯೇ ಪ್ರಧಾನಿ ಹುದ್ದೆಗೇರಿಸಿತು

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕನ್ನಡಿಗರಾದ ಬ್ರಿಟನ್‌ನಲ್ಲಿ ನೆಲೆಸಿರುವ ಮಕ್ಕಳ ತಜ್ಞ ಡಾ.ಶಿವಪ್ರಸಾದ್, ಲಂಡನ್‌ನ
ಭಾರತೀಯ ವಿದ್ಯಾಭವನದ ಕಾರ್ಯಕಾರಿ ಅಧ್ಯಕ್ಷ ಡಾ. ಮತ್ತೂರ್ ನಂದಕುಮಾರ್ ಅವರಿಂದ ವಿಶ್ಲೇಷಣೆ

ಬೆಂಗಳೂರು: ಪ್ರತಿನಿತ್ಯ ಹೊಸ ವಿಷಯಗಳೊಂದಿಗೆ ಗಮನ ಸೆಳೆಯುತ್ತಿರುವ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮಂಗಳವಾರ ಅಪರೂಪದ ಉಪನ್ಯಾಸ, ಸಂವಾದ ಕಾರ್ಯಕ್ರಮ. ಭಾರತೀಯ ಸಂಜಾತ, ಕರ್ನಾಟಕದ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಸಂಭ್ರಮಾಚರಣೆಯ ಜತೆಗೆ ಕರ್ನಾಟಕ ಮತ್ತು ಬ್ರಿಟನ್‌ಅನ್ನು ಮಾನಸಿಕ ವಾಗಿ ಬೆಸೆದ ಹೆಗ್ಗಳಿಕೆ ವಿಶ್ವವಾಣಿ ಕ್ಲಬ್‌ಹೌಸ್‌ನ ಅನುಭವ ವೇದಿಕೆಯದ್ದು.

ಕನ್ನಡಿಗರಾದ ಬ್ರಿಟನ್‌ನಲ್ಲಿ ನೆಲೆಸಿರುವ ಮಕ್ಕಳ ತಜ್ಞ ಡಾ.ಶಿವಪ್ರಸಾದ್ ಮತ್ತು ಲಂಡನ್‌ ನ ಭಾರತೀಯ ವಿದ್ಯಾಭವನದ ಕಾರ್ಯಕಾರಿ ಅಧ್ಯಕ್ಷ ಡಾ. ಮತ್ತೂರ್ ನಂದಕುಮಾರ್ ಅವರು ಪಾಲ್ಗೊಂಡು ರಿಷಿ ಸುನಕ್ ಅವರ ವ್ಯಕ್ತಿತ್ವ, ಜೀವನಗಾಥೆ, ಪ್ರಧಾನಿಯಾಗಿ ಆಯ್ಕೆ, ಅವರ ಮುಂದಿರುವ ಸವಾಲುಗಳನ್ನು ಕುರಿತು ಸರಳ ಮತ್ತು ಪ್ರಬುದ್ಧ ಮಾತುಗಳಿಂದ ಶ್ರೋತೃಗಳ ಗಮನ ಸೆಳೆದರು.

ಡಾ.ಶಿವಪ್ರಸಾದ್ ಮಾತನಾಡಿ, ರಿಷಿ ಸುನಕ್ ಸೇವೆಯೇ ಜೀವನದ ಗುರಿ ಎಂಬ ಧ್ಯೇಯ ಉಳ್ಳ ವ್ಯಕ್ತಿ. ಅವರಲ್ಲಿರುವ ನಿಷ್ಠೆ, ಪ್ರಾಮಾಣಿಕೆತೆಗೆ ಬ್ರಿಟನ್ ನ ಪ್ರಧಾನಿ ಪಟ್ಟ ಲಭಿಸಿದೆ. ಅವರು ಹಣ ಸಂಪಾದನೆಗೆ ರಾಜಕೀಯಕ್ಕೆ ಬಂದಿಲ್ಲ. ಜನರಿಗೆ ಸಹಾಯ ಮಾಡಬೇಕೆಂಬ ಮನೋಭಾವ ಹೊಂದಿದ್ದಾರೆ ಎಂದರು.

ರಿಷಿ ಸುನಕ್ ರಾಜಕೀಯಕ್ಕೆ ಬಂದು ಕೇವಲ ಏಳು ವರ್ಷವಾಗಿದೆ. ಈ ಅಲ್ಪಾವಽಯಲ್ಲೇ ಬ್ರಿಟನ್‌ನಂತಹ ರಾಷ್ಟ್ರಕ್ಕೆ ಪ್ರಧಾನಿಯಾಗಿರುವುದು ಅವರ ವ್ಯಕ್ತಿತ್ವ, ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ತೋರು ತ್ತದೆ. ತಮ್ಮ ೪೫ನೇ ವಯಸ್ಸಿನಲ್ಲಿ ಈ ಹುದ್ದೆ ಅಲಂಕರಿಸುವ ಮೂಲಕ ಬ್ರಿಟನ್‌ನ ಅತಿ ಕಿರಿಯ ಮತ್ತು ಯುವ ಪ್ರಧಾನಿ ಎಂಬ ದಾಖಲೆ ನಿರ್ಮಿಸಿದ್ದಾರೆ.

ಇದಕ್ಕೂ ಮುನ್ನ ಬೊರಿಸ್ ಜಾನ್ಸನ್ ಪ್ರಧಾನಿಯಾಗಿದ್ದಾಗ ಹಣಕಾಸು ಸಚಿವರಾಗಿದ್ದ ಅವರ ಸೇವೆಯನ್ನು ನೆನಪಿಸಿಕೊಳ್ಳಲೇ ಬೇಕು. ಕೋವಿಡ್ ನಿರ್ವಹಿಸಿದ ರೀತಿ ಅತ್ಯಂತ ಪರಿಣಾಮಕಾರಿಯಾಗಿತ್ತು. ಕೋವಿಡ್ ಸಂದರ್ಭದಲ್ಲಿ ಮನೆಯಲ್ಲಿರುವವರಿಗೆ
ಹೇಗೆ ಸಹಾಮಾಡಬೇಕು ಎಂಬ ರೀತಿಯನ್ನು ತೋರಿಸಿಕೊಟ್ಟಿದ್ದರು. ಹಣಕಾಸು ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾಗ ಅನೇಕ ಆರ್ಥಿಕ ಸುಧಾರಣೆಗಳನ್ನು ತಂದರು. 2019ನಲ್ಲಿ ಬೊರಿಸ್ ಜಾನ್ಸನ್ ಪ್ರಧಾನಿಯಾಗಿ ಆಯ್ಕೆಯಾದರು. 2020ರಲ್ಲಿ ರಿಷಿ ಸುನಕ್ ಹಣ ಕಾಸು ಸಚಿವರಾಗಿ ನೇಮಕಗೊಂಡಾಗ ರೇಸಿಂಗ್ ಸ್ಟಾರ್ ಎಂದು ಹೊಗಳಿಕೆಗೆ ಪಾತ್ರವಾದವರು.

ಕೋವಿಡ್ ಸಂದರ್ಭದಲ್ಲಿ ಒಂದೆಡೆ ಆರ್ಥಿಕ ತೊಂದರೆ, ಮತ್ತೊಂದು ಕಡೆ ಕಾಯಿಲೆ ಮಧ್ಯೆ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡರು. ಅಷ್ಟೇ ಅಲ್ಲದೆ ರಷ್ಯಾ-ಉಕ್ರೇನ್ ಯುದ್ಧದಿಂದ ಲಂಡನ್‌ನಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಆಗಲೂ ಜನರಿಗೆ ಸಹಾಯ ಮಾಡಲು ಮುಂದಾದರು ಎಂದು ಸ್ಮರಿಸಿಕೊಂಡರು.

ರಿಷಿ ಸುನಕ್ ಪರಿಸರ ಪ್ರೇಮಿಯೂ ಕೂಡ ಆಗಿದ್ದಾರೆ. ಅಪಾರ ಪರಿಸರ ಕಾಳಜಿ ಹೊಂದಿರುವವರು. ಮುಂದೆ ಅದಕ್ಕೆ ಸಂಬಂಧಪಟ್ಟ ಕೆಲವು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎಂಬ ನಿರೀಕ್ಷೆಯನ್ನು ಅವರು ಹುಸಿ ಮಾಡುವುದಿಲ್ಲ ಎಂಬ ನಂಬಿಕೆ, ಭರವಸೆ ಇದೆ. ರಿಷಿ ಸುನಕ್ ಯುನೆಟೆಡ್ ಕಿಂಗ್‌ಡಮ್‌ನ ಅದ್ವಿತೀಯ ನಾಯಕನಾಗಲಿ ಎಂಬುದು ನಮ್ಮೆಲ್ಲರ ಆಶಯ ಎಂದು ಹೇಳಿದರು.

ಡಾ. ಮತ್ತೂರ್ ನಂದಕುಮಾರ್ ಮಾತನಾಡಿ, ಸುಧಾಮೂರ್ತಿ ಮತ್ತು ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಮತ್ತು ರಿಷಿ ಸುನಕ್ ಅವರ ವಿವಾಹ ಬೆಂಗಳೂರಿನಲ್ಲಿ ನಡೆದಿತ್ತು. ಆ ವೇಳೆ ನಾನೂ ಬೆಂಗಳೂರಿನಲ್ಲಿದ್ದೆ. ಮದುವೆ ಮುಗಿಸಿ ಕೊಂಡು ನವ ದಂಪತಿ ಲಂಡನ್‌ಗೆ ವಾಪಸಾದ ಬಳಿಕ ರಿಷಿ ಸುನಕ್ ಅವರ ಬಗ್ಗೆ ಚೆನ್ನಾಗಿ ಪರಿಚಯವಾಯಿತು. ಅಕ್ಷತಾ ಕೂತುಪುಡಿ ನೃತ್ಯ ಕಲಿಯುತ್ತಿದ್ದಾರೆ.

ಭಾರತೀಯ ವಿದ್ಯಾಭವನಕ್ಕೂ ಅನೇಕ ಬಾರಿ ಬಂದಿದ್ದಾರೆ. ಭವನದ ಕೆಲಸಕ್ಕಾಗಿ ಧನ ಸಂಗ್ರಹಣೆ ಮಾಡಲು ವರ್ಷದಲ್ಲಿ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಎರಡು ಬಾರಿ ಅತಿಥಿಯಾಗಿ ಬಂದಿದ್ದಾರೆ ಎಂದರು.
ರಿಷಿ ಸುನಕ್ ಅತ್ಯಂತ ಸರಳ ಹಾಗು ಸಜ್ಜನ ವ್ಯಕ್ತಿ. ಹಿರಿಯರು ಮತ್ತು ಸಜ್ಜನರ ಬಗ್ಗೆ ಅತ್ಯಂತ ಗೌರವ ಉಳ್ಳವರು. ಕೆಲಸವನ್ನೇ ದೇವರು ಎಂದು ನಂಬಿರುವ ವ್ಯಕ್ತಿ. ಅಂಥವರೊಬ್ಬರು ಬ್ರಿಟನ್‌ನ ಪ್ರಧಾನಿ ಆಗಿರುವುದು ಹೆಮ್ಮೆಯ ವಿಚಾರ. ಸಂಕಷ್ಟದಲ್ಲಿ ಉತ್ತಮ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಇದುವರೆಗೆ ರಿಶಿ ಸುನಕ್ ಅವರು ಮಾಡಿರುವ ಕೆಲಸದ ಬಗ್ಗೆ ಯಾರೂ ಚಕಾರ ಎತ್ತಿಲ್ಲ ಎಂದರೆ ಅವರ ಕಾರ್ಯಕ್ಷಮತೆ ಏನು ಎಂಬುದು ಅರಿವಾಗುತ್ತದೆ. ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಅವರ ಕೆಲಸ ಮೆಚ್ಚಬೇಕಾದ ವಿಚಾರ.

ತಮ್ಮ ವಿಶಾಲವಾದ ಚಿಂತನೆಯಿಂದ ದೇಶವನ್ನು ಮುನ್ನಡೆಸಬೇಕು ಎಂದು ಚಿಂತಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

*

ರಿಷಿ ಸುನಕ್ ಮುಂದಿರುವ ಸವಾಲುಗಳು

ಆಂತರಿಕವಾಗಿ ವಿಭಜನೆಯಾಗಿರುವ ಕನ್ಸರ್ವೇಟಿವ್ ಪಕ್ಷವನ್ನು ಒಗ್ಗೂಡಿಸಬೇಕಿದೆ.

ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವೇಳೆ ಅಸಮಾಧಾನ ಆಗದಂತೆ ತಡೆಯಬೇಕು.

ಬ್ರಿಟನ್‌ನಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ಒದಗಿಸಬೇಕು.

ಇತರೆ ರಾಷ್ಟ್ರಗಳ ಜತೆಗಿನ ಗಡಿ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಇತ್ಯರ್ಥ ಗೊಳಿಸಬೇಕು.

ಆರ್ಥಿಕ ಕುಸಿತದಿಂದ ಕುಗ್ಗಿರುವ ಬ್ರಿಟನ್ ಜನತೆಯಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು.

*

ಬ್ರಿಟನ್ ಪ್ರಧಾನಿ ಆಗುವುದು ಕೇವಲ ಒಂದು ದೇಶಕ್ಕೆ ನಾಯಕನಾಗುವುದಲ್ಲ. ಅದೊಂದು ಜಾಗತಿಕ ನಾಯಕತ್ವ ಕೊಡುವ ಪಟ್ಟ. ಅತ್ಯಂತ ಜವಬ್ದಾರಿಯುತ ಹುದ್ದೆ. ಆ ಹುದ್ದೆಗೆ ಭಾರತೀಯ ಸಂಜಾತರೊಬ್ಬರು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ.
– ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು