ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮೀನು ಕೃಷಿ ತಜ್ಞ ಆತ್ರೆಯ ಅವರಿಂದ ಉಪನ್ಯಾಸ
ವಿಶ್ವವಾಣಿ ಕ್ಲಬ್‌ಹೌಸ್ – ಸಂವಾದ ೩೨೬
ಬೆಂಗಳೂರು: ‘ಒಂದು ಮೀನು ನೀಡಿದರೆ ಅದನ್ನು ತೆಗೆದುಕೊಂಡಾತ ಒಂದು ದಿನ ಬದುಕಬಹುದು. ಅದೇ ಆತನಿಗೆ ಮೀನು ಹಿಡಿಯಲು ಕಲಿಸಿದರೆ ಆತ ಅದರಿಂದ ಜೀವನವನ್ನೇ ಸಾಗಿಸು ತ್ತಾನೆ’ ಎಂಬ ಮಾತಿದೆ.
ಮೀನು ಸೇರಿದಂತೆ ಸೀ ಫುಡ್ ಇಂದು ಅನೇಕರಿಗೆ ಆಹಾರವಾದರೆ, ಇನ್ನು ಅನೇಕರಿಗೆ ಜೀವನದ ಮಾರ್ಗವಾಗಿದೆ ಎಂದು ಮೀನು ಕೃಷಿ ತಜ್ಞ ಆತ್ರೇಯ ಹೇಳಿದ್ದಾರೆ. ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಮತ್ಸ್ಯ ಕೃಷಿ- ನೀರಿನ ಮಹತ್ವ’ ಕುರಿತು ಅರಿವಿನ ಉಪ ನ್ಯಾಸ ನೀಡಿ, ಮೀನು ಕೃಷಿಗೆ ತಾನು ಹೇಗೆ ಬಂದೆ ಎಂಬುದನ್ನು ವಿವರಿಸಿದರಲ್ಲದೆ, ಮೀನು ಕೃಷಿಯ ಮಹತ್ವವನ್ನು ತಿಳಿಸಿದರು.
ಸಣ್ಣ ವಯಸ್ಸಿನಿಂದಲೂ ನೀರು ಮತ್ತು ಮೀನಿನ ಬಗ್ಗೆ ಹೆಚ್ಚು ಕುತೂಹಲವಿತ್ತು. ಹೀಗಾಗಿ ಅವೆರಡರ ಬಗ್ಗೆಯೂ ಒಲವು ಬೆಳೆಸಿಕೊಂಡೆ. ಕೃಷಿ ಪದವಿ ಪಡೆದ ಬಳಿಕ ಫಿಷರೀರ್ ಎಂಬ ವಿಚಾರವಿದೆ ಎಂಬ ಮಾಹಿತಿ ತಿಳಿದು ಮಂಗಳೂರು ವಿಶ್ವವಿದ್ಯಾ ಲಯಕ್ಕೆ ಸೇರಿಕೊಂಡೆ. ಅಲ್ಲಿ ಮೀನುಗಾರಿಕೆ ಕುರಿತಂತೆ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದೆ. ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿ ಇದೀಗ ಪ್ರತ್ಯೇಕವಾಗಿ ಆಕ್ವಾಬಯೋ ಸೊಲ್ಯೋಶನ್ ಸಂಸ್ಥೆ ಪ್ರಾರಂಭ ಮಾಡಿದ್ದೇನೆ ಎಂದು ತಿಳಿಸಿದರು.
ಮೀನಿನ ವಿಚಾರ ಪ್ರಸ್ತಾಪಿಸಿದಾಗ ಮುಖ್ಯವಾಗಿ ನೀರಿನ ವಿಚಾರ ಬರುತ್ತದೆ. ಜಗತ್ತಿನಾದ್ಯಂತ ಶೇ.೭೧ರಷ್ಟು ಭಾಗ ನೀರಿನಿಂದ ತುಂಬಿದೆ. ಇನ್ನುಳಿದಂತೆ ಹ್ಯುಮಿಡಿಟಿ ಅಥವಾ ಮಳೆಯಿಂದಾಗಿ ಭೂಗೋಳದ ಶೇ.೮೫ ಭಾಗ ನೀರಿನಿಂದ ತುಂಬಿದೆ. ಭೂಮಿ ಮತ್ತು ನೀರಿಗೆ ಹೋಲಿಸಿದರೆ ಮನುಷ್ಯಾ ತುಂಬಾ ಹೊಸಬ. ನೀರಿದ್ದಲ್ಲಿ ನಾಗರೀಕತೆ ಬೆಳೆಯುತ್ತದೆ. ಅದೂ ಅಲ್ಲದೆ, ನೀರಿಗಾಗಿ ಮತ್ತೊಂದು ಗ್ರಹದಲ್ಲಿ ಸಂಶೋಧನೆ ಮಾಡುತ್ತಿದ್ದೇವೆ. ಏಕೆಂದರೆ, ನೀರಿದ್ದರೆ ಮಾತ್ರ ಆಮ್ಲಜನಕ ಇದೆ ಎಂದು ಅರ್ಥ. ಅಂತಹ ನೀರಿನಲ್ಲಿ ಸಿಗುವ ಮೀನು ಮತ್ತು ಮೀನುಗಾರಿಕೆ ಅತ್ಯಂತ ಮಹತ್ವದ ಕಾಯಕ ಎಂದರು.
ಮೀನು ಅಥವಾ ಮೀನುಗಾರಿಕೆ ಕ್ಷೇತ್ರ ಎಂದರೆ ಆಕ್ವಾ ಇಂಡಸ್ಟ್ರಿಯಲ್ಲಿ ಕೇವಲ ಮೀನು ಮಾತ್ರ ಆಗಿರಬೇಕು ಎಂದು ಅರ್ಥವಲ್ಲ. ಸೀ ಫುಡ್ ಕೂಡ ಅದರಲ್ಲಿ ಸೇರುತ್ತದೆ. ಸೀ ಫುಡ್ ವ್ಯವಸಾಯಕ್ಕೆ ಉಪಯುಕ್ತವಾಗಿರುವುದರಿಂದ ವಿಶ್ವದಾದ್ಯಂತ 14 ಸಾವಿರ
ಕೋಟಿಯಷ್ಟು ಸೀಫುಡ್ ಆಮದು ಅಥವಾ ರಫ್ತಾಗುತ್ತಿದೆ. ಅನೇಕ ಸಂಸ್ಥೆಗಳು ಇದನ್ನು ಖರೀದಿಸುತ್ತವೆ. ಭಾರತದಿಂದಲೂ ಸಾಕಷ್ಟು ಪ್ರಮಾಣದಲ್ಲಿ ಸೀಫುಡ್ ರಫ್ತಾಗುತ್ತದೆ ಎಂದು ಹೇಳಿದರು.
ಮತ್ಸ್ಯ ಉದ್ಯಮ ಎಂದರೆ ಮೊದಲು ಅಷ್ಟೊಂದು ಪ್ರಾಮುಖ್ಯತೆ ಇರಲಿಲ್ಲ. ಆದರೆ, ಈಗ ಅದೊಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಈ ಉದ್ಯಮವನ್ನು ಇನ್ನಷ್ಟು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರಕಾರ ತನ್ನ ವಾರ್ಷಿಕ ಬಜೆಟ್‌ನಲ್ಲಿ ೨೦ ಸಾವಿಕ ಕೋಟಿ ರುಪಾಯಿಗೂ ಹೆಚ್ಚಿನ ಅನುದಾನ ನೀಡಿದೆ. ಅಷ್ಟೇ ಅಲ್ಲ, ಮತ್ಯೋದ್ಯಮದಲ್ಲಿ ತೊಡಗಿಕೊಳ್ಳುವವರಿಗೆ
ಸಾಕಷ್ಟು ಪ್ರೋತ್ಸಾಹಕ ಕಾರ್ಯಕ್ರಮಗಳನ್ನೂ ರೂಪಿಸಿದೆ. ಮೀನು ಕೃಷಿಯಲ್ಲಿ ಆಸಕ್ತಿ ಉಳ್ಳವರು ಇದರ ಸದುಪಯೋಗ ಪಡೆಯಬಹುದಾಗಿದೆ ಎಂದು ತಿಳಿಸಿದರು