Wednesday, 18th September 2024

ಆಫ್ಘನ್‌ನಲ್ಲಿ ತಾಲಿಬಾನ್‌ ಆರ್ಭಟ: ಭಾರತದಲ್ಲಿ ಆತಂಕದ ಛಾಯೆ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 61

ತಾಲಿಬಾನಿಗರ ಹೆಸರಲ್ಲಿ ಚೀನಾ, ಪಾಕಿಸ್ತಾನ ಕುತಂತ್ರ

ಧರ್ಮಾಂಧತೆಯ ಯಾವ ಆಡಳಿತವೂ ಜನಪರವಲ್ಲ

ಬೆಂಗಳೂರು: ಆಫ್ಘಾನ್‌ನಲ್ಲಿ ತಾಲಿಬಾನ್ ಅಟ್ಟಹಾಸ ಆರಂಭವಾಗಿದ್ದು, ಇದು ಮುಂದಿನ ದಿನಗಳಲ್ಲಿ ಭಾರತಕ್ಕೆ ಯಾವ ಮಟ್ಟಿಗಿನ ಅಪಾಯ ತಂದೊಡ್ಡಲಿದೆ ಎಂಬ ಬಗ್ಗೆ ಈಗಲೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಪತ್ರಕರ್ತ ಅಜಿತ್ ಹನುಮಕ್ಕನವರ ಅಭಿಪ್ರಾಯಪಟ್ಟರು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಡೆದ ಆಫ್ಘನ್-ತಾಲಿಬಾನ್ ವಿದ್ಯಮಾನದಿಂದ ಭಾರತದ ಮೇಲೆ ಪರಿಣಾಮ ವೇನು? ಎಂಬ ಸಂವಾದದಲ್ಲಿ ಮಾತನಾಡಿದ ಅವರು, ಆಯಾ ಭಾಗದ ವಿದ್ಯಾವಂತರು ಶುರು ಮಾಡಿದ ಹೋರಾಟ ಇದಾಗಿದ್ದು, ಮುಂದೆ ಮತಾಂಧ ಹೋರಾಟಕ್ಕೆ ಕಾರಣವಾಗಿತ್ತು. ಆಫ್ಘಾನಿಸ್ತಾನದಲ್ಲಿ ಆಗಿದ್ದು ಇದೆ. ೨೧ ವರ್ಷ ಅಮೇರಿಕ ಅಲ್ಲಿತ್ತು. ೫೧ ಸಾವಿರ ಉಗ್ರಗಾಮಿಗಳನ್ನು ಕೊಂದೆವು. 3 ಲಕ್ಷ ಸೈನಿಕರಿಗೆ ತರಬೇತಿ ನೀಡಿದ್ದೆವು ಎಂದು ಅಮೆರಿಕ ಹೇಳಿದೆ.

3,548 ಜನ ಅಮೆರಿಕ ಸೈನಿಕರು ಸಾವನ್ನಪ್ಪಿದ್ದಾರೆ. ಆಫ್ಘಾನ್‌ನ ಪರಿಸ್ಥಿತಿಗೆ ಅಲ್ಲಿನ ನಾಯಕರಿಗೆ ಇದ್ದ ದೂರದೃಷ್ಟಿಯ ಕೊರತೆ ಕಾರಣ. ಅಲ್ಲಿನ ಅಧ್ಯಕ್ಷ ನೋಟುಗಳನ್ನು ವಿಮಾನಗಳಿಗೆ ತುಂಬಿ, 5 ಮಿಲಿಯನ್ ಡಾಲರ್ ಹಣವನ್ನು ವಿಮಾನದ ರನ್‌ವೇನಲ್ಲಿ ಬಿಟ್ಟು ಹೋಗಿದ್ದ. ಒಂದು ಲೆಕ್ಕದ ಪ್ರಕಾರ 96 ಸಾವಿರ ಸೈನಿಕರು ಮಾತ್ರ ಇದ್ದರು. ಕೆಲ ಬೆಟಾಲಿಯನ್‌ಗಳು ಫೈಲ್‌ನಲ್ಲಿ ಮಾತ್ರ ಇಟ್ಟಿದ್ದರು.

ಅಲ್ಲಿದ್ದ ಸೈನಿಕರು ಗ್ರಾಮಗಳಲ್ಲಿ ಕೃಷಿ ಮಾಡಿಕೊಂಡು ಕಳೆಯುತ್ತಿದ್ದರು. ಸಂಬಳ ಮಾತ್ರ ಅವರಿಗೆ ಬಂದು ತಲುಪತ್ತಿತ್ತು. ಇದರಿಂದಾಗಿಯೇ ಕೇವಲ 10 ದಿನಗಳಲ್ಲಿ ತಾಲಿಬಾನಿಗಳು ಇಡೀ ದೇಶವನ್ನು ಅಕ್ರಮಿಸಿ ಕೊಂಡಿದ್ದಾರೆ ಎಂದರು. ಅಮೆರಿಕ ತನ್ನ ಸೇನೆಯನ್ನು ವಾಪಸ್ ಪಡೆಯುತ್ತದೆ ಎಂಬ ಮಾತು ಕೇಳಿ ಬಂದಾಗ, ಅಲ್ಲಿ ತಾಲಿಬಾನ್ ಮರಳಿ ಆಕ್ರಮಣ ಮಾಡಲು ಒಂದು ವರ್ಷ ಬೇಕು ಎಂದು ಸರ್ವೇ ಹೇಳುತ್ತಿತ್ತು. ಆದರೆ, 10 ದಿನದಲ್ಲಿ ತಾಲಿಬಾನ್ ಸಂಪೂರ್ಣ ವಶಪಡಿಸಿ ಕೊಂಡಿತು.

ದೃರದೃಷ್ಟಕರ ನಾಯಕರು ದೇಶಕ್ಕೆ ಸಿಕ್ಕಿದ್ದರು. ತಾಲಿಬಾನ್ ಪಾಕಿಸ್ತಾನ ಅಮೆರಿಕಾಗೂ ನಂಬಿಕಸ್ಥನಾಗಿರಲಿಲ್ಲ, ಆಫ್ಘಾನಿಸ್ತಾನದ ನಂಬಿಕೆಯನ್ನೂ ಉಳಿಸಿ ಕೊಂಡಿಲ್ಲ. 1996-2001 ದ ಪರಿಸ್ಥಿತಿ ಈಗ ನಿರ್ಮಾಣವಾಗಿರುವುದು ಪಾಕಿಸ್ತಾನಕ್ಕೆ ಅನುಕೂಲ. ಚೀನಾಗೆ ಆಗ ಆ ದೇಶದ ಮೇಲೆ ಆಸಕ್ತಿ ಇರಲಿಲ್ಲ. ಈಗ ಅಲ್ಲಿ ಹೂಡಿಕೆಗೆ ಚೀನಾ ಆಸಕ್ತಿ ವಹಿಸಿದೆ. ರಸ್ತೆ ನಿರ್ಮಾಣ ಮಾಡಿದೆ. ತಾಲಿಬಾನ್ ಆಡಳಿತಕ್ಕೆ ಸಹಕಾರ ಕೊಡುತ್ತೇವೆ ಎಂದು ಚೀನಾ ಹೇಳಿದೆ. ನಾವು ಒಂದು ಕಡೆ ಪಾಕಿಸ್ತಾನದ ಕಡೆ ತಿಕ್ಕಾಟ, ಚೀನಾ ಜತೆಗೆ ತಿಕ್ಕಾಟದಲ್ಲಿದ್ದೇವೆ. ಈಗ ತಾಲಿಬಾನ್ ಅಧಿಕಾರಕ್ಕೆ ಬಂದಿದೆ. ಇದು ಕೂಡ ಭಾರತದ ಆಂತರಿಕ ಭದ್ರತೆಗೆ ಸವಾಲಾ ಗುವ ಸಾಧ್ಯತೆಯಿದೆ. ಆದರೆ, ತಾಲಿಬಾನಿಗಳು ಮುಂದಿನ ದಿನಗಳಲ್ಲಿ ಯಾವ ರೀತಿಯ ಆಡಳಿತ ನೀಡುತ್ತಾರೆ ಎಂಬುದರ ಮೇಲೆ ನಿರ್ಧಾರ ವಾಗಲಿದೆ ಎಂದರು.

ಭಾರತದ ಆಂತರಿಕ ಭದ್ರತೆ ಹೆಚ್ಚಿದೆ: ತಾಲಿಬಾನ್‌ನಿಂದ ಅಪಾಯವಿದೆ ಎಂದು ಹೇಳುವ ಮುಂಚೆ ಇತ್ತೀಚಿನ ದಿನಗಳಲ್ಲಿ ಭಾರತದ ಆಂತರಿಕ ಭದ್ರತೆ ಹೆಚ್ಚಿದೆ ಎಂಬುದನ್ನು ಒಪ್ಪಬಹುದು. ಕಾಶ್ಮೀರ ಹೊರತುಪಡಿಸಿ ಉಳಿದೆಡೆ ಭಯೋತ್ಪಾದಕಾ ದಾಳಿಗಳು ಆಗಿಲ್ಲ. ಇದು ನಮ್ಮ ಆಂತರಿಕ ಭದ್ರತೆ ಹೆಚ್ಚಾಗಿದೆ ಎಂಬುದಕ್ಕೆ ಉದಾಹರಣೆ. ಅದಕ್ಕಿಂತ ಮೊದಲು 26/11 ಅಟ್ಯಾಕ್ ಆಗುತ್ತೆ.

ಅಕ್ಷರಧಾಮದಲ್ಲಿ ಬಾಂಬ್ ದಾಳಿ, ಬೆಂಗಳೂರು ಸರಣಿ ದಾಳಿ, ಚರ್ಚ್‌ಸ್ಟ್ರೀಟ್ ದಾಳಿ ನಡೆದಿತ್ತು. ಇದೆಲ್ಲವೂ ಬಹುತೇಕ ನಿಂತು ಹೋಗಿತ್ತು. ಹೀಗಿರುವಾಗ ತಾಲಿಬಾನಿಗಳು ಎಷ್ಟರಮಟ್ಟಿಗೆ ಭಾರತದ ಆಂತರಿಕ ಭದ್ರತೆಗೆ ಅಪಾಯ ಎಂಬುದನ್ನು ಈಗಲೇ ಊಹಿಸುವುದು ಕಷ್ಟ. ತಾಲಿಬಾನ್ ನಾಯಕರ ನಡವಳಿಕೆ ಗಮನಿಸಿದರೆ ಒಂದು ಆಶಾದಾಯಕ ಬೆಳವಣಿಗೆ. ಕಾಶ್ಮೀರ ಬೆಳವಣಿಗೆ ಪಾಕಿಸ್ತಾನ- ಭಾರತದ ಆತಂರಿಕ ವಿಚಾರ ಎಂದು ತಾಲಿಬಾನ್ ನಾಯಕರು ಕೇಳಿರುವು ದನ್ನು ನಂಬುವುದಾದರೆ, ಭಾರತ ನಿರಾಳ. ಅವರ ಮಾತಿಗೂ ಕೃತಿಗೂ ನಡವಳಿಕೆಗೂ ಸರಿ ಹೊಂದುತ್ತಿಲ್ಲ ಎಂಬುದು ಒಂದು ಆತಂಕ ಎಂದು ತಿಳಿಸಿದರು.

ಆರ್ಥಿಕ ಸಂಪನ್ಮೂಲದ ಕೊರತೆ: ತಾಲಿಬಾನ್‌ಗೆ ಹಿಂದಿನಂತೆ ಹಣಕಾಸು ನೆರವು ಸಿಗುವುದು ಕಷ್ಟ. ಡ್ರಗ್ಸ್ ಬಳಸಿ, ಅಫೀಮು ಮಾರಾಟ ಮಾಡಿ ಹಣ ಗಳಿಸಲು ಸಾಧ್ಯವಿಲ್ಲ. ಆರ್ಥಿಕ ಸಹಾಯಕ್ಕೆ ಚೀನಾ ಮುಂದೆ ಬರುವ ಸಾಧ್ಯತೆ ಇದೆ. ಅಲ್ಲಿನ ನೈಸರ್ಗಿಕ ಸಂಪನ್ಮೂಲದ ಮೇಲೆ ಕಣ್ಣಿಟ್ಟು ಚೀನಾ ಅಲ್ಲಿ ಹೂಡಿಕೆ ಮಾಡಲು ಮುಂದಾಗಿದೆ.

ಆದರೆ, ಚೀನಾದಲ್ಲಿರುವ ಮುಸ್ಲಿಮರ ಮೇಲಿನ ದೌರ್ಜನ್ಯವನ್ನು ನಾವು ಊಹಿಸಲು ಸಾಧ್ಯವಿಲ್ಲ. ಅವರು ಮುಸ್ಲಿಂ ಹೆಸರನ್ನಿಟ್ಟುಕೊಳ್ಳುವಂತಿಲ್ಲ. ಮೆಕ್ಕಾಗೆ ಹೋಗಲು ದೊಡ್ಡ ಸಾಹಸ ಪಡಬೇಕು. ಇದು ಚೀನಾದೊಂದಿಗೆ ಸಂಬಂಧ ಬೆಸೆಯಲು ತಾಲಿಬಾನ್‌ಗೆ ಧರ್ಮಸಂಕಟ. ಭಾರತ ಕೂಡ ದೋಹಾದಲ್ಲಿ ಒಂದು ಸಭೆ ನಡೆದಿದೆ. ತಾಲಿಬಾನ್ ನಾಯಕರ ಜತೆ ಸಭೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಇದು ಅನಿವಾರ್ಯ ಸಂದರ್ಭ ಬಂದರೆ ವಿದೇಶಾಂಗ ನೀತಿಯಲ್ಲಿನ ಸಣ್ಣ ಬದಲಾವಣೆಯಾಗಬಹುದು ಎಂದು ತಿಳಿಸಿದರು.

ಭಾರತದೊಂದಿಗೆ ಸ್ನೇಹ ಅನಿವಾರ್ಯ

ತಮ್ಮದೇ ಆದ ರಾಷ್ಟ್ರ ಕಟ್ಟುವ ಯೋಜನೆ ಇರುವ ಮತಾಂಧರಿಂದ ನಮಗೆ ಭೀತಿಯಿದೆ. ಇದಕ್ಕೆ ಯಾವುದೇ ನಾಯಕನ ಆದೇಶ ಬೇಕಿರುವುದಿಲ್ಲ. ಅವನದೇ ಹಣದಲ್ಲಿ ಆತ ರೆಡಿಯಾಗಿ ದಾಳಿ ನಡೆಸುತ್ತಾನೆ. ಆನಂತರ ಸಂಘಟನೆಗೆ ಗೊತ್ತಾಗುತ್ತದೆ. ಅಂತಹ ಘಟನೆಗಳು ನಡೆಯಲು ಭಾರತದಲ್ಲಿ ಸಾಧ್ಯವಿದೆಯಾ? ತಾಲಿಬಾನ್ ನೊಂದಿಗೆ ಮುಂದಿನ ಭಾರತದ ಸಂಬಂಧ ಹೇಗಿರುತ್ತದೆ ಎಂಬುದು ಗೊತ್ತಿಲ್ಲ. ಅಲ್ಲಿನ ಜನರಿಗಾಗಿ ಪ್ರಾರ್ಥನೆ ನಡೆಸಬೇಕಿದೆ. ಹೀಗೆ ಆಗುತ್ತೆ ಎಂಬ ಮಾಹಿತಿ ಸದ್ಯಕ್ಕಿಲ್ಲ.  ಭಾರತದೊಂದಿಗೆ ಚೆನ್ನಾಗಿರಬೇಕಾಗಿರುವುದು ತಾಲಿಬಾನ್‌ಗೆ ಅನಿವಾರ್ಯವಾಗಬಹುದು. 24 ಸಾವಿರ ಕೋಟಿ ನಮ್ಮ ಹೂಡಿಕೆಯಿದೆ. ಡ್ಯಾಂ ಕಟ್ಟಿಕೊಟ್ಟಿದ್ದು, ಅಲ್ಲಿನ ಸಂಸತ್ತು ಭಾರತ ಕಟ್ಟಿಕೊಟ್ಟಿದ್ದು. ಹೀಗಾಗಿ, ಮುಂದೆ ತಾಲಿಬಾನ್ ಕೂಡ ಭಾರತದೊಂದಿಗೆ ಸ್ನೇಹದಿಂದ ಇರುವುದು ಅನಿವಾರ್ಯ ವಾಗಬಹುದು. ಆದರೆ, ತಾಲಿಬಾನಿಗಳ ಸ್ನೇಹ ಅಷ್ಟೇನೂ ನಂಬಿಕಾರ್ಹವಲ್ಲ ಎಂದು ಅಜಿತ್ ತಿಳಿಸಿದರು.

ಮತಾಂಧತೆ ದೇಶ ಆಳುವುದು ಒಳ್ಳೆಯದಲ್ಲ: ವಿಶ್ವೇಶ್ವರ ಭಟ್

ತಾಲಿಬಾನ್ ಬದಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಮತಾಂಧರು ಯಾವುದೇ ಧರ್ಮದವರಿರಲಿ, ಯಾವುದೇ ದೇಶದಲ್ಲಿರಲಿ ಅವರಿಂದ ಉತ್ತಮ ಆಡಳಿತ ನಿರೀಕ್ಷೆ ಮಾಡುವುದು ಕಷ್ಟ. ತಾಲಿಬಾನಿಗಳಿಂದ ಸ್ಥಿರ ಸರಕಾರ, ಸುಭದ್ರ ಸರಕಾರ ನಿರೀಕ್ಷೆ ಮಾಡುವುದು ಕಷ್ಟ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅಭಿಪ್ರಾಯಪಟ್ಟರು. ತಾಲಿಬಾನ್ ಹುಟ್ಟಿದ್ದೇ ಹಿಂಸೆಯಿಂದ. ಅವರು ಆರು ವರ್ಷದ ಅವಧಿಯಲ್ಲಿ ಕಟ್ಟುವ ಕೆಲಸ ಮಾಡಲಿಲ್ಲ. ಅಲ್ಲಿ ಒಂದು ರನ್ ವೇ ಇರಲಿಲ್ಲ. ಅರ್ಧಕ್ಕರ್ಧ ರಸ್ತೆ, ಸೇತುವೆ ಕಟ್ಟಿದ್ದು, ನ್ಯಾಟೋದವರು. ಅಲ್ಲಿ ಮೊದಲ ಚುನಾವಣೆ ನಡೆದಾಗ ಬ್ಯಾಲೆಟ್ ಬಾಕ್ಸ್ ಇರಲಿಲ್ಲ. ಬಕೆಟ್‌ಗೆ ರಟ್ಟನ್ನು ಮುಚ್ಚಿ ವೋಟ್ ಮಾಡಿದ್ದರು.  ೪೧ನೇ ದೊಡ್ಡ ದೇಶ, ಆದರೆ, ಅತ್ಯಂತ ಬಡ ದೇಶ. ಯಾವುದೇ ದೇಶದಲ್ಲಿಯೂ ಮತಾಂಧರು ಆಡಳಿತ ಮಾಡುವುದು ಒಳ್ಳೆಯದಲ್ಲ. ಕಾಶ್ಮೀರದಲ್ಲಿ ನಡೆಯುವ ಉಗ್ರ ಕೃತ್ಯಗಳ ಆಫ್ಘಾನಿಸ್ತಾನದಲ್ಲಿ ಯೋಜಿತವಾಗುತ್ತಿದೆ ಎಂದರು.

ಆಫ್ಘಾನ್ ಭಯೋತ್ಪಾದನೆ ಪ್ರಯೋಗಶಾಲೆ

ತಾಲಿಬಾನ್ ಭಯೋತ್ಪಾದನಾ ಕೃತ್ಯಕ್ಕೆ ಮತ್ತಷ್ಟು ಬೆಂಬಲ ನೀಡುವ ಅಪಾಯವಿದೆ. ಇದು ಭಯೋತ್ಪಾದಕರ ಉತ್ಪಾದನಾ ಪ್ರಯೋಗಶಾಲೆ. ಇದಕ್ಕೆ ಪಾಕಿಸ್ತಾನ ಸಂಪೂರ್ಣ ಸಹಕಾರ ನೀಡುತ್ತಿತ್ತು. ಪುಸ್ತೂನ್‌ದಲ್ಲಿ ತಾಲಿಬಾನ್ ಎಂದರೆ ವಿದ್ಯಾರ್ಥಿಗಳು. ಇದು ಮೊದಲಿಗೆ ವಿದ್ಯಾರ್ಥಿಗಳ ಸಂಘಟನೆಯಾಗಿತ್ತು. ಅಮೆರಿಕ ಮತ್ತು ರಷ್ಯಾದ ನಡುವಿನ ತಿಕ್ಕಾಟಕ್ಕೆ ಇವರೆಲ್ಲ ಉಗ್ರಗಾಮಿಗಳಾದರು. ಚೈನಾ ಇದಕ್ಕೆ ಕೈಜೋಡಿಸಿದೆ. ಕಳೆದ ಹತ್ತು ವರ್ಷದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿದೆ. ಗಣಿಗಾರಿಕೆ ನಿಯಂತ್ರಣ ಚೈನಾದ ಕೈಲಿದೆ. ೨೦೦೪ರ ತನಕ ಆ ದೇಶಕ್ಕೆ ಸಂವಿಧಾನ ಇರಲಿಲ್ಲ. ಹಮೀದ್ ಕರ್ಜಾಯಿ ಬಂದಾಗ ಪ್ರಜಾಪ್ರಭುತ್ವ ಸರಕಾರ ಅಸ್ತಿತ್ವಕ್ಕೆ ಬಂತು. ಆಫ್ಘಾನಿಸ್ತಾನ ಏಷ್ಯಾ ಖಂಡದ ಹೃದಯವಿದ್ದಂತೆ. ಅದನ್ನು ಇಟ್ಟುಕೊಂಡು ಇಡೀ ಏಷ್ಯಾವನ್ನ ನಿಯಂತ್ರಿಸಬಹುದು. ಇದಕ್ಕೆ ಚೀನಾ ಮುಂದಾ ಗಿದೆ ಎಂದು ವಿಶ್ವೇಶ್ವರ್ ಭಟ್ ತಿಳಿಸಿದರು.

***

3.8 ಕೋಟಿ ಜನಸಂಖ್ಯೆಯಿದ್ದು, ಈಗಿನ ಶೇ.60ರಷ್ಟು ಜನಸಂಖ್ಯೆ 20 ವರ್ಷದೊಳಗಿನದ್ದು. ಅವರಿಗೆಲ್ಲ ಷರಿಯಾ ಕಾನೂನು ಗೊತ್ತಿಲ್ಲ. ಹೀಗಾಗಿ, ಅವರು ಮುಂದಿನ ದಿನಗಳಲ್ಲಿ ಇದೆಲ್ಲವನ್ನೂ ಹೇಗೆ ನೋಡುತ್ತಾರೆ ಎಂಬುದು ಮುಂದಿನ ದಿನಗಳ ಕುತೂಹಲ.

– ಕರ್ನಲ್ ದಿನೇಶ್ ಮುದ್ರಿ

ಅಮೆರಿಕ ಇತರ ದೇಶಗಳ ಆಂತರಿಕ ಆಡಳಿತದಲ್ಲಿ ಮೂಗು ತೂರಿಸುವುದಿಲ್ಲ ಎಂದು ಭರವಸೆ ನೀಡಿದ್ದರು. ಇದಕ್ಕೆ ತಕ್ಕಂತೆ ನಡೆದುಕೊಂಡಿದ್ದಾರೆ. ಇದರ ವಿರುದ್ಧ ಕೆಲವು ಅಭಿಪ್ರಾಯಗಳಿವೆ. ಇದ್ದಕ್ಕಿದ್ದಂತೆ ಕರೆಸಿ ಕೊಂಡಿದ್ದು ತಪ್ಪು ಎಂಬುದು ಇಲ್ಲಿನವರ ಅಭಿಪ್ರಾಯ.

– ಬೆಂಕಿ ಬಸಣ್ಣ ಅಮೆರಿಕ

ಪರ್ವತ ಪ್ರದೇಶದಲ್ಲಿ ವಾಸಿಸುವ ಜನರು ತಾಲಿಬಾನ್ ಹೆಸರಲ್ಲಿ ಬಂದರು. ಇವರಲ್ಲಿ ಅರ್ಧ ದಷ್ಟು ಜನರುನಿರುದ್ಯೋಗಿಗಳು. ಟ್ಯಾಂಕರ್‌ಗಳು, ವಿಮಾನಗಳಿವೆ. ಆದರೆ, ಅವುಗಳನ್ನು ಬಳಕೆ ಮಾಡಲು ಗೊತ್ತಿಲ್ಲ. ಇದಕ್ಕೆ ಚೈನಾ, ಪಾಕಿಸ್ತಾನಕ್ಕೆ ನಿಲ್ಲಲು ಮುಂದಾಗುತ್ತದೆ.

– ವಿಂಗ್ ಕಮಾಂಡರ್ ಸುದರ್ಶನ್

 

Leave a Reply

Your email address will not be published. Required fields are marked *