Sunday, 15th December 2024

ದೇವಾಲಯ ಎಂಬ ನಾಲ್ಕು ಅಕ್ಷರಗಳಲ್ಲಿದೆ ಬ್ರಹ್ಮಾಂಡ

ಸಂವಾದ – 318

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಪುರಾತತ್ವ ಶಾಸ್ತ್ರ ಡಾ.ಚೂಡಾಮಣಿ ನಂದಗೋಪಾಲ್ ಅವರಿಂದ ಉಪನ್ಯಾಸ

ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು

ದೇವಾಲಯ. ಹೇಳಲು ಕೇವಲ ನಾಲ್ಕು ಅಕ್ಷರಗಳ ಪದ. ಆದರೆ, ದೇವಾಲಯದ ವಿಚಾರವನ್ನು ಚರ್ಚಿಸಿದರೆ ಅದು ಒಂದು ಬ್ರಹ್ಮಾಂಡದಂತಾಗುತ್ತದೆ. ಅಂತಹ ಸಾಕಷ್ಟು ದೇವಾಲಗಳು ನಮ್ಮಲ್ಲಿದ್ದು, ಅವುಗಳನ್ನು ಸಂರಕ್ಷಿಸುವ ಕೆಲಸವಾಗಬೇಕು. ಅದಕ್ಕಾಗಿ ಸಾಕಷ್ಟು ಸಂಶೋಧನೆಗಳು ಆಗಬೇಕು. ಅಷ್ಟೇ ಅಲ್ಲ, ದೇವಾಲಯ ಮತ್ತು ಅದರ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸವಾಗ ಬೇಕು ಎಂದು ಪುರಾತತ್ವ ಶಾಸ್ತ್ರ ಡಾ.ಚೂಡಾಮಣಿ ನಂದಗೋಪಾಲ್ ಹೇಳಿದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ನಮ್ಮ ದೇವಾಲಯಗಳ ವೈಭವ’ ವಿಚಾರದ ಕುರಿತು ಅರಿವಿನ ಉಪನ್ಯಾಸ ನೀಡಿದ ಅವರು, ದೇವಾಲಯದ ಮಹತ್ವದ ಬಗ್ಗೆ ವಿವರಿ ಸಿದ್ದು ಹೀಗೆ… ದೇವಾಲಯಗಳು ಎಂದ ಕೂಡಲೇ ಎಲ್ಲರ ಮನಸ್ಸಿನಲ್ಲಿ ಏನೋ ಒಂದು ರೀತಿಯ ಪುಳಕ, ಅಭಿಮಾನ, ಮತ್ತೆ ನೋಡಬೇಕು ಎಂಬ ಕಾತುರ ಕಾಣುತ್ತದೆ.

ದೇವಾಲಯ, ದೇವಾಯತನ, ದೇವಸ್ಥಾನ, ಪೂಜಾ ಗೃಹ, ಗುಡಿ ಮುಂತಾದ ಶಬ್ದಗಳನ್ನು ದಿನನಿತ್ಯ ಬಳಕೆ ಮಾಡುತ್ತೇವೆ. ಅವುಗಳ ಆವಿಷ್ಕಾರ, ರೂಪುರೇಷೆಗಳು ಏನು? ಹಿನ್ನಲೆ ಮುನ್ನೆಲೆಗಳೇನು? ಎಂಬುದರ ಬಗ್ಗೆ ನಾವು ತಿಳಿದಿರಬೇಕು. ಇತಿಹಾಸಕಾರ ಳಾಗಿರುವುದರಿಂದ ನಮಗೆ ದೇವಾಲಯಗಳ ಜತೆ ಒಂದು ರೀತಿಯ ಅವಿನಾಭಾವ ಸಂಬಂಧ ಇದೆ ಮತ್ತು ಅದು ಅನಿವಾರ್ಯವೂ ಹೌದು.

ಯಾವುದೇ ವಿಚಾರದ ಬಗ್ಗೆ ಚರ್ಚಿಸಿದರೂ ನಾವು ವೇದಗಳ ಕಾಲದಿಂದ ಶುರು ಮಾಡುತ್ತೇವೆ. ಋಗ್ವೇದ ಕಾಲವನ್ನು ನೋಡಿದರೆ ಅಲ್ಲಿ ನಿಸರ್ಗಕ್ಕೆ ಆದ್ಯತೆ ಇತ್ತೇ ಹೊರತು ಮೂರ್ತಿ ಪೂಜೆ, ದೇವಾಲಯಗಳು ಇರಲಿಲ್ಲ. ನಂತರದಲ್ಲಿ ದೇವಾಲಯಗಳು ಆರಂಭ ವಾದವು. ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್‌ನ ಮೊದಲ ಅಕಾಡೆಮಿಕ್ ಮುಖ್ಯಸ್ಥಳಾಗಿ ನನ್ನನ್ನು ನೇಮಿಸ ಲಾಯಿತು. ಅಲ್ಲಿ ಸಂಶೋಧನೆ ಮಾಡುತ್ತಿದ್ದೆ. ಮೇಲುಕೋಟೆಯ ಕುರಿತು ದೀರ್ಘಕಾಲದ ಸಂಶೋಧನೆ ಮಾಡಿದೆವು. ಈ ಮಧ್ಯೆ ಕೇರಳದಲ್ಲಿ ನಡೆಯುತ್ತಿದ್ದ ಅಪ್ತರ್ಯಾಮ ಯಜ್ಞದ ಡಾಕ್ಯುಮೆಂಟರಿ ಮಾಡಬೇಕಾಯಿತು.

ಆಪ್ತರ್ಯಾಮ ಎಂದರೆ ಜಲಕ್ಕೆ ಸಂಬಂಧಪಟ್ಟ ಯಜ್ಞ. ಅಲ್ಲಿ ಈ ಯಜ್ಞದ ಮಹತ್ವ ಅರಿತೆ. ಪ್ರತಿಯೊಬ್ಬರೂ ಇಂತಹ ಯಜ್ಞವನ್ನು
ಅನುಭವಿಸಿದಾಗ ಮಾತ್ರ ನಮ್ಮ ಸಂಸ್ಕೃತಿಯ ನಿಜವಾದ ಮೌಲ್ಯದ ಬಗ್ಗೆ ಅರಿವು ಮೂಡುತ್ತದೆ. ಇಲ್ಲದಿದ್ದರೆ ಕೇವಲ ಬೂಟಾಟಿಕೆ ಆಗುತ್ತದೆ. ಹಿಂದೆಲ್ಲಾ ಅರಣ್ಯದಲ್ಲಿ, ಊರಿನ ಹೊರವಲಯದ ಆಶ್ರಮ ಗಳಲ್ಲಿ ಯಜ್ಞಗಳನ್ನು ಮಾಡುತ್ತಿದ್ದರು. ಇದರಿಂದ ಊರಿ ನಲ್ಲಿರುವವರಿಗೆ ಏನು ಲಾಭ ಎಂದು ಪ್ರಶ್ನಿಸಬಹುದು. ಆದರೆ, ಯಜ್ಞವನ್ನು ಲೋಕ ಕಲ್ಯಾಣಾರ್ಥವಾಗಿ ಮಾಡುತ್ತಾರೆ. ಅದರ ಲಾಭ ಎಲ್ಲರಿಗೂ ಸಿಗುತ್ತದೆ.

ದೇವಾಲಯಗಳ ಬಗ್ಗೆ ಏಕಿಷ್ಟು ನಿರ್ಲಕ್ಷ್ಯ?: ರೋಣ ಎಂಬಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯಗಳಿವೆ. ಆ ದೇವಾಲ ಯಗಳನ್ನು ನೋಡಿ, ಯಾಕಿಷ್ಟು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬು ಬೇಸರವಾಯಿತು. ಸ್ವಲ್ಪ ಮಟ್ಟಿಗೆ ಹೊಯ್ಸಳ ದೇವಾಲಯ ಗಳನ್ನು ರಕ್ಷಿಸಲಾಗಿದೆ. ಹಾಗೆಯೇ ಚಾಲುಕ್ಯರ ದೇವಾಲಯಗಳನ್ನೂ ರಕ್ಷಿಸಲಾಗಿದೆ.

ಇಂತಹ ಸಾಕಷ್ಟು ದೇವಾಲಗಳಿದ್ದರೂ ಪಟ್ಟದಕಲ್ಲು ದೇವಾಲಯ ಮಾತ್ರ ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಯುನೆಸ್ಕೋ ಪಾರಂಪರಿಕ ಪಟ್ಟಿಗೆ ರಾಮಪ್ಪ ದೇವಾಲಯವನ್ನು ಸೇರಿಸಲು ಸುಮಾರು 14 ವರ್ಷದಿಂದ ಪ್ರಯತ್ನ ಮಾಡಲಾಗುತ್ತಿದೆ. ಮೂರು ಬಾರಿ ಪ್ರಸ್ತಾವನೆ ತಿರಸ್ಕೃತಗೊಂಡಿದೆ. ಈ ವಿಚಾರದ ಚರ್ಚೆಯಲ್ಲಿ 22 ದೇಶಗಳು ಭಾಗಿಯಾಗಿದ್ದವು.
ರಾಮಪ್ಪ ದೇವಾಲಯದ ಬಗ್ಗೆ ನಾನು ಬರೆದ ಪುಸ್ತಕವನ್ನು ಅಲ್ಲಿ ಚರ್ಚಿಸಲಾಯಿತು. ನಮ್ಮಲ್ಲಿ ಅಂತಹ ಎಷ್ಟೋ ಪುರಾತನ ದೇವಾಲಯಗಳಿವೆ.

ಬೇಲೂರು-ಹಳೇಬೀಡು ದೇವಾಲದಂತೆ ಮತ್ತೊಂದು ದೇವಾಲಯ ಮತ್ತೆ ನಿರ್ಮಿಸಲು ಸಾಧ್ಯವೇ ಇಲ್ಲ. ಆದರೆ, ಇಂದಿಗೂ ಅದಕ್ಕೆ ವಿಶ್ವ ಮಾನ್ಯತೆ ದೊರಕಿಲ್ಲ. ಈ ಬಗ್ಗೆ ಇನ್ನೂ ಪ್ರಯತ್ನ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ದೇವಾಲಯಗಳ ಸಂಶೋಧನೆಗಳಲ್ಲಿ ಶಾಸನಗಳ ಪಾತ್ರ ಹಿರಿದು. ದೇವಾಲಯ ಎಂಬುದು ಮಾನವನ ಪರಿಕಲ್ಪನೆ ದ್ರಾವಿಡರ ಕಾಲದಲ್ಲಿ ವಿಗ್ರಹಾರಾಧನೆ ಹೆಚ್ಚಿದ್ದು, ದೇವಾಲಯಗಳು ಹೆಚ್ಚಾಗಿ ನಿರ್ಮಾಣಗೊಂಡವು. ನಮ್ಮಲ್ಲಿ ಸಾಕಷ್ಟು ಪುರಾತನ ದೇವಾ ಲಯಗಳಿದ್ದರೂ ಯುನೆಸ್ಕೋ ಮಾನ್ಯತೆ ದೊರೆಯುತ್ತಿಲ್ಲ ಕರ್ನಾಟಕವೊಂದರಲ್ಲೇ ದೇವಾಲಯಗಳ ಬಗ್ಗೆ ೧ ಸಾವಿರ ಪ್ರಾಜೆಕ್ಟ್ ಮಾಡಬಹುದಾಗಿದೆ.

ಧರ್ಮಸ್ಥಳ ಪ್ರತಿಷ್ಠಾನದಿಂದ ೨೫೦ ದೇವಾಲಯಗಳನ್ನು ಪುನರ್‌ನಿರ್ಮಾಣ ಕಾರ್ಯ ಮಾಡಲಾಗಿದೆ. ಅದು ಎಷ್ಟು ಜನರಿಗೆ ತಿಳಿದಿದೆ. ಈ ಬಗ್ಗೆ ಅರಿವು ನಮ್ಮ ಜನರಲ್ಲಿ ಇರಬೇಕು. ನಮ್ಮಲ್ಲಿ ಪ್ರಾಚೀನ ದೇವಾಲಯಗಳಿಗೆ ಬರವಿಲ್ಲ. ಒಂದೊಂದು ದೇವಾ ಲಯಗಳೂ ಒಂದೊಂದು ರತ್ನಗಳು ಇದ್ದಂತೆ. ಅದರ ಬಗ್ಗೆ ನಾವು ಹೆಚ್ಚಿನ ಅರಿವು ಮೂಡಿಸಬೇಕಿದೆ.

ಎಲ್ಲದಕ್ಕೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತನಾಡುತ್ತಾರೆ. ಮಾತೆತ್ತಿದರೆ ಮಕ್ಕಳನ್ನು ವಿದೇಶ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾರೆ. ಮೊದಲು ನಮ್ಮ ದೇಶದಲ್ಲಿರುವ ದೇವಾಲಯಗಳನ್ನು ಮಕ್ಕಳಿಗೆ ತೋರಿಸಬೇಕು. ೫೦ ವರ್ಷಗಳಿಂದ ದೇವಾ ಲಯದ ವಿವರಗಳ ಕುರಿತು ಕೆಲಸ ಮಾಡುತ್ತಿದ್ದೇನೆ. ಸುಮಾರು ೫೦ ಸಾವಿರ ಪೋಟೋಗ್ರಾಫ್ ನನ್ನ ಬಳಿ ಇದೆ. ದೇವಾಲಯಗಳ ವಿಚಾರ ಮಹಾಸಾಗರ ಇದ್ದಂತೆ.

***

ಎಲ್ಲೋ ದೂರದ ಪ್ರವಾಸಿ ತಾಣಗಳಿಗೆ ಮಕ್ಕಳನ್ನು ಪ್ರವಾಸ ಕರೆದುಕೊಂಡು ಹೋಗುವ ಬದಲು, ಮಂಡ್ಯ-ಮೈಸೂರಿನ ಸುತ್ತ ಇರುವ ಅನೇಕ ಪುರಾತನ ದೇವಾಲಯಗಳಿಗೆ ಕರೆದುಕೊಂಡು ಹೋಗುವುದರಿಂದ ನಮ್ಮ ಸಂಸ್ಕೃತಿ, ಇತಿಹಾಸದ ಪರಿಚಯವಾಗುತ್ತದೆ.
– ಷಡಕ್ಷರಿ. ಎಸ್
ಅಂಕಣಕಾರರು, ಉದ್ಯಮಿಗಳು

***

ನಮ್ಮ ದೇವಾಲಯಗಳು ಭಕ್ತಿ, ಶ್ರದ್ಧೆ ಮತ್ತು ಸಂಸ್ಕೃತಿಯ ಕೇಂದ್ರ ಬಿಂದುಗಳು. ಭಾರತೀಯರಾದ ನಮ್ಮ ಇಡೀ ಅಸ್ತಿತ್ವ,
ವೈಚಾರಿಕ ನೆಲೆ ಇರುವುದು ದೇವಾಲಯಗಳ ಸುತ್ತಮುತ್ತ. ಇವು ಕೇವಲ ಶ್ರದ್ಧಾ ಭಕ್ತಿಯ ಕೇಂದ್ರವಷ್ಟೇ ಅಲ್ಲ, ಲಾಗಾಯ್ತಿ ನಿಂದಲೂ ಅವು ನಮ್ಮ ಸಾಂಸ್ಕೃತಿಕ ಬಿಂದು ತಾಣಗಳು. ಅದರಲ್ಲೂ ಭಾರತ ಎಂದರೆ ದೇವಾಲಯಗಳ ನಾಡು-ಬೀಡು.
-ವಿಶ್ವೇಶ್ವರ ಭಟ್
ಪ್ರಧಾನ ಸಂಪಾದಕರು, ವಿಶ್ವವಾಣಿ