Monday, 11th November 2024

ಥಿಂಕ್‌ ಬಿಗ್‌ ಎನ್ನುತ್ತಿದ್ದ ಕಲಾಂ ಸ್ವತಃ ಹಾಗೆ ಇದ್ದರು

‘ವಿಶ್ವವಾಣಿ ಕ್ಲಬ್‌ಹೌಸ್’ನ ಅಬ್ದುಲ್ ಕಲಾಂ ಹೀಗಿದ್ದರು ಕಾರ್ಯಕ್ರಮದಲ್ಲಿ ಒಡನಾಡಿಯ ಮಾತು

ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು

ಅದು 1972. ತಿರುವನಂತಪುರದಲ್ಲಿ ನಾನು ವಿಜ್ಞಾನಿಯಾಗಿದ್ದೆ. ಮೊದಲ ಬಾರಿ ಎಪಿಜೆ ಅಬ್ದುಲ್ ಕಲಾಂ ಅವರ ಬಗ್ಗೆ ಕೇಳಿದ್ದೆ. ಆಗ ಅವರು ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದರು. ಅವರನ್ನು ನೋಡುವ ಆಸೆಯಿಂದ ಅವರ ವಿಳಾಸ ತಿಳಿದುಕೊಂಡು ಇನ್ನಷ್ಟು ಕುತೂಹಲಿಯಾದೆ. ಆ ವಿಳಾಸ ಇದ್ದ ಜಾಗ ಸಣ್ಣ ಕೊಠಡಿಯಾಗಿತ್ತು. ಹೊರಗಿನಿಂದ ಬಾಗಿಲು ಹಾಕಿತ್ತು. ನೋಡಿದಾಗ ಅಲ್ಲಿ ಒಂದು ತಟ್ಟೆಯ ಮೇಲೆ ಇನ್ನೊಂದು ತಟ್ಟೆ ಮುಚ್ಚಿದ್ದುದು ಕಾಣಿಸಿತು.

ಅಲ್ಲಿದ್ದ ವ್ಯಕ್ತಿಯನ್ನು ಕೇಳಿದಾಗ, ‘ನಾನು ಬರುವುದು ತಡವಾಗಬಹುದು. ಆದ್ದರಿಂದ ನನ್ನ ಊಟವನ್ನು ಅಲ್ಲಿ ಇಟ್ಟು ಮಲಗಿ ಎಂದು ಕಲಾಂ ಅವರು ಹೇಳಿದ್ದಾರೆ’ ಎಂಬ ಉತ್ತರ ಬಂತು. ಇದು ಮಾಜಿ ರಾಷ್ಟ್ರಪತಿ, ಭಾರತದ ಮಿಸೈಲ್ ಮ್ಯಾನ್ ಎಂದೇ ಕರೆಸಿ ಕೊಳ್ಳುತ್ತಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ ಅವರೊಂದಿಗೆ ಸಾಕಷ್ಟು ಸಮಯ ಕೆಲಸ ಮಾಡಿದ್ದ ವಿಜ್ಞಾನಿ ಡಾ. ಪ್ರಹ್ಲಾದ್ ರಾಮ್ ರಾವ್ ಅವರ ಮಾತು.

‘ವಿಶ್ವವಾಣಿ ಕ್ಲಬ್‌ಹೌಸ್’ ಏರ್ಪಡಿಸಿದ್ದ ‘ಅಬ್ದುಲ್ ಕಲಾಂ ಹೀಗಿದ್ದರು’ ಕಾರ್ಯಕ್ರಮದಲ್ಲಿ ಅವರು ಕಲಾಂ ಜತೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅಬ್ದುಲ್ ಕಲಾಂ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೆ. ಹೇಳಲು ಹೊರಟರೆ ದಿನ ಕಳೆದರೂ ಮುಗಿಯುವುದಿಲ್ಲ. ಆದರೂ ಅವರ ಕುರಿತಾದ ಕೆಲವು ಮಾಹಿತಿಗಳನ್ನು ಹಂಚಿ ಕೊಳ್ಳುತ್ತೇನೆ ಎಂದು ಹೇಳಿದರು.

ಕಲಾಂ ಅವರ ಕುರಿತು ಡಾ.ಪ್ರಹ್ಲಾದ್ ಹೇಳಿದ್ದಿಷ್ಟು… ತಿರುವನಂತಪುರದಲ್ಲಿ ಇದ್ದಾಗ ಅವರ ದರ್ಶನ ಭಾಗ್ಯ ಸಿಗಲಿಲ್ಲ. 1982ರಲ್ಲಿ ಹೈದರಾಬಾದ್‌ನ ಲ್ಯಾಬ್ ನಲ್ಲಿ ಕೆಲಸ ಮಾಡುತಿದ್ದಾಗ ಕಲಾಂ ಬಂದಿದಾರೆ ಎಂದು ಹೇಳಿದರು. ಕಲಾಂ ಅವರು ಸಾಮಾನ್ಯರಂತೆ ಲ್ಯಾಬ್ ಒಳಗೆ ಬಂದರು. ಆ ವೇಳೆ ಜತೆಗಿದ್ದವರು ನನ್ನ ಪರಿಚಯವನ್ನು ಅವರಿಗೆ ಮಾಡಿದರು. 1984ರಲ್ಲಿ ಅವರನ್ನು ಡೈರೆಕ್ಟರ್ ಪದವಿಗೆ ನೇಮಕ ಮಾಡಿದ ಬಳಿಕ ಪ್ರತಿದಿನ ಅವರನ್ನು ಭೇಟಿ ಯಾಗುವ, ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು.

ಕಲಾಂ ಪ್ರತಿಬಾರಿ ಥಿಂಕ್ ಬಿಗ್ ಎಂದು ಹೇಳುತ್ತಾರೆ. ಅವರು ಏನನ್ನು ಪಾಲಿಸುತ್ತಿದ್ದರೋ ಅದನ್ನೇ ಹೇಳುತ್ತಿದ್ದರು. ಹಿರಿಯರು, ಕಿರಿಯರು ಎಂಬ ಬೇಧವಿಲ್ಲದೆ ಎಲ್ಲರೊಂದಿಗೂ ಬೆರೆಯುತ್ತಿದ್ದರು. ಏನಾದರೂ ಸಾಧಿಸಬೇಕು ಎಂಬುದನ್ನು ಪ್ರತಿ ಹಂತದಲ್ಲೂ
ಯೋಚಿಸುತ್ತಿದ್ದರು. ಅದರಂತೆ ನಡೆದುಕೊಳ್ಳುತ್ತಿದ್ದರು. ಈ ಕಾರಣಕ್ಕಾಗಿಯೇ ಅವರು ಎಲ್ಲರ ಪ್ರೀತಿಯ ಕಲಾಂ ಆದರು.

ಪ್ರತಿ ಪತ್ರಕ್ಕೂ ಉತ್ತರ: ಕಲಾಂ ಅವರೊಂದಿಗೆ ಕೆಲಸ ಮಾಡುತ್ತಿದ್ದೆ. ಪ್ರತಿನಿತ್ಯ ಅವರಿಗೆ ಪತ್ರ ಬರುತ್ತಿತ್ತು. ಆ ಎಲ್ಲಾ ಪತ್ರಗಳನ್ನು ಅವರು ಓದುತ್ತಿದ್ದರು ಇಲ್ಲವೇ ಜತೆಗಿದ್ದವರಿಂದ ಓದಿಸುತ್ತಿದ್ದರು. ನನಗೂ ಕೆಲವು ಪತ್ರಗಳನ್ನು ಓದಲು ಹೇಳುತ್ತಿದ್ದರು. ಹೀಗೆ ಬರು
ತ್ತಿದ್ದ ಪತ್ರಗಳಲ್ಲಿ ಶೇ. ೮೦ರಷ್ಟು ವಿದ್ಯಾರ್ಥಿಗಳದ್ದು. ಎಲ್ಲಾ ಪತ್ರಗಳನ್ನು ಓದುತ್ತಿದ್ದುದು ಮಾತ್ರವಲ್ಲ, ಅದಕ್ಕೆ ಸೂಕ್ತ ಉತ್ತರ ವನ್ನೂ ಬರೆದು ಯಾವ ವಿಳಾಸ ದಿಂದ ಪತ್ರ ಬಂದಿತ್ತೋ ಆ ವಿಳಾಸಕ್ಕೆ ಕಳುಹಿಸುತ್ತಿದ್ದರು.

ವಿದ್ಯಾರ್ಥಿಗಳು ಬರೆಯುತ್ತಿದ್ದ ಬಹುತೇಕ ಪತ್ರಗಳಲ್ಲಿ ನಮಗೊಂದು ಕೆಲಸ ಕೊಡಿಸಿ ಎಂಬ ಬೇಡಿಕೆ ಇರುತ್ತಿತ್ತು. ಅದಕ್ಕೆಲ್ಲ, ಮೊದಲು ಪದವಿ ಮುಗಿಸಿಕೊಳ್ಳಿ. ನಂತರ ಬನ್ನಿ ಎನ್ನುತ್ತಿದ್ದರು. ಕಲಾಂ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಅವರನ್ನು ಎಂಜಿನಿಯರ್ ಆಗಿ, ಪ್ರಾಜೆಕ್ಟ್ ಡೈರೆಕ್ಟರ್ ಆಗಿ… ಹೀಗೆ ಎಲ್ಲ ಸಂದರ್ಭದಲ್ಲೂ ನೋಡಿದ್ದೇನೆ. ಯಾವಾಗಲೂ ಅವರು ವಿದ್ಯಾರ್ಥಿ ಯಾಗಿಯೇ ಇರುತ್ತಿದ್ದರು. ಯಾವ ಮನುಷ್ಯನೇ ಆಗಿರಲಿ, ಅವರಲ್ಲಿರುವ ವಿಶೇಷತೆ ಗುರುತಿಸಿ ಪ್ರೋತ್ಸಾಹ ನೀಡುವ ದೊಡ್ಡ ಗುಣ ಅವರಲ್ಲಿತ್ತು ಎಂದು ಹೇಳಿದರು.

ಸಚಿವರ ಬಾಗಿಲು ಕಾದಿದ್ದರು
ಒಬ್ಬರಿಗೆ ಲಿವರ್ ಡೋನರ್ ಬೇಕಿತ್ತು. ಅದಕ್ಕಾಗಿ ಭಾರತ ಮತ್ತು ಲಂಡನ್‌ನಲ್ಲಿ ಲಿವರ್ ಪಡೆಯಲು ಪತ್ರ ನೀಡಿದ್ದರು. ಆರು ತಿಂಗಳ ನಂತರ ಲಂಡನ್‌ನ ಆಸ್ಪತ್ರೆಯೊಂದರಲ್ಲಿ ಲಿವರ್ ಲಭ್ಯವಿದೆ ಎಂಬ ಮಾಹಿತಿ ಬಂತು. ತ್ವರಿತವಾಗಿ ಅಗತ್ಯ ಅನುಮತಿಗ
ಳನ್ನು ಪಡೆಯಬೇಕಾದರೆ ಅದಕ್ಕೆ ಕೇಂದ್ರ ಸಚಿವರ ಸಹಾಯ ಬೇಕಿತ್ತು. ಕಲಾಂ ಅವರು ನಾನೇ ಸಚಿವರ ಬಳಿ ಮಾತನಾಡಿ ಬರುತ್ತೇನೆ ಎಂದು ಹೋದರು.

ಅಲ್ಲಿನ ಅಧಿಕಾರಿಗಳು, ಕಡತ ಇಟ್ಟುಹೋಗಿ ಎಂದು ಹೇಳಿದರೂ ಕೇಳದ ಕಲಾಂ ಅವರು, ಸಚಿವರು ಬರುವವರೆಗೆ ಕಾಯುತ್ತೇನೆ ಎಂದು ಹೇಳಿ ಅಲ್ಲೇ ಕುಳಿತಿದ್ದರು. ರಾತ್ರಿ ಸುಮಾರು ೮ ಗಂಟೆಯವರೆಗೆ ಕಾಯುತ್ತಾ ಕುಳಿತಿದ್ದರು. ಕೊನೆಗೆ ಸಚಿವರು ಬಂದ ಬಳಿಕ ಅವರಿಂದ ಕಡತಕ್ಕೆ ಸಹಿ ಹಾಕಿಸಿಕೊಂಡು ಬಂದರು. ಬಳಿಕ ಆ ವ್ಯಕ್ತಿ ಲಂಡನ್‌ಗೆ ತೆರಳಿ ಲಿವರ್ ಬದಲಿಸಿಕೊಂಡು ಬಂದರು. ಇದು ಕಲಾಂ ಅವರ ಗುಣ ಎಂದು ಡಾ. ಪ್ರಹ್ಲಾದ್ ರಾವ್ ಹೇಳಿದರು.

ಪತ್ನಿಯರ ಆರೋಪವೇ ನಿಂತಿತು ಒಮ್ಮೆ ನಾನೂ ಸೇರಿದಂತೆ ಮೂವರು ವಿಜ್ಞಾನಿಗಳನ್ನು ಕುಟುಂಬ ಸಮೇತ ಔತಣಕೂಟಕ್ಕೆ
ಬರುವಂತೆ ಅಬ್ದುಲ್ ಕಲಾಂ ಅವರು ಆಹ್ವಾನಿಸಿದ್ದರು. ಅದರಂತೆ ಎಲ್ಲರೂ ಹೋಗಿದ್ದೆವು. ನಮ್ಮ ಮೂವರ ಪತ್ನಿಯರು, ಕೆಲಸದ ಒತ್ತಡದಿಂದ ಮನೆ ಬಗ್ಗೆ ಗಮನ ನೀಡುತಿಲ್ಲ ಎಂದು ಕಲಾಂ ಅವರಲ್ಲಿ ನಮ್ಮ ವಿರುದ್ಧ ದೂರು ನೀಡಲು ಸಿದ್ಧರಾಗಿ ದ್ದರು. ನಮ್ಮ ಪತ್ನಿಯರ ಬಳಿ ಬಂದ ಕಲಾಂ ಅವರೇ ಮಾತು ಆರಂಭಿಸಿದರು.

‘ನಾನು ನಿಮ್ಮ ಗಂಡಂದಿರಿಗೆ ಹೇಳಿದ್ದೇನೆ, ನಿಮಗೆ ಹೆಂಡತಿ, ಮಕ್ಕಳು ಇದ್ದಾರೆ. ಬೇಗ ಮನೆಗೆ ಹೋಗಿ. ಭಾನುವಾರ ಕೆಲಸಕ್ಕೆ ಬರಬೇಡಿ ಎಂದು. ಆದರೆ, ಅವರಿಗೆ ದೇಶಸೇವೆ ಮಾಡುವ ಆಸೆ. ಅದಕ್ಕಾಗಿ ಅವರು ಹೆಚ್ಚು ಸಮಯ ಇಲ್ಲಿ ಕಳೆಯುತ್ತಾರೆ’
ಎಂದು ಹೇಳಿದರು. ನಮ್ಮ ವಿರುದ್ಧ ದೂರು ನೀಡಲು ಬಂದಿದ್ದ ಪತ್ನಿಯರು ಏನೂ ಹೇಳದೆ ಸುಮ್ಮನಾದರು.

ಕಲಾಂರ ಬಗ್ಗೆ
? ಎಲ್ಲರನ್ನೂ ಹುರುದುಂಬಿಸಿ ಕೆಲಸ ಮಾಡಿಸುತಿದ್ದರು.
? ಸದಾ ಚಾಕಚಕ್ಯತೆಯಿಂದ ನಡೆದುಕೊಳ್ಳುತಿದ್ದ ವ್ಯಕ್ತಿ

? ಜೀವಮಾನವಿಡೀ ದೇಶಕ್ಕಾಗಿ ಮಾತ್ರವೇ ದುಡಿದವರು
? ಭಾರತದಲ್ಲಿ ಸ್ಟಂಟ್ ತಯಾರಿಸುವುದನ್ನು ಪರಿಚಯ ಮಾಡಿಸಿದ್ದು ಅಬ್ದುಲ್ ಕಲಾಂ. ನಮ್ಮ ದೇಶದಲ್ಲಿ ಸ್ಟಂಟ್ ತಯಾರಾಗುವ ಮುನ್ನ ಅದರ ಬೆಲೆ ೧ರಿಂದ ೨ ಲಕ್ಷ ರು. ಇತ್ತು. ನಂತರ ಅದರ ಬೆಲೆ ೪೦ ಸಾವಿರ ರು.ಗೆ ಇಳಿಯಿತು.
? ಬ್ರಹ್ಮೋಸ್ ಮಿಸೈಲ್ ಕಲಾಂ ಅವರಿಂದ ಆವಿಷ್ಕಾರವಾಗಿದ್ದು. ರಷ್ಯಾ- ಭಾರತ ಒಕ್ಕೂಟದಲ್ಲಿ ತಯಾರಾದ ಮಿಸೈಲ್.
ಭಾರತದ ಮಿಸೈಲ್ ಮ್ಯಾನ್ ಎಂದು ಕರೆಸಿಕೊಳ್ಳಲು ಕಲಾಂ ಅವರನ್ನು ಬಿಟ್ಟರೆ ಬೇರೆಯವರಿಂದ ಅಸಾಧ್ಯ.