ನಿರ್ಲಕ್ಷ್ಯಕ್ಕೊಳಗಾಗಿದ್ದ ವಿಷ್ಣು ಸ್ಮಾರಕ ಸ್ವಚ್ಛ ಮಾಡಿದ ಅಧಿಕಾರಿಗಳು
ವಿಶ್ವವಾಣಿ ಪ್ರಧಾನ ಸಂಪಾದಕರ ಪೋಸ್ಟ್ನಿಂದ ಎಚ್ಚೆತ್ತ ಅಧಿಕಾರಿವರ್ಗ
ಒಂದೇ ದಿನದಲ್ಲಿ ವಿಷ್ಣು ಸ್ಮಾರಕಕ್ಕೆ ಕಾಯಕಲ್ಪ
ಸಾಮಾಜಿಕ ಮಾಧ್ಯಮಗಳ ಪರಿಣಾಮಕ್ಕೆ ಸಾಕ್ಷಿ
ಮೈಸೂರು: ಜಡ್ಡುಗಟ್ಟಿದ ಅಧಿಕಾರಶಾಹಿ ವ್ಯವಸ್ಥೆಗೆ ಕಿವಿ ಹಿಂಡುವ ಕೆಲಸವೊಂದು ಸದ್ದಿಲ್ಲದೆ ನಡೆದಿದೆ. ಪರಿಣಾಮ, ತಿಂಗಳುಗಳ ಕಾಲ ಆಗದಿದ್ದ ಕೆಲಸವೊಂದು ಕೆಲವೇ ಗಂಟೆಗಳ ಅವಧಿಯೊಳಗೆ ಮುಗಿದು ಸಾರ್ವಜ ನಿಕ ಪ್ರಶಂಸೆಗೂ ಪಾತ್ರವಾಗಿದೆ.
ಮೈಸೂರು ನಗರ ಹೊರವಲಯದಲ್ಲಿ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡಿದ್ದ ಕನ್ನಡದ ಮೇರುನಟ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಸಂಪೂರ್ಣ ನಿರ್ಲಕ್ಷ್ಯ ಕ್ಕೊಳಗಾಗಿ ಕಸದ ಕೊಂಪೆಯಾಗಿತ್ತು. ಈ ಕುರಿತು ಮೇ ೧೦ರಂದು ‘ವಿಶ್ವವಾಣಿ’ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಚಿತ್ರ ಸಮೇತ ಅವ್ಯವಸ್ಥೆ, ಅದ್ವಾನ, ಅಸಮರ್ಪಕ ನಿರ್ವಹಣೆ, ಸ್ಮಾರಕದ ಔಚಿತ್ಯತೆ, ಕಾಮಗಾರಿಯ ಕಳಪೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದರು.
ಪರಿಣಾಮ, ಸಾರ್ವಜನಿಕರು ಅಧಿಕಾರಶಾಹಿ ವ್ಯವಸ್ಥೆ ವಿರುದ್ಧ ಹಿಗ್ಗಾಮುಗ್ಗಾ ಝಾಡಿಸಿದ್ದರು. ತದನಂತರ ಎಚ್ಚತ್ತುಕೊಂಡ ಅಧಿಕಾರಿ ವರ್ಗ ಮೇ ೧೧, ಅಂದರೆ ಶನಿವಾರ ಇಡೀ ದಿನ ನಾಲ್ಕಾರು ಮಂದಿ ಮೂಲಕ ಸ್ವಚ್ಛಗೊಳಿಸುವ ಕಾಯಕ ಮಾಡಿ ಸ್ಮಾರಕಕ್ಕೆ ಒಂದು ರೂಪ ನೀಡಿದೆ.
ಈ ಬಗ್ಗೆ ಸಾಕಷ್ಟು ಪ್ರಶಂಸೆಯೂ ವ್ಯಕ್ತವಾಗಿದ್ದು, ಇದು ವಿಶ್ವವಾಣಿ ಹಾಗೂ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಸಾಮಾಜಿಕ ಕಾಳಜಿಗೆ ಸಿಕ್ಕ ಫಲ ಎಂದು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತವಾಗಿದೆ.
ಭಟ್ಟರು ಹೇಳಿದ್ದು… ಹೆಗ್ಗಡದೇವನಕೋಟೆಗೆ ಹೋಗುವಾಗ ಉದ್ಬೂರು ಗೇಟಿನ ಸಮೀಪ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕವನ್ನು ನಿರ್ಮಿಸ ಲಾಗಿದೆ. ಒಂದು ಸ್ಮಾರಕವನ್ನು ಹೇಗೆ ಕಟ್ಟಬಾರದು ಎಂಬುದಕ್ಕೆ ಈ ಸ್ಮಾರಕ ಒಂದು ಉತ್ತಮ ಸ್ಮಾರಕವಾಗಿ ಕಂಗೊಳಿಸುತ್ತಿದೆ.
ಇಡೀ ಸ್ಮಾರಕಕ್ಕೊಂದು ಥೀಮ್ ಇಲ್ಲವಾಗಿದೆ. ಸ್ಮಾರಕದಲ್ಲಿ ನಿಲ್ಲಿಸಿರುವ ಡಾ.ವಿಷ್ಣುವರ್ಧನ್ ಪ್ರತಿಮೆ ಅವರಂತೆ ಕಾಣುತ್ತಿಲ್ಲ. ಅಲ್ಲಿನ ಗೋಡೆಗಳಿಗೆ ನೇತು ಹಾಕಿರುವ ಡಾ.ವಿಷ್ಣುವರ್ಧನ್ ಫೋಟೋಗಳ ಆಯ್ಕೆಯೂ ಸರಿ ಇಲ್ಲ. ಸ್ಮಾರಕದೊಳಗಿನ ಕೆರೆಯ ನೀರು ಪಾಚಿ ಕಟ್ಟಿ ಅಸಹ್ಯವಾಗಿ ಗೋಚರಿಸುತ್ತಿದೆ. ಸ್ಮಾರಕಕ್ಕೆ ಹೊಂದಿಕೊಂಡ ಸಭಾಂಗಣದ ಗೋಡೆ, ಮೆಟ್ಟಿಲು ಒಂದೇ ವರ್ಷದಲ್ಲಿ ಬಿರುಕು ಬಿಟ್ಟು ವಿರೂಪ ವಾಗಿದೆ. ಗಾಜುಗಳು ಒಡೆದು ಹೋಗಿವೆ.
ಸೌಂದರ್ಯ ಪ್ರeಯಂತೂ ಶೂನ್ಯ. ಇಡೀ ಸ್ಮಾರಕ ನೋಡಿ ಹೊರ ಬರುವಾಗ ಬೇಸರವಾಗುತ್ತದೆ. ಡಾ.ವಿಷ್ಣುವರ್ಧನ ಹೆಸರಿನಲ್ಲಿ ಇಂಥ ಕಳಪೆ ಸ್ಮಾರಕ ನಿರ್ಮಿಸುವ ಬದಲು, ಅದನ್ನು ನಿರ್ಮಿಸದಿದ್ದರೇ ಒಳ್ಳೆಯದಿತ್ತು. ಎಂದು ಹೇಳುವ ಮುಖೇನ ಅದಕ್ಕೆ ಪೂರಕವಾದ ಸಾಕ್ಷಿಯಾಗಿ ಒಂದಷ್ಟು
ಚಿತ್ರಗಳನ್ನು ಹಾಕಿದ್ದರು.
ಕೆಲಸ ಕಾರ್ಯಗತದ ನಂತರ
ಹೆಗ್ಗಡದೇವನಕೋಟೆ ಮಾರ್ಗದಲ್ಲಿರುವ ಉದ್ಭೂರು ಗೇಟಿನ ಸನಿಹ ನಿರ್ಮಿಸಿರುವ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕದ ಅವಸ್ಥೆ ಮತ್ತು ಅವ್ಯವಸ್ಥೆ ಬಗ್ಗೆ ನಿನ್ನೆ ಇಲ್ಲಿ ಬರೆದಿದ್ದೆ. ಸ್ಮಾರಕದೊಳಗಿನ ಕೆರೆಯಲ್ಲಿ ಪಾಚಿಗಟ್ಟಿರುವ ಬಗ್ಗೆ ಪ್ರಸ್ತಾಪಿಸಿದ್ದೆ. ಸ್ಮಾರಕ ನಿರ್ವಹಣೆ ಹೊತ್ತಿರುವ ಅಧಿಕಾರಿಗಳು ಇಂದು ಇಡೀ ಸ್ಮಾರಕವನ್ನು ಸ್ವಚ್ಛಗೊಳಿಸಿದ್ದಾರೆ. ಪಾಚಿಗಟ್ಟಿರುವ ಕೆರೆಯ ನೀರನ್ನು ಹೊರತೆಗೆದು ಇಡೀ ಜಾಗವನ್ನು ಶುದ್ಧೀಕರಿಸಿದ್ದಾರೆ.
ಹೂಗಳಿರುವ ಕುಂಡಗಳನ್ನು ಅಲ್ಲಲ್ಲಿ ಇಟ್ಟು ಅಲಂಕರಿಸಿದ್ದಾರೆ. ಇಡೀ ಸ್ಮಾರಕಕ್ಕೆ ಸ್ವಚ್ಛತೆಯ ಕಾಯಕಲ್ಪ ಕೊಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಬೆಳಗ್ಗಿನಿಂದಲೇ ತೊಳೆಯುವ, ತಿಕ್ಕುವ ಕೆಲಸ ನಡೆದಿದೆ. ವಿಜಯಾನಂದ ಎಂಬ ಅಧಿಕಾರಿ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರು ಅಭಿನಂದನಾರ್ಹರು ಎಂದಿದ್ದಾರೆ.