Sunday, 15th December 2024

ಅದ್ದೂರಿಯ ಅಕ್ಕ ಸಮ್ಮೇಳನಕ್ಕೆ ಇಂದು ಚಾಲನೆ

USA

ಪ್ರತ್ಯಕ್ಷ ವರದಿ: ಶ್ರೀವತ್ಸ ಜೋಶಿ, ವಾಷಿಂಗ್ಟನ್‌ ಡಿಸಿ

ವರ್ಜೀನಿಯಾದ ರಿಚ್ಮಂಡ್ ನಗರದಲ್ಲಿ ಮೂರು ದಿನ ಕನ್ನಡದ ಕಂಪು ವಿಶ್ವವಾಣಿ ವಿಶೇಷ

ಮುಂದಿನ ಮೂರು ದಿನಗಳಲ್ಲಿ ‘ಅಕ್ಕ’ ಸಮ್ಮೇಳನದ ಸಚಿತ್ರ ವರದಿಗಳಿಗಾಗಿ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರತ್ಯೇಕ ಎರಡು ಪುಟಗಳನ್ನು ಮೀಸಲಿಟ್ಟಿದ್ದೇವೆ. ನಮ್ಮ ಅಂಕಣಕಾರ ಶ್ರೀವತ್ಸ ಜೋಶಿ ಮತ್ತು
ತಂಡದವರು ಕಳುಹಿಸಲಿರುವ ಸುದ್ದಿ ಸ್ವಾರಸ್ಯಗಳು, ಆಕರ್ಷಕ ಚಿತ್ರಗಳು ಓದುಗರಿಗೆ ಕುಳಿತಲ್ಲಿಂದಲೇ ಸಮ್ಮೇಳನ ಸಂಭ್ರಮ ದರ್ಶನ ಮಾಡಿಸಲಿವೆ – ಸಂ

ಅಮೆರಿಕದ ಪೂರ್ವಕರಾವಳಿಯಲ್ಲಿರುವ ವರ್ಜೀನಿಯಾ ಸಂಸ್ಥಾನದ ರಾಜಧಾನಿ ರಿಚ್ಮಂಡ್ ನಗರದಲ್ಲಿ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ಕನ್ನಡ ಬಣ್ಣಗಳೊಂದಿಗೆ ಸಿಂಗಾರಗೊಂಡು ಸಜ್ಜಾಗಿದೆ. ೧೨ನೆಯ ‘ಅಕ್ಕ’ ವಿಶ್ವಕನ್ನಡ ಸಮ್ಮೇಳನಕ್ಕೆ ಇಲ್ಲಿ ಶುಕ್ರವಾರ ಸಂಜೆ (ಸ್ಥಳೀಯ ಸಮಯ) ೫ ಗಂಟೆಗೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಕರ್ನಾಟಕದಿಂದ ಬಂದಿರುವ ಕಲಾವಿದ ದುರ್ಗೇಶ್ ಮುರಳಿ ಮತ್ತು ಬಳಗದವರ ನಾದಸ್ವರ
ಮಂಗಲಧ್ವನಿ, ಸಮ್ಮೇಳನದ ಸಂಚಾಲಕರೂ ಆಗಿರುವ ಷಣ್ಮುಗಂ ವೆಂಕಟರಂಗನ್ ಅವರ ವೇದಷೋಷದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಚಾಲನೆ ಪಡೆಯಲಿವೆ.

 

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ, ಮತ್ತು ಶ್ವಾಸಗುರು ವಚನಾನಂದ ಸ್ವಾಮೀಜಿ ಜ್ಯೋತಿ ಬೆಳಗಿಸಿ ಆಶೀರ್ವಚನ ನೀಡಲಿದ್ದಾರೆ. ಕನ್ನಡ ಮತ್ತು
ಸಂಸ್ಕೃತಿ ಇಲಾಖೆಯ ಮಾಜಿ ಸಚಿವೆ ರಾಣಿ ಸತೀಶ್ ಅವರ ಉಪಸ್ಥಿತಿಯಲ್ಲಿ ‘ಥಟ್ ಅಂತ ಹೇಳಿ’ ರಸ ಪ್ರಶ್ನೆ ಖ್ಯಾತಿಯ ವೈದ್ಯಸಾಹಿತಿ ಡಾ. ನಾ.ಸೋಮೇಶ್ವರ ಅವರು ಸಮ್ಮೇಳನದ ಆಶಯ ಭಾಷಣ ಮಾಡಲಿದ್ದಾರೆ.
ಸಮ್ಮೇಳನಾರ್ಥಿಗಳಾಗಿ ಈಗಾಗಲೇ ೫೦೦೦ ಕ್ಕೂ ಹೆಚ್ಚು ಕನ್ನಡಿಗರು ನೋಂದಾಯಿ ಸಿದ್ದು ಅಮೆರಿ ಕದ ವಿವಿಧ ನಗರಗಳಿಂದ, ದೇಶ- ವಿದೇಶಗಳಿಂದ ರಿಚ್ಮಂಡ್‌ಗೆ ಬಂದಿಳಿದ್ದಾರೆ.

ಕರ್ನಾಟಕದಿಂದಲೂ ಅನೇಕ ಕಲಾವಿದರು ವಿಶೇಷ ಆಹ್ವಾನಿತರಾಗಿ ಬಂದಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ಜಾತ್ರೆಯೋ ಪಾದಿಯಲ್ಲಿ ನಡೆಯುವ ಕನ್ನಡ ನುಡಿಹಬ್ಬದ ಸವಿಯುಣ್ಣಲು ಎಲ್ಲರೂ ಕಾತರ ರಾಗಿದ್ದಾರೆ. ಜಿ.ಕಪ್ಪಣ್ಣ ನೇತೃತ್ವದಲ್ಲಿ ಜಾನಪದ – ‘ಧರೆಗಿಳಿದ ದೊಡ್ಡವರ ವೈಭವ’ (ಕನ್ನಡ ಸಂಸ್ಕೃತಿ ಇಲಾಖೆಯ ಪ್ರಸ್ತುತಿ), ಎಸ್ತರ್ ಸ್ಮಿತಾ ಮತ್ತು ತಂಡದವರಿಂದ ’ಕರಾವಳಿ ತೀರ’ ಸ್ವಾಗತ ನೃತ್ಯ, ಕೊಳಲುವಾದಕ ವಿದ್ವಾನ್ ವಿ.ಕೆ.ರಾಮನ್ ಮತ್ತು ಬಳಗದವರಿಂದ ವಾದ್ಯಮೇಳ, ನವೀನ ಸಜ್ಜು ಮತ್ತು ತಂಡದವರಿಂದ ರಸಮಂಜರಿ ಸಂಗೀತಸಂಜೆ – ಇವು ಶುಕ್ರವಾರ ಸಂಜೆ ಪ್ರೇಕ್ಷಕರ ಮನತಣಿಸಲಿವೆ.

ಶನಿವಾರ ಬೆಳಗ್ಗೆ ಅಮೆರಿಕದ ವಿವಿಧ ನಗರಗಳ ಕನ್ನಡ ಸಂಘಗಳಿಂದ ಭವ್ಯವಾದ ಮೆರವಣಿಗೆಯ ಬಳಿಕ ಸಮ್ಮೇಳನದ ಅಽಕೃತ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿದರೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೃಷಿ ಸಚಿವ ಚೆಲುವರಾಯ ಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ, ವರ್ಜೀನಿಯಾದ ಸೆನೆಟರ್‌ಗಳಾದ ಮಾರ್ಕ್ ವಾರ್ನರ್, ಟಿಮ್ ಕೇನ್ ಮತ್ತಿತರ ಗಣ್ಯರು ವೇದಿಕೆ ಯಲ್ಲಿ ಉಪಸ್ಥಿತರಿರುತ್ತಾರೆ. ಬಳಿಕ ಭಾನುವಾರ ಮಧ್ಯ ರಾತ್ರಿಯವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಅಚ್ಚಕನ್ನಡ ಸೊಗಡಿನ ಊಟೋ ಪಚಾರ ಇರುತ್ತದೆ. ಸಮ್ಮೇಳನ ನಡೆಯುವ ಕನ್ವೆಷನ್ ಸೆಂಟರ್ ನ ಬೃಹತ್ ಸ್ಥಳವನ್ನು ನಾಲ್ಕು ವಿಂಗಡಣೆ ಯಾಗಿಸಿ
‘ಡಾ.ಪುನೀತ್ ಸಭಾಂಗಣ’, ‘ಡಾ. ದ.ರಾ. ಬೇಂದ್ರೆ ಸಭಾಂಗಣ’ ಎಂಬ ಎರಡು ಭವ್ಯ ಸಭಾಗೃಹ ಗಳು, ‘ಅನ್ನಪೂರ್ಣ’ ಎಂಬ ಭೋಜನಾಲಯ, ಮತ್ತು ’ರಿಚ್ಮಂಡ್ ಸರ್ಕಲ್’ ಎಂಬ ವಾಣಿಜ್ಯ ಮಳಿಗೆಗಳ ಸಂಕೀರ್ಣವನ್ನು ರಚಿಸಲಾಗಿದೆ. ‌

ವೈಭವ-ವೈಶಿಷ್ಟ್ಯ- ವೈವಿಧ್ಯ ಎಂಬ ಥೀಮ್ ಇಟ್ಟುಕೊಂಡಿರುವ ಈ ಬಾರಿಯ ಸಮ್ಮೇಳನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಗಾಯನ-ನೃತ್ಯ ಸ್ಪರ್ಧೆಗಳು, ಸಾಹಿತ್ಯಿಕ ಚಟುವಟಿಕೆಗಳು, ಯೋಗ-ಅಧ್ಯಾತ್ಮ
ಕಾರ್ಯಾಗಾರಗಳು, ವಾಣಿಜ್ಯ ಸಂಕಿರಣಗಳು, ಮಹಿಳಾ ವೇದಿಕೆ, ವೈದ್ಯಕೀಯ ಶಿಕ್ಷಣ ಅಧಿವೇಶನ, ವಿವಿಧ ಕಾಲೇಜುಗಳ ಹಳೆವಿದ್ಯಾರ್ಥಿಗಳ ಸಮ್ಮಿಲನ,  ಭಾವೀ ವಧೂ-ವರರ ಸಮಾವೇಶ, ಚಲನಚಿತ್ರೋತ್ಸವ ಮುಂತಾದುವೆಲ್ಲವೂ ಇರುತ್ತವೆ. ಇವೆಲ್ಲವನ್ನೂ ಸುಸೂತ್ರವಾಗಿ ನಿಭಾಯಿಸಲು ರಿಚ್ಮಂಡ್ ಕನ್ನಡ ಸಂಘ ಮತ್ತು ವಾಷಿಂಗ್ಟನ್ ಡಿಸಿ.ಯ ಕಾವೇರಿ ಕನ್ನಡ ಸಂಘಗಳ ಉತ್ಸಾಹಿ ಸ್ವಯಂಸೇವಕರು ಹಗಲಿರುಳು ಶ್ರಮವಹಿಸಿ ದುಡಿಯುತ್ತಿದ್ದಾರೆ ಎಂದು ಅಕ್ಕ ಅಧ್ಯಕ್ಷ ರವಿ ಬೋರೇಗೌಡ ತಿಳಿಸಿದ್ದಾರೆ. ಒಟ್ಟಿನಲ್ಲಿ ಸಾವಿರಾರು ಕನ್ನಡಿಗರು ಒಂದೇ ಸೂರಿನಡಿ ಸೇರಿ ಸಂಭ್ರಮಿಸುವುದಕ್ಕೆ ಕ್ಷಣಗಣನೆ ಆರಂಭವಾಗಿದೆ.