Thursday, 12th December 2024

ಸೂರ್ಯನಷ್ಟೇ ಪ್ರಖರ, ಸಾಧನೆಯ ಶಿಖರ, ಆರ್ಯನ್ ಸೂರ್ಯ !

ಆರ್ಯನ್ ಸೂರ್ಯ! ಈ ಹೆಸರಿನಲ್ಲೇ ಒಂದು ಜೋಶ್ ಇದೆ. ಒಂದು ಘನತೆಯಿದೆ. ಅಷ್ಟೇ ದೊಡ್ಡ ಮಟ್ಟದ ಸಾಧನೆ ಈ ಹುಡುಗನ ಖಾತೆ ಯಲ್ಲಿದೆ. ಸಮಾಜಮುಖಿ ಧೋರಣೆ, ಚಿಕ್ಕ ವಯಸ್ಸಿನಿಂದಲೇ ಬಡವರ ಪರ ಯೋಚಿಸುವ ಸಿರಿವಂತಿಕೆ, ಹೃದಯವಂತಿಕೆ ಈ ಸಾಧಕನ ದೊಡ್ಡ ಸಾಧನೆ ಆಗಿದೆ!

ವಿನಾಯಕರಾಮ್ ಕಲಗಾರು

ಕ್ರೀಡೆಯಲ್ಲಿ ಆರ್ಯನ್ ಸೂರ್ಯ ಪರಿಪೂರ್ಣ ಆಲ್ ರೌಂಡರ್. ದೈಹಿಕವಾಗಿ ಎಷ್ಟು ಗಟ್ಟಿಯಾಗಿ ದ್ದಾನೋ ಬುದ್ಧಿವಂತಿಕೆಯಲ್ಲಿ ಅಷ್ಟೇ ಚುರುಕು. ಚೆಸ್ ಆಡುವುದರಲ್ಲಿ ಈತನಿಗೆ ವಿಶ್ವಮಟ್ಟದ ಮನ್ನಣೆ ದೊರೆತಿದೆ. ಜತೆಗೆ ಅಬಾಕಸ್, ಕರಾಟೆ, ಟೆನ್ನಿಸ್ ಸೇರಿದಂತೆ ನಾನಾ ವಿಧವಾದ ಕ್ರೀಡೆಗಳಲ್ಲಿ ಕೂಡ ಪರಿಣಿತಿ ಹೊಂದಿರುವ ಆರ್ಯನ್‌ಗೆ ನಾಲ್ಕನೇ ವಯಸ್ಸಿನಲ್ಲೇ ಕ್ರೀಡಾಸಕ್ತಿ ಬೆಳೆಯುತ್ತದೆ. ಐದನೇ ವಯಸ್ಸಿಗೇ ಅಬಾಕಸ್ ನಲ್ಲಿ ರಾಜ್ಯಮಟ್ಟದಲ್ಲಿ ಗೆದ್ದು ಬಂಗಾರದ ಪದಕ ಗಳಿಸುತ್ತಾನೆ.

ಆರ್ಯನ್ ಚೆಸ್ ಕಲಿಯಬೇಕು ಎಂಬ ಹಂಬಲ ತೋರಿದ್ದು ಆರನೇ ವಯಸ್ಸಿನಲ್ಲಿ. ತಾತ ರಾಜಶೇಖರ್ ಎಂಪಿ ಕೂಡ ಚೆಸ್ ಪ್ಲೇಯರ್ ಆಗಿದ್ದು, ಅವರನ್ನು ಆಟದಲ್ಲಿ ಸೋಲಿಸಬೇಕು ಎಂಬ ಛಲ ಬರುತ್ತದೆ. ಚೆಸ್ ಆಟ ಕಲಿಯಬೇಕು ಎನ್ನುವ ಕೌತುಕಕ್ಕೆ ಕಾರಣ ಅಜ್ಜನನ್ನೇ ಗೆಲ್ಲಬೇಕು ಎನ್ನುವ ವಿಭಿನ್ನ ಆಸೆ. ಇದು ಆರ್ಯನ್ ಬದುಕಿನ ಬಹುದೊಡ್ಡ ಸಾಧನೆಗೆ ವೇದಿಕೆಯೇ ಆಗಿಬಿಡುತ್ತದೆ! ಏಳನೇ ವಯಸ್ಸಿಗೇ ವಿಶ್ವಮಟ್ಟದ ಏಷಿಯನ್ ಚೆಸ್ ಗೇಮ್ಸ್, ಕಾಮನ್ ವೆಲ್ತ್, ಯು ಎಸ್ ಓಪನ್ ಸೇರಿದಂತೆ ರಾಜ್ಯ-ರಾಷ್ಟ್ರ ಮತ್ತು ಅಂತಾ ರಾಷ್ಟ್ರೀಯ ಮಟ್ಟದ ಚೆಸ್ ಪ್ಲೇಯರ್ ಆಗಿ ಹೊರಹೊಮ್ಮುತ್ತಾನೆ. ರೈಸಿಂಗ್ ಯೂತ್ ಸೂಪರ್ ಸ್ಟಾರ‍್ಸ್ ಆ- ಇಂಡಿಯಾ ಪ್ರಶಸ್ತಿಯನ್ನು ದೂರದ ದೆಹಲಿಗೆ ಹೋಗಿ ಪಡೆದಿರುತ್ತಾನೆ!

ಟಾಪ್ ಲೆವೆಲ್ ಆಟಗಾರ ಎನಿಸಿಕೊಳ್ಳುವುದರ ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಯನ್ ಸೂರ್ಯನ ಹೆಸರು ಪ್ರಖರಿಸುತ್ತದೆ. ಅದಾದ ನಂತರ ಟೆನ್ನಿಸ್,ಕ್ರಿಕೆಟ್, ಅಥ್ಲೆಟಿಕ್, ಬಾಕ್ಸಿಂಗ್ ಮತ್ತು ಬಾಸ್ಕೆಟ್ ಬಾಲ್‌ನ್ನು ಲೀಲಾಜಾಲವಾಗಿ ಆಡುತ್ತಾನೆ. ಕರಾಟೆ, ಸೇಫ್ ಟೀ ನುಂಚಾಕುನಲ್ಲಿ ಬ್ಲಾಕ್ ಬೆಲ್ಟ್
ಪಡೆದುಕೊಂಡಿರುತ್ತಾನೆ.

ಗುರುಗಳ ನೆಚ್ಚಿನ ಶಿಷ್ಯ
ಚೆಸ್ ಕಲಿಕೆಯಲ್ಲಿ ಆರ್ಯನ್‌ಗೆ ಗುರುಗಳು ಶಿವಾನಂದ್. ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರಾದ ಶಿವಾನಂದ್ ಗರಡಿಯಲ್ಲಿ ಚೆಸ್ ಚಾಂಪಿ ಯನ್ ಆಗುವ ಗುರಿಯೊಂದಿಗೆ ಶ್ರದ್ಧೆಯಿಟ್ಟು ಕಲಿಯುತ್ತಾನೆ. ಬಾಕ್ಸಿಂಗ್ ವಿಚಾರಕ್ಕೆ ಬಂದರೆ ಕ್ಯಾಪ್ಟನ್ ಚಂದ್ರಶೇಖರ್ ಅವರು ಗುರುಗಳಾಗುತ್ತಾರೆ. ಸೈನಿಕರಾಗಿ ಕೆಲಸ ಮಾಡಿರುವ ಅವರು ಬಾಕ್ಸಿಂಗ್ ಕೋಚ್ ಕೂಡ ಹೌದು. ಕರ್ನಾಟಕದ ಮಿನಿ ಒಲಂಪಿಕ್‌ನಲ್ಲಿ ಗೋಲ್ಡ್ ಮೆಡಲ್ ಪಡೆದು ಕೊಳ್ಳುತ್ತಾನೆ. ಕರಾಟೆಯಲ್ಲಿ ಗ್ರಾಂಡ್ ಮಾಸ್ಟರ್ ಕೋದಂಡನ್ ಅವರು ಮಾರ್ಗದರ್ಶಕರಾಗಿ ಬರುತ್ತಾರೆ. ಚಿಕ್ಕವನಿದ್ದಾಗಲೇ ಕರಾಟೆ ಕಲಿಸಿಕೊಟ್ಟಿದ್ದು ಸೆನ್ಸೆ ಜಯರಾಮ್ ಅವರು.

ಜ್ಯೂನಿಯರ್ ಮಾಡೆಲ್ !
ಚಿಕ್ಕವನಿದ್ದಾಗಲೇ ಆರ್ಯನ್ ಮಾಡೆಲಿಂಗ್ ಲೋಕಕ್ಕೂ ಎಂಟ್ರಿ ಕೊಟ್ಟಿದ್ದಾನೆ. ವಿಶ್ವಮಟ್ಟದ ಬಟ್ಟೆ ಕಂಪನಿಗಳು ಆರ್ಯನ್ ಸ್ಟೈಲ್ ಮತ್ತು ಫಿಟ್‌ನೆಸ್‌ಗೆ ಫಿದಾ ಆಗಿ ಅವಕಾಶಗಳ ಮೇಲೆ ಅವಕಾಶ ನೀಡುತ್ತಿವೆ. ಅಂತರಾಷ್ಟ್ರೀಯ ಬ್ರ್ಯಾಂಡ್‌ಗಳಿಗೆ ಆರ್ಯನ್ ಸೂರ್ಯ ಟೀನ್ ಮಾಡೆಲ್ ಆಗಿ ಸೇವೆ ಸಲ್ಲಿಸಿದ್ದು, ಈಗಲೂ ಸಾಕಷ್ಟು ವೇದಿಕೆಗಳಲ್ಲಿ ಆರ್ಯನ್ ಹೆಸರು ಚಾಲ್ತಿ ಯಲ್ಲಿದೆ.

ಏನಿದು ಚೆಸ್ ಬಾಕ್ಸಿಂಗ್?
ಪ್ರಪಂಚವೇ ಅಚ್ಚರಿಪಡುವ ಈ ಆಟದಲ್ಲಿ ಮೊದಲು ಮೆದುಳಿಗೆ ಕೆಲಸ ಕೊಡಲಾಗುತ್ತದೆ. ನಂತರ ದೈಹಿಕವಾಗಿ ಎದುರಾಳೀ ಆಟಗಾರನ ವಿರುದ್ಧ ಸೆಣೆಸಬೇಕಾಗುತ್ತದೆ. ಇಲ್ಲಿ ಮಾನಸಿಕವಾಗಿ ಎಷ್ಟು ಶ್ರದ್ಧೆ ಇಟ್ಟು ಚೆಸ್ ಆಡ ಬೇಕಾಗುತ್ತದೆಯೋ ಅದಕ್ಕೆ ತದ್ವಿರುದ್ಧವಾಗಿ ಬಾಕ್ಸಿಂಗ್ ಮಾಡಲು ತಯಾರಿ ನಡೆಸಬೇಕಾಗುತ್ತದೆ. ಅದು ಮುಗಿದ ನಂತರ ಮತ್ತೆ ಚೆಸ್ ಆಟಕ್ಕೆ ಕೂರ ಬೇಕಾಗುತ್ತದೆ. ಈ ಜಗದ್ವಿಖ್ಯಾತ ಚೆಸ್ ಬಾಕ್ಸಿಂಗ್ ಆಟದಲ್ಲಿ ಆರ್ಯನ್ ಸೂರ್ಯ ವರ್ಲ್ಡ್ ಚಾಂಪಿಯನ್, ಅದೂ ಹದಿನೈದು ವಯಸ್ಸಿನ ಒಳಪಟ್ಟ ಮಕ್ಕಳ ಸ್ಪರ್ಧೆಯಲ್ಲಿ; ಗೋಲ್ಡ್ ಮೆಡಲ್ ಗೆದ್ದಿದ್ದಾನೆ. ಹದಿನೆಂಟು ವಯಸ್ಸಿನ ಒಳಗಿನವರ ಸಾಲಿನಲ್ಲಿ ಬೆಳ್ಳಿಯ ಪದಕ ಪಡೆದುಕೊಂಡಿದ್ದಾನೆ. ಇವೆರಡೂ ಟರ್ಕಿ ದೇಶದಲ್ಲೇ ೨೦೨೨ರಲ್ಲಿ ಅದ್ದೂರಿಯಾಗಿ ನಡೆದಿರುತ್ತದೆ.

ಆರ್ಯನ್ ಆರನೇ ವಯಸ್ಸಲ್ಲೇ ಚೆಸ್ ಕಲಿತಿರುತ್ತಾನೆ. ಕೋವಿಡ್ ಸಮಯದಲ್ಲಿ ಬಾಕ್ಸಿಂಗ್‌ನ್ನು ಅಭ್ಯಾಸ ಮಾಡುತ್ತಾನೆ. ತದನಂತರ ಅಮೆರಿಕಕ್ಕೆ  ಹೋದಾಗ ಅಲ್ಲಿ ಚೆಸ್ ಪ್ಲಸ್ ಬಾಕ್ಸಿಂಗ್ ಎರಡನ್ನೂ ಸೇರಿಸಿ ಆಡುವ ಆಟವಿದೆ ಎಂದು ಗೊತ್ತಾಗುತ್ತದೆ. ಅಲ್ಲಿಂದ ಚೆಸ್ ಬಾಕ್ಸಿಂಗ್ ಕಡೆ ವಾಲಿಕೊಳ್ಳು ತ್ತಾನೆ!

ಪಡುಕೋಣ್ ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ಗೆ ಜಾಯಿನ್ ಆಗುತ್ತಾನೆ. ಅಲ್ಲಿ ವಿವಿಧ ಕ್ರೀಡಾ ವಿಭಾಗದಲ್ಲಿ ಕಲಿಕೆ ಮುಂದುವರೆಸುತ್ತಾನೆ. ಕೆಎಸ್‌ಸಿಎ ಲೀಗ್ಸ್ ನಲ್ಲೂ ಆಡುತ್ತಾನೆ. ಕ್ರಿಕೆಟ್ ಕೂಡ ಆರ್ಯನ್‌ಗೆ ಸ್ಪೂರ್ತಿಯಾಗುತ್ತದೆ. ಆ ವಿದ್ಯೆಯನ್ನೂ ಕಲಿಯಬೇಕು ಎನ್ನುವ ಆಸೆಯೂ ಪೂರ್ತಿ ಯಾಗುತ್ತದೆ!

ಸಾವಯವ ದೇಹ, ಶ್ರಮಪಡುವ ಜೀವ!
ಆರ್ಯನ್ ಈಗ ಸ್ಟೋನ್ ಹಿಲ್ ಇಂಟರ್ ನ್ಯಾಷನಲ್ ಸ್ಕೂಲ್‌ಗೆ ಹೋಗುತ್ತಾನೆ. ೯ನೇ ತರಗತಿ ಓದುತ್ತಿದ್ದಾನೆ. ಶಾಲೆ ಮುಗಿಸಿ, ಕ್ರಿಟೆಟ್ ಅಥವಾ ಬಾಸ್ಕೆಟ್ ಬಾಲ್, ಅದಾದಮೇಲೆ ಫಿಟ್ ನೆಸ್, ಹೀಗೆ ಆರ್ಯನ್ ಸೂರ್ಯ ದಿನವಿಡೀ ಬ್ಯುಸಿಯಾಗಿಯೇ ಇರುತ್ತಾನೆ. ದೇಹವನ್ನು ನೈಸರ್ಗಿಕವಾಗಿ ಫಿಟ್ ಮಾಡಿ ಕೊಂಡಿದ್ದಾನೆ. ಅದೂ ಹದಿನೈದನೇ ವಯಸ್ಸಿನಲ್ಲೇ!

ಅತೀ ಚಿಕ್ಕ ವಯಸ್ಸಿನ ಹುಡುಗನೊಬ್ಬ ದೇಶವನ್ನು ಪ್ರತಿನಿಽಸುತ್ತಾನೆ ಎನ್ನುವುದೇ ನಿಜವಾದ ಹೆಮ್ಮೆ. ಪ್ರೌಢ ಶಾಲೆಗೆ ಬರುವ ಮುನ್ನವೇ ಆರ್ಯನ್ ಸೂರ್ಯ ಇಷ್ಟೆಲ್ಲಾ ಸಾಧನೆ ಮಾಡಿದ್ದಾನೆ ಎಂದರೆ ಅದರ ಹಿಂದೆ ಇರುವುದು ತಂದೆ ಸುನಿಲ್ ಸಿಎಸ್, ತಾಯಿ ಅಮಿತಾ ಸುನಿಲ್ ಮತ್ತು ಇಡೀ ಕುಟುಂಬ! ಅದರಲ್ಲೂ ಅಮ್ಮ ಅಮಿತಾ ಅವರಂತೂ ಮಗನ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ.

ಬಡವರ ಮಕ್ಕಳು ಎಂದರೆ ಆರ್ಯನ್‌ಗೆ ವಿಶೇಷ ಕಾಳಜಿ. ವಿಶೇಷ ಚೇತನರ ಬದುಕಿಗೆ ಆಸರೆಯಾಗುವ ಯೋಚನೆ ಆತನದು. ಸರ್ಕಾರಿ ಶಾಲೆಯ ಬಡ
ಮಕ್ಕಳಿಗಾಗಿ ಒಂದಷ್ಟು ವಿಶೇಷ ಕಾರ್ಯಕ್ರಮಗಳನ್ನು ಆರ್ಯನ್ ಕೇರ್ ಫೌಂಡೇಷನ್ ಮೂಲಕ ಹಮ್ಮಿಕೊಳ್ಳುವ ಯೋಜನೆ ಹಾಕಿಕೊಳ್ಳುತ್ತಾನೆ!
ಇವೆಲ್ಲದರ ಜತೆಗೆ ಪರಿಸರ ಉಳಿಸುವ, ಈ ಮಣ್ಣಿನ ಫಲವತ್ತತೆಯನ್ನು ಕಾಪಾಡುವ ಉದ್ದೇಶದಿಂದ ಗ್ರೀನ್ ಪಾತ್ ಆರ್ಗಾನಿಕ್ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಕೂಡ ಆಗಲಿದ್ದಾನೆ. ಒಟ್ಟಾರೆ ಅತೀ ಚಿಕ್ಕ ವಯಸ್ಸಿನಲ್ಲೇ ಸಾಮಾಜಿಕ ಕಳಕಳಿಯ ಜತೆ, ವಿಶೇಷ ಚೇತನರ ಕಷ್ಟಕ್ಕೆ ಕರಗುವ ಆರ್ಯನ್, ಕ್ರೀಡಾ ವಿಭಾಗದಲ್ಲಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರಶಸ್ತಿ, ಸನ್ಮಾನ, ವಿಶೇಷ ಗೌರವ ಸ್ವೀಕರಿಸಿದ್ದಾನೆ. ಮೊನ್ನೆ ವಿಶ್ವವಾಣಿ ಬಳಗ ಹಮ್ಮಿಕೊಂಡಿದ್ದ ವಿಯೇಟ್ನಾಂ ಗ್ಲೋಬಲ್ ಅಚೀವರ‍್ಸ್ ಅವಾರ್ಡ್ ಪಡೆದಿದ್ದಾನೆ!

ವಿಶೇಷ ಚೇತನರಿಗೆ ವಿಶೇಷ ಕನ್ನಡಕ

ಸದಾ ವಿಶೇಷ ಚೇತನರ ಪರ ಯೋಚಿಸುವ ಆರ್ಯನ್ ಸೂರ್ಯ ಇತ್ತೀಚೆಗೆ ಒಂದಷ್ಟು ಹೊಸತೊಂದು ಐಡಿಯಾ ಮಾಡಿದ್ದಾನೆ. ಕಣ್ಣು ಕಾಣದ ಕಣ್ಣಿಗೆ ಕಾಣುವ ದೇವರುಗರಿಗೆ ಸಹಾಯ ಆಗುವಂಥ ಸ್ಮಾರ್ಟ್ ಗ್ಲಾಸ್‌ಗಳನ್ನು ವಿತರಿಸಲು ಮುಂದಾಗಿದ್ದಾನೆ. ಹೆಚ್ಚು ಬೆಲೆಬಾಳುವ ಈ ಕನ್ನಡಕದಲ್ಲಿ ಮುಖ ಗುರುತಿಸುವ, ನಾನಾ ಭಾಷೆ ಅರ್ಥೈಸಿಕೊಳ್ಳುವ, ಒಂದಷ್ಟು ಮೆಮೋರಿ ಸ್ಟೋರೇಜ್ ಮಾಡುವ ಕೆಲಸ ಸೇರಿದಂತೇ ಸಾಕಷ್ಟು ವ್ಯವಸ್ಥೆ ಹೊಂದಿರುವ ಈ ಡಿವೈಸ್‌ನ್ನು ಆರ್ಯನ್ ತನ್ನ ಆರ್ಯನ್ ಕೇರ್ ಫೌಂಡೇಷನ್ ಮೂಲಕ ಕೊಡುತ್ತಾ ಬಂದಿದ್ದಾನೆ.

*

ನಾನು ಮಾಡಿರೋದು ಸಾಧನೆ ಅಲ್ಲ, ಅದೊಂದು ಸೇವೆ. ಬಡವರಿಗೆ, ಬಡ ಪ್ರತಿಭಾವಂತರಿಗೆ, ವಿಶೇಷ ಚೇತನರಿಗೆ ನನ್ನ ಕೈಲಾದ ಅಳಿಲು ಸೇವೆಯನ್ನು ನನ್ನ ಫೌಂಡೇಷನ್ ಮೂಲಕ ಮಾಡುತ್ತಾ, ವಿಶ್ವಮಟ್ಟದ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಾ, ಸದ್ಯದಲ್ಲೇ ಅಂತಾರಾಷ್ಟ್ರೀಯ ಮಟ್ಟದ ಟೂರ್ನಮೆಂಟ್ ಹಮ್ಮಿಕೊಳ್ಳುತ್ತಾ ಸಾಮಾಜಿಕ ಕೆಲಸಗಳನ್ನೂ ಮಾಡುತ್ತಾ ಸಾಗಬೇಕು ಎನ್ನುವುದು ನನ್ನ ಧ್ಯೇಯ. ನನ್ನನ್ನು ಗುರುತಿಸಿ ಗುರುತರ ಪ್ರಶಸ್ತಿ ನೀಡಿ
ಗೌರವಿಸಿರೋ ವಿಶ್ವವಾಣಿ ಬಳಗಕ್ಕೆ ಧನ್ಯವಾದ. ನನ್ನ ಶ್ರಮದ ಹಿಂದಿರೋ ನನ್ನ ತಂದೆ, ತಾಯಿ, ತಾತ ಅಜ್ಜಿ, ನನ್ನ ಶಾಲೆ, ಗುರು ಹಿರಿಯರು ಮತ್ತು ಕುಟುಂಬದವರಿಗೆ ವಿಶೇಷ ಕೃತಜ್ಞತೆಗಳು!
-ಆರ್ಯನ್ ಸೂರ್ಯ ಎಸ್.ಎ, ಯುವ ಸಾಧಕ, ಅಂತಾರಾಷ್ಟ್ರೀಯ ಕ್ರೀಡಾಪಟು