Sunday, 15th December 2024

ಅಶೋಕ್ ಏಕಚಕ್ರಾಧಿಪತ್ಯಕ್ಕೆ ಶಾಸಕರ ಕಿಡಿ

ಅಶ್ವತ್ಥನಾರಾಯಣ ರೂಪದಲ್ಲಿ ಹೊರಬಿದ್ದ ರಾಜಧಾನಿಯ ಬಿಜೆಪಿ ಶಾಸಕರ ಆಕ್ರೋಶ

ವಿಶ್ವವಾಣಿ ವಿಶೇಷ

ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಏಕಚಕ್ರಾಧಿಪತ್ಯದ ಬಗ್ಗೆ ಬೆಂಗಳೂರಿನ ಬಿಜೆಪಿಯ ಎಲ್ಲ ಶಾಸಕರಲ್ಲಿ ಅಸಮಾ
ಧಾನ, ಆಕ್ರೋಶ ಮಡುಗಟ್ಟಿದೆ. ಇದು ತಹಸೀಲ್ದಾರ್ ಬದಲಾವಣೆ ವಿಚಾರದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮೂಲಕ ವ್ಯಕ್ತವಾಗಿದೆಯಷ್ಟೇ.

ವಿಧಾನಸಭೆ ಮೊಗಸಾಲೆಯಲ್ಲಿ ಶುಕ್ರವಾರ ಇಬ್ಬರ ನಡುವೆ ನಡೆದ ಚಕಮಕಿ ನೆಪ ವಷ್ಟೇ. ಎಲ್ಲರ ಬಗೆಗೆ ಕಂದಾಯ ಸಚಿವ ಉಡಾಫೆ ಧೋರಣೆಯ ಪರಿಣಾಮ ಅದು. ಶಾಸಕರ ವಲಯದಲ್ಲಿ ಎಲ್ಲ ಸಹಿಸಿಕೊಂಡು ಇನ್ನು ಸುಮ್ಮನಿರಲಾಗದು ಎಂಬ ಸ್ಪಷ್ಟ ಸಂದೇಶ ಶುಕ್ರವಾರದ ಘಟನೆಯ ಮೂಲಕ ರವಾನೆಯಾಗಿದೆ.

ತಾವು ಉಸ್ತುವಾರಿಯಾಗಿರುವ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಹಸೀಲ್ದಾರ್ ಬದಲಾವಣೆಗೆ ಅಶೋಕ್ ಒಪ್ಪದಿರುವುದು ಇಬ್ಬರ ನಡುವೆ ಜಗಳ ತೀವ್ರಗೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆಯಾದರೂ ಅಶ್ವತ್ಥ ನಾರಾಯಣ ವರ್ತನೆಗೆ ಬೇರೆಯದ್ದೇ
ಕಾರಣಗಳಿವೆ. ಅಶೋಕ್ ಮತ್ತು ಡಾ.ಅಶ್ವತ್ಥನಾರಾಯಣ ಮಧ್ಯೆ ಮುಸುಕಿನ ಗುದ್ದಾಟಕ್ಕೆ 4 ವರ್ಷಗಳ ಇತಿಹಾಸವಿದೆ.

ಜತೆಗೆ ಬೆಂಗಳೂರಿನ ಬಹುತೇಕ ಬಿಜೆಪಿ ಶಾಸಕರಿಗೆ ಸಚಿವ ಆರ್.ಅಶೋಕ್ ಮೇಲೆ ಸಿಟ್ಟಿದೆ. ಕೊನೇ ಪಕ್ಷ ಪ್ರತಿಪಕ್ಷಗಳ ಸದಸ್ಯರಿಗೆ ಸ್ಪಂದಿಸುವಷ್ಟೂ ಅಶೋಕ್ ನಮಗೆ ಸ್ಪಂದಿಸುತ್ತಿಲ್ಲ ಎಂಬ ಬೇಸರ ಬಹುತೇಕ ಬಿಜೆಪಿ ಶಾಸಕರಲ್ಲಿದೆ. ಆದರೆ, ಅಶೋಕ್ ಮುಖ್ಯ ಮಂತ್ರಿಯವರಿಗೆ ಆಪ್ತರಾಗಿರುವುದರಿಂದ ಬಹು ತೇಕರು ತಮ್ಮ ನೋವನ್ನು ಹೇಳಿಕೊಳ್ಳಲಾಗದೆ, ಮೌನಕ್ಕೆ ಶರಣಾಗಿದ್ದಾರೆ.

ಸರಕಾರ ರಚನೆಯಲ್ಲೇ ಶುರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉರುಳಿ ೨೦೧೯ರಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರ ಬಂದಾಗಲೇ ಅಶೋಕ್ ಮತ್ತು ಅಶ್ವತ್ಥನಾರಾಯಣ ಮಧ್ಯೆ ಅಸಮಾಧಾನ ಆರಂಭವಾಗಿತ್ತು. ಹಿರಿಯನಾದ, ಹಿಂದಿನ ಯಡಿಯೂರಪ್ಪ ಸರಕಾರದಲ್ಲಿ ಡಿಸಿಎಂ ಆಗಿದ್ದ ತಮ್ಮನ್ನು ನಿರ್ಲಕ್ಷಿಸಿ ಅಶ್ವತ್ಥನಾರಾಯಣ ಅವರಿಗೆ ಡಿಸಿಎಂ ಸ್ಥಾನ ನೀಡಿದ್ದು ಅಶೋಕ್ ಅವರಲ್ಲಿ ವೈಷಮ್ಯ ಹುಟ್ಟುಹಾಕಿತ್ತು.

ಕೊನೇಪಕ್ಷ ತಮಗೆ ಬೆಂಗಳೂರು ನಗರ ಉಸ್ತುವಾರಿಯನ್ನಾದರೂ ನೀಡಬೇಕು ಎಂದು ಆಗಲೇ ಅಶೋಕ್ ಪಟ್ಟುಹಿಡಿದಿದ್ದರು. ಆದರೆ, ಬೆಂಗಳೂರಿನ ಬಹುತೇಕ ಶಾಸಕರು (ಸಚಿವರು ಸೇರಿ) ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ರಾಜಧಾನಿಯ ಉಸ್ತುವಾರಿ ಯನ್ನು ಯಡಿಯೂರಪ್ಪ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಬೊಮ್ಮಾಯಿ ಸಿಎಂ ಆದ ಬಳಿಕವೂ ಇದನ್ನೇ ಮುಂದುವರಿಸಿ ದರು. ಅಧಿಕಾರ ತಪ್ಪಲು ಶಾಸಕರೇ ಕಾರಣ ಎಂಬುದಕ್ಕೆ ಅವರ ಬಗೆಗೆ ಅಶೋಕ್‌ಗೆ ಅಸಮಾಧಾನ ಎನ್ನಲಾಗಿದ್ದು, ಅವರನ್ನು ಹಣಿಯಲು ಉದ್ದೇಶಪೂರ್ವಕ ಹೀಗೆಲ್ಲ ವರ್ತಿಸುತ್ತಿದ್ದಾರೆ ಎಂದು ಬೆಂಗಳೂರಿನ ಹಿರಿಯ ಬಿಜೆಪಿ ಶಾಸಕರೇ ಹೇಳುತ್ತಾರೆ.

ಬಿಬಿಎಂಪಿ ಚುನಾವಣೆ: ಏತನ್ಮಧ್ಯೆ, ಸದ್ಯದಲ್ಲೇ ಬಿಬಿಎಂಪಿ ಚುನಾವಣೆ ಬರಲಿದ್ದು, ರಾಜಧಾನಿಯ ಅಧಿಕಾರ ಹಿಡಿಯಲು ಬಿಜೆಪಿ ಶತಾಯ-ಗತಾಯ ಪ್ರಯತ್ನಿಸುತ್ತಿದೆ. ತಾವೇ ಮುಂದೆ ನಿಂತು ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ಬೆಂಗಳೂರಿ ನಲ್ಲಿ ತಮ್ಮ ಅಗತ್ಯವನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ಅಶೋಕ್ ತೀರ್ಮಾನಿಸಿದ್ದಾರೆ. ಈ ಕಾರಣ ಕ್ಕಾಗಿಯೇ ಉಸ್ತುವಾರಿ ಹಂಚಿಕೆ ಮಾಡಿದಾಗ ಅಶೋಕ್ ತಮಗೆ ಯಾವುದೇ ಜಿಲ್ಲೆ ಬೇಡ ಎಂದು ಸಿಎಂ ಹಾಗೂ ಪಕ್ಷದ ನಾಯಕರ ಮನವೊ ಲಿಸುವಲ್ಲಿ ಯಶಸ್ವಿಯಾಗಿದ್ದರು.

ಒಂದೊಮ್ಮೆ ಅಶೋಕ್‌ಗೆ ಬಿಬಿಎಂಪಿ ಚುನಾವಣೆ ಉಸ್ತುವಾರಿ ಕೊಟ್ಟರೆ, ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಯಾವುದರಲ್ಲೂ
ಬೆಂಗಳೂರಿನ ಇತರೆ ಸಚಿವರು ಮತ್ತು ಶಾಸಕರ ಮಾತು ನಡೆಯುವುದಿಲ್ಲ. ಬೆಂಗಳೂರು ನಗರ ಉಸ್ತುವಾರಿ ಹೊಂದಿರುವ ಸಿಎಂಗೆ
ಆತ್ಮೀಯರಾಗಿರುವುದರಿಂದ ಅವರ ಮನವೊಲಿಸಿ ಎಲ್ಲವನ್ನೂ ಅಶೋಕ್ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ಆಗ ಮತ್ತೆ ಸಚಿವರು, ಶಾಸಕರಿಗೆ ಕಿಮ್ಮತ್ತಿಲ್ಲದಂತಾಗುತ್ತದೆ. ಸಹಜವಾಗಿ ತಮ್ಮ ಅಭ್ಯರ್ಥಿಗಳ ಪರ ಶಾಸಕರು ಅಶೋಕ್ ಅವರಿಗೆ ದುಂಬಾಲು ಬೀಳಬೇಕು ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ. ಈ ಎಲ್ಲವೂ ಸೇರಿ ಶುಕ್ರವಾರ ವಿಧಾನಸಭೆ ಮೊಗಸಾಲೆಯಲ್ಲಿ ಅಶ್ವತ್ಥ ನಾರಾಯಣ ಮೂಲಕ ಸ್ಫೋಟಗೊಂಡಿತ್ತು.

ಅಸಮಾಧಾನಕ್ಕೆ ಕಾರಣ
ಇಬ್ಬರ ಮುಸುಕಿನ ಗುದ್ದಾಟಕ್ಕೆ ತಹಸೀಲ್ದಾರ್ ವರ್ಗಾವಣೆ ವಿಚಾರದ ನೆಪ

ಬೆಂಗಳೂರಿನ ಶಾಸಕರಿಗೆ ಸರಿಯಾಗಿ ಸ್ಪಂದಿಸದ ಸಚಿವರ ಧೋರಣೆಗೆ ಆಕ್ರೋಶ

ರಾಜಧಾನಿಯ ಸುತ್ತಮುತ್ತಲಿನ ಕೆಲವು ಶಾಸಕರ ಮಾತುಗಳಿಗೂ ಮನ್ನಣೆ ಇಲ್ಲ

ಆಡಳಿತ ಪಕ್ಷದವರಾಗಿದ್ದರೂ ಶಾಸಕರ ಮಾತಿಗೆ ಕವಡೆ ಕಿಮ್ಮತ್ತಿನ ಬೆಲೆ ಸಿಗುತ್ತಿಲ್ಲ.

ಸಿಎಂಗೆ ಆಪ್ತರಾಗಿದ್ದೂ ಶಾಸಕರಿಗೆ ಬೇಕಾದ ಕಂದಾಯ ಅಧಿಕಾರಿಗಳನ್ನು ನೀಡುತ್ತಿಲ್ಲ

ಚುನಾವಣೆ ಸಮೀಪಿಸುತ್ತಿರುವಾಗ ಸಚಿವರ ವರ್ತನೆಯಿಂದ ಸಮಸ್ಯೆಯ ಆತಂಕ