Sunday, 24th November 2024

ಅಸ್ಸಾಂ- ಮೇಘಾಲಯವೂ ಭಾರತದ್ದೇ, ಸಂತೋಷದಿಂದ ಹೋಗುವೆ…

ಸತ್ಯಮೇವ ಜಯತೆ – ಶಂಕರ್‌ ಬಿದರಿ- ಭಾಗ- ೮೬

ಬೆಂಗಳೂರಿಗೆ ಬಂದ ನಂತರ, ಕೆಲವೇ ದಿನಗಳಲ್ಲಿ ಮಗಳು ವಿಜಯಲಕ್ಷ್ಮಿಗೆ ತರಬೇತಿಯ ಅಂಗವಾಗಿ, ಬೆಂಗಳೂರಿನ ಕೇಂದ್ರ ಅಬಕಾರಿ ಸುಂಕ ಮತ್ತು ಸೀಮಾ ಸುಂಕದ ಕಚೇರಿಯಲ್ಲಿ ನಿಯುಕ್ತಗೊಳಿಸಿದರು.

ಈ ಅವಧಿಯಲ್ಲಿ, ರಾಜ್ಯದ ವಿವಿಧ ಮೂಲೆಗಳಿಂದ ಅವಳಿಗೆ ಸನ್ಮಾನ ಕಾರ್ಯಕ್ರಮಗಳ ಏರ್ಪಡಿಸಿರುವ ಬಗ್ಗೆ ಆಮಂತ್ರಣಗಳು ಬರಲು ಪ್ರಾರಂಭವಾದವು. ಅಲ್ಲಿಯವರೆಗೆ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ನಾಗರಿಕ ಸೇವೆಗಳ ಬಗ್ಗೆ ಹೆಚ್ಚಿನ ಜಾಗೃತಿ ಇರಲಿಲ್ಲ. ಇದರಿಂದಾಗಿ, ಕರ್ನಾಟಕದ ವಿದ್ಯಾರ್ಥಿಗಳು ಹೆಚ್ಚಿನ ಮಟ್ಟಿಗೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಮಾತ್ರ ಗಮನ ಹರಿಸುತ್ತಿದ್ದರು.

ಈ ಸನ್ಮಾನ ಸಮಾರಂಭಗಳಿಗೆ ಅವಳು ಹಾಜರಾಗುವುದರಿಂದ, ಕರ್ನಾಟಕದ ವಿದ್ಯಾರ್ಥಿ ಗಳಲ್ಲಿ ನಾಗರಿಕ ಸೇವಾ ಪರೀಕ್ಷೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿ, ಅವರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ರೀತಿಯಿಂದ ಸಿದ್ಧತೆ ಮಾಡಿಕೊಳ್ಳಬಹುದು. ಇದರಿಂದಾಗಿ, ಆಡಳಿತದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂಬ ಉದ್ದೇಶದಿಂದ ನಾನು ಅವಳಿಗೆ, ಸನ್ಮಾನ ಸಮಾರಂಭಗಳಿಗೆ ಹಾಜರಾಗಿ, ಕರ್ನಾಟಕದ ವಿದ್ಯಾರ್ಥಿಗಳಿಗೆ ಈ ಬಗ್ಗೆ ಹೆಚ್ಚಿನ ತಿಳಿವಳಿಕೆ ನೀಡುವಂತೆ ಸೂಚಿಸಿದೆನು.

ಹೆಚ್ಚಿದ ಆಕಾಂಕ್ಷಿಗಳು

ಈ ಸಮಾರಂಭಗಳನ್ನು ವಿವಿಧ ವಿದ್ಯಾಸಂಸ್ಥೆಗಳು, ಇತರ ಸಾರ್ವಜನಿಕ ಸಂಸ್ಥೆಗಳು ಮತ್ತು ಮಠ-ಮಾನ್ಯಗಳು ಏರ್ಪಡಿಸಿದ್ದವು. ಈ ಸಮಾರಂಭಗಳು ನಡೆದ ನಂತರ, ಕ್ರಮೇಣವಾಗಿ ನಾಗರಿಕ ಸೇವಾ ಪರೀಕ್ಷೆಗಳಿಗೆ, ಕರ್ನಾಟಕದಿಂದ ಹಾಜರಾಗುತ್ತಿದ್ದ
ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಯಿತು. ಕರ್ನಾಟಕದ ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಹೆಚ್ಚಿನ ಯಶಸ್ಸು ಪಡೆಯಲು
ಪ್ರಾರಂಭಿಸಿದರು. ಕಳೆದ ಐದು ವರ್ಷಗಳಿಂದ, ಅಂದರೆ ೨೦೧೫ರ ನಂತರ, ಕರ್ನಾಟಕದಿಂದ ಪ್ರತಿ ವರ್ಷ ೪೦ರಿಂದ ೫೦
ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾಗಿ ರಾಷ್ಟ್ರದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುವಂತಾಗಿದೆ.

ರಾಜ್ಯದ ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ಸಹಿತ ಈ ಯಶಸ್ಸಿನಲ್ಲಿ ಸೂಕ್ತ ಪಾಲು ಪಡೆದಿದ್ದಾರೆ. ೨೦೦೧ನೇ ಇಸವಿಗೂ ಮೊದಲು ರಾಜ್ಯದಿಂದ ಪ್ರತಿ ವರ್ಷ ಸಾಮಾನ್ಯವಾಗಿ, ಒಬ್ಬರು ಅಥವಾ ಇಬ್ಬರು ಮಾತ್ರ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಿದ್ದರು. ಈ ರೀತಿ, ವಿಜಯಲಕ್ಷ್ಮಿಯ ಸಾಧನೆ, ನಮ್ಮ ರಾಜ್ಯದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ಅವರು ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿದ್ದು ಸಂತೋಷದ ವಿಷಯ.

ಅಚ್ಚರಿ ಮೇಲೆ ಅಚ್ಚರಿ
ನಾಗರಿಕ ಸೇವಾ ಪರೀಕ್ಷೆಯ ಅಂಕಪಟ್ಟಿ, ಆಗಸ್ಟ್ ತಿಂಗಳಲ್ಲಿ ಬಂತು. ಅಂಕಪಟ್ಟಿ ಯನ್ನು ನೋಡಿದಾಗ ನಮಗೆ ಆಶ್ಚರ್ಯ
ಕಾದಿತ್ತು. ವಿಜಯಲಕ್ಷ್ಮಿ ಎರಡು ಐಚ್ಛಿಕ ವಿಷಯ ಗಳನ್ನಾಗಿ ಕನ್ನಡ ಸಾಹಿತ್ಯ ಮತ್ತು ರಾಜಕೀಯ ಶಾಸ್ತ್ರಗಳನ್ನು ಆರಿಸಿಕೊಂಡಿ ದ್ದಳು. ಅವಳು ಮೊದಲನೇ ಪ್ರಯತ್ನದಲ್ಲಿ ಕನ್ನಡ ಸಾಹಿತ್ಯ ಐಚ್ಛಿಕ ವಿಷಯದಲ್ಲಿ ಅವಳಿಗೆ ಬಹಳ ಕಡಿಮೆ ಅಂಕಗಳು ಬಂದಿದ್ದ ರಿಂದ, ಅವಳಿಗೆ ಭಾರತೀಯ ಆಡಳಿತ ಸೇವೆ ಅಥವಾ ಭಾರತೀಯ ಪೊಲೀಸ್ ಸೇವೆಗೆ ನೇಮಕಾತಿ ದೊರೆಯಲಿಲ್ಲ. ಅವಳು ಭಾರಯ ಕೇಂದ್ರ ಅಬಕಾರಿ ಸುಂಕ ಮತ್ತು ಸೀಮಾ ಸುಂಕ ಸೇವೆಗೆ ತೃಪ್ತಿ ಪಡಬೇಕಾಯಿತು.

ಎರಡನೇ ಪ್ರಯತ್ನದಲ್ಲಿ ಅವಳು ದೇಶಕ್ಕೇ ಮೊದಲ ಸ್ಥಾನ ಪಡೆದಿದ್ದರೂ, ಎರಡನೇ ಪ್ರಯತ್ನದಲ್ಲಿಯೂ ಸಹಿತ ಅವಳಿಗೆ ಕನ್ನಡ ಸಾಹಿತ್ಯ ಐಚ್ಛಿಕ ವಿಷಯದಲ್ಲಿ ನಿರೀಕ್ಷೆಗಿಂತ ಕಡಿಮೆ ಅಂಕಗಳು (೩೪೪/೬೦೦) ದೊರೆತಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ, ಅವಳಿಗೆ ಮೊದಲನೇ ಪ್ರಯತ್ನದಲ್ಲಿ ಸಂದರ್ಶನಕ್ಕೆ ಇದ್ದ ಒಟ್ಟು ೩೦೦ ಅಂಕಗಳಲ್ಲಿ ೨೧೦ ಅಂಕಗಳು ದೊರೆತಿದ್ದವು. ಆದರೆ ಎರಡನೇ ಪ್ರಯತ್ನದಲ್ಲಿ ಸಂದರ್ಶನಕ್ಕೆ ನಿಗದಿಪಡಿಸಿದ್ದ ೩೦೦ ಅಂಕಗಳಲ್ಲಿ ೧೬೫ ಅಂಕಗಳು ಮಾತ್ರ ದೊರೆತಿದ್ದವು.

ಆದರೆ ಅವಳು ಸಾಮಾನ್ಯ ಜ್ಞಾನ ಮತ್ತು ರಾಜಕೀಯ ಶಾಸ್ತ್ರೀ ಐಚ್ಛಿಕ ವಿಷಯಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಹೆಚ್ಚಿನ ಅಂಕಗ
ಳನ್ನು ಪಡೆದಿದ್ದಳು. ಈ ವಿಷಯಗಳಲ್ಲಿನ ಅತ್ಯುತ್ತಮ ಸಾಧನೆಯಿಂದಾಗಿ ದೇಶಕ್ಕೇ ಪ್ರಥಮ ಸ್ಥಾನ ದೊರಕಿತ್ತು. ಅದಲ್ಲದೆ, ಅವಳು ಪಡೆದ ಮತ್ತು ಎರಡನೇ ಸ್ಥಾನ ಪಡೆದ ಅಭ್ಯರ್ಥಿಯ ಒಟ್ಟು ಅಂಕಗಳಲ್ಲಿ ಬಹಳ ಹೆಚ್ಚಿನ ಅಂತರ ಇತ್ತು.

ಬಂತು ನೇಮಕಾತಿ ಪತ್ರ
ಆಗಸ್ಟ್ ಕೊನೆಯಲ್ಲಿ, ಭಾರತೀಯ ಆಡಳಿತ ಸೇವೆಗೆ ಅವಳ ನೇಮಕಾತಿ ಪತ್ರ ಬಂತು. ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ
ಉತ್ತರಾಖಂಡದ ಮಸ್ಸೂರಿಯಲ್ಲಿರುವ, ಲಾಲ್ ಬಹಾದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ, ಭಾರತೀಯ
ಆಡಳಿತ ಸೇವೆಯ ಪ್ರಶಿಕ್ಷಣಾರ್ಥಿಯಾಗಿ ವರದಿ ಮಾಡಿಕೊಳ್ಳ ಬೇಕಾಗಿತ್ತು. ಈ ಸಮಯದಲ್ಲಿ, ನನ್ನ ಹಲವಾರು ಆತ್ಮೀಯ
ಮಿತ್ರರು, ನಾವೆಲ್ಲರೂ ಹೋಗಿ ಅವಳನ್ನು ಮಸ್ಸೂರಿಯ ಅಕಾಡೆಮಿಗೆ ಸೇರಿಸಿ ಬರೋಣ, ನಂತರ ನಾವು ಬದರಿನಾಥ,
ಕೇದಾರಿನಾಥ, ಹೃಷಿಕೇಶ ಮತ್ತು ಹರಿದ್ವಾರ ಮುಂತಾದ ಪುಣ್ಯಕ್ಷೇತ್ರಗಳ ದರ್ಶನ ಮಾಡಿ ಕೊಂಡು ಬರೋಣ ಎಂಬ ಆಶಯ ವ್ಯಕ್ತಪಡಿಸಿದರು.

ನಾನು ಅಖಿಲ ಭಾರತ ಪೊಲೀಸ್ ಸೈನ್ಸ್ ಕಾಂಗ್ರೆಸ್ ನಲ್ಲಿ ಭಾಗವಹಿಸಲು ಜಮ್ಮುವಿಗೆ ಹೋದಾಗ, ಶ್ರೀ ವೈಷ್ಣೋದೇವಿಯಲ್ಲಿ ಹರಕೆ ಹೊತ್ತಿಕೊಂಡಿದ್ದು ನನಗೆ ನೆನಪಿನಲ್ಲಿತ್ತು. ಆದ್ದರಿಂದ ನಾನು ಅವರ ಸಲಹೆಯನ್ನು ಒಪ್ಪಿ ಸಿದ್ಧತೆಗಳನ್ನು ಮಾಡಿಕೊಂಡೆನು.

ಮತ್ತೆ ವೈಷ್ಣೋದೇವಿ ದರ್ಶನ

ಬೆಂಗಳೂರಿನಿಂದ ದೆಹಲಿಗೆ ರೈಲಿನಲ್ಲಿ ಹೋಗಿ ಅಲ್ಲಿಂದ ಮತ್ತೆ, ದೆಹಲಿಯಿಂದ ಜಮ್ಮುವಿಗೆ ರೈಲಿನಲ್ಲಿ ಪ್ರಯಾಣ ಮಾಡಿ, ಎಲ್ಲರೂ ವಿಜಯಲಕ್ಷ್ಮಿ ಯೊಂದಿಗೆ ಶ್ರೀ ವೈಷ್ಣೋದೇವಿಯ ದರ್ಶನ ಪಡೆಯುವುದು, ನಂತರ ದೆಹಲಿಯಿಂದ ಕಾರಿನ ಮೂಲಕ ಮಸ್ಸೂರಿಗೆ ಹೋಗಿ, ಅವಳು ಲಾಲ್ ಬಹಾದ್ದೂರ್ ಶಾಸ್ತ್ರಿ ಆಡಳಿತ ಅಕಾಡೆಮಿಯಲ್ಲಿ ವರದಿ ಮಾಡಿಕೊಂಡ ಮೇಲೆ, ನಾವು ಉಳಿದ ಪುಣ್ಯ ಕ್ಷೇತ್ರಗಳ ದರ್ಶನ ಪಡೆದು, ದೆಹಲಿಯಿಂದ ರೈಲಿನಲ್ಲಿ ಬೆಂಗಳೂರಿಗೆ ಹಿಂತಿರುಗಬೇಕು ಎಂದು ತೀರ್ಮಾನಿಸಿದೆವು.

ಬುಕ್ಕಾದವು ಟಿಕೆಟ್
ನಾನು, ನನ್ನ ಧರ್ಮಪತ್ನಿ ಡಾ. ಉಮಾದೇವಿ, ಆಗ ಇಂಜಿನಿಯರಿಂಗ್ ವಿದ್ಯಾರ್ಥಿ ಗಳಾಗಿದ್ದ ನನ್ನ ಸುಪುತ್ರ ಚಿ.ವಿಜಯೇಂದ್ರ ಮತ್ತು ನನ್ನ ಸಹೋದರನ ಮಗ ಚಿ. ಪ್ರಶಾಂತ್, ನನ್ನ ಆತ್ಮೀಯರಾದ ಚಿತ್ರದುರ್ಗದ ಶ್ರೀ ಜಂಬುಕೇಶ್ವರ, ಅಬಕಾರಿ ಇಲಾಖೆಯ ಅಽಕಾರಿ ಗಳಾಗಿದ್ದ ದಿವಂಗತ ಶ್ರೀ ನಾಗೇಂದ್ರಪ್ಪ ಮತ್ತು ಅವರ ಧರ್ಮಪತ್ನಿ, ಅರಸಿಕೆರೆಯ ಶಾಸಕರಾಗಿದ್ದ ಶ್ರೀ ಪರಮೇಶ್ವರಪ್ಪ ಮತ್ತು ಐಜಿಪಿ ಕೆ.ಎಸ್.ಆರ್.ಪಿ. ಕಚೇರಿಯಲ್ಲಿ ನನ್ನ ಆಪ್ತ ಸಹಾಯಕರಾಗಿದ್ದ ಶ್ರೀ ವಾಸನ್ ಅವರು ಈ ಪ್ರವಾಸವನ್ನು ಕೈಗೊಳ್ಳಬೇಕು ಎಂದು ನಿರ್ಧರಿಸಿ, ಅದರಂತೆ ರೈಲ್ವೆ ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಿದೆವು.

ಬೆಂಗಳೂರಿನಿಂದ ೨೦೦೧ರ ಆಗಸ್ಟ್ ೨೮ರಂದು, ನಮ್ಮ ಪ್ರಯಾಣ, ಕರ್ನಾಟಕ ಎಕ್ಸ್‌ಪ್ರೆಸ್‌ನಲ್ಲಿ ಆರಂಭವಾಯಿತು. ನಮ್ಮ ರೈಲು ಭೋಪಾಲ ಸಮೀಪವಿದ್ದಾಗ, ಬೆಂಗಳೂರಿನ ನಮ್ಮ ಮನೆಯಲ್ಲಿದ್ದ ನನ್ನ ಸಹೋದರ ಶ್ರೀ ಈಶ್ವರನ ಎರಡನೇ ಮಗನಾದ ಚಿ. ಪ್ರವೀಣ್ ಮೊಬೈಲ್ ಫೋನ್‌ಗೆ ಕರೆ ಮಾಡಿದನು. ಅವನು, ದೆಹಲಿಯಿಂದ ಒಂದು ಲಕೋಟೆ ಬಂದಿದೆ ಎಂದು ಹೇಳಿದನು.

ಅದನ್ನು ತೆರೆದು ಅದರಲ್ಲಿ ಏನಿದೆ ಎಂದು ತಿಳಿಸಲು ನಾನು ಹೇಳಿದೆನು. ಅವನು ಲಕೋಟೆಯನ್ನು ತೆರೆದು ಅದರಲ್ಲಿರುವ ವಿಷಯವನ್ನು ತಿಳಿಸಿದನು. ಅದು ಭಾರತ ಸರಕಾರದಿಂದ ಬಂದ ಪತ್ರವಾಗಿತ್ತು. ವಿಜಯಲಕ್ಷ್ಮಿಯನ್ನು ಭಾರತೀಯ ಆಡಳಿತ ಸೇವೆಗೆ ನೇಮಕಾತಿಯ ನಂತರ, ಅವಳ ಸೇವೆಯನ್ನು ಅಸ್ಸಾಂ-ಮೇಘಾಲಯ ರಾಜ್ಯಗಳಿಗೆ ನೀಡಲಾಗಿದೆ ಎಂಬ ಮಾಹಿತಿ ಅದರಲ್ಲಿತ್ತು!

ನಮಗೊಂದು ನಿರಾಸೆ
ಅವಳು ದೇಶಕ್ಕೇ ಮೊದಲ ಸ್ಥಾನ ಪಡೆದಿದ್ದರೂ ಸಹಿತ, ಹಿಂದಿನ ಕೆಲವು ವರ್ಷಗಳಲ್ಲಿ ಪ್ರತಿ ರಾಜ್ಯಗಳಲ್ಲಿ ಪ್ರತಿ ವರ್ಷ ಲಭ್ಯವಿರುವ ಹುದ್ದೆಗಳಲ್ಲಿ ಶೇಕಡಾ ೬೬ ರಷ್ಟು ಹುದ್ದೆಗಳನ್ನು ರಾಜ್ಯದ ಹೊರಗಿನವರಿಗೂ, ಶೇಕಡಾ ೩೩ರಷ್ಟು ಹುದ್ದೆಗಳನ್ನು ಆಯಾ ರಾಜ್ಯದವರಿಗೂ ನೀಡುವ ವ್ಯವಸ್ಥೆ ಜಾರಿಗೆ ಬಂದಿತ್ತು. ಈ ಹುದ್ದೆಗಳನ್ನೂ ವರ್ಗೀಕರಣ ಮಾಡಿ, ಸಾಮಾನ್ಯ ವರ್ಗ,
ಹಿಂದುಳಿದ, ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನಿಗದಿಪಡಿಸಲಾಗುತ್ತಿತ್ತು.

ವಿಜಯಲಕ್ಷ್ಮಿ ಉತ್ತೀರ್ಣಳಾದ ವರ್ಷ ಭರ್ತಿಯಾಗಬೇಕಾಗಿದ್ದ ಹುದ್ದೆಗಳ ಪೈಕಿ, ಕರ್ನಾಟಕದಿಂದ ಆಯ್ಕೆಯಾದ ಅಭ್ಯರ್ಥಿ ಗಳಿಂದ ಭರ್ತಿಯಾಗಬೇಕಾದ ಹುದ್ದೆಗಳು ಹಿಂದುಳಿದ ವರ್ಗಗಳಿಗೆ ಮೀಸಲಾಗಿದ್ದವು. ವಿಜಯಲಕ್ಷ್ಮಿ ಸಾಮಾನ್ಯ ವರ್ಗಕ್ಕೆ ಸೇರಿದವ ಳಾಗಿದ್ದರಿಂದ ಅವಳ ಸೇವೆಯನ್ನು ಸರಕಾರ ಕರ್ನಾಟಕ ರಾಜ್ಯಕ್ಕೆ ನೀಡಲು ಆಗಿರಲಿಲ್ಲ.

ಬತ್ತದ ಮಗಳ ಉತ್ಸಾಹ
ಈ ಕಾರಣಗಳಿಂದಾಗಿ, ಅವಳ ಸೇವೆಯನ್ನು ಅಸ್ಸಾಂ- ಮೇಘಾಲಯ ರಾಜ್ಯಗಳಿಗೆ ನೀಡಲಾಗಿತ್ತು. ಅವಳ ಸೇವೆಯನ್ನು
ಅಸ್ಸಾಂ-ಮೇಘಾಲಯ ರಾಜ್ಯಗಳಿಗೆ ನೀಡಿದ್ದರಿಂದ, ನನ್ನ ಜೊತೆ ಬಂದವರಿಗೆ ಸ್ವಲ್ಪ ಅಸಮಾಧಾನವಾಯಿತು. ದೇಶಕ್ಕೇ ಪ್ರಥಮ
ಸ್ಥಾನ ಪಡೆದರೂ ಅವಳಿಗೆ ಕರ್ನಾಟಕದಲ್ಲಿ ಸೇವೆ ಮಾಡುವ ಅವಕಾಶ ದೊರೆಯಲಿಲ್ಲ ಎಂದು ಅವರಿಗೆ ಬೇಸರವಾಯಿತು.
ಆದರೆ ವಿಜಯಲಕ್ಷ್ಮಿ ಮಾತ್ರ ಅಸ್ಸಾಂ- ಮೇಘಾಲಯ ರಾಜ್ಯಗಳೂ ಸಹಿತ ಭಾರತ ಒಕ್ಕೂಟದಲ್ಲಿವೆ. ನಾನು ಸಂತೋಷದಿಂದ ಆ
ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತೇನೆ ಎಂದು ಉತ್ಸಾಹದಿಂದಲೇ ಇದ್ದಳು.

ಜೇಠ್ಮಲಾನಿ ಉಡುಗೊರೆ
ನಾವು ದೆಹಲಿ ತಲುಪಿದ ಮೇಲೆ, ದೆಹಲಿಯ ಕರ್ನಾಟಕ ಭವನ ನಂಬರ್ ೩ ‘ಭೀಮಾ’ಗೆ ಹೋಗಿ ಕೆಲವು ಗಂಟೆ ವಿಶ್ರಾತಿ
ಪಡೆದೆವು. ನಂತರ ನಾನು ಮತ್ತು ನನ್ನ ಪತ್ನಿ, ವಿಜಯಲಕ್ಷ್ಮಿಯನ್ನು ಕರೆದುಕೊಂಡು ದೆಹಲಿಯಲ್ಲಿಯೇ ಇದ್ದ, ನಮ್ಮ ಹಿತೈಷಿಗಳಾಗಿದ್ದ ಶ್ರೀ ರಾಮಕೃಷ್ಣ ಹೆಗಡೆಯವರನ್ನು ಭೇಟಿ ಮಾಡಲು ಹೋದೆವು.

ಅವರನ್ನು ಲೋಧಿ ಗಾರ್ಡನ್ ಸಮೀಪದಲ್ಲಿದ್ದ ಅವರ ಮನೆಯಲ್ಲಿ ಭೇಟಿ ಮಾಡಿದಾಗ ಅವರು, ಪ್ರಖ್ಯಾತ ವಕೀಲರಾದ
ಶ್ರೀ ರಾಮ್ ಜೇಠ್ಮಲಾನಿ ಅವರೊಂದಿಗೆ ಊಟ ಮಾಡುತ್ತಿದ್ದರು. ನಮ್ಮನ್ನೂ ಸಹಿತ ಊಟಕ್ಕೆ ಆಹ್ವಾನಿಸಿದರು. ವಿಜಯಲಕ್ಷ್ಮಿಯ
ಸಾಧನೆಯ ಬಗ್ಗೆ ಶ್ರೀ ಹೆಗಡೆಯವರು ಬಹಳ ಸಂತೋಷ ವ್ಯಕ್ತಪಡಿಸಿ, ಅವಳಿಗೆ ಉಡುಗೊರೆಯಾಗಿ ಒಂದು ಪೆನ್ ನೀಡಿದರು.
ಶ್ರೀ ಜೇಠ್ಮಲಾನಿ ಅವರೂ ಸಹಿತ ವಿಜಯಲಕ್ಷ್ಮಿಯನ್ನು ಆಶೀರ್ವದಿಸಿದರು.

ಅದೇ ದಿನ ರಾತ್ರಿ ನಾವು ದೆಹಲಿಯಿಂದ ಜಮ್ಮುವಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದೆವು. ಮರುದಿನ ಬೆಳಿಗ್ಗೆ ಅಂದರೆ, ಆಗಸ್ಟ್
೩೧ರಂದು ಜಮ್ಮು ತಲುಪಿದೆವು. ನಮಗೆ ಆತ್ಮೀಯರಾಗಿದ್ದ, ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಽಯವರ ಹತ್ಯೆ ಪ್ರಕರಣದ ತನಿಖೆಯಲ್ಲಿ ನನ್ನೊಂದಿಗೆ ಕಾರ್ಯ ನಿರ್ವಹಿಸಿದ್ದ, ಆಗ ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಐಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ರಾಧಾ ವಿನೋದ ರಾಜು ಅವರು ನಮ್ಮ ವಾಸ್ತವ್ಯಕ್ಕೆ ಮತ್ತು ಶ್ರೀ ವೈಷ್ಣೋದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ನಾವು ಬೆಳಗ್ಗೆ ರಸ್ತೆ ಮಾರ್ಗವಾಗಿ ಕತ್ರಾ ತಲುಪಿದೆವು. ಅಲ್ಲಿಂದ ಶ್ರೀ ವೈಷ್ಣೋದೇವಿ ದರ್ಶನ ಪಡೆಯಲು ೧೪ ಕಿ.ಮೀ ನಡೆದು
ಹೋಗಬೇಕಾಗಿತ್ತು.

ಕಡಿದಾದ ಮಾರ್ಗ
ಆ ದಾರಿಯು ಬಹಳ ಕಡಿದಾಗಿತ್ತು. ನಾನು ೧೯೯೯ರಲ್ಲಿ, ಮೊದಲನೇ ಸಲ ಶ್ರೀ ವೈಷ್ಣೋದೇವಿ ದರ್ಶನಕ್ಕೆ ನಡೆದುಕೊಂಡೇ
ಹೋಗಿದ್ದೆನು. ಆದರೆ ಈ ಸಲ ನನ್ನ ಜೊತೆಗಿದ್ದವರು ಕುದುರೆ ಮೇಲೆ ಹೋಗಲು ನಿರ್ಧರಿಸಿದ್ದರಿಂದ, ನಾನೂ ಸಹಿತ ಅನಿ
ವಾರ್ಯ ವಾಗಿ ಕುದುರೆ ಮೂಲಕವೇ ೧೪ ಕಿ.ಮೀ ದೂರವನ್ನು ಕ್ರಮಿಸಲು ತೀರ್ಮಾನಿಸಿದೆನು. ಅದರಂತೆ ನಾವೆಲ್ಲರೂ
ಕುದುರೆಗಳ ಮೇಲೆ ಹೊರಟು ಬೆಟ್ಟವನ್ನು ದಾಟಿ, ಕಣಿವೆಯಲ್ಲಿರುವ ಶ್ರೀ ವೈಷ್ಣೋದೇವಿ ಮಂದಿರವನ್ನು ತಲುಪಿದೆವು. ಅಲ್ಲಿ
ಶ್ರೀ ವೈಷ್ಣೋದೇವಿಗೆ ನಮ್ಮಿಂದ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು. ಈ ಮೊದಲು ರಾಜ್ಯದಲ್ಲಿ ನಡೆದಿದ್ದ, ನೂರಾರು
ಸಮಾರಂಭಗಳಲ್ಲಿ, ಹುಬ್ಬಳ್ಳಿಯಲ್ಲಿ ನಡೆದ ಒಂದು ಸಮಾರಂಭವೊಂದರ ನಂತರ, ನಮ್ಮ ಸಂಬಂಽಗಳಾದ ಶ್ರೀ ಬಸವರಾಜ
ಹೊರಟ್ಟಿ ಅವರು, ರಾತ್ರಿ ಭೋಜನಕ್ಕೆ ತಮ್ಮ ಮನೆಗೆ ಆಹ್ವಾನಿಸಿದ್ದರು. ಆ ಸಂದರ್ಭದಲ್ಲಿ ಅವರು ವಿಜಯಲಕ್ಷ್ಮಿಗೆ ಒಂದು ಚಿನ್ನದ ಸರವನ್ನು ನೀಡಿ, ಸತ್ಕರಿಸಿದ್ದರು.

ದೇವಿಗೆ ಅರ್ಪಣೆ
ನಾನು ಮತ್ತು ನನ್ನ ಹೆಂಡತಿ ನಮ್ಮ ಮಗಳೊಂದಿಗೆ ಈ ಬಗ್ಗೆ ಚರ್ಚಿಸಿ, ಶ್ರೀ ಹೊರಟ್ಟಿ ಅವರು ನೀಡಿದ್ದ ಆ ಸರವನ್ನು ಶ್ರೀ
ವೈಷ್ಣೋದೇವಿಗೆ ಕಾಣಿಕೆಯಾಗಿ ಸಮರ್ಪಿಸಬೇಕು ಎಂದು ತೀರ್ಮಾನಿಸಿದ್ದೆವು. ಅದರಂತೆ ಆ ಚಿನ್ನದ ಸರವನ್ನು ಶ್ರೀ ವೈಷ್ಣೋ
ದೇವಿಗೆ ಸಮರ್ಪಿಸಿದೆವು. ನಂತರ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಮತ್ತು ಆಶೀರ್ವಾದ ಪಡೆದೆವು. ಸಾಯಂಕಾಲದ ಕಾಲದ
ಹೊತ್ತಿಗೆ ನಾವು ಕುದುರೆ ಸವಾರಿ ಮೂಲಕವೇ ಕತ್ರಾಗೆ ಮರಳಿದೆವು. ಅಲ್ಲಿಂದ ಕಾರು ಪ್ರಯಾಣ ಮಾಡಿ ಶ್ರೀನಗರದ ಅತಿಥಿ ಗೃಹಕ್ಕೆ ಬಂದು, ಶ್ರೀ ರಾಧಾ ವಿನೋದ್‌ರಾಜು ಅವರು ಏರ್ಪಡಿಸಿದ್ದ ಭೋಜನಕೂಟದಲ್ಲಿ ಭಾಗವಹಿಸಿದೆವು.

ಭೋಜನದ ನಂತರ ಮತ್ತೆ ಜಮ್ಮು ರೈಲ್ವೆ ನಿಲ್ದಾಣಕ್ಕೆ ಬಂದು ರೈಲಿನಲ್ಲಿ ದೆಹಲಿಗೆ ಮರಳಿದೆವು.

ಕರ್ತವ್ಯಕ್ಕೆ ವರದಿ
ಮರುದಿನ ಸೆಪ್ಟೆಂಬರ್ ಒಂದರಂದು, ದೆಹಲಿಯಿಂದ ನಾವು ಎಲ್ಲರೂ ಸೇರಿ, ಒಟ್ಟು ಮೂರು ಕಾರುಗಳಲ್ಲಿ ಹರಿದ್ವಾರಕ್ಕೆ
ಹೋದೆವು. ನಾವು ಅಲ್ಲಿಗೆ ಹೊರಡುವಾಗ ಕರ್ನಾಟಕ ರಾಜ್ಯದ ಐಎಎಸ್ ಅಽಕಾರಿ ಮತ್ತು ನಮ್ಮ ಕುಟುಂಬದ ಆತ್ಮೀಯರಾಗಿದ್ದ
ದಿವಂಗತ ಶ್ರೀ ಡಿ. ಸತ್ಯಮೂರ್ತಿಯವರು ದೆಹಲಿಯಲ್ಲಿ ನಮ್ಮೊಂದಿಗೆ ಸೇರಿಕೊಂಡರು. ಹರಿದ್ವಾರದಲ್ಲಿ ಗಂಗಾ ನದಿಯ ಬ್ರಹ್ಮ
ಕುಂಡದಲ್ಲಿ ಪುಣ್ಯಸ್ನಾನ ಮಾಡಿದೆವು. ನಂತರ ಬೆಟ್ಟದಲ್ಲಿರುವ ಶ್ರೀ ಮಾನಸಾ ದೇವಿಯ ಮಂದಿರಕ್ಕೆ ರೋಪ್‌ವೇ ಮೂಲಕ ಹೋಗಿ ಶ್ರೀ ಮಾನಸಾದೇವಿಯ ದರ್ಶನ ಪಡೆದೆವು.

ನಂತರ ಅಲ್ಲಿಂದ ಹೊರಟು ಡೆಹರಾಡೂನ್‌ಗೆ ಬಂದು, ಅಲ್ಲಿ ಅರಣ್ಯ ಸಂಶೋಧನಾ ಸಂಸ್ಥೆಯ ಅತಿಥಿಗೃಹದಲ್ಲಿ ವಾಸ್ತವ್ಯ ಮಾಡಿದೆವು. ಮರುದಿನ ಬೆಳಿಗ್ಗೆ ಶ್ರೀ ಸತ್ಯಮೂರ್ತಿಯವರು ದೆಹಲಿಗೆ ಮರಳಿದರು. ನಾವು ವಿಜಯಲಕ್ಷ್ಮಿಯನ್ನು ಕರೆದುಕೊಂಡು ಮಸ್ಸೂರಿಗೆ ಪ್ರಯಾಣಿಸಿ ದೆವು. ಅಲ್ಲಿ ಐಟಿಬಿಪಿ ಅತಿಥಿಗೃಹದಲ್ಲಿ ಮಧ್ಯಾಹ್ನದ ಭೋಜನ ಸ್ವೀಕರಿಸಿ, ಲಾಲ್‌ಬಹಾದ್ದೂರ್ ಶಾಸಿ ಆಡಳಿತ ಅಕಾಡೆಮಿ ತಲುಪಿ ದೆವು. ಅಲ್ಲಿ, ೨೦೦೧ರ ಸೆಪ್ಟೆಂಬರ್ ೨ರಂದು, ರವಿವಾರ ವಿಜಯಲಕ್ಷ್ಮಿ ಪ್ರಶಿಕ್ಷಣಾರ್ಥಿಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಳು. ನನ್ನ ಜೊತೆ ಪ್ರವಾಸಕ್ಕೆ ಬಂದಿದ್ದ ಎಲ್ಲರಿಗೂ ಅಕಾಡೆಮಿಯ ಆವರಣವನ್ನು ನೋಡುವ ಅವಕಾಶ ದೊರೆಯಿತು.

ಮುಂದುವರಿದ ಪ್ರಯಾಣ
ಅದೇ ದಿನ ಸಾಯಂಕಾಲ ನಾವು ವಿಜಯಲಕ್ಷ್ಮಿಯಿಂದ ವಿದಾಯ ಪಡೆದುಕೊಂಡು, ಡೆಹರಾಡೂನ್‌ನ ಅರಣ್ಯ ಸಂಶೋ
ಧನಾ ಸಂಸ್ಥೆಯ ಅತಿಥಿಗೃಹಕ್ಕೆ ಮರಳಿ ವಾಸ್ತವ್ಯ ಹೂಡಿದೆವು. ಮರುದಿನ ಬೆಳಿಗ್ಗೆ ನಾವು ಡೆಹರಾಡೂನ್‌ನಿಂದ ರಸ್ತೆ ಮೂಲಕ
ಹೃಷಿಕೇಶ ಮಾರ್ಗವಾಗಿ, ಬದರಿನಾಥಕ್ಕೆ ಪ್ರಯಾಣ ಪ್ರಾರಂಭಿಸಿ ದೆವು. ಮಾರ್ಗ ಮಧ್ಯದಲ್ಲಿ, ಶ್ರೀನಗರದಲ್ಲಿ ಮಧ್ಯಾಹ್ನದ
ಭೋಜನ ಸ್ವೀಕರಿಸಿದೆವು. ಸಾಯಂಕಾಲ ಜೋಶಿಮಠ ತಲುಪಿ, ಅಲ್ಲಿ ಗಡವಾಲ್ ವಿಕಾಸ್ ಮಂಡಳಿಯ ಅತಿಥಿ ಗೃಹದಲ್ಲಿ
ವಾಸ್ತವ್ಯ ಮಾಡಿದೆವು. ಮರುದಿನ ಅಂದರೆ, ಸೆಪ್ಟೆಂಬರ್ ೪ರಂದು ಜೋಶಿಮಠದಲ್ಲಿ ಶ್ರೀ ಶಂಕರಾಚಾರ್ಯರು ತಪಸ್ಸು ಮಾಡಿದ
ಸ್ಥಳ ಮತ್ತು ಇತರ ಪುಣ್ಯಸ್ಥಳಗಳ ದರ್ಶನ ಪಡೆದೆವು.

ಅದೇ ದಿನ ಜೋಶಿ ಮಠದ ಸಮೀಪದ ಹಿಮ ಕ್ರೀಡಾ ಸಂಸ್ಥೆಗೆ ರೋಪ್‌ವೇ ಮುಖಾಂತರ ಹೋಗಿ ನೋಡಿಕೊಂಡು ಬಂದೆವು. ಮರುದಿನ ಬೆಳಿಗ್ಗೆ ಅಂದರೆ, ಸೆಪ್ಟೆಂಬರ್ ೫ರಂದು ಹನುಮಾನ್ ಘಾಟ್ ಮೂಲಕ ಬದರಿನಾಥಕ್ಕೆ ತಲುಪಿದೆವು. ಅಲ್ಲಿ ತಪ್ತಕುಂಡದಲ್ಲಿ ಪುಣ್ಯಸ್ನಾನ ಮಾಡಿ, ಶ್ರೀ ಬದರಿನಾಥನ ದರ್ಶನ ಪಡೆದೆವು. ನಂತರ ಬದರಿನಾಥ ಸಮೀಪ, ಭಾರತ-ಚೀನಾ ಗಡಿಯಲ್ಲಿ ಭಾರತದ ಕಟ್ಟಕಡೆಯ ಗ್ರಾಮವಾದ ಮಾನಾ ಗ್ರಾಮಕ್ಕೆ ಭೇಟಿ ನೀಡಿದೆವು.

ಅಲ್ಲಿ ಮಹರ್ಷಿ ವ್ಯಾಸರ ಗುಹೆ, ಪಾಂಡವರ ಸ್ವರ್ಗಾರೋಹಣ ಮಾರ್ಗ ಇತ್ಯಾದಿಗಳನ್ನು ನೋಡಿ ಬದರಿನಾಥಕ್ಕೆ
ಬಂದು ವಾಸ್ತವ್ಯ ಮಾಡಿದೆವು.

ಗಂಗೆಯ ದೃಶ್ಯ ವೈಭವ
ಮರುದಿನ ಅಂದರೆ, ಸೆಪ್ಟೆಂಬರ್ ೬ರಂದು ಕೇದಾರನಾಥ  ದರ್ಶನಕ್ಕೆ ಪ್ರಯಾಣ ಬೆಳೆಸಿದೆವು. ಆದರೆ ನಾವು ಬದರಿನಾಥಕ್ಕೆ
ಬರುವಾಗ, ರಸ್ತೆಯ ಬದಿಯಲ್ಲಿದ್ದ ಗಂಗಾ ನದಿ ಮತ್ತುಮಂದಾಕಿನಿ ನದಿಗಳ ಆಳವಾದ ಕೊಳ್ಳಗಳ ದಡದಲ್ಲಿದ್ದ ಸಾಗುತ್ತಿದ್ದ
ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ನಮ್ಮ ಜೊತೆ ಪ್ರವಾಸಕ್ಕೆ ಬಂದಿದ್ದ, ಕೆಲವು ಮಿತ್ರರು ತುಂಬಾ ಆತಂಕಕ್ಕೆ ಒಳಗಾಗಿದ್ದರು.

ಆದ್ದರಿಂದ ಶ್ರೀ ಕೇದಾರನಾಥನ ದರ್ಶನವನ್ನು ರದ್ದುಪಡಿಸಿ, ಮಾರ್ಗಮಧ್ಯ ದಲ್ಲಿ ಗೋಚಾರದ ಸರಕಾರಿ ಅತಿಥಿಗೃಹದಲ್ಲಿ
ಮಧ್ಯಾಹ್ನದ ಭೋಜನ ಸ್ವೀಕರಿಸಿದೆವು. ಸಾಯಂಕಾಲದ ವೇಳೆ ಹೃಷಿಕೇಶಕ್ಕೆ ಬಂದು, ಗಂಗಾ ನದಿಯ ತಟದಲ್ಲಿರುವ ಮುನಿ ಕಿ
ರೇತಿ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದೆವು. ಈ ಅತಿಥಿಗೃಹವುಗಂಗಾ ನದಿಯ ತಟದಲ್ಲಿದ್ದು, ನದಿಯ ನೀರಿನ ಪಾತ್ರದಿಂದ
ಕೆಲವೇ ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿಂದ ಗಂಗಾ ನದಿಯದೃಶ್ಯ ನಯನ ಮನೋಹರವಾಗಿರುತ್ತದೆ.

‘ದಿ ಡಿವೈನ್ ಲೈಫ್’
ಮರುದಿನ ನಾವು ಶ್ರೀ ಶಿವಾನಂದ ಆಶ್ರಮಕ್ಕೆ ಭೇಟಿ ನೀಡಿ, ಸತ್ಸಂಗದಲ್ಲಿ ಭಾಗವಹಿಸಿ, ಅಲ್ಲಿಯೇ ಪ್ರಸಾದ ಸ್ವೀಕರಿಸಿದೆವು.
ಇದೇ ವೇಳೆ, ನಾನು ಆಶ್ರಮದವರು ಪ್ರಕಟಿಸುವ ‘ದಿ ಡಿವೈನ್ ಲೈ-’ ಎಂಬ ಮಾಸಿಕ ಪತ್ರಿಕೆಯ ಆಜೀವ ಚಂದಾ ಸದಸ್ಯತ್ವವನ್ನು ಪಡೆದು ಕೊಂಡೆನು. ನಾನು ತುಂಬಾ ಚಿಕ್ಕವನಿದ್ದಾಗ, ನಮ್ಮ ಪೂಜ್ಯ ಶ್ರೀ ಯೋಗೀಶ್ವರ ಸ್ವಾಮಿ ಗಳೊಂದಿಗೆ ನಮ್ಮ ಮನೆಗೆ ಭೇಟಿ
ನೀಡಿದ್ದ ಶ್ರೀ ಬಾಬಾ ಲಕ್ಷ್ಮಣದಾಸರ ಆಶ್ರಮ ಹೃಷಿಕೇಶ ದಲ್ಲಿಯೇ ಇರುವುದೆಂದು ತಿಳಿದುಕೊಂಡಿದ್ದೆನು.

ನಾನು ಸ್ಥಳೀಯ ರೊಂದಿಗೆ ವಿಚಾರಿಸುತ್ತಾ, ಗಂಗಾ ನದಿಯ ಇನ್ನೊಂದು ತಟದಲ್ಲಿದ್ದ ಶ್ರೀ ಬಾಬಾ ಲಕ್ಷ್ಮಣದಾಸರ ಆಶ್ರಮವನ್ನು ಪತ್ತೆ ಹಚ್ಚಿ ಅಲ್ಲಿಗೆ ಹೋದೆವು. ಶ್ರೀ ಬಾಬಾ ಅವರು ಸ್ವರ್ಗಸ್ಥರಾಗಿದ್ದರು. ಅವರ ಸಮಾಧಿಯ ದರ್ಶನ ಪಡೆದು, ಆಶ್ರಮದಲ್ಲಿದ್ದ ಇತರ ಮುನಿಗಳ ದರ್ಶನ ಪಡೆದು ಮುನಿ ಕೀ ರೇತಿ ಅತಿಥಿಗೃಹಕ್ಕೆ ಮರಳಿದೆವು.

ಪಟೇಲರ ಹಟ
ನಾವು ಅತಿಥಿಗೃಹದಲ್ಲಿದ್ದಾಗ, ಶ್ರೀ ಸಿದ್ದು ನ್ಯಾಮಗೌಡ ಅವರ ಮೊಬೈಲ್‌ದೂರವಾಣಿ ಕರೆ ಬಂತು. ಅವರು ಜಮಖಂಡಿ ಸಕ್ಕರೆ
ಕಾರ್ಖಾನೆಯನ್ನು ಸ್ಥಾಪಿಸಲು, ಶ್ರೀ ಜೆ.ಎಚ್. ಪಟೇಲರು, ತಮ್ಮ ಪಕ್ಷದ ಸ್ಥಳೀಯ ನಾಯಕರ ವಿರೋಧವನ್ನು ಲೆಕ್ಕಿಸದೇ ಎಲ್ಲಾ
ರೀತಿಯ ಅನುಕೂಲತೆ ಮಾಡಿ, ಸರಕಾರದಿಂದ ಷೇರು ಬಂಡವಾಳ ಒದಗಿಸಿ, ಆ ಕಾರ್ಖಾನೆ ಸ್ಥಾಪನೆಯ ಕನಸು ಸಾಕಾರವಾಗಲು ಕಾರಣಕರ್ತರಾಗಿದ್ದರು. ಶ್ರೀ ಸಿದ್ದು ನ್ಯಾಮಗೌಡರಿಗೆ ಶ್ರೀ ಪಟೇಲರ ಪರಿಚಯವಿಲ್ಲದ ಕಾರಣ, ನಾನು ನನ್ನ ಜಿಲ್ಲೆಯ ರೈತರ ಅನುಕೂಲವನ್ನು ಪರಿಗಣಿಸಿ ಶ್ರೀ ಸಿದ್ದು ನ್ಯಾಮಗೌಡರಿಗೆ ಎಲ್ಲಾ ರೀತಿಯ ಸಹಾಯ ಮಾಡುವಂತೆ ಶ್ರೀ ಪಟೇಲರನ್ನು ವಿನಂತಿಸಿಕೊಂಡಿದ್ದೆನು. ಶ್ರೀ ಸಿದ್ದುನ್ಯಾಮಗೌಡರು, ಸೆಪ್ಟೆಂಬರ್ ೨೭ರಂದು, ಜಮಖಂಡಿ ಸಕ್ಕರೆ ಕಾರ್ಖಾನೆ ನಿಯಮಿತ ಇದರ ಉದ್ಘಾಟನೆ ಇದ್ದು, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಶ್ರೀಮತಿ ಸೋನಿಯಾ ಗಾಂಧಿಯವರು ಉದ್ಘಾಟನೆಗೆ ಬರುತ್ತಾರೆ ಎಂದೂ,
ಸಮಾರಂಭದಲ್ಲಿ ನಾನು ಉಪಸ್ಥಿತನಿರಬೇಕು ಎಂದೂ ಆಮಂತ್ರಿಸಿದರು.

ಆದರೆ ನಾನು ಬಹು ದೂರದಲ್ಲಿ ಇದ್ದುದರಿಂದ, ೨೭ರಂದು ಜಮಖಂಡಿಯಲ್ಲಿ ಆ ಸಮಾ ರಂಭದಲ್ಲಿ ಪಾಲ್ಗೊಳ್ಳುವುದು ಸಾಧ್ಯ
ಇರಲಿಲ್ಲ. ನಾನು ಈ ವಿಷಯವನ್ನು ಅವರಿಗೆ ತಿಳಿಸಿ, ಸಮಾಭಕ್ಕೆ ಯಶಸ್ಸು ಹಾರೈಸಿದೆನು.

ಸದಾ ಕೃತಜ್ಞ
ಈ ಪ್ರವಾಸದ ವೇಳೆ, ನಮ್ಮ ಕುಟುಂಬದ ಆಪ್ತರಾಗಿದ್ದ,  ರ್ ಅವರು, ಆಗ ಉತ್ತರಾಖಂಡದಲ್ಲಿಯೇ ಸೇವೆ ಸಲ್ಲಿಸುತ್ತಿದ್ದರು.
ಅವರು ನಮ್ಮ ಪ್ರವಾಸ ಸುವ್ಯವಸ್ಥಿತವಾಗಿ ಮತ್ತು ನಿರ್ವಿಘ್ನವಾಗಿ ನಡೆಯು ವಂತೆ ಎಲ್ಲಾ ವ್ಯವಸ್ಥೆ ಮಾಡಿದ್ದರು. ಅದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ.

ರಾಜ್ಯಾದ್ಯಂತ ಜಾಗೃತಿ
ಸುಮಾರು ಎರಡು ತಿಂಗಳ ಅವಽಧಿಯಲ್ಲಿ ಮಗಳು ವಿಜಯಲಕ್ಷ್ಮೀ ಚಾಮರಾಜ ನಗರದಿಂದ ಬೀದರ್‌ವರೆಗೆ ಸುಮಾರು ೧೫೦ಕ್ಕೂ ಹೆಚ್ಚು ಸಮಾರಂಭಗಳಲ್ಲಿ ಪಾಲ್ಗೊಂಡು, ನಾಗರಿಕ ಸೇವಾ ಪರೀಕ್ಷೆಯ ವಿವರ, ಅದಕ್ಕೆ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಕಾಲೇಜು ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿದಳು.

ಉರುಳಿದ ಅವಳಿ ಕಟ್ಟಡ
ನಾವು ಹೃಷಿಕೇಶ ಪ್ರವಾಸ ಮುಗಿಸಿ, ಅಲ್ಲಿಂದ ನೇರವಾಗಿ ದೆಹಲಿಗೆ ಬಂದು ಅಲ್ಲಿಂದ ರೈಲಿನಲ್ಲಿ ಬೆಂಗಳೂರಿಗೆ ಮರಳಿದೆವು. ನಾವು ರೈಲಿನಲ್ಲಿ ಬರುತ್ತಿದ್ದಾಗ, ಅಮೆರಿಕ ದೇಶದ ನ್ಯೂಯಾರ್ಕ್ ನಗರದಲ್ಲಿ ಜಾಗತಿಕ ವಾಣಿಜ್ಯ ಕೇಂದ್ರದ ಕಟ್ಟಡವನ್ನು ಭಯೋತ್ಪಾದಕರು ಹೊಡೆದುರುಳಿಸಿ, ಸಾವಿರಾರು ಮಂದಿ ಮೃತಪಟ್ಟ ವಿಷಯ ತಿಳಿಯಿತು, ಇದರಿಂದ ನಮಗೂ ಅತೀವ ದುಃಖವಾಯಿತು.