Thursday, 12th December 2024

ಬೈಪೋಲಾರ್ ಡಿಸಾರ್ಡರ್ ಕುರಿತ ಸಾಮಾಜಿಕ ಕಳಂಕಗಳ ಸುತ್ತ ತಪ್ಪು ಕಲ್ಪನೆಗಳ ಹುತ್ತ

ಬೈಪೋಲಾರ್ ಡಿಸಾರ್ಡರ್ ಎಂಬ ಮಾನಸಿಕ ರೋಗ ಕುರಿತು ಜಾಗೃತಿ ಹೆಚ್ಚಿಸಲು ಪ್ರತಿ ವರ್ಷ ಮಾರ್ಚ್ 30ರಂದು ವಿಶ್ವ ಬೈಪೋಲಾರ್ ದಿನ ಆಚರಿಸಲಾಗುತ್ತಿದೆ. ಈ ರೋಗಕ್ಕೆ ಉನ್ಮಾದ ಖಿನ್ನತೆಯ ರೋಗ ಎಂದು ಕೂಡ ಕರೆಯಲಾಗುತ್ತದೆ. ಈ ತೊಂದರೆ ಹೊಂದಿರುವ ವ್ಯಕ್ತಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಅಲ್ಲದೆ, ಸಾರ್ವಜನಿಕರಿಗೆ ಶಿಕ್ಷಣ ಮತ್ತು ಸಂಪನ್ಮೂಲ ಗಳನ್ನು ಪೂರೈಸುವ ಗುರಿಯನ್ನು ಈ ದಿನ ಹೊಂದಿರುತ್ತದೆ. ಇದರೊಂದಿಗೆ ಈ ರೋಗ ಕುರಿತ ಕಳಂಕವನ್ನು ಕಡಿಮೆ ಮಾಡಿ ತಿಳುವಳಿಕೆಯನ್ನು ಹೆಚ್ಚಿಸುವ ಧ್ಯೇಯ ಇದರಲ್ಲಿದೆ.

ಬೈಪೋಲಾರ್ ಡಿಸಾರ್ಡರ್ ಒಂದು ಮಾನಸಿಕ ಅಸ್ವಸ್ಥತೆ ಆಗಿದ್ದು, ವ್ಯಕ್ತಿಯ ಮನಸ್ಥಿತಿ, ಶಕ್ತಿಯ ಮಟ್ಟ ಮತ್ತು ಕಾರ್ಯ ನಿರ್ವಹಿಸುವ ಸಾಮರ್ಥ್ಯಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಈ ತೊಂದರೆ ಹೊಂದಿರುವ ವ್ಯಕ್ತಿಗಳು ಮನಸ್ಥಿತಿಯಲ್ಲಿ ತೀವ್ರವಾದ ತೊಳಲಾಟ ಅನುಭವಿಸುವರು. ಉನ್ಮಾದ ಅಥವಾ ಹೈಪೋಮ್ಯಾನಿಕ್ ಮತ್ತು ಖಿನ್ನತೆಯ ಕಂತುಗಳು ಇದರಲ್ಲಿ ಸೇರಿರುತ್ತವೆ. ಉನ್ಮಾದ ಸ್ಥಿತಿಯಲ್ಲಿ ವ್ಯಕ್ತಿಗಳಿಗೆ ಅತಿ ಉತ್ಸಾಹ, ಶಕ್ತಿ , ಅತಿಯಾದ ಲೈಂಗಿಕತೆ, ನಿದ್ರೆಯ ಕೊರತೆ ಮತ್ತು ತೀವ್ರ ಒರಟಾಗಿ ನಡೆದುಕೊಳ್ಳುವ ಭಾವನೆಗಳು ಕಂಡುಬರಬಹುದು. ಖಿನ್ನತೆಯ ಸ್ಥಿತಿಯಲ್ಲಿ ಅವರಿಗೆ ಬೇಸರ, ಹತಾಶೆ, ಆಲಸ್ಯಗಳ ಭಾವನೆ ಉಂಟಾಗಬಹುದಲ್ಲದೆ, ತೀವ್ರ ರೀತಿಯ ನಿದ್ರಾ ಮಂಪರನ್ನು ಅನುಭವಿಸಬಹುದು.

ಈ ತೊಂದರೆಗೆ ಕಾರಣಗಳನ್ನು ಕುರಿತು ಸರಿಯಾದ ತಿಳುವಳಿಕೆ ಇಲ್ಲ. ಆದರೆ, ವಂಶವಾಹಿ, ಪರಿಸರ ಮತ್ತು ನರವೈಜ್ಞಾನಿಕ ಅಂಶಗಳ ಮಿಶ್ರಣ ಇದಕ್ಕೆ ಕಾರಣವಾಗಬಹುದೆಂದು ನಂಬಲಾಗಿದೆ. ಕುಟುಂಬದಲ್ಲಿ ಈ ತೊಂದರೆಯ ಇತಿಹಾಸ ಇದ್ದಲ್ಲಿ ವ್ಯಕ್ತಿಗಳಿಗೆ ಬೈಪೋಲಾರ್ ಡಿಸಾರ್ಡರ್ ಉಂಟಾಗುವ ಸಾಧ್ಯತೆ ಹೆಚ್ಚಿರಬಹುದು ಎಂದು ಸಂಶೋಧನೆ ತಿಳಿಸುತ್ತದೆ. ಮಾದಕ ವಸ್ತು ಬಳಕೆ, ಹಾರ್ಮೋನ್ ಅಸಮತೋಲನ ಮತ್ತು ಜೀವನದಲ್ಲಿನ ಒತ್ತಡ ತುಂಬಿದ ಘಟನೆಗಳು ಈ ತೊಂದರೆ ಕಾಣಿಸಿ ಕೊಳ್ಳಲು ಕೊಡುಗೆ ನೀಡಬಹುದು.

ಔಷಧಗಳು ಮತ್ತು ಚಿಕಿತ್ಸೆಯ ಮಿಶ್ರಣವನ್ನು ಈ ಬೈಪೋಲಾರ್ ಡಿಸಾರ್ಡರ್‌ನ ಚಿಕಿತ್ಸೆ ಒಳಗೊಂಡಿರುತ್ತದೆ. ಬೈಪೋಲಾರ್ ಡಿಸಾರ್ಡರ್‌ನ ಉನ್ಮಾದ ಮತ್ತು ಖಿನ್ನತೆಯ ಲಕ್ಷಣಗಳನ್ನು ನಿರ್ವಹಿಸುವುದಕ್ಕಾಗಿ ಭಾವನೆಗಳನ್ನು ನಿಯಂತ್ರಿಸುವ ಮೂಡ್ ಸ್ಟೆಬಲೈಸರ್‌ಗಳು ಮತ್ತು ಆ್ಯಂಟಿಸೈಕೋಟಿಕ್ ಔಷಧಗಳನ್ನು ಸೂಚಿಸಲಾಗುತ್ತದೆ. ಚಿಕಿತ್ಸೆಯಲ್ಲಿ ರೋಗಿಗಳ ಅರಿವುಪೂರ್ಣ ನಡವಳಿಕೆ ಚಿಕಿತ್ಸೆ ಮತ್ತು ಮಾನಸಿಕ ಶಿಕ್ಷಣ ಸೇರಿರುತ್ತದೆ. ಇದರಿಂದ ವ್ಯಕ್ತಿಗಳಿಗೆ ತಮ್ಮ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಲಕ್ಷಣಗಳನ್ನು ನಿರ್ವಹಿಸಲು ಯೋಜನೆ ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಬೈಪೋಲಾರ್ ರೋಗಿಗಳ ಆರೋಗ್ಯಕ್ಕೆ ನಿದ್ರಾ ಕೊರತೆ ಹಾನಿವುಂಟು ಮಾಡುವ ಕಾರಣ ಉತ್ತಮ ರೀತಿಯ ನಿದ್ರಾ ನೈರ್ಮಲ್ಯದ ಅಭ್ಯಾಸಗಳನ್ನು ರೋಗಿಗಳು ಇಟ್ಟುಕೊಳ್ಳಬೇಕಾದ ಅಗತ್ಯವಿರುತ್ತದೆ.

ಪರಿಣಾಮಕಾರಿ ಚಿಕಿತ್ಸೆಗಳು ಇದ್ದರೂ ಕೂಡ ಈ ತೊಂದರೆ ಇರುವ ರೋಗಿಗಳು ಸಾಮಾಜಿಕ ಕಳಂಕ, ತಾರತಮ್ಯವನ್ನು ಅನುಭವಿಸಬೇಕಾಗಿರುತ್ತದೆಯಲ್ಲದೆ, ಜನರು ಇವರನ್ನು ತಪ್ಪಾಗಿ ತಿಳಿದುಕೊಳ್ಳುವುದು ಹೆಚ್ಚಾಗಿ ಕಂಡುಬರುತ್ತದೆ. ಚಿಕಿತ್ಸೆ ಮತ್ತು ಸಮಾಜದಲ್ಲಿ ಈ ರೋಗಿಗಳು ಒಂದಾಗಿರಲು ಈ ಕಳಂಕ ಅಡೆತಡೆಗಳನ್ನು ಸೃಷ್ಟಿಸಬಹುದು. ಇದರಿಂದ ರೋಗಿಗೆ ಅವಮಾನ, ಅಪರಾಧ ಪ್ರಜ್ಞೆ ಮತ್ತು ಒಂಟಿತನ ಕಾಡಬಹುದು.

ಬೈಪೋಲಾರ್ ಕುರಿತಂತೆ ಸಾಮಾಜಿಕ ಕಳಂಕಕ್ಕೆ ತಪ್ಪು ಕಲ್ಪನೆಗಳು ಕಾರಣವಾಗಿವೆ. ಈ ತೊಂದರೆ ಇರುವ ಎಲ್ಲಾ ವ್ಯಕ್ತಿಗಳು ಅಪಾಯಕಾರಿ ಮತ್ತು ಹಿಂಸೆಯ ಪ್ರವೃತ್ತಿಯವರು ಎಂಬ ಸಾಮಾನ್ಯ ತಪ್ಪು ಕಲ್ಪನೆ ಇದೆ. ಆದರೆ ಇದು ನಿಜವಲ್ಲ. ಎಲ್ಲಾ ರೋಗಿಗಳು ಹಿಂಸಾಪ್ರವೃತ್ತಿಯಾಗಿರುವುದಿಲ್ಲ. ಔಷಧಗಳೊಂದಿಗೆ ಹಿಂಸಾ ಪ್ರವೃತ್ತಿಯನ್ನು ನಿಯಂತ್ರಿಸಬಹುದು. ಅಥವಾ ಸಂಪೂರ್ಣವಾಗಿ ಇಲ್ಲವಾಗಿಸಬಹುದು. ವೈಯಕ್ತಿಕ ದೌರ್ಬಲ್ಯ ಅಥವಾ ಇಚ್ಛಾಶಕ್ತಿಯ ಕೊರತೆಯಿಂದ ಈ ತೊಂದರೆ ಉಂಟಾಗುತ್ತದೆ ಎಂಬ ಮತ್ತೊಂದು ತಪ್ಪು ಕಲ್ಪನೆ ಇದೆ. ವಾಸ್ತವವಾಗಿ ಬೈಪೋಲಾರ್ ತೊಂದರೆ ಚಿಕಿತ್ಸೆ ಅಗತ್ಯವಿರುವಂತಹ ಒಂದು ವೈದ್ಯಕೀಯ ಸ್ಥಿತಿಯಾಗಿರುತ್ತದೆ. ಅಲ್ಲದೆ, ಈ ತೊಂದರೆ ಹೊಂದಿರುವವರು `ಸುಲಭವಾಗಿ ಅದರಿಂದ ಹೊರಬರಲು’ ಸಾಧ್ಯವಿರುವುದಿಲ್ಲ.

ಈ ತೊಂದರೆಯ ಸುತ್ತಲೂ ಇರುವ ಕಳಂಕವನ್ನು ಕಡಿಮೆ ಮಾಡಲು ಶಿಕ್ಷಣ ಮತ್ತು ಜಾಗೃತಿ ಹೆಚ್ಚಿಸುವ ಅಭಿಯಾನಗಳ ಅಗತ್ಯವಿರುತ್ತದೆ. ಬೈಪೋಲಾರ್ ತೊಂದರೆ ಚಿಕಿತ್ಸೆ ನೀಡಬಹುದಾದ ವೈದ್ಯಕೀಯ ಸ್ಥಿತಿ ಎಂಬುದನ್ನು ಅರ್ಥ ಮಾಡಿಕೊಳ್ಳಲು ಶಿಕ್ಷಣ ವ್ಯಕ್ತಿಗಳಿಗೆ ಸಹಾಯ ಮಾಡಬಹುದು. ಈ ತೊಂದರೆ ಹೊಂದಿರುವ ವ್ಯಕ್ತಿಗಳು ಸರಿಯಾದ ಬೆಂಬಲ ಮತ್ತು ಚಿಕಿತ್ಸೆ ನೀಡಿದಲ್ಲಿ ತೃಪ್ತಿಕರ ಮತ್ತು ಉತ್ಪಾದಕತೆ ತುಂಬಿರುವ ಜೀವನವನ್ನು ನಡೆಸಬಹುದು. ಜಾಗೃತಿ ಹೆಚ್ಚಿಸುವ ಅಭಿಯಾನಗಳು ಬೈಪೋಲಾರ್ ತೊಂದರೆ ಹೊಂದಿರುವ ವ್ಯಕ್ತಿಗಳ ಕುರಿತಂತೆ ತಿಳುವಳಿಕೆಯನ್ನು ಹೆಚ್ಚಿಸುವುದಲ್ಲದೆ, ಅವರ ಕಡೆಗೆ ಸಹಾನುಭೂತಿ ಮೂಡಿಸಲು ಪ್ರೋತ್ಸಾಹ ನೀಡಬಹುದು. ಇದರೊಂದಿಗೆ ಈ ರೋಗಿಗಳು ಎದುರಿಸುವ ಸಾಮಾಜಿಕ ಕಳಂಕ ಮತ್ತು ತಾರತಮ್ಯವನ್ನು ಕಡಿಮೆ ಮಾಡಬಹುದು.

ಈ ರೋಗಿಗಳಿಗೆ ಬೆಂಬಲ ನೀಡಲು ಕ್ರಮಗಳನ್ನು ಸಮಾಜ ಕೈಗೆತ್ತಿಕೊಳ್ಳಬಹುದು. ಉದ್ಯೋಗದಾತರು ಈ ತೊಂದರೆ ಇರುವ ವ್ಯಕ್ತಿಗಳಿಗೆ ಬೆಂಬಲಪೂರ್ಣ ಪರಿಸರ ಸೃಷ್ಟಿಸಲು ಸಡಿಲತೆವುಳ್ಳ ಕೆಲಸದ ಹೊಂದಾಣಿಕೆ ಅಥವಾ ವೈದ್ಯಕೀಯ ಸಂದರ್ಶನ ಗಳಿಗೆ ಬಿಡುವುಗಳನ್ನು ಪೂರೈಸಬಹುದು. ಸಮಾಲೋಚನಾ ಸೇವೆಗಳು ಮತ್ತು ಶೈಕ್ಷಣಿಕ ಹೊಂದಾಣಿಕೆಗಳೊoದಿಗೆ ಬೈಪೋಲಾರ್ ತೊಂದರೆ ಇರುವ ವಿದ್ಯಾರ್ಥಿಗಳಿಗೆ ಸಂಪನ್ಮೂಲ ಮತ್ತು ಬೆಂಬಲವನ್ನು ಶೈಕ್ಷಣಿಕ ಸಂಸ್ಥೆಗಳು ಕೂಡ ಪೂರೈಸಬಹುದು.

ಈ ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಬೆಂಬಲ ನೀಡುವಲ್ಲಿ ಸಮುದಾಯ ಸಂಸ್ಥೆಗಳು ಮತ್ತು ಬೆಂಬಲ ಸಮೂಹಗಳು ಪ್ರಮುಖ ಪಾತ್ರ ವಹಿಸಬಹುದು. ಈ ತೊಂದರೆ ಇರುವ ವ್ಯಕ್ತಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಇತರರೊಂದಿಗೆ ಸಂಪರ್ಕ ಹೊಂದಲು ಹಾಗೂ ಸಂಪನ್ಮೂಲಗಳು ಮತ್ತು ಮಾಹಿತಿಗಳ ಸಂಪರ್ಕ ಹೊಂದಲು, ಬೆಂಬಲಯುತ ಮತ್ತು ಸುರಕ್ಷಿತ ಸ್ಥಳಾವಕಾಶವನ್ನು ಬೆಂಬಲ ಸಮೂಹಗಳು ಪೂರೈಸುತ್ತವೆ. ಸಮುದಾಯ ಸಂಸ್ಥೆಗಳು ನೀತಿ ಬದಲಾವಣೆಗಳ ಪರವಾಗಿ ಅಲ್ಲದೆ, ಬೈಪೋಲಾರ್ ತೊಂದರೆ ಕುರಿತ ಸಂಶೋಧನೆ ಮತ್ತು ಚಿಕಿತ್ಸೆಗೆ ನಿಧಿ ನೆರವಿಗಾಗಿ ವಾದ ಮಾಡಬಹುದು. ಬೈಪೋ ಲಾರ್ ತೊಂದರೆ ಕುರಿತು ಜಾಗೃತಿ ಹೆಚ್ಚಿಸಲು ಮತ್ತು ಅದರ ಸುತ್ತಲಿನ ಕಳಂಕ ಕಡಿಮೆ ಮಾಡಲು ವಿಶ್ವ ಬೈಪೋಲಾರ್ ದಿನ ಒಂದು ಪ್ರಮುಖ ದಿನವಾಗಿರುತ್ತದೆ.

ಈ ತೊಂದರೆ ಒಂದು ಸಂಕೀರ್ಣ ಸ್ಥಿತಿಯಾಗಿದ್ದು, ವ್ಯಕ್ತಿಗಳಿಗೆ ಹಲವಾರು ರೀತಿಯಲ್ಲಿ ಪರಿಣಾಮ ಉಂಟು ಮಾಡುತ್ತದೆ. ಅಲ್ಲದೆ, ಇದಕ್ಕೆ ಕಾರಣಗಳು ಸಂಪೂರ್ಣವಾಗಿ ಇನ್ನು ತಿಳಿದುಬಂದಿಲ್ಲ. ಆದರೆ, ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿರುತ್ತವೆ. ಈ ತೊಂದರೆ ಇರುವ ರೋಗಿಗಳು ಸರಿಯಾದ ಬೆಂಬಲ ಮತ್ತು ಚಿಕಿತ್ಸೆಯೊಂದಿಗೆ ತೃಪ್ತಿಕರ ಜೀವನವನ್ನು ನಡೆಸಬಹುದು. ಬೈಪೋಲಾರ್ ಡಿಸಾರ್ಡರ್ ಕುರಿತಂತೆ ಇರುವ ಕಳಂಕ ಮತ್ತು ತಾರತಮ್ಯವನ್ನು ಕಡಿಮೆ ಮಾಡುವ ಅವಶ್ಯಕತೆ ಇರುವುದಲ್ಲದೆ, ಈ ತೊಂದರೆ ಇರುವ ವ್ಯಕ್ತಿಗಳಿಗೆ ಬೆಂಬಲಯುತ ವಾತಾವರಣವನ್ನು ಪೂರೈಸುವ ಹಾಗೂ ಅಗತ್ಯ ಚಿಕಿತ್ಸೆಗೆ ಸಂಪರ್ಕ ಒದಗಿಸುವ ಅಲ್ಲದೆ, ತೃಪ್ತಿಕರ ಜೀವನವನ್ನು ನಡೆಸಲು ಬೆಂಬಲ ನೀಡುವ ಅಗತ್ಯವಿರುತ್ತದೆ.

ಡಾ. ಶ್ರದ್ಧಾ ಶೇಜೇಕರ್, ಮನೋವೈದ್ಯಕೀಯ ಸಲಹಾತಜ್ಞರು, ಸ್ಪೆಷಲಿಸ್ಟ್ ಹಾಸ್ಪಿಟಲ್.