Sunday, 15th December 2024

ಈಗಲೂ ಬಿಜೆಪಿಗೆ ಮತ ಹಾಕಿದರೆ, ಜನರೇ ಸೋತಂತೆ

Transport Department

ವಿಶ್ವವಾಣಿ ಸಂದರ್ಶನ: ವೆಂಕಟೇಶ್ ಆರ‍್.ದಾಸ್

ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ, ಕೋಮುಗಲಭೆ ತಾಂಡವವಾಡುತ್ತಿದೆ

ಅಧಿಕಾರಕ್ಕೆ ಬಂದರೆ, ಭ್ರಷ್ಟಾಚಾರ ರಹಿತ, ಸ್ವಚ್ಛ ಆಡಳಿತ ಕೊಡುತ್ತೇವೆ

ರಾಜ್ಯದಲ್ಲಿ ರಾಜಕೀಯ ಅಖಾಡ ರಂಗೇರುತ್ತಿದೆ. ಮೂರು ಪಕ್ಷಗಳು ಜಿದ್ದಾಜಿದ್ದಿನ ಕಾಳಗಕ್ಕೆ ಸಜ್ಜಾಗಿದ್ದು, ಅಭ್ಯರ್ಥಿಗಳ ಆಯ್ಕೆಯಲ್ಲಿ ಬ್ಯುಸಿಯಾಗಿವೆ. ಈ ನಡುವೆ ಕಾಂಗ್ರೆಸ್ ಮೊದಲ ಪಟ್ಟಿಯ ಬಿಡುಗಡೆಗೆ ಅಂತಿಮ ಮುದ್ರೆ ಹೊತ್ತಿಸಿಕೊಳ್ಳಲು ಹೈಕಮಾಂಡ್ ಅಂಗಳದಲ್ಲಿ ರಾಜ್ಯ ನಾಯಕರು ಕುಳಿತಿದ್ದಾರೆ. ಅಧಿಕಾರದ ಕನಸು ಕಾಣುತ್ತಿರುವ ಕಾಂಗ್ರೆಸ್‌ಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು ಮೊದಲ ಸವಾಲು. ಈ ಸವಾಲುಗಳ ಬಗ್ಗೆ, ಪಕ್ಷದ ಮುಂದಿನ ರಾಜಕೀಯ ನಡೆಯ ಬಗ್ಗೆ, ಪಕ್ಷದ ಭವಿಷ್ಯದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ ಅವರು ವಿಶ್ವವಾಣಿ ಜತೆಗೆ ಮನಬಿಚ್ಚಿ ಮಾತನ್ನಾಡಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಭರವಸೆ ಇದೆಯೇ? : ನಾವು ಈಗಾಗಲೇ ಕೆಲವು ಗ್ಯಾರಂಟಿ ಸ್ಕೀಂಗಳನ್ನು ಘೋಷಣೆ ಮಾಡಿದ್ದೇವೆ. ರಾಹುಲ್ ಗಾಂಧಿ ಬಂದಾಗ ಮತ್ತೊಂದು ಯುವಜನತೆಯ ಪರವಾದ ಘೋಷಣೆ ಮಾಡಲಿದ್ದೇವೆ. ಒಳ್ಳೆಯ ಆಡಳಿತ ಬಿಜೆಪಿಯಿಂದ ಸಿಗುತ್ತಿಲ್ಲ ಎಂಬ ನಂಬಿಕೆಯಿದೆ. ಬಿಜೆಪಿ ರಾಜ್ಯ ನಾಯಕರಿಗೆ ಉತ್ತಮ ಆಡಳಿತ ನೀಡುವ ಶಕ್ತಿಯಿಲ್ಲ. ಇಲ್ಲಿ ಮತ ಪಡೆಯುವ ಯಾವುದೇ ನಾಯಕರು ಬಿಜೆಪಿಯಲ್ಲಿಲ್ಲ. ಇದ್ದ ಒಬ್ಬ ಮಾಸ್ ಲೀಡರ್ ಯಡಿಯೂ ರಪ್ಪ ಅವರನ್ನು ಸೈಡ್‌ಲೈನ್ ಮಾಡಲಾಗಿದೆ.

ಮೋದಿ ಮುಖ ನೋಡಿ ಮತ ಹಾಕಿದರೆ, ಅವರು ಬಂದು ಆಡಳಿತ ಮಾಡ್ತಾರಾ?

ನಮ್ಮ ಪಕ್ಷ ಹಿಂದೆ ಅಧಿಕಾರ ಸಿಕ್ಕಾಗಲೆಲ್ಲ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯಕ್ಕೆ ಅಭಿವೃದ್ಧಿ ಪಥ ತೋರಿಸಿದೆ.
ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯದಂತಹ ಯೋಜನೆಗಳನ್ನು ಇತ್ತೀಚಿನ ಸರಕಾರದ ಅವಧಿಯಲ್ಲಿ ಕೊಟ್ಟಿದ್ದೇವೆ. ಇಂದಿರಾ ಕ್ಯಾಂಟೀನ್ ಮೂಲಕ ಬಡವರ ಹಸಿವು ನೀಗಿಸುವ ಕೆಲಸ ಮಾಡಿದ್ದೇವೆ. ಜತೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದ್ದುಬಸ್ತಿನಲ್ಲಿಟ್ಟು ಆಡಳಿತ ನಡೆಸಿದ್ದೇವೆ. ಬಿಜೆಪಿ ಸರಕಾರ ಮೂರೂವರೆ ವರ್ಷದ ಅವಧಿಯಲ್ಲಿ ಇಬ್ಬರು ಮುಖ್ಯಮಂತ್ರಿ ಗಳನ್ನು ಕೊಟ್ಟಿತ್ತು. ಆದರೆ, ನಮ್ಮ ಹಿಂದಿನ ಸರಕಾರದ ಅವಧಿಯಲ್ಲಿ ಒಬ್ಬರೇ ಮುಖ್ಯಮಂತ್ರಿ ಐದು ವರ್ಷ ಆಡಳಿತ ನಡೆಸಿ ಸುಭದ್ರ ಸರಕಾರ ನೀಡಿ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ.

ಚುನಾವಣೆಯಲ್ಲಿ ಬಿಜೆಪಿಯನ್ನು ಯಾವ ಆಧಾರದಲ್ಲಿ ಎದುರಿಸುತ್ತೀರಿ? : ಬಿಜೆಪಿಯನ್ನು ಎದುರಿಸಲು ಬೇಕಾದಷ್ಟು ವಿಷಯಗಳಿವೆ. ದಿನಬಳಕೆ ವಸ್ತುಗಳ ಬೆಲೆ ದಿನೇದಿನೆ ಏರಿಕೆಯಾಗುತ್ತಿದ್ದು, ಕಳೆದ ಎರಡು ವರ್ಷದಲ್ಲಿ ಎರಡರಿಂದ ಮೂರು ಪಟ್ಟು ಬೆಲೆ ಏರಿಕೆಯಾಗಿದೆ. ಇದೊಂದೇ ಅಂಶಕ್ಕೆ
ಬಡವರು, ಮಧ್ಯಮ ವರ್ಗದ ಜನರು ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದಾರೆ.ಇನ್ನುಳಿದಂತೆ ಬರೀ ಸುಳ್ಳುಗಳಿಂದಲೇ ಆಡಳಿತ ನಡೆಸುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ.

ಜಿಎಸ್‌ಟಿ ಅನುದಾನ, ಬರ ಹಾಗೂ ನೆರೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಇನ್ನು ರಾಜ್ಯ ಸರಕಾರದ ದುರಾಡಳಿತ ಇಡೀ
ರಾಜ್ಯದ ಜನತೆಗೆ ಗೊತ್ತಿದೆ. ೪೦ ಪರ್ಸೆಂಟ್ ಸರಕಾರ ಎಂಬುದನ್ನು ಜನ ಹಾದಿಬೀದಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಮಾಡಾಳ್
ವಿರೂಪಾಕ್ಷಪ್ಪ ಪ್ರಕರಣ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಆರೋಪ, ಪಿಎಸ್‌ಐ ನೇಮಕ ಹಗರಣ, ಈಶ್ವರಪ್ಪ ಮೇಲೆ ಭ್ರಷ್ಟಾಚಾರದ
ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ, ಹೀಗೆ ಅವರ ಭ್ರಷ್ಟಾಚಾರಕ್ಕೆ ಅನೇಕ ಪುರಾವೆಗಳು ದೊರೆತಿವೆ. ಜನತೆ ಇದೆಲ್ಲವನ್ನು
ಗಮನಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಿಯೇ ಕಲಿಸುತ್ತಾರೆ.

ನಿಮ್ಮ ಪಕ್ಷದೊಳಗಿನ ಟಿಕೆಟ್ ಗೊಂದಲ ಮುಳುವಾಗುವುದಿಲ್ಲವೇ? : ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಹಂಚಿಕೆ ಮಾಡುವಾಗ ಎಲ್ಲ ಪಕ್ಷಗಳಲ್ಲಿ ಗೊಂದಲಗಳು ಇದ್ದೇ ಇರುತ್ತವೆ. ನಮ್ಮದು ೧೩೦ ವರ್ಷಗಳ ಇತಿಹಾಸದ ಪಕ್ಷ. ಸಹಜವಾಗಿ ಆಕಾಂಕ್ಷಿಗಳು ಹೆಚ್ಚಾಗಿರುತ್ತಾರೆ. ಅವರೆಲ್ಲರೂ ಪಕ್ಷದ ಪರ ಇರುವಂತಹವರು. ಪಕ್ಷಕ್ಕಾಗಿ ದುಡಿಯುತ್ತಾರೆ, ಹೀಗಾಗಿ, ತಮಗೆ ಟಿಕೆಟ್ ಕೊಡಿ ಎಂದು ಕೇಳುವುದು ಮಾಮೂಲಿ. ಆದರೆ, ಅಂತಿಮವಾಗಿ ಗೆಲುವಿನ ಸಾಧ್ಯತೆಗಳನ್ನು ಪರಿಗಣಿಸಿ, ಸರ್ವೇ ಆಧಾರದಲ್ಲಿ ಟಿಕೆಟ್ ನೀಡುವ ಕುರಿತು ರಚನೆ ಮಾಡಿರುವ ಸ್ಕ್ರೀನಿಂಗ್ ಕಮಿಟಿ, ಆಯ್ಕೆ ಸಮಿತಿ ಹಾಗೂ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ. ಟಿಕೆಟ್ ಸಿಗದವರೂ ಪಕ್ಷಕ್ಕಾಗಿ ದುಡಿಯುತ್ತಾರೆ. ಕೆಲವು ಕಡೆ ಸಣ್ಣಪುಟ್ಟ ಅಸಮಾಧಾನಗಳಿದ್ದು, ಅದನ್ನು ಸರಿಪಡಿಸುವ ಕುರಿತು ನಮ್ಮ ನಾಯಕರು ಸಮರ್ಥರಿದ್ದಾರೆ. ಅದೆಲ್ಲವನ್ನೂ ಬಗೆಹರಿಸಿ, ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ.

ಸಿಎಂ ಅಭ್ಯರ್ಥಿ ಯಾರು ಎಂಬ ಕಿತ್ತಾಟ ಮುಗಿದಿದೆಯೇ? : ಸಿಎಂ ಅಭ್ಯರ್ಥಿ ಯಾರಾಗವೇಕು ಎಂಬ ಬಗ್ಗೆ ನಮ್ಮಲ್ಲೇನು ಗೊಂದಲಗಳಿಲ್ಲ. ಸಿಎಂ ಯಾರಾಗಬೇಕುಎಂಬುದನ್ನು ಯಾರೂ ಚುನಾವಣೆಗೆ ಮೊದಲೇ ತೀರ್ಮಾನ ಮಾಡಿಕೊಂಡು ಕೂರುವುದಿಲ್ಲ. ಆಯ್ಕೆಯಾಗಿ ಬರುವ ಶಾಸಕರು ತಮ್ಮ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳುವುದು ಪ್ರಜಾಪ್ರಭುತ್ವದ ಪದ್ಧತಿ. ಈ ಆಯ್ಕೆಯನ್ನು ಅಂತಿಮವಾಗಿ ಹೈಕಮಾಂಡ್ ಅನುಮೋದಿಸುವ ಮೂಲಕ ಸಿಎಂ ಯಾರಾಗಬೇಕು ಎಂಬುದನ್ನು ತೀರ್ಮಾನಿಸುತ್ತದೆ. ಅದೇ ರೀತಿ ನಮ್ಮ ಪಕ್ಷದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು, ವಿಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು, ಕಾರ್ಯಾಧ್ಯಕ್ಷರು ಸೇರಿದಂತೆ ಎಲ್ಲ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ.

ಅಂತಿಮವಾಗಿ ಸಿಎಂ ಯಾರು ಎಂಬುದು ಚುನಾವಣೆ ಫಲಿತಾಂಶದ ನಂತರ ತೀರ್ಮಾನವಾ ಗುತ್ತದೆ. ಹೀಗಾಗಿ, ಚುನಾವಣೆಗೆ ಮೊದಲೇ ನಮ್ಮಲ್ಲಿ ಸಿಎಂ ಆಭ್ಯರ್ಥಿ ಕುರಿತು ಯಾವುದೇ ಗೊಂದಲಗಳಿಲ್ಲ.

ಹಾಗಾದರೆ, ಕಾಂಗ್ರೆಸ್ ಎಷ್ಟು ಸ್ಥಾನ ಪಡೆದುಕೊಳ್ಳಲಿದೆ? : ಕೆಲವು ತಟಸ್ಥ ಮತದಾರರು ನಮಗೆ ಮತ ಹಾಕುತ್ತಾರೆ. ಅವರು ಯಾವುದೇ ಜಾತಿ, ಧರ್ಮ, ಪಕ್ಷವನ್ನು ನೋಡದೆ ಮತ ಚಲಾಯಿಸುತ್ತಾರೆ. ಬಿಜೆಪಿ ಸರಕಾರವೇ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಕಾಂಗ್ರೆಸ್‌ಗೆ ೧೨೦ಕ್ಕೂ ಅಧಿಕ
ಸ್ಥಾನ ಸಿಗಲಿದೆ ಎಂಬ ಮಾಹಿತಿ ಸಿಕ್ಕಿದೆ ಎಂಬ ಮಾತಿದೆ. ಆದರೆ, ನಮ್ಮ ಪಕ್ಷ ಕನಿಷ್ಠ ೧೫೦ ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಹಠದೊಂದಿಗೆ
ಚುನಾವಣೆ ಅಖಾಡಕ್ಕೆ ಇಳಿಯು ತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಅಷ್ಟು ಸ್ಥಾನಗಳನ್ನು ಗಳಿಸಿಕೊಳ್ಳಲು ಬೇಕಾದ ಎಲ್ಲ ಸಾಧ್ಯತೆ ರಾಜ್ಯ ದಲ್ಲಿದೆ. ನಮ್ಮ
ಆಂತರಿಕ ಸಮೀಕ್ಷೆಗಳು ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಗೆ ಬಹುಮತ ಬರುತ್ತದೆ ಎಂದು ಹೇಳುತ್ತಿವೆ.

ಬಹುತೇಕ ಸಂಘ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳು ಕಾಂಗ್ರೆಸ್‌ಗೆ ಬಹುಮತದ ಅಧಿಕಾರ ಸಿಗಲಿದೆ ಎಂಬುದನ್ನು ಸಾರಿವೆ. ಒಟ್ಟಾರೆ ನಮ್ಮ ಪಕ್ಷ
೧೨೦-೧೨೫ ಸ್ಥಾನಗಳಲ್ಲಿ ಗೆಲುವು ಸಾಽಸುವುದು ಖಚಿತ ಎಂಬುದು ಈ ಎಲ್ಲ ಬೆಳವಣಿಗೆಗಳಿಂದ ತಿಳಿಯುತ್ತದೆ. ಸ್ವಂತ ಬಲದೊಂದಿಗೆ ಕಾಂಗ್ರೆಸ್
ಅಽಕಾರಕ್ಕೆ ಬಂದೇ ಬರುತ್ತದೆ ಎಂಬ ನಂಬಿಕೆಯಿದೆ.

ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲಲಿದೆ?
ಬೆಂಗಳೂರು ನಗರದಲ್ಲಿ ಸಹಜವಾಗಿಯೇ ಕಾಂಗ್ರೆಸ್ ಮತ್ತು ಬಿಜೆಪಿ ಸಮಾನವಾದ ಬಲವನ್ನು ಹೊಂದಿದೆ. ಕಳೆದ ಬಾರಿ ನಮ್ಮ ಪಕ್ಷದ ನಾಲ್ವರು ಶಾಸಕರನ್ನು ಆಪರೇಷನ್ ಕಮಲದ ಮೂಲಕ ಸೆಳೆದುಕೊಂಡರು. ಆದರೂ, ನಮ್ಮ ಬಲವನ್ನು ಕುಗ್ಗಿಸಲು ಆಗಿಲ್ಲ. ಈ ಸಲದ ಚುನಾವಣೆಯಲ್ಲಿ ಕಳೆದ ಸಾಲಿಗಿಂತ ಮತ್ತಷ್ಟು ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ. ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆಗೆ ಅನೇಕರು ಬಲಿಯಾದರು ಸರಕಾರ ಕಣ್ಣು ತೆರೆಯಲಿಲ್ಲ. ಮಳೆಯಿಂದಾಗಿ ಸಾವಿರಾರು ಮನೆಗಳು ಹಾಳಾದರೂ ಸರಕಾರಕ್ಕೆ ಸೂಕ್ತ ಪರಿಹಾರ ಕಲ್ಪಿಸಲು ಸಾಧ್ಯವಾಗಿಲ್ಲ. ಇನ್ನು ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನವನ್ನೇ ನೀಡದೆ ಸರಕಾರ ದ್ವೇಷದ ರಾಜಕಾರಣ ಮಾಡಿದೆ. ಇದೆಲ್ಲವನ್ನು ನಗರದ ಜನತೆ ಗಮನಿಸಿದ್ದು, ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಕಾಂಗ್ರೆಸ್‌ಗೆ ಮತ್ತಷ್ಟು ಹೆಚ್ಚಿನ ಸ್ಥಾನಗಳನ್ನು ನೀಡುತ್ತಾರೆ ಎಂಬ ಭರವಸೆ ನಮಗಿದೆ. ನಾವು ಕನಿಷ್ಠ ೧೫ ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ.