ಫ್ರಾಂಕ್ ಫರ್ಟ್ ಪುಸ್ತಕಮೇಳದಲ್ಲಿ ವಿಶ್ವವಾಣಿ- ವಿಶ್ವೇಶ್ವರ ಭಟ್
ವಿಶ್ವೇಶ್ವರ ಭಟ್ ಫ್ರಾಂಕ್ ಫರ್ಟ್ (ಜರ್ಮನಿ): ವಿಶ್ವದ ಅತಿ ದೊಡ್ಡ ಪುಸ್ತಕ ಮೇಳ, ‘ಪುಸ್ತಕಗಳ ಮಹಾಕುಂಭಮೇಳ’ ಮತ್ತು ‘ಮಹಾಪುಸ್ತಕಾಭಿಷೇಕ’ ಎಂದು ಕರೆಯಿಸಿಕೊಂಡಿರುವ ಜರ್ಮನಿಯ ಫ್ರಾಂಕ್ ಫರ್ಟ್ ಪುಸ್ತಕ ಮೇಳ ನಾಳೆಯಿಂದ (ಅಕ್ಟೋಬರ್ ೧೮ ರಿಂದ ೨೨ ) ಆರಂಭವಾಗಲಿದ್ದು, ಅದಕ್ಕಾಗಿ ಈ ಐತಿಹಾಸಿಕ ನಗರ ಸನ್ನದ್ಧವಾಗಿದೆ. ಐನೂರು ವರ್ಷಗಳ ಇತಿಹಾಸ ಹೊಂದಿರುವ ಈ ಪುಸ್ತಕ ಮೇಳ ಐದು ದಿನಗಳ ಕಾಲ ನಡೆಯಲಿದ್ದು, ಜಗತ್ತಿನ ಪ್ರಮುಖ ಪುಸ್ತಕ ವ್ಯಾಪಾರಿಗಳು, ಸಾಹಿತಿಗಳು, ಲೇಖಕರು, ಮುದ್ರಣಕಾರರು, ಕಾಗದ ಪೂರೈಕೆದಾರರು, ಮುದ್ರಣ ತಂತ್ರಜ್ಞರು ಸೇರಿದಂತೆ ಲಕ್ಷಾಂತರ ಅಕ್ಷರ ಪ್ರೇಮಿಗಳಿಗೆ ಮುಖಾಮುಖಿಯಾಗಲು ಈ ಮೇಳ ವೇದಿಕೆಯಾಗಲಿದೆ.
ಜರ್ಮನ್ ಪಬ್ಲಿಷರ್ಸ್ ಅಂಡ್ ಬುಕ್ ಸೆಲ್ಲರ್ಸ್ ಅಸೋಸಿಯೇಷನ್ನ ಅಂಗಸಂಸ್ಥೆಯಾಗಿರುವ ‘ಫ್ರಾಂಕ್ ಫರ್ಟ್ ಬುಕ್ಮೆಸ್ಸೇ’ ಈ ಬೃಹತ್ ಪುಸ್ತಕ ಮೇಳವನ್ನು ಸಂಘಟಿಸಲು ಆರಂಭಿಸಿ ೭೫ ವರ್ಷಗಳಾಗಿದ್ದು, ಸಹಜವಾಗಿ ಈ ಸಲದ ಮೇಳ ವಿಶೇಷವೆನಿಸಿಕೊಂಡಿದೆ. ಕೋವಿಡ್ ನಂತರ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುವ ಪುಸ್ತಕ ಮೇಳ ಇದಾಗಿದ್ದು, ಈ ಸಲ ಹಿಂದಿನ ಎಲ್ಲ ವರ್ಷಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಪ್ರೇಮಿಗಳು ಆಗಮಿಸ ಬಹುದೆಂದು ನಿರೀಕ್ಷಿಸಲಾಗಿದೆ. ಕೋವಿಡ್ನಿಂದಾಗಿ ಎರಡು ವರ್ಷ ವರ್ಚುಯಲ್ ಮೇಳವನ್ನು ಸಂಘಟಿಸಲಾಗಿತ್ತು. ೨೦೧೯ ರಲ್ಲಿ ಸುಮಾರು ೧೦೯ ದೇಶಗಳಿಂದ ೮೨೦೦ ಪುಸ್ತಕ ವ್ಯಾಪಾರಿಗಳು, ಪ್ರಕಾಶಕರು, ಪ್ರದರ್ಶಕರು ಆಗಮಿಸಿದ್ದರು. ಆ ವರ್ಷ ಸುಮಾರು ನಾಲ್ಕು ಲಕ್ಷ ಜನ ಪುಸ್ತಕ ಮೇಳದಲ್ಲಿ ಭಾಗವಹಿಸಿದ್ದರು. ಈ ಸಲ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಹದಿನಾಲ್ಕನೇ ಶತಮಾನದಲ್ಲಿ ಫ್ರಾಂಕ್ ಫರ್ಟ್ನ ಮೈನ್ಜ್ನಲ್ಲಿ ಗುಟೆನ್ಬರ್ಗ್ ಚಲಿಸುವ ಅಕ್ಷರಗಳ ಪ್ರಿಂಟಿಂಗ್ ಅನ್ನು ಅಭಿವೃದ್ಧಿಪಡಿಸಿದ ಬಳಿಕ, ವರ್ಷಕ್ಕೊಮ್ಮೆ ಪುಸ್ತಕ ಪ್ರೇಮಿಗಳು ನೂರಾರು ಸಂಖ್ಯೆಯಲ್ಲಿ ಸೇರುವುದರೊಂದಿಗೆ ಆರಂಭವಾದ ಈ ಮೇಳ, ಎರಡನೇ ಮಹಾಯುದ್ಧದ ನಂತರ ಜಾಗತಿಕ ಸ್ವರೂಪವನ್ನು ಪಡೆದುಕೊಂಡಿದೆ. ಪುಸ್ತಕ ವ್ಯಾಪಾರ, ಮಾರಾಟ, ಹಕ್ಕು ಖರೀದಿ, ಅಂತಾರಾಷ್ಟ್ರೀಯ ಮಾರಾಟ ಪರವಾನಗಿ ಮಾತುಕತೆಗೆ ಈ ಮೇಳ ಭೂಮಿಕೆಯಾಗಲಿದ್ದು, ಪುಸ್ತಕ ಮಾರಾಟಗಾರಿಗೆ, ಪ್ರಕಾಶಕರಿಗೆ ಮತ್ತು ಹಂಚಿಕೆದಾರರಿಗೆ ಮಹತ್ವದ ಸಮಾಗಮ, ಸಂಗಮ ಎನಿಸಿಕೊಳ್ಳಲಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುಸ್ತಕಗಳ ಮಾರಾಟ, ವಹಿವಾಟು ದೃಷ್ಟಿಯಿಂದ ದೊಡ್ಡ ಮಟ್ಟದ ಪ್ರಕಾಶಕರಿಗೆ ವ್ಯವಹಾರ ಕುದುರಿಸಲು ಈ ಮೇಳ
ವೇದಿಕೆಯಾಗಲಿದೆ. ಪ್ರಸಿದ್ಧ ಲೇಖಕರ ಕೃತಿಗಳನ್ನು ಪ್ರಕಾಶಿಸಲು ಅನುಮತಿ ಪಡೆಯುವುದು, ಖಂಡಾಂತರ ಮಾರಾಟಕ್ಕೆ ಪರವಾನಗಿ ಗಿಟ್ಟಿಸುವುದು, ಅನ್ಯ ಪ್ರಕಾಶಕರ ಕೃತಿಗಳ ಸಗಟು ಮಾರಾಟಕ್ಕೆ ಒಡಂಬಡಿಕೆ ಮಾಡಿಕೊಳ್ಳುವುದು ಈ ಮೇಳದ ವೈಶಿಷ್ಟ್ಯ. ಹೀಗಾಗಿ ಮೇಳದ ಮೊದಲ ಮೂರು ದಿನ ಪುಸ್ತಕ ವ್ಯಾಪಾರ ಮತ್ತು ವ್ಯಾಪಾರಿಗಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಕೊನೆಯ ಎರಡು ದಿನ ಪುಸ್ತಕಪ್ರೇಮಿಗಳಿಗೆ ಮೀಸಲು. ಹೀಗಾಗಿ ಈ ಮೇಳದಲ್ಲಿ ಪ್ರಕಾಶಕರು, ಲಿಟರರಿ ಏಜೆಂಟುಗಳು, ಬುಕ್ ಸೆಲ್ಲರ್ಸ್, ಲೇಖಕರು, ಅನುವಾದಕರು, ಮುಖಪುಟ ಕಲಾವಿದರು. ಈ-ಬುಕ್ ಮತ್ತು ಮಲ್ಟಿ ಮೀಡಿಯಾ ಕಂಪನಿಗಳು ಭಾಗವಹಿಸಲಿವೆ.
ಪುಸ್ತಕೋದ್ಯಮದಲ್ಲಿ ನಿರತರಾಗಿರುವ ವರಿಗೆ ನೆಟ್ ವರ್ಕ್ ಮಾಡಿಕೊಳ್ಳಲು ಈ ಮೇಳ ಉತ್ತಮ ‘ಕೂಡುವ ಸಂಗಮ’. ಜಗತ್ತಿನ ಬೃಹತ್ ಗ್ರಂಥಾಲಯಗಳು,
ಸಮುದಾಯ ಗ್ರಂಥಾಲಯಗಳು ದೊಡ್ಡ ಪ್ರಮಾಣದ ಪುಸ್ತಕ ಖರೀದಿಗಾಗಿ ಈ ಮೇಳದಲ್ಲಿ ಪಾಲ್ಗೊಳ್ಳುತ್ತವೆ. ಜರ್ಮನ್ ಪಬ್ಲಿಷರ್ಸ್ ಅಂಡ್ ಬುಕ್ ಸೆಲ್ಲರ್ಸ್ ಅಸೋಸಿಯೇಷನ್ ನ ಅಂಗಸಂಸ್ಥೆಯಾಗಿರುವ ‘-ಂಕ್-ರ್ಟ್ ಬುಕ್ಮೆಸ್ಸೇ’ ಐದು ದಿನಗಳ ಈ ವಾರ್ಷಿಕ ಮೇಳವನ್ನು ಪ್ರತಿ ಅಕ್ಟೋಬರ್ ಎರಡು ಅಥವಾ ಮೂರನೇ ವಾರ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸುತ್ತದೆ.
ಈ ವರ್ಷ ಸುಮಾರು ಐದು ಲಕ್ಷ ಪುಸ್ತಕಗಳ ಬೃಹತ್ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿದೆ. ಈ ಬಾರಿ ಈ ಪುಸ್ತಕ ಮೇಳದ ವರದಿಗಾರಿಕೆಗೆ ಸುಮಾರು
ಎಂಬತ್ತು ದೇಶಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಪತ್ರಕರ್ತರು ಆಗಮಿಸುತ್ತಿರುವುದು ವಿಶೇಷ. ಈ ಮೇಳದಲ್ಲಿ ಪ್ರತಿಷ್ಠಿತ ‘ಜರ್ಮನ್ ಪುಸ್ತಕ ವ್ಯಾಪಾರದ ಶಾಂತಿ ಪ್ರಶಸ್ತಿ’ಯನ್ನು ನೀಡಲಾಗುತ್ತದೆ. ಕಳೆದ ಎಪ್ಪತ್ತೈದು ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತ ಬರಲಾಗಿದೆ. ವಿಚಿತ್ರ ಶೀರ್ಷಿಕೆಗಳ ಪುಸ್ತಕಗಳಿಗೂ
ಬಹುಮಾನ ನೀಡಲಾಗುತ್ತದೆ.
ಕೆಲವು ಪುಸ್ತಕಗಳನ್ನು ಆಧರಿಸಿ, ಸಿನಿಮಾಗಳನ್ನು ಮಾಡುವು ದರಿಂದ, ಸಿನಿಮಾ ಹಕ್ಕು ಖರೀದಿಗಾಗಿ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಸಹ ಈ ಮೇಳದಲ್ಲಿ ಪಾಲ್ಗೊಳ್ಳುವುದು ಗಮನಾರ್ಹ. ಪ್ರತಿ ವರ್ಷ ಯಾವುದಾದರೂ ಒಂದು ದೇಶದ ಸಾಹಿತ್ಯ ಮತ್ತು ಸಾಹಿತ್ಯಕಾರರಿಗೆ ಒತ್ತನ್ನು ನೀಡುವ ಸಂಪ್ರದಾಯವನ್ನು ಪಾಲಿಸುತ್ತಾ ಬರಲಾಗಿದ್ದು, ಈ ವರ್ಷ ಸ್ಲೊವೇನಿಯಾ ದೇಶ ಆ ಅದೃಷ್ಟಕ್ಕೆ ಭಾಜನವಾಗಿದೆ. ಫ್ರಾಂಕ್ ಫರ್ಟ್ ಪುಸ್ತಕ ಮೇಳವು ಇಡೀ ಪುಸ್ತಕೋದ್ಯಮದ ಮೇಲೆ ಎಂಥ ಪ್ರಭಾವವನ್ನು ಹೊಂದಿದೆಯೆಂದರೆ, ಇಲ್ಲಿ ಸ್ವೀಕರಿಸಲಾಗುವ ನಿರ್ಣಯಗಳಿಗೆ ಪ್ರಕಾಶಕರು, ಮಾರಾಟಗಾರರು ಮತ್ತು ಲೇಖಕರು ಬದ್ಧರಾಗಿರುತ್ತಾರೆ. ಅಕ್ಷರಲೋಕದ ಹಲವು ವಿಭಾಗಗಳ ಖ್ಯಾತನಾಮರೆಲ್ಲ ಒಂದೆಡೆ ಸೇರುವಅವಕಾಶವನ್ನು ಈ ಮೇಳ ಒದಗಿಸಿಕೊ ಡುವುದರಿಂದ ಇದಕ್ಕೆ ಎಲ್ಲಿಲ್ಲದ ಮಹತ್ವ.
ಸಲ್ಮಾನ್ ರಶ್ದಿ ಬರ್ತಾರೆ!
ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಈ ಸಲದ ಪುಸ್ತಕ ಮೇಳದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಅವರು ಈ ಬಾರಿಯ ಮೇಳದ ಪ್ರಮುಖ
ಆಕರ್ಷಣೆಯಾಗಿದ್ದಾರೆ. ಅವರಿಗೆ ಈ ಸಂದರ್ಭದಲ್ಲಿ ಪ್ರತಿಷ್ಠಿತ ‘ದಿ ಪೀಸ್ ಪ್ರೈಜ್ ಆಫ್ ದಿ ಜರ್ಮನ್ ಬುಕ್ ಟ್ರೇಡ್’ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸ ಲಾಗುತ್ತಿದೆ. ಹಿಂದಿನ ವರ್ಷ ಅವರ ಮೇಲೆ ಮೇಲೆ ನಡೆದ ದಾಳಿಯ ಬಳಿಕ ರಶ್ದಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದು, ಅವರು ತಮ್ಮ ಇತ್ತೀಚಿನ ‘ವಿಕ್ಟರಿ ಸಿಟಿ’ ಕುರಿತು ಮಾತಾಡಲಿzರೆ. ‘ಪಾಶ್ಚಿಮಾತ್ಯ ಜಗತ್ತಿನಂದೇ ಅಲ್ಲ, ಇಡೀ ವಿಶ್ವದಲ್ಲಿಯೇ ಫ್ರಾಂಕ್ ಫರ್ಟ್ ಪುಸ್ತಕ ಮೇಳ ಅತ್ಯಂತ ಮಹತ್ವದ ಸಾಂಸ್ಕೃತಿಕ ಮೇಳ’ ಎಂದು ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.