Thursday, 12th December 2024

ರಾಜ್ಯ ಬಿಜೆಪಿಯಲ್ಲಿ ‘ಮಾಸ್‌’ದ ಬಿಎಸ್‌ವೈ ನಾಯಕತ್ವ

ಮಾಜಿ ಮುಖ್ಯಮಂತ್ರಿ ಹೆಗಲಿಗೇ ಪ್ರಚಾರದ ‘ಹೊರೆ’; ಚುನಾವಣೆಗೆ ಅವರದೇ ನೇತೃತ್ವ?

ವಿಶ್ವವಾಣಿ ವಿಶೇಷ ಬೆಂಗಳೂರು

ಕರ್ನಾಟಕದಲ್ಲಿ ಅಧಿಕಾರವನ್ನು ಮರಳಿ ಪಡೆಯುವ ಲೆಕ್ಕಾಚಾರದಲ್ಲಿರುವ ಬಿಜೆಪಿ ವರಿಷ್ಠರು, ಯಡಿಯೂರಪ್ಪ ಅವರನ್ನೇ ಮುಂದಿಟ್ಟುಕೊಂಡು ಚುನಾವಣೆ ನಡೆಸಲು ತೀರ್ಮಾನಿಸಿದ್ದಾರೆ. ಅವರ ನೇತೃತ್ವದಲ್ಲಿಯೇ ಚುನಾ ವಣೆ ನಡೆದರೂ, ಯಾವುದೇ ಅಧಿಕೃತ ಸ್ಥಾನಮಾನ ನೀಡದೇ, ಅವರ ಸೇವೆಯನ್ನು ಸಮರ್ಥವಾಗಿ ಬಳಸಿ ಕೊಳ್ಳಲು ತೀರ್ಮಾನಿಸಿದ್ದಾರೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ, ರಾಜ್ಯಾದ್ಯಂತ ಪ್ರವಾಸ ಮಾಡುವ ಉತ್ಸಾಹ ತೋರಿದ್ದರೂ, ಅದಕ್ಕೆ ವರಿಷ್ಠರು ಒಪ್ಪಿರಲಿಲ್ಲ. ಆದರೀಗ ಲಿಂಗಾಯತ ಮತಗಳೊಂದಿಗೆ, ರಾಜ್ಯಾದ್ಯಂತ ಯಡಿಯೂರಪ್ಪ ಅವರಿಗಿರುವ ‘ಮಾಸ್ ನಾಯಕತ್ವ’ ಬಳಸಿಕೊಳ್ಳದೇ ಚುನಾವಣೆ ಯಲ್ಲಿ ಸ್ಪಷ್ಟ ಬಹುಮತ ಕಷ್ಟಸಾಧ್ಯ ಎನ್ನುವುದನ್ನು ಅರಿತಿರುವ ವರಿಷ್ಠರು, ಬಿಎಸ್‌ವೈ ಅವರನ್ನೇ ಮುನ್ನಲೆಯಲ್ಲಿ ಇರಿಸಿಕೊಂಡು ಚುನಾವಣೆ ನಡೆಸಲು ನಿರ್ಧರಿಸಿದ್ದು, ಇದಕ್ಕೆ ಯಡಿಯೂರಪ್ಪ ಅವರನ್ನು ಒಪ್ಪಿಸಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಅವರನ್ನು ಪ್ರಚಾರ ಸಭೆಗಳಲ್ಲಿ, ರ‍್ಯಾಲಿ ಗಳಲ್ಲಿ ಸಕ್ರಿಯವಾಗಿ ಬಳಸಿಕೊಂಡರೂ ಅವರಿಗೆ ಯಾವುದೇ ಅಧಿಕೃತ ಸ್ಥಾನಮಾನ ನೀಡುವುದಿಲ್ಲ. ಬದಲಿಗೆ ವಿಜಯೇಂದ್ರ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನು ಪಕ್ಷದ ವರಿಷ್ಠರು ನೀಡಿದ್ದಾರೆ. ಆದ್ದರಿಂದ ಯಡಿ ಯೂರಪ್ಪ ಅವರು ಸಹ ವರಿಷ್ಠರ ಈ ಮಾತಿಗೆ ಸಮ್ಮತಿಸಿದ್ದು, ಯಾವುದೇ ಸ್ಥಾನಮಾನವಿಲ್ಲದೇ, ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸಲು ತೀರ್ಮಾನಿಸಿ ದ್ದಾರೆ ಎನ್ನಲಾಗಿದೆ.

ನಡ್ಡಾರಿಂದಲೂ ಸೂಚನೆ: ರಾಜ್ಯ ಪ್ರವಾಸದಲ್ಲಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಹ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದಾರೆ. ಈ ವೇಳೆ ಇನ್ನೊಂದು ವರ್ಷದಲ್ಲಿ ಎದುರಾಗಲಿರುವ ಚುನಾವಣಾ ಪ್ರಚಾರದ ಸಾರಥಿಯಾಗಿ ನೀವಿರಬೇಕು. ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ಜವಾ ಬ್ದಾರಿ ನಮ್ಮ ಮೇಲಿದೆ ಎನ್ನುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಹುತೇಕ ನಾಯಕರು ಇದೇ ಅಭಿಪ್ರಾಯವನ್ನು ಹೊರಹಾಕಿರುವುದರಿಂದ, ಯಾವುದೇ ಸ್ಥಾನಮಾನವಿಲ್ಲದಿದ್ದರೂ, ಯಡಿಯೂರಪ್ಪ ಅವರು ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ಸೀಟು ಹಂಚಿಕೆ ವಿಷಯದಲ್ಲಿಯೂ
ಯಡಿ ಯೂರಪ್ಪ ಅವರ ಮಾತನ್ನು ಗಣನೆಗೆ ತಗೆದುಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. ಅವರು ಹೇಳಿದ್ದೇ ಅಂತಿಮ ಎನ್ನುವ ಸ್ಥಿತಿ ಇಲ್ಲದಿದ್ದರೂ, ಕೆಲ ಕ್ಷೇತ್ರಗಳಿಗಾದರೂ ಯಡಿಯೂರಪ್ಪ ಅವರು ಹೇಳುವವರಿಗೆ ಟಿಕೆಟ್ ನೀಡುವುದು ನಿಶ್ಚಿತ ಎನ್ನಲಾಗಿದೆ.

ಪೋಸ್ಟರ್‌ನಲ್ಲೂ ಬದಲಾವಣೆ
ವಿಜಯನಗರದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯ ಪೋಸ್ಟರ್‌ನಲ್ಲಿ ಆರಂಭದಲ್ಲಿ ಯಡಿಯೂರಪ್ಪ ಅವರ ಭಾವಚಿತ್ರವನ್ನು ಹಾಕಿರಲಿಲ್ಲ. ಕೇವಲ ನಡ್ಡಾ, ಬಸವರಾಜ ಬೊಮ್ಮಾಯಿ ಹಾಗೂ ನಳಿನ್‌ಕುಮಾರ್ ಕಟೀಲ್ ಅವರ ಚಿತ್ರವನ್ನು ಹಾಕಲಾಗಿತ್ತು. ಆದರೆ ಇದು ವಿವಾದಕ್ಕೆ ಕಾರಣ ವಾಗುತ್ತಿದ್ದಂತೆ, ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಸ್ವತಃ ಪೋಸ್ಟರ್ ಬದಲಾಯಿಸಲು ಸೂಚನೆ ನೀಡಿದ್ದಾರೆ. ಅದಾದ ಬಳಿಕ ಮೊದಲ ಸಾಲಿನಲ್ಲಿ ನಡ್ಡಾ, ಬೊಮ್ಮಾಯಿ, ಕಟೀಲ್ ಹಾಗೂ ಯಡಿಯೂರಪ್ಪ ಅವರ ಚಿತ್ರ ಎರಡನೇ ಸಾಲಿನಲ್ಲಿ ಸದಾನಂದಗೌಡರು ಹಾಗೂ ಜಗದೀಶ್ ಶೆಟ್ಟರ್ ಸೇರಿದಂತೆ ಪ್ರಲ್ಹಾದ್ ಜೋಶಿ, ಅರುಣ್ ಸಿಂಗ್, ಸಿ.ಟಿ. ರವಿ ಹಾಗೂ ಅರುಣಾ ಅವರ ಚಿತ್ರವನ್ನು ಹಾಕಲಾಗಿತ್ತು.

ನಡ್ಡಾ ಬಳಿ ದೂರಿತ್ತ ಯಡಿಯೂರಪ್ಪ  ?
ಇನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಬಿಎಸ್‌ವೈ ಸುಮಾರು ೧೫ರಿಂದ ೨೦ ನಿಮಿಷಗಳ ಕಾಲ ಖಾಸಗಿಯಾಗಿ ಚರ್ಚಿಸಿದ್ದಾರೆ. ಈ ವೇಳೆ ಪ್ರಮುಖವಾಗಿ ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ.
ರಾಜ್ಯದಲ್ಲಿ ಕೆಲವರು ತಮ್ಮ ವಿರುದ್ಧ ಅನವಶ್ಯಕ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರು ಗಮನಹರಿಸುತ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ನಡ್ಡಾ ಅವರು, ಆರೋಪಗಳಿಗೆ ತಲೆಕೆಡಿಸಿಕೊಳ್ಳಬೇಡಿ. ದೆಹಲಿಯಲ್ಲಿ ನಿಮ್ಮ ಬಗ್ಗೆ ಯಾವುದೇ ಸಮಸ್ಯೆಯಿಲ್ಲ. ನಿಮ್ಮ ಪುತ್ರನಿಗೂ ಸೂಕ್ತ ಸ್ಥಾನಮಾನ ನೀಡಲಾಗುವುದು. ಚುನಾವಣೆ, ಸಂಘಟನೆ ಬಗ್ಗೆಯಷ್ಟೇ ನೀವು ಗಮನಹರಿಸಿ ಎಂದು ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.