Saturday, 14th December 2024

ಹೊಸ ಪಾರ್ಟಿ, ಕಾಂಗ್ರೆಸ್ ಜತೆ ಹೊಂದಾಣಿಕೆ: ಮಾಜಿ ಸಿಎಂ ಬಿಎಸ್‌ವೈ ಮೆಗಾ ಪ್ಲ್ಯಾನ್ ?

ವಿಶ್ವವಾಣಿ ವಿಶೇಷ: ಆರ್‌.ಟಿ.ವಿಠ್ಠಲಮೂರ್ತಿ

ಸಿದ್ದರಾಮಯ್ಯ-ಯಡಿಯೂರಪ್ಪ ರಹಸ್ಯ ಮಾತುಕತೆ, ರಾಜಕೀಯ ಸಂಚಲನ

ಬಿಎಸ್‌ವೈ ಹೊಸ ಪಕ್ಷ ಸ್ಥಾಪನೆ ಸನ್ನಾಹ

ಕಾಂಗ್ರೆಸ್ ಜತೆ ಹೊಂದಾಣಿಕೆಯ ಇರಾದೆ

ಸಿದ್ದರಾಮಯ್ಯ ಜತೆ ರಹಸ್ಯ ಮಾತುಕತೆ

೫೦ ಸ್ಥಾನ ಬಿಟ್ಟು ಕೊಡಬೇಕೆಂಬ ಷರತ್ತು

ಸೋನಿಯಾಗೆ ಚರ್ಚೆಯ ವಿವರ ತಿಳಿಸಿದ ಸಿದ್ದು

ಹೊಸ ಪಕ್ಷ ಕಟ್ಟಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಮಾಜಿ ಸಿಎಂ ಯಡಿಯೂರಪ್ಪ ಮಾಡಿದ ಮೆಗಾಪ್ಲ್ಯಾನ್ ಬಹಿರಂಗವಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಕೈಜೋಡಿಸಲು ಒಲವು ತೋರಿದ ಯಡಿಯೂರಪ್ಪ, ಐವತ್ತು ಕ್ಷೇತ್ರಗಳನ್ನು ತಮಗೆ
ಬಿಟ್ಟುಕೊಡಬೇಕು ಎಂಬ ಷರತ್ತು ಮುಂದಿಟ್ಟಿದ್ದಾರೆ.

ಈ ಕುರಿತು ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಅವರ ಜತೆ ಯಡಿಯೂರಪ್ಪ ನಡೆಸಿzರೆ ಎನ್ನಲಾದ ರಹಸ್ಯ ಮಾತುಕತೆ ಇದೀಗ ರಾಜಕೀಯ ವಲಯದಲ್ಲಿ
ಸಂಚಲನಕ್ಕೆ ಕಾರಣವಾಗಿದೆ. ಹೀಗೆ ಕಾಂಗ್ರೆಸ್ ಮತ್ತು ತಾವು ಕಟ್ಟುವ ಹೊಸ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವುದು ನಿಶ್ಚಿತ ಎಂಬ ಯಡಿಯೂರಪ್ಪ ಅವರ ಮಾತನ್ನು ಸಿದ್ಧರಾಮಯ್ಯ ಅವರು ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಕೇಂದ್ರ ಸರಕಾರದ ಧೋರಣೆ, ಆಡಳಿತ ವೈಖರಿಯಿಂದ ಜನ ಅಸಮಾಧಾನಗೊಂಡಿದ್ದಾರೆ. ಇಂತಹ ಕಾಲದಲ್ಲಿ ನಾವು ಯಡಿಯೂರಪ್ಪ ಅವರ ಜತೆ ಕೈಜೋಡಿಸಿದರೆ ಜನರ ಕಣ್ಣಿಗೆ ಪರ್ಯಾಯ ಶಕ್ತಿ ಕಾಣುತ್ತದೆ ಮತ್ತು ಐತಿಹಾಸಿಕ ಗೆಲುವು ಸಾಧಿಸಲು ವಾತಾವರಣ ಪಕ್ವವಾಗುತ್ತದೆ ಎಂದು ಸಿದ್ಧರಾ ಮಯ್ಯ ಅವರು ಸೋನಿಯಾ ಗಾಂಧಿ ಅವರಿಗೆ ವಿವರಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಮೈಸೂರಿ ನಲ್ಲಿ ಸೋಟಕ ಹೇಳಿಕೆ ನೀಡಿದ್ದು, ‘ಕಾಂಗ್ರೆಸ್ ಜತೆ ಕೈಜೋಡಿಸಲು ಯಡಿಯೂರಪ್ಪ ಮುಂದಾಗಿದ್ದೇ ಇತ್ತೀಚಿನ ಐಟಿ ದಾಳಿಗೆ ಮೂಲ ಕಾರಣ’ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಸಿದ್ಧರಾಮಯ್ಯ ಅವರ ಜತೆ ಈ ಸಂಬಂಧ ಮಾತುಕತೆ ನಡೆಸಿದ್ದರು. ಈ ಮಾತುಕತೆಯ ವಿವರವನ್ನು ಸಿದ್ಧರಾಮಯ್ಯ ಅವರು ಸೋನಿಯಾ ಗಾಂಧಿ ಅವರಿಗೆ ವಿವರಿಸಿದ್ದರು. ಈ ಕುರಿತ ಮಾಹಿತಿ ತಿಳಿಯುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮುಂದಾಯಿತು.

ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎಂಬುದು ಕೇಂದ್ರ ಸರಕಾರಕ್ಕೂ ಗೊತ್ತು, ರಾಜ್ಯ ಸರಕಾರಕ್ಕೂ ಗೊತ್ತು. ಹೀಗಾಗಿಯೇ ದಿಲ್ಲಿಯವರು ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ಅವರನ್ನು ಮುಷ್ಟಿಯಲ್ಲಿಟ್ಟುಕೊಳ್ಳಲು ಏನು ಬೇಕೋ ಅದನ್ನು ಮಾಡಿzರೆ. ಈ ಮಾತನ್ನು ಯಡಿಯೂರಪ್ಪ ಆಪ್ತರ ವಿರುದ್ಧ ಐಟಿ ರೇಡ್ ನಡೆದ ದಿನವೇ ನಾನು ಹೇಳಿದ್ದೆ. ಸತ್ಯ ಹೇಳಲು ನಾನು ಹಿಂಜರಿಯುವ ಮಾತೇ ಇಲ್ಲ. ಇವತ್ತು ಯಡಿಯೂರಪ್ಪ ಹಾಗೂ ವಿಜ ಯೇಂದ್ರ ಅವರ ಆಪ್ತರ ಮೇಲೆ ಐಟಿ ರೈಡ್ ನಡೆಯಲು ಸಿದ್ಧರಾಮಯ್ಯ ಅವರೇ ಕಾರಣ. ಯಡಿಯೂರಪ್ಪ ಆಪ್ತರ ಮೇಲೆ ಐಟಿ ರೈಡ್ ಆಗಿದ್ದಕ್ಕೆ ಇದೇ ಕಾರಣ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಉರುಳಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದರ ಹಿಂದಿದ್ದ ಕಾರಣ ಯಾರು? ಎಂಬುದರ ಮೂಲವನ್ನು ಇಲ್ಲಿ ಹುಡುಕಬಹುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

***

ಮತ್ತೆ ಹೊಸ ಪಕ್ಷ ಕಟ್ಟಿ ಕಾಂಗ್ರೆಸ್ ಜತೆ ಕೈಜೋಡಿಸುವ ಮಹಾ ಯೋಜನೆಯನ್ನು ಬಿ.ಎಸ್.ಯಡಿಯೂರಪ್ಪ ಹಾಕಿಕೊಂಡಿರುವ ಸುದ್ದಿ ಈಗ ಬಹಿರಂಗ ವಾಗಿದ್ದು, ಇದು ರಾಜಕೀಯ ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಬಿಎಸ್‌ವೈ ಹಾಗೂ ಸಿದ್ದರಾಮಯ್ಯ ನಡುವೆ ರಹಸ್ಯ ಮಾತುಕತೆ ನಡೆದಿದ್ದು, ಇದರ ವಿವರಗಳನ್ನು ಸೋನಿಯಾಗೆ ಸಿದ್ದು ಅರುಹಿದ್ದಾರೆ ಎನ್ನಲಾಗಿದೆ. ಬಿಎಸ್‌ವೈ ಆಪ್ತರ ಮೇಲೆ ಐಟಿ ದಾಳಿ ನಡೆದಿರುವುದಕ್ಕೂ ಈ ಬೆಳವಣಿಗೆಯೇ ಕಾರಣ ಎಂದು ಮೂಲಗಳು ತಿಳಿಸಿವೆ.