Sunday, 13th October 2024

ಯಡಿಯೂರಪ್ಪ ಅವರಿಗೆ ಅವಧಿ ಪೂರ್ಣಗೊಳಿಸಲು ಬಿಡಬೇಕಿತ್ತು

ವಿಶೇಷ ವರದಿ: ಅರವಿಂದ ಬಿರಾದಾರ ವಿಜಯಪುರ

ಯಡಿಯೂರಪ್ಪ ನಂತರದ ಬಿಜೆಪಿ ನಾಯಕರದ್ದು ಅವರ 5 ಪರ್ಸೆಂಟು ಪ್ರಭಾವ ಇಲ್ಲ. ಬಿಎಸ್‌ವೈ ಅವಧಿ ಪೂರ್ಣಗೊಳಿಸಲು ಬಿಡಬೇಕಿತ್ತು. ಇದು ಲಿಂಗಾಯತರ ಅಸಮಧಾನಕ್ಕೆ ಕಾರಣವಾಗಿದೆ. ವಿಶ್ವವಾಣಿ ಸಂದರ್ಶನದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ.

ಪ್ರಶ್ನೆ: ಬೆಳಗಾವಿ ಮಹಾನಗರ ಪಾಲಿಕೆಗೆ ಇಲ್ಲಿಯವರೆಗೆ ಭಾಷಾ ಸೂಕ್ಷ್ಮತೆ ವಿಚಾರದ ಮೇಲೆ ಚುನಾವಣೆ ನಡೆಯುತ್ತಿತ್ತು, ಈಗ ರಾಷ್ಟ್ರೀಯ ಪಕ್ಷಗಳು ಧುಮುಕಿವೆ ನಿಮ್ಮ ಅಭಿಪ್ರಾಯ. 
ಎಂ.ಬಿ. ಪಾಟೀಲ್: ಕನ್ನಡ ನಮ್ಮ ಅಸ್ಮಿತೆ, ನಾವು ಕೂಡಾ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿರಲಿಲ್ಲ. ಬಿಜೆಪಿ ನಿರ್ಧಾರವನ್ನು ಕಾದು
ನೋಡುತ್ತಿದ್ದೆವು. ಅವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ ಮೇಲೆ ನಾವು ಒಂದು ರಾಷ್ಟ್ರೀಯ ಪಕ್ಷವಾಗಿ ಚುನಾವಣಾ ಕಣಕ್ಕೆ ಧುಮುಕಿದ್ದೇವೆ.

ಪ್ರಶ್ನೆ: ಪ್ರಸ್ತುತ ಬೆಳಗಾವಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿಗತಿ ಹೇಗಿದೆ.
ಎಂ.ಬಿ. ಪಾಟೀಲ್: ನಮ್ಮ ಪಕ್ಷ ಬೆಳಗಾವಿಯಲ್ಲಿ ಚೆನ್ನಾಗಿದೆ. ಜನ ಬೆಂಬಲವೂ ಇದೆ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಲ್ಲಿ ಸೋತಿದ್ದೇವೆ. ಈಗ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದೆ ಬರುತ್ತೇವೆ.

ಪ್ರಶ್ನೆ: ಕಾಂಗ್ರೆಸ್ ಪಕ್ಷ ೫೮ ವಾರ್ಡ್‌ಗಳಲ್ಲಿ ಎಷ್ಟು ಸ್ಥಾನ ಪಡೆಯಲಿದೆ?
ಎಂ.ಬಿ. ಪಾಟೀಲ್: 58 ಸ್ಥಾನಗಳಲ್ಲಿ ಈಗಾಗಲೇ 52 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದೇವೆ. 6 ವಾರ್ಡ್‌ಗಳು ಕನ್ನಡಪರ ಹಾಗೂ ಇತರ
ಸಂಘಟನೆಗಳಿಗೆ ಇತರರಿಗೆ ಬೆಂಬಲ ನೀಡುತ್ತೇವೆ. 35 ಸ್ಥಾನಗಳನ್ನು ಗೆಲ್ಲುತ್ತೇವೆ. ಕಾಂಗ್ರೆಸ್‌ನವರೇ ಮೇಯರ್, ಉಪಮೇಯರ್ ಆಗುತ್ತಾರೆ ಇದರಲ್ಲಿ
ಸಂಶಯವೇ ಬೇಡ.

ಪ್ರಶ್ನೆ : ಬಿಎಸ್ವೈ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಇದರ ಅನುಕೂಲ ಕಾಂಗ್ರೆಸ್ ಗೆ ಆಗುತ್ತಾ ?
ಎಂ.ಬಿ.ಪಾಟೀಲ್ : ಈ ಕಾರ್ಪೊರೇಷನ್ ಚುನಾವಣೆಗೆ ಯಡಿಯೂರಪ್ಪ ಅಷ್ಟೊಂದು ಮಹತ್ವ ಆಗಲ್ಲ. ಆದರೆ ಖಂಡಿತವಾಗಿ ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಪರಿಣಾಮ ಬೀರುತ್ತದೆ.

ಪ್ರಶ್ನೆ: ಅಧಿಕಾರದಿಂದ ಅರ್ಧಕ್ಕೆ ಕೆಳಗಿಳಿಸಿದ್ದಾರೆ ಇದರ ಪರಿಣಾಮ ಬಿಜೆಪಿಗೆ ಆಗುತ್ತಾ.
ಎಂ.ಬಿ. ಪಾಟೀಲ್: ಇದರ ಪರಿಣಾಮ ಖಂಡಿತ ಆಗುತ್ತೆ. ಅವರು ಅಧಿಕಾರ ಪೂರ್ಣಗೊಳಿಸಲು ಬಿಡಬೇಕಿತ್ತು. ಕೇವಲ ವಯಸ್ಸೇ ಮಾನದಂಡವಲ್ಲ. ಇನ್ನು 18 ತಿಂಗಳು ಅಧಿಕಾರ ನಡೆಸಲು ಬಿಡಬೇಕಿತ್ತು. ಇದರಿಂದ ಕಾಂಗ್ರೆಸ್‌ಗೆ ಹೆಚ್ಚು ಅನುಕೂಲ ಆಗುತ್ತೆ, 125ಕ್ಕಿಂತ ಹೆಚ್ಚು ಸೀಟು ಗೆಲ್ಲಲಿದೆ.

ಪ್ರಶ್ನೆ: ಲಿಂಗಾಯತರು ಕಾಂಗ್ರೆಸ್ ಬೆಂಬಲಕ್ಕೆ ಇದ್ದಾರಾ?
ಎಂ.ಬಿ. ಪಾಟೀಲ್: ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದು ಸಹಜವಾಗಿ ಲಿಂಗಾಯತರಿಗೆ ನೋವಾಗಿದೆ. ಲಿಂಗಾಯತರು ಮುಂದಿನ ಚುನಾವಣೆಯಲ್ಲಿ
ಕಾಂಗ್ರೆಸ್ ಕಡೆ ವಾಲಲಿದ್ದಾರೆ. ಇದು ನಮಗೆ ವರದಾನವಾಗಲಿದೆ.

ಪ್ರಶ್ನೆ: ಬಿಜೆಪಿಯಲ್ಲಿ ಪರ್ಯಾಯ ನಾಯಕತ್ವ ಇಲ್ಲದೆ ಇರುವುದೇ ಇದಕ್ಕೆ ಕಾರಣವಾ?
ಎಂ.ಬಿ. ಪಾಟೀಲ್: ಬಿಜೆಪಿಯಲ್ಲಿ ಯಾರೂ ನಾಯಕರಿಲ್ಲ, ಯಡಿಯೂರಪ್ಪನವರ ಶೇ.೫ರಷ್ಟು ಇವರ ಪ್ರಭಾವ ಇಲ್ಲ. ಯಡಿಯೂರಪ್ಪ ಅವರು ಸೈಕಲ್ ಹೊಡೆದು ಪಕ್ಷವನ್ನು ಕಟ್ಟಿ ಬೆಳಿಸಿದವರು.

ಪ್ರಶ್ನೆ: ಯಡಿಯೂರಪ್ಪ ಅವರಿಗೆ 78 ವರ್ಷ ವಯಸ್ಸಾಗಿತ್ತು. ಅದಕ್ಕಾಗಿ ನಾಯಕತ್ವದಿಂದ ಕೆಳಗಿಳಿಸಿದರು.
ಎಂ.ಬಿ. ಪಾಟೀಲ್: ಕೇರಳದಲ್ಲಿ ಮೆಟ್ರೋ ಮ್ಯಾನ್ ಖ್ಯಾತಿಯ ಶ್ರೀಧರ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಬಿಜೆಪಿ ಘೋಷಣೆ ಮಾಡಿತ್ತು. ಅವರಿಗೆ ಸುಮಾರು ೮೮ ರಿಂದ ೯೦ ವರ್ಷ ಇರಬಹುದು. ಅಲ್ಲಿ ವಯಸ್ಸಿನ ಅಂತರ ಇರಲಿಲ್ವಾ, ಇಲ್ಲಿ ಮಾತ್ರ ಯಾಕೆ?